ಚಿನ್ನಯ್ಯನ ಭದ್ರತೆಗೆ ನಿಯೋಜನೆಗೊಂಡಿದ್ದ ಶಿವಮೂರ್ತಿ ಬಂಧನ

0

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಂಧಿತನಾಗಿ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನ ಭದ್ರತೆಗೆ ನಿಯೋಜನೆಗೊಂಡಿದ್ದ ಶಿವಮೂರ್ತಿ ಬಸವರಾಜ ಕಂಕಣವಾಡಿ ಎಂಬಾತ ಜೈಲಿನಲ್ಲಿರುವ ಕೈದಿಗೆ ಮೊಬೈಲ್ ಫೋನ್ ನೀಡಿರುವುದು ತಿಳಿದು ಬಂದಿದ್ದು ಆತನನ್ನು ಬಂಧಿಸಲಾಗಿದೆ. ಅ.೨೬ರಿಂದ ನ.೧ರ ವರೆಗೆ ಹಗಲು ಪಹರೆ ಕರ್ತವ್ಯಕ್ಕೆ ಜೈಲು ಅಧೀಕ್ಷಕರು ಬಸವರಾಜನನ್ನು ನಿಯೋಜಿಸಿದ್ದರು. ಕಾರಾಗೃಹದ ಮುಖ್ಯ ದ್ವಾರದ ಬಳಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಆತ ತನ್ನ ಕರ್ತವ್ಯ ಸ್ಥಳದಿಂದ ಬಿ ಗೇಟ್‌ಗೆ ಹೋಗಿ ಶಿಕ್ಷಾಬಂಧಿ ಫಯಾಜ್ ಎಂಬಾತನಿಗೆ ಪೇಪರ್‌ನಲ್ಲಿ ಸುತ್ತಿ ಮೊಬೈಲ್ ಫೋನ್ ನೀಡಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅ.೨೮ರ ಬೆಳಗ್ಗೆ ೮.೨೦ರ ಸುಮಾರಿಗೆ ತೆರಳಿ ಮೊಬೈಲ್ ನೀಡಿರುವುದು ಜೈಲಿನ ಸಿಸಿ ಕೆಮರಾ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಗೆ ಜೈಲ್ ಸೂಪರಿಂಟೆಂಡೆಂಟ್ ಪಿ.ರಂಗನಾಥ್ ದೂರು ನೀಡಿದ್ದು ಶಿವಮೂರ್ತಿ, ಫಯಾಜ್ ಮತ್ತು ಅನಿಲ್ ಕುಮಾರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

LEAVE A REPLY

Please enter your comment!
Please enter your name here