


ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆ ದಯಾ ವಿಶೇಷ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಆಲಂಗಾರ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವಾ, ಆಲಂಗಾರ್ ಲಯನ್ಸ್ ಕ್ಲಬ್ ಖಜಾಂಜಿ ಲಯನ್ ರೋಕಿ ಮಸ್ಕರೇನಸ್, ದಯಾ ವಿಶೇಷ ಶಾಲೆ ನಿರ್ದೇಶಕ ಫಾ.ವಿನೋದ್ ಮಸ್ಕರೇನಸ್, ಲಿಲ್ಲಿ ಲೋಬೋ ಮೂಡಬಿದ್ರೆ, ಬೆಳ್ತಂಗಡಿ ಫ್ಯಾಶನ್ ಸ್ಟ್ರೀಟ್ ಮಾಲಕಿ ರುಬಿಯಾ ಎಫ್.ಎಸ್., ದಯಾ ವಿಶೇಷ ಶಾಲೆಯ ಆಪ್ತ ಸಮಾಲೋಚಕಿ ಮಿಸ್. ಮೆರಿನ್ ಎಂ.ಪಿ., ಅಫ್ರಾರ ವಿದ್ಯಾರ್ಥಿ ಪ್ರತಿನಿಧಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಡಿತ್ ಜವಾಹರ್ ಲಾಲ್ ನೆಹರೂರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡುವುದರೊಂದಿಗೆ ಮಕ್ಕಳ ಹಕ್ಕುಗಳನ್ನು ಪ್ರದರ್ಶಿಸುವ ಫಲಕಗಳನ್ನು ಹೂವಿನ ಕುಂಡದಲ್ಲಿ ನಾಟುವುದರ ಮೂಲಕ ಉದ್ಘಾಟಿಸಲಾಯಿತು. ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಅಮಿತ್ ಡಿಸಿಲ್ವಾ ರವರು ಮಾತನಾಡಿ ಇಂದು ಈ ದಯಾ ವಿಶೇಷ ಶಾಲೆಗೆ ಭೇಟಿ ನೀಡಿ, ಈ ವಿಶೇಷ ಚೇತನ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಆಚರಿಸಿಕೊಳ್ಳಲು ದೊರಕಿರುವ ಈ ಅಮೂಲ್ಯ ಕ್ಷಣಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಈ ಮಕ್ಕಳ ಸೇವೆ ಮಾಡುತ್ತಿರುವ ಸಂಸ್ಥೆಯು ಮುಂದೆ ಇನ್ನಷ್ಟು ಮಕ್ಕಳಿಗೆ ದಾರಿ ದೀಪವಾಗಲಿ ಎನ್ನುತ್ತಾ ಮಕ್ಕಳಿಗೆ ಈ ದಿನದ ಶುಭಾಶಯವನ್ನು ಕೋರಿದರು.
ಕಾರ್ಯಕ್ರಮದ ಅತಿಥಿ ರುಬಿಯಾ ಅವರು ಮಕ್ಕಳ ದಿನಾಚರಣೆಯ ಶುಭಾಶಯವನ್ನು ಕೋರುತ್ತಾ ಮಾತನಾಡಿ, ಶಾಲೆಗೆ ಭೇಟಿ ನೀಡಿ ತುಂಬಾ ಸಂತೋಷವಾಯಿತು. ಮಕ್ಕಳನ್ನು ದೇವರ ಸ್ವರೂಪವೆಂದು ಭಾವಿಸಲಾಗುತ್ತದೆ. ಇಲ್ಲಿನ ಮಕ್ಕಳಂತು ಇನ್ನೂ ವಿಶೇಷ. ಸಂಸ್ಥೆಯು ಇನ್ನೂ ಇದೇ ರೀತಿ ಮುಂದುವರೆದು ಇನ್ನೂ ಮಕ್ಕಳಿಗೆ ಉಪಯೋಗವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.


ಶಾಲೆಯ ನಿರ್ದೇಶಕ ಫಾ.ವಿನೋದ್ ಮಸ್ಕರೇನಸ್ ರವರು ಮಾತನಾಡಿ, ಸಮಾಜದಲ್ಲಿ ನಾವು ಹಲವಾರು ಕೆಲಸಗಳನ್ನು ಮಾಡಬಹುದು. ಆದರೆ ಒಂದು ಸಮಾಜ ಮುಂದುವರೆಯಲು ಅಲ್ಲಿ ಜಾತಿ, ಮತ, ಭೇದ, ಅಂತಸ್ತುಗಳ ಹಂಗಿಲ್ಲದೇ ಜನರು ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಅಂದು ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದ ಅನೇಕ ಮಹಾತ್ಮರು ಕಂಡಂತಹ ನವಭಾರತದ ಕನಸು ನನಸಾಗಲು ಸಾಧ್ಯ. ಇಂದು ಈ ಕಾರ್ಯಕ್ರಮದಲ್ಲಿ ಜಾತಿಯ ಹಂಗಿಲ್ಲದೇ ಪರಸ್ಪರ ಸಹಕರಿಸಿ ಈ ಮಕ್ಕಳ ಮುಖದಲ್ಲಿ ಒಂದು ನಗು ಮೂಡಿಸುವ ಕಾರ್ಯವನ್ನು ಮಾಡಿzವೆ. ಇದೇ ರೀತಿ ಸಮಾಜದ ಎಲ್ಲಾ ಜನರು ಒಂದಾಗಿ ಬಾಳಿದರೆ ಮಾತ್ರ ಮಹಾತ್ಮ ಗಾಂಧೀ, ಪಂಡಿತ್ ಜವಾಹರ್ ಲಾಲ್ ನೆಹರು, ಡಾ. ಬಿ ಆರ್ ಅಂಬೇಡ್ಕರ್ ರವರು ಕಂಡ ಕನಸು ನನಸಾಗಲು ಸಾಧ್ಯ. ಒಗ್ಗಟ್ಟಿದ್ದಲ್ಲಿ ಮಾತ್ರವೇ ಸಮಾಜ ಮುಂದುವರೆಯುತ್ತದೆ ಹಾಗೂ ಈ ಒಗ್ಗಟ್ಟಿಂದಲೇ ಸಮಾಜದಲ್ಲಿ ಶಾಂತಿಯನ್ನು ಕೆಡಿಸಲು ತಲೆ ಎತ್ತುತ್ತಿರುವ ದುಷ್ಟ ಶಕ್ತಿಗಳನ್ನು ಎದುರಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕೋಮ್ ಸ್ಕೋಪ್ ರವರ ವತಿಯಿಂದ ಒದಗಿಸಿಕೊಡಲಾದ ಹೊಸ ಧ್ವನಿರ್ಧಕವನ್ನು ಫಾ.ವಿನೋದ್ ಮಸ್ಕರೇನಸ್ ರವರು ಉದ್ಘಾಟಿಸಿದರು. ಮಕ್ಕಳ ದಿನಾಚರಣೆಯ ಪ್ರಯುಕ್ತ, ಲಯನ್ಸ್ ಕ್ಲಬ್ ಆಲಂಗಾರ್ ರವರ ವತಿಯಿಂದ ಮಕ್ಕಳಿಗೆ ಬಾತ್ ಟವಲ್ ಹಾಗೂ ಹಣ್ಣು ಹಂಪಲುಗಳನ್ನು ನೀಡಿದರು. ಫ್ಯಾಶನ್ ಸ್ಟ್ರೀಟ್, ಬೆಳ್ತಂಗಡಿ, ಅವರ ವತಿಯಿಂದ ಎಲ್ಲಾ ಮಕ್ಕಳಿಗೆ ಉಡುಪುಗಳನ್ನು ವಿತರಿಸಲಾಯಿತು. .ಲಿಲ್ಲಿ ಲೋಬೋ ಮೂಡಬಿದ್ರೆ, ಅವರ ವತಿಯಿಂದ ಮಕ್ಕಳಿಗೆ ಇಂದಿನ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳಿಂದ ಹಾಗೂ ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. 113 ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಸಿಬ್ಬಂದಿ ಕಿರಣ್ ಮಿರಾಂದರವರು ಸರ್ವರನ್ನು ಸ್ವಾಗತಿಸಿ, ವಿಶೇಷ ಶಿಕ್ಷಕಿ ಸುಜಾತ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಸುಮನಶ್ರೀ ಅವರು ವಂದಿಸಿದರು.









