ಪ.ಪಂ.ಗೆ ಆಡಳಿತಾಧಿಕಾರಿ ನೇಮಕ-ಹೈಕೋರ್ಟ್ ತಡೆ

0

ಬೆಳ್ತಂಗಡಿ: ನ.೬ರಂದು ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿರುವ ಬೆಳ್ತಂಗಡಿ ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಳ್ತಂಗಡಿ ಪ.ಪಂ. ಅಧ್ಯಕ್ಷರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ಈ ಆದೇಶ ನೀಡಿದೆ.

ಹಿನ್ನೆಲೆ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಕಳೆದ ಅವಧಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಒಟ್ಟು ಐದು ವರ್ಷದ ಆಡಳಿತದಲ್ಲಿ ಪ್ರಥಮ ಅವಧಿಯ ೩೦ ತಿಂಗಳ ಮೊದಲ ಅವಧಿಗೆ ಅಧ್ಯಕ್ಷರಾಗಿ ರಜನಿ ಕುಡ್ವ ಕಾರ್ಯ ನಿರ್ವಹಿಸಿದ್ದರು. ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಪ್ರಕ್ರಿಯೆ ವಿಳಂಬಗೊಂಡು ಆಡಳಿತಾಧಿಕಾರಿ ಸುಮಾರು ೧೬ ತಿಂಗಳ ಕಾಲ ಕಾರ್ಯ ನಿರ್ವಹಿಸಿದ್ದರು. ೨೦೨೪ರಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡು ಕಳೆದ ಅಕ್ಟೋಬರ್‌ನಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆದಿತ್ತು. ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಅವಧಿ ೩೦ ತಿಂಗಳು ಆಗಿದ್ದರೂ ಇದೀಗ ಅವರ ಅಧಿಕಾರವಧಿ ಮೊಟಕುಗೊಂಡು ಒಂದು ವರ್ಷ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿದೆ. ಜತೆಗೆ ಎಲ್ಲ ಸದಸ್ಯರ ಅವಧಿಯೂ ನ.೬ಕ್ಕೆ ಮುಕ್ತಾಯಗೊಳ್ಳಲಿದೆ.
ಸರಕಾರ ಮೀಸಲಾತಿ ಪ್ರಕಟಗೊಳಿಸಲು ವಿಳಂಬ ಮಾಡಿರುವುದರಿಂದ ಚುನಾಯಿತ ಪ್ರತಿನಿಧಿಗಳು ತಮ್ಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್‌ಗೆ ಆಡಳಿತಾಧಿಕಾರಿ ನೇಮಕ ಮಾಡಲು ಸಿದ್ಧತೆ ನಡೆಸಲಾಗುತ್ತಿತು. ಇದನ್ನು ಪ್ರಶ್ನಿಸಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಹೈಕೋರ್ಟ್‌ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಆಡಳಿತಾಧಿಕಾರಿಯನ್ನು ನೇಮಕ ಮಾಡುವುದಕ್ಕೆ ತಾತ್ಕಾಲಿಕ ತಡೆ ನೀಡಿ ವಿಚಾರಣೆ ಮುಂದೂಡಿದ್ದಾರೆ.

LEAVE A REPLY

Please enter your comment!
Please enter your name here