ಗುರುವಾಯನಕೆರೆ: ಸ. ಶಾಲೆಯಲ್ಲಿ ಎಲ್‌.ಕೆ.ಜಿ- ಯು.ಕೆ.ಜಿ ಯ ಕಟ್ಟಡ ಉದ್ಘಾಟನೆ: ಹಳೆವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನಿಂದಲೇ ಕಟ್ಟಿದ ಶಾಲಾ ಕಟ್ಟಡ

0

ಬೆಳ್ತಂಗಡಿ: ನನಗೆ ಸರಕಾರಿ ಶಾಲೆಯೇ ಮೊದಲ ಆಧ್ಯತೆ. ಅಲ್ಲಿ ಬರುತ್ತಿರುವ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತುಕೊಡಬೇಕೆಂದು ತೀರ್ಮಾನಿಸಿದ್ದೇವೆ. ಈ ಎಲ್ಲಾ ದೃಷ್ಟಿಕೋನದಿಂದ ಕಕ್ಕಿಂಜೆಗೆ ಈಗಾಗಲೇ ಮೌಲಾನಾ ಅಝಾದ್ ಶಾಲೆ ತಂದಿದ್ದೇವೆ. ಮುಂದಕ್ಕೆ ಇದಕ್ಕೆ 6 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕೂಡ ರಚನೆಯಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.

ಗುರುವಾಯನಕೆರೆ ಸರಕಾರಿ ಶಾಲೆಯ 120 ನೇ ವರ್ಷದ ನೆನಪಿಗಾಗಿ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದಲೇ ರಚಿಸಲ್ಪಟ್ಟ ಹವಾನಿಯಂತ್ರಿತ ಎಲ್.ಕೆ.ಜಿ – ಯು.ಕೆ.ಜಿ ಕಟ್ಟಡ ಉದ್ಘಾಟನಾ‌ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಗಾಗಲೇ ತಾಲೂಕಿನ ಎರಡು ಶಾಲೆಗಳಾದ ಕೊರಂಜ ಮತ್ತು ಮಚ್ಚಿನ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆ ಎಂದು ಮೇಲ್ದರ್ಜೆಗೇರಿಸಿ ಅನುಮೋದನೆ ಆಗಿದೆ. ರಾಜ್ಯದಲ್ಲಿ ಒಟ್ಟು 800 ಸರಕಾರಿ ಶಾಲೆಗಳು‌ ಈ ರೀತಿ ಮೇಲ್ದರ್ಜೆಗೇರಲಿದ್ದು ಇಲ್ಲಿಗೆ ಬೇಕಾದ ಕಟ್ಟಡಗಳು, ಶಿಕ್ಷಕರ ನೇಮಕ, ಶಾಲಾ ಬಸ್ಸು ಸಹಿತ ಅತ್ಯಾಧುನಿಕ ಸೌಲಭ್ಯಗಳು ದೊರೆಯಲಿದೆ. ಅಲ್ಲದೆ ಸರಕಾರಿ ಶಾಲೆಗಳಲ್ಲಿ 1200 ಇಂಗ್ಲೀಷ್ ಮೀಡಿಯಂ ಶಾಲೆ ಆರಂಭಿಸಲೂ ಅನುಮತಿ ನೀಡಲಾಗಿದೆ ಎಂದರು.

ಮುಖ್ಯ ಅತಿಥಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಕರಿದ್ದಾರೆ. ಹಿಂದೂಗಳು ದೇವಸ್ಥಾನಕ್ಕೆ, ಮುಸ್ಲಿಮರು ಮಸೀದಿಗೆ,‌ ಕ್ರೈಸ್ತರು ಚರ್ಚ್ ಗೆ ಹೋಗಬಹುದು. ಆದರೆ ಅದೆಲ್ಲಕ್ಕಿಂತಲೂ ಸರಕಾರಿ ಶಾಲೆಗಳೇ ಶ್ರೇಷ್ಠ ಎಂದರು. ಧಾರ್ಮಿಕ ಮುಖಂಡ ಕಿರಣ್ ಕುಮಾರ್ ಪುಷ್ಪಗಿರಿ ಮಾತನಾಡಿ, ಸಂಸ್ಕಾರ- ಸಂಸ್ಕೃತಿ ಗಳು ಉಳಿಯಲು ಸರಕಾರಿ ಶಾಲೆಗಳು ಮಹತ್ತರ ಪಾತ್ರವಹಿಸಿದೆ ಎಂಬುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್‌.ಡಿ.ಎಂ.ಸಿ ಅಧ್ಯಕ್ಷ ಹಾಜಿ‌ ಅಬ್ದುಲ್ ಲೆತೀಫ್ ವಹಿಸಿದ್ದು, ನೂತನ ಕಟ್ಟಡವನ್ನು ಉದ್ಘಾಟಿಸಿ, ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು. ಕಟ್ಟಡದ ಸ್ಮೃತಿ ನಾಮಫಲಕವನ್ನು ಸುಮಂತ್ ಕುಮಾರ್ ಜೈನ್ ಅನಾವರಣಗೊಳಿಸಿದರು.

ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಭಾರತಿ ಶೆಟ್ಟಿ, ಸದಸ್ಯ ಮುಸ್ತಫಾ, ಬಿಆರ್‌ಸಿ ಬಸವಲಿಂಗಪ್ಪ, ಅರಮಲೆಬೆಟ್ಟ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್, ಕೊಡುಗೈ ದಾನಿ ಹೇಮಂತ ಕುಮಾರ್ ಯರ್ಡೂರು, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕುವೆಟ್ಟು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ, ಕೊರಂಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಕುಮಾರ್, ಸಿಆರ್‌ಪಿ ರಾಜೇಶ್, ಮುಂತಾದವರು ಶುಭ ಹಾರೈಸಿದರು.

ಗ್ರಾ.ಪಂ ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಮೈಮುನಾ, ಎಸ್‌‌ಡಿಎಂಸಿ ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಪವಿತ್ರಾ, ಐವನ್‌ ಪಿರೇರಾ, ಮುಹಮ್ಮದ್ ಹನೀಫ್, ಅಬ್ದುಲ್ ರಹಿಮಾನ್, ಕೊಡುಗೈ ದಾನಿಗಳಾದ ಸುಧಾ ರಾಮಕೃಷ್ಣ ನಾಯಕ್, ರಾಮಚಂದ್ರ ಶೆಟ್ಟಿ, ಜಿ.ಕೆ ಬಝಾರ್ ಮಾಲಕ ಮುಹಮ್ಮದ್ ಶರೀಫ್, ಉದ್ಯಮಿ ಲೋಕೇಶ್, ಧನುಷ್, ಪಿಲಿಚಂಡಿಕಲ್ಲು ಶಾಲಾ ಎಸ್ ‌ಡಿ.ಎಂ.ಸಿ‌ ಅಧ್ಯಕ್ಷ ಖಲಂದರ್ ಬಿ.ಹೆಚ್ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಉಮಾ ಡಿ ಗೌಡ ಪ್ರಸ್ತಾವನೆಗೈದು ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಲೀಂ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವೆರೋನಿಕ ಧನ್ಯವಾದಗೈದರು.

LEAVE A REPLY

Please enter your comment!
Please enter your name here