ಶಾಸಕ ಹರೀಶ್ ಪೂಂಜಾ ವಿರುದ್ಧ ಆರೋಪಯಾರಿಗೆ ತಟ್ಟಲಿದೆ ಕಟೀಲು ದೇವಿಯ ಶಾಪ?

0

ನ್ಯೂ ಮಂಗಳೂರು ಟೈಮ್ಸ್ ವರದಿ ಆಧಾರಿತ ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಯುವ ಶಾಸಕ ಹರೀಶ್ ಪೂಂಜ ಇದೀಗ ಸುದ್ದಿಯಲ್ಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ನಿಂತು ದೇವಸ್ಥಾನದ ಅರ್ಚಕರ ಮೂಲಕ ಅವರು ಮಾಡಿದ್ದಾರೆ ಎನ್ನಲಾದ ಪ್ರಾರ್ಥನೆಯೊಂದು ಪಕ್ಷ ಹಾಗೂ ಸಂಘಟನೆಯ ಪ್ರಮುಖರ ನಡುವೆ ಚರ್ಚೆ- ಕುತೂಹಲದ ವಿಷಯವಾಗಿ ಕಾಣಿಸಿಕೊಂಡಿದೆ.

‘ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವ ರನ್ನು, ನನ್ನ ರಾಜಕೀಯ ಏಳಿಗೆ ಸಹಿಸದವರನ್ನು, ನನ್ನ ವಿರುದ್ಧ ಷಡ್ಯಂತ್ರ ನಡೆಸುವವರನ್ನು ಕಟೀಲು ದೇವಿಯೇ ನೋಡಿಕೊಳ್ಳಲಿ’ ಎಂದು ದುರ್ಗಾಪರಮೇಶ್ವರಿ ದೇವಿಯ ಎದುರು ನಿಂತು ಹರೀಶ್ ಪೂಂಜಾ ಪ್ರಾರ್ಥಿಸಿದ್ದಾರೆ ಎನ್ನುವುದು ಸದ್ಯ ಎಲ್ಲೆಡೆ ನಡೆಯುತ್ತಿರುವ ಚರ್ಚೆಯ ಸಾರಾಂಶ.
‘ಒಂದೊಮ್ಮೆ ನಾನು ನಮ್ಮದೇ ಪಕ್ಷದ ಯಾರದೇ ವಿರುದ್ಧ ಷಡ್ಯಂತ್ರ ನಡೆಸಿದ್ದರೂ, ಸುಳ್ಳು ಆರೋಪ ಮಾಡಿದ್ದರೂ ಕಟೀಲು ದೇವಿಯೇ ನನಗೆ ಶಾಪ ನೀಡಲಿ’ ಎಂದು ಕೂಡ ದೇವಿಯ ಸನ್ನಿಧಿಯಲ್ಲಿ ನಿವೇದಿಸಿಕೊಂಡಿದ್ದಾರೆ ಎಂಬುದು ಅದರ ಮುಂದುವರಿದ ಭಾಗ.

ಪ್ರಾರ್ಥನೆ ನಡೆಸುವ ವೇಳೆ ಯಾವುದೇ ಪಕ್ಷದ, ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ನಡೆದ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹರೀಶ್ ಪೂಂಜತೀವ್ರವಾಗಿ ನೊಂದಿದ್ದರು. ತಾನು ಗೌರವ- ನಂಬಿಕೆ ಇರಿಸಿಕೊಂಡಿದ್ದವರಲ್ಲಿಯೇ ತನ್ನ ವಿರುದ್ಧ ಸುಳ್ಳು ಆರೋಪ ಕೆಲವರು ಹೊರಿಸುತ್ತಿರುವುದರ ಬಗ್ಗೆ ಆತ್ಮೀಯರೊಂದಿಗೆ ಬೇಸರ ವ್ಯಕ್ತಪಡಿಸಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಇವೆಲ್ಲ ಕಾರಣಗಳ ಹಿನ್ನೆಲೆಯಲ್ಲಿ ಕಟೀಲು ದೇವಸ್ಥಾನದ ಅರ್ಚಕರೊಬ್ಬರನ್ನು ಸಂಪರ್ಕಿಸಿದ್ದ ಅವರು ಅರ್ಚಕರ ಸಮ್ಮುಖದಲ್ಲಿಯೇ ನಿಂತು ಪ್ರಾರ್ಥಿಸಿದ್ದರು ಎನ್ನುವುದು ವದಂತಿಗಳ ಸಾರಾಂಶ.

ಶಾಸಕ ಹರೀಶ್ ಪೂಂಜ, ಕ್ಷೇತ್ರದಾದ್ಯಂತ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೂ ಪಕ್ಷ ಸಂಘಟನೆಯ ಹಲವು ನಾಯಕರೊಂದಿಗೆ ಅವರು ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ. ರಾಜಕೀಯದ ಒಳಸುಳಿಗಳಿಂದ, ವಿವಾದಗಳಿಂದ ದೂರ ಉಳಿದಿದ್ದಾರೆ. ಆದರೂ ಕೂಡ ಇವರ ವಿರುದ್ಧ ಮುಸುಕಿನ ಗುದ್ದಾಟ ನಡೆಸುತ್ತಿರುವವರು ಯಾರು? ‘ನೀನು ನೀನೇ-ಇಲ್ಲಿ ನಾನು ನಾನೇ’ ಎಂಬ ಸಂದೇಶ ರವಾನಿಸಲು ಹೊರಟಿರುವುದಾದರೂ ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಗೊಂದಲವೂ ತಪ್ಪಿಲ್ಲ.

ನ್ಯೂ ಮಂಗಳೂರು ಟೈಮ್ಸ್ ಡಿಜಿಟಲ್ ಪತ್ರಿಕೆಯಲ್ಲಿ ಬಂದ `ಶಾಸಕ ಹರೀಶ್ ಪೂಂಜಾ ವಿರುದ್ಧ ಆರೋಪ ಯಾರಿಗೆ ತಟ್ಟಲಿದೆ ಕಟೀಲು ದೇವಿಯ ಶಾಪ?’ ಎಂಬ ವರದಿ ವೈರಲ್ ಆಗಿದೆ. ಅದು ಹೌದಾಗಿದ್ದರೆ ಶಾಸಕ ಪೂಂಜರ ನೋವು ನಮಗೆ ಅರ್ಥವಾಗುತ್ತಿದೆ. ೪೦ ವರ್ಷದಿಂದ ಜನಪರವಾಗಿ ನಡೆಯುತ್ತಿರುವ ನಮ್ಮ ಪತ್ರಿಕೆಯನ್ನು ನಿಲ್ಲಿಸಲು ಹಲವರು ಪ್ರಯತ್ನಿಸಿದ್ದು, ಅದಕ್ಕೆ ನಮ್ಮವರೇ ಕೈಜೋಡಿಸಿದಾಗ, ಅಪವಾದ ಹೊರಿಸಿದಾಗ ನಾವು ಅನುಭವಿಸಿದ ನೋವು ಹೇಳುವಂತಹದ್ದು ಅಲ್ಲ. ಅದು ಪೂಂಜರಿಗೆ ಗೊತ್ತಿದೆ. ಅದರಿಂದ ಹೊರಬರಲು ನಾವು ದೈವ, ದೇವರುಗಳ ಮೊರೆ ಹೋಗಲಿಲ್ಲ. ಬದಲಿಗೆ ಬೆಳ್ತಂಗಡಿಯ ಜನತಾ ಜನಾರ್ದನರ ಮುಂದೆ ಮೊರೆ ಹೋಗಿದ್ದೆವು. ಅವರ ರಕ್ಷಣೆಯಿಂದ ಇಂದು ತಾಲೂಕಿನ ಅತ್ಯಂತ ಪ್ರಸಾರದ, ಜನರ ವಿಶ್ವಾಸದ, ನಿಷ್ಪಕ್ಷಪಾತ ಪತ್ರಿಕೆ, ಮಾಧ್ಯಮವಾಗಿ ನಿಂತಿzವೆ. ಪೂಂಜರು ದೇವಿಯ ರಕ್ಷಣೆ ಪಡೆಯುವುದರೊಂದಿಗೆ ಬೆಳ್ತಂಗಡಿಯ ಮತದಾರ ದೇವರ ಮುಂದೆ ತಮ್ಮ ಕಷ್ಟಗಳನ್ನು ಹಂಚಿಕೊಂಡು ರಕ್ಷಣೆ ಕೇಳಿದರೆ, ಮತದಾರರ ಕಣ್ಣೀರು ಒರೆಸಿ ಅವರ ಕಷ್ಟಗಳ ಪರಿಹಾರಕ್ಕೆ ಪ್ರಯತ್ನಿಸಿದರೆ, ಅವರಿಗೆ ತೊಂದರೆ ಕೊಡಲು ಯಾರಿಗೂ ಸಾಧ್ಯವಿಲ್ಲ. ಅಪವಾದದಿಂದ ಹೊರಗೆ ಬರುತ್ತಾರೆ ಎಂಬುವುದಂತು ಸತ್ಯ. ಸುದ್ದಿಬಿಡುಗಡೆ ಈ ವಿಷಯದಲ್ಲಿ ಪೂಂಜರ ಬೆಂಬಲಕ್ಕೆ ನಿಲ್ಲುವುದಂತು ಖಂಡಿತ. -ಡಾ.ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here