


ಬೆಳ್ತಂಗಡಿ: ಬಿ.ಸಿ.ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ಗುರು ವಿದುಷಿ ವಿದ್ಯಾ ಮನೋಜ್ ಅವರ ನಿರ್ದೇಶನದಲ್ಲಿ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ಅವರಿಂದ ಭರತನಾಟ್ಯ ಮಾರ್ಗಂ ಕಾರ್ಯಕ್ರಮ ಅ.26ರಂದು ಸಂಪನ್ನಗೊಂಡಿತು.
2001ರಲ್ಲಿ ವಿದ್ಯಾ ಮನೋಜ್ ಅವರ ನಿರ್ದೇಶನದಲ್ಲಿ ಪ್ರಾರಂಭವಾದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಸಂಸ್ಥೆಯು ಇದೀಗ 25ನೇ ವರ್ಷಕ್ಕೆ ಪಾದಾರ್ಪಣೆಯನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ರಜತ ಕಲಾಯಾನ ಎಂಬ ಶೀರ್ಷಿಕೆಯೊಂದಿಗೆ ವರ್ಷಪೂರ್ತಿ ವಿವಿಧ ಭರತನಾಟ್ಯ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹೊಂದಿದೆ. ರಜತ ಕಲಾಯಾನದ ಮೊದಲ ಕಾರ್ಯಕ್ರಮ ಈ ಸಂಸ್ಥೆಯಿಂದ ವಿದ್ವತ್ ಪದವಿ ಪಡೆದಿರುವ 20 ವಿದ್ಯಾರ್ಥಿನಿಯರಿಂದ ಭರತನಾಟ್ಯ ಮಾರ್ಗಂ ಕಾರ್ಯಕ್ರಮ ನಡೆಯಿತು. ವಿವಿಧ ಉನ್ನತ ಹುದ್ದೆಗಳಲ್ಲಿ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವ ಈ ಸಂಸ್ಥೆಯ ಹೆಮ್ಮೆಯ ವಿದುಷಿಯರನ್ನು ಒಂದೇ ಸೂರಿನಡಿಯಲ್ಲಿ ತಂದು ಅತ್ಯುತ್ತಮ ಭರತನಾಟ್ಯದ ಮಾರ್ಗಬಂಧದಲ್ಲಿ ಬರುವಂತಹ ನೃತ್ಯಬಂಧಗಳನ್ನು ಸಮರ್ಥವಾಗಿ ನಡೆಸಿರುವುದು ಇದರ ವಿಶೇಷತೆ ಹಾಗೂ ಹೆಗ್ಗಳಿಕೆ.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಚಕ್ರಪಾಣಿ ನೃತ್ಯಕಲಾಕೇಂದ್ರ ನಿರ್ದೇಶಕರಾಗಿರುವಂತಹ ಸುರೇಶ್ ಅತ್ತಾವರ ಮತ್ತು ಚಲನಚಿತ್ರ ನಿರ್ದೇಶಕರು, ಕೌನ್ಸಿಲರ್ ಆಗಿರುವ ಸ್ಮಿತೇಶ್ ಬಾರ್ಯ ಅವರು ಭಾಗವಹಿಸಿದ್ದರು. ವಿದ್ಯಾ ಮನೋಜ್ ಅವರು 25 ವರ್ಷಗಳ ನೃತ್ಯ ಪಯಣವನ್ನು ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ನೃತ್ಯಾಭ್ಯಾಸಿಗಳಿಗೆ ಪ್ರೋತ್ಸಾಹದ ನುಡಿಗಳನ್ನು ಸುರೇಶ್ ಅತ್ತಾವರ ಇವರು ನುಡಿದರು. ಸ್ಮಿತೇಶ್ ಬಾರ್ಯ ಅವರು ಸೃಜನಶೀಲವಾಗಿ ನೃತ್ಯಾಭ್ಯಾಸವನ್ನು ಮಾಡಬೇಕು ಹಾಗೂ ಜೀವನ ಮೌಲ್ಯಗಳ ಕುರಿತು ಮನಮುಟ್ಟುವಂತೆ ಹಂಚಿಕೊಂಡರು. ಕಲಾನಿಕೇತನದ ಶಿಷ್ಯಯರಾದ ವಿದುಷಿ ಡಾ. ಶ್ರೀದೇವಿ ಮತ್ತು ವಿದುಷಿ ಅಡ್ವಕೇಟ್ ಪ್ರತೀಕ್ಷ ಕೆ. ಆಚಾರ್ಯ ಅವರು ಕಲಾನಿಕೇತನದ ಜೊತೆಗಿನ ನಂಟಿನ ಕುರಿತು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನೃತ್ಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ಒದಗಿಸಿದವರು ಹಿಮ್ಮೇಳ ಕಲಾವಿದರು. ನಟುವಾಂಗ ಮತ್ತು ನೃತ್ಯ ನಿರ್ದೇಶನದಲ್ಲಿ ಗುರು ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿನೀತ್ ಪುರವಂಕರ, ಮೃದಂಗವಾದನದಲ್ಲಿ ಗೀತೇಶ್ ಗೋಪಾಲಕೃಷ್ಣನ್ ನೀಲೇಶ್ವರ ಹಾಗೂ ಕೊಳಲು ವಾದನದಲ್ಲಿ ಎ.ಎಸ್.ಹರಿಪ್ರಸಾದ್ ನೀಲೇಶ್ವರ ಅವರು ಸಹಕರಿಸಿದರು.
ಶ್ರೀರಕ್ಷ ಐತಾಳ್ ಸ್ವಾಗತಿಸಿದರು. ಸುರಕ್ಷ ವಿನೋದ್ ಮತ್ತು ಶರಣ್ಯ ಕೊಟ್ಟಾರಿ ನಿರೂಪಿಸಿದರು. ಅತ್ಮಿ ಶೆಟ್ಟಿ ವಂದಿಸಿದರು.









