


ಬೆಳ್ತಂಗಡಿ : ನನ್ನನ್ನು ಬಿ ಖಾತಾ ಬ್ರೋಕರ್ ಎಂದು ಅವಮಾನಿಸಿ, ಏಕವಚನದಲ್ಲಿ ನಿಂದಿಸಿರುವುದು ಅವರ ಸ್ಥಾನಕ್ಕೆ ಯೋಗ್ಯವಾದ ಮಾತಲ್ಲ. ನನ್ನ ಹೆಂಡತಿಯ ಮಾಂಗಲ್ಯ ಸರ ಕಾರ್ಪೋರೇಷನ್ ಬ್ಯಾಂಕ್ನಲ್ಲಿದೆ, ನಾನು ಭ್ರಷ್ಟಾಚಾರಿಯಾಗಿದ್ದರೆ ಹೀಗಾಗುತ್ತಿತ್ತೇ? ನಾನು ಯಾವುದೇ ಗುತ್ತಿಗೆದಾರರ ಜೊತೆ ಶಾಮೀಲಾಗಿ ಕೆಲಸ ಮಾಡಲಿಲ್ಲ. ತಾಲೂಕು ಔಷಧ ವ್ಯಾಪಾರಸ್ಥರ ಸಂಘದಿAದ ನನ್ನನ್ನು ಹೊರ ಹಾಕಿದ್ದಲ್ಲ, ಭಾಗವಹಿಸಲು ಕಷ್ಟ ಎಂದು ನಾನೇ ಹಿಂದೆ ಸರಿದದ್ದು. ಸಾಮಾಜಿಕ ಜಾಲತಾಣದಲ್ಲಿ ನಾನು ಅಪಪ್ರಚಾರ ಮಾಡಲಿಲ್ಲ. ರಕ್ಷಿತ್ ಶಿವರಾಂ ಅವರನ್ನು ಬ್ರಹ್ಮಾಂಡ ಭ್ರಷ್ಟಾಚಾರಿ ಎಂದಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಪಟ್ಟಣ ಪಂಚಾಯತ್ ಸದಸ್ಯ ಡಿ. ಜಗದೀಶ್ ಹೇಳಿದ್ದಾರೆ.
ಅ.27ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಗರ ಪಂಚಾಯತ್ಗೆ ಬಂದ ‘ಬಿ’ ಖಾತದ ಬಗ್ಗೆ ಈಗಿನ ಅಧ್ಯಕ್ಷರು ಜಯಾನಂದ ಅವರು ಪತ್ರಿಕೆ ಗೋಷ್ಠಿ ಕರೆದು ಕರ್ನಾಟಕ ಸರಕಾರದ ವಿರುದ್ದ ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ. ಇದು ದುಡ್ಡು ಮಾಡುವ ದಂದೆ ಸರಕಾರದಲ್ಲಿ ಹಣ ಇಲ್ಲ ಈ ರೀತಿ ವಸೂಲಿಗೆ ಬಂದಿದ್ದಾರೆ ಎಂಬAತೆ ಪತ್ರಿಕಾ ಗೋಷ್ಠಿ ಕರೆದು ಅವಮಾನಿಸಿದ್ದಾರೆ.
ನಮ್ಮ ಸರಕಾರ 2023 ರಲ್ಲಿ ಅಧಿಕಾರಕ್ಕೆ ಬಂದ ನಂತರ ನಾನು ನನ್ನ ಬಳಿ ಬಂದ ಅದೆಷ್ಟೋ ಮಂದಿ ನಾಗರಿಕರು ಖಾತಾದ ಬಗ್ಗೆ ಹಾಗೂ ಫಾರ್ಮು-3 ರ ಬಗ್ಗೆ ಸರಕಾರದ ಗಮನ ಸೆಳೆಯುವಂತೆ ತಮ್ಮಲ್ಲಿ ದಾಖಲೆಗಳನ್ನು ನನ್ನಲ್ಲಿ ಕೊಟ್ಟಾಗ ನಾನದನ್ನು 2024 ಜನವರಿ 10 ರಂದು ಬೆಂಗಳೂರು ಕೆ.ಪಿ.ಸಿ.ಸಿ. ಕಛೇರಿಯಲ್ಲಿ ಎಲ್ಲಾ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಬೆಳ್ತಂಗಡಿ ನಗರದ ಜನತೆ ಬಗ್ಗೆ ನಮೂನೆ 3 ನ್ನು ನೀಡುವಂತೆ ಕಾನೂನಿನಲ್ಲಿ, ನಿಯಮದಲ್ಲಿ ಸರಳೀಕರಣ ಮಾಡಿ ನೊಂದವರಿಗೆ ನ್ಯಾಯ ಒದಗಿಸುವಂತೆ ಮನೆ ಕಟ್ಟಲು, ತೆರಿಗೆ ಕಡಿಮೆ ಮಾಡಲು ಮಾರಾಟ ಮಾಡಲು ಅವಕಾಶ ಕೊಡುವಂತೆ ಮನವಿ ಸಲ್ಲಿಸಿರುತ್ತೇನೆ.
ಸರಕಾರ ‘ಬಿ’ ಖಾತ ನೀಡಲು ಆದೇಶ ಬಂದ ನಂತರ ನಮ್ಮ ಸರಕಾರದ ಮಹಾ ಸಾಧನೆಗೆ ಜನರಿಗೆ ಸಹಾಯ ಮಾಡಲು ಬೇಡಿಕೆ ಜನರಿಂದ ಬಂದಿದ್ದರಿAದ ಅದೆಷ್ಟೋ ಬಡವರಿಗೆ ನನ್ನಿಂದಾದ ಸಹಾಯ ಮಾಡಿದ್ದೇನೆ. ನಾನು ಸದಸ್ಯ, ನಾನು ನಮ್ಮ ನಗರದ ಜನತೆಗೆ ನಿಮ್ಮೆಲ್ಲರ ಸಮಸ್ಯೆಗೆ ನಾನು ಸ್ಪಂದಿಸುತ್ತೇನೆ, ನಿಮ್ಮ ಸೇವೆಗೆ ಸದಾ ಸಿದ್ದ ಎಂಬ ಭರವಸೆಯೊಂದಿಗೆ ನಾನು ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಈ ಪ್ರಾಮಾಣಿಕ ಸೇವೆಗೆ ಬಿ ಖಾತಾ ಬೋಕರ್ ಎಂಬ ಆರೋಪ ಹೊರಿಸಿರುವುದು ಬೇಸರದ ಸಂಗತಿ. ಇದಕ್ಕೆ ನಮ್ಮ ನಗರದ ನಾಗರಿಕ ಬಂಧುಗಳು ತಕ್ಕ ಸಮಯದಲ್ಲಿ ಉತ್ತರ ನೀಡುವವರಿದ್ದಾರೆ. ನನ್ನ ಮನೆಯ ಹರಾಜು ಪತ್ರಿಕೆಯಲ್ಲಿ ಬಂದಿತ್ತು. ಆದರೂ ಯಾರಿಂದಲೂ ಹಣ ಪಡೆಯದೆ ಮನೆ ಮಾರಿ ಸಾಲ ತೀರಿಸಿದ್ದೇನೆ. ನನಗೆ ಹಣ ಹಾಗೂ ಬ್ರೋಕರ್ ಕೆಲಸ ಮಾಡಿ ಬದುಕಬೇಕೆಂಬ ಯಾವುದೇ ಆಸೆ ಇಲ್ಲ. ನಾನು 35 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಔಷಧಿ ಅಂಗಡಿ ಇದೆ. ಅದರಿಂದಲೇ ನಾನು ಜೀವನ ಸಾಗಿಸುತ್ತಿದ್ದೇನೆ.
ನಾನು ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷನಾಗಿ 12 ವರ್ಷ ಪ್ರಾಮಾಣಿಕವಾಗಿ 53 ಔಷಧ ಅಂಗಡಿಯವರ ಸಹಾಯದಿಂದ ಪ್ರತೀ ವರ್ಷ ಸಹಾಯಧನ ಹಾಗೂ ನೊಂದವರಿಗೆ ಬೇರೆ ಬೇರೆ ರೀತಿಯ ಸಹಾಯಧನವನ್ನು ನಮ್ಮ ಸಂಘ ನೀಡುತ್ತಿದೆ. ವಿನಾ ಕಾರಣ ಜಯಾನಂದರಿಗೆ ಸಂಬAಧ ಇಲ್ಲದ ನಮ್ಮ ಸಂಘದ ವಿಷಯದಲಿ ಹಸ್ತಕ್ಷೇಪ ಮಾಡಿರುವುದು ಸರಿ ಅಲ್ಲ. ಇದು ಖಂಡನೀಯ ವಿಷಯ. ನಾನು 12 ವರ್ಷದ ನಂತರ ನಿವೃತ್ತಿಯಾಗಿದ್ದೇನೆ. ಯಾರೂ ಹೊರ ಹಾಕಲಿಲ್ಲ. ಯಾವುದೇ ನಿರ್ಣಯ ಮಾಡಲಿಲ್ಲ. ನನಗೆ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅನ್ಯತಾ ಸತ್ಯಕ್ಕೆ ದೂರವಾದ ಮಾತನ್ನು ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿ ನಾನು ಒಳ್ಳೆ ಮನುಷ್ಯ ಎಂದು ತೋರಿಸಲು ಹೊರಟಿದ್ದಾರೆ. ಯಾವುದೇ ಔಷಧ ಅಂಗಡಿಯವರು ನನ್ನ ಮೇಲೆ ದೂರು ಕೊಟ್ಟಿದ್ದರೆ ಅದನ್ನು ರುಜುವಾತು ಮಾಡಲಿ. ಇಲ್ಲವಾದರೆ ನಮ್ಮ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಕ್ಷಮೆ ಕೇಳಲೇಬೇಕಾಗಿದೆ.


ನಾನು 24 ವರ್ಷಗಳಿಂದ ಈ ಪಂಚಾಯತ್ ಸದಸ್ಯನಾಗಿದ್ದು, ಪ್ರತೀ ಸಾಮಾನ್ಯ ಸಭೆಯಲ್ಲಿ ನ್ಯಾಯಯುತ ಸಮಸ್ಯೆ ಹೇಳಿದಾಗ ಎಲ್ಲದಕ್ಕೂ ಅಧ್ಯಕ್ಷರು ಹಾರಿಕೆಯ ಉತ್ತರ ನೀಡಿ ಸ್ಪಷ್ಟತೆ ಇಲ್ಲದೆ ಸಭೆ ಮುಗಿಸುತ್ತಿದ್ದರು. 2017-18 ರಲ್ಲಿ ನಮ್ಮ ಅವಧಿಯಲ್ಲಿ ಅಂದಿನ ಹಾಗೂ ಇಂದಿನ ಮುಖ್ಯ ಮಂತ್ರಿ 10 ಕೋಟಿ ಅನುದಾನವನ್ನು ಮಾಜಿ ಶಾಸಕರಾದ ದಿ.ವಸಂತ ಬಂಗೇರರು 33 ಕಾಮಗಾರಿಗಳಿಗೆ ಅನುಮೋದನೆ ಹಾಗೂ ಮಂಜೂರಾತಿ ತಂದು 10 ಕೋಟಿಯಲ್ಲಿ 3 ಕೋಟಿ ಅನುದಾನ ಕೆಆರ್ಐಡಿಎಲ್ ಸಂಸ್ಥೆಗೆ ನೀಡಿದ್ದು. ಇಲ್ಲಿವರೆಗೆ ಈ ಅಧ್ಯಕ್ಷರ ಅವಧಿ ಮುಗಿಯುವ ಹಂತದಲ್ಲಿದ್ದು, 4. ಕಾಮಗಾರಿಗಳನ್ನು ಪೂರ್ತಿ ಮಾಡಲಿಲ್ಲ ಹಾಗೂ ಕೆಲವು ಕಾಮಗಾರಿಗಳು ಕಳಪೆಯಿಂದ ಕೂಡಿದ್ದಾಗಿದೆ. 33 ಕಾಮಗಾರಿಗಳಲ್ಲಿ ಕಾಮಗಾರಿ ಯಾಗದೇ ಇರುವ ಸ್ಥಳಕ್ಕೂ ಹಣವನ್ನು ಇಟ್ಟಿದ್ದು ಸುಮಾರು 20 ಲಕ್ಷದ ದುರುಪಯೋಗ ಉಂಟಾಗಿರುತ್ತದೆ.
ಕರ್ನಾಟಕ ಸರಕಾರ ‘ಬಿ’ ಖಾತಾ ಜಾರಿಗೆ ತಂದಾಗ ಈ ಅಧ್ಯಕ್ಷರು ಜಯಾನಂದ ಸರಕಾರದ ಹಣ ಮಾಡುವ ದಂದೆ, ಸರಕಾರದಲ್ಲಿ ಹಣ ಇಲ್ಲ, ಈ ರೀತಿ ಜನರಿಗೆ ಮೋಸ ಮಾಡುತ್ತಾ ಇದೆ ಎಂಬುದಾಗಿ ಪತ್ರಿಕಾ ಗೋಷ್ಠಿ ಮಾಡಿ ಈ ಬಿ ಖಾತಾಕ್ಕೆ ವಿರುದ್ದವಾಗಿ ಮಾತಾಡಿದ್ದಾರೆ.
ಚರ್ಚ್ ರಸ್ತೆಯಲ್ಲಿ ಚರ್ಚ್ ಎದುರುಗಡೆ ಹೆಚ್ಡಿ ಪೈಪು ಅಳವಡಿಸಲು 1 ಮೀಟರ್ ಆಳದಲ್ಲಿ ಹಾಕಬೇಕೆಂದು ಟೆಂಡರ್ ಆಗಿದೆ. ಆದರೆ ಪೂರ್ತಿಯಾಗಿ 1 ಮೀಟರ್ ಆಳದಲ್ಲಿ ಹಾಕಿರುವುದಿಲ್ಲ. ಕಲ್ಲಗುಡ್ಡೆಯಲ್ಲಿ 10 ಲಕ್ಷದ 33 ಸಾವಿರದ ಮಿನಿ ನೀರಿನ ಟ್ಯಾಂಕ್ ನಿರ್ಮಾಣ ವಾಗಿದೆ. ಪೈಪ್ ಲೈನ್ ಮತ್ತು ಬ್ಯಾಂಕ್ ಸೇರಿ ಟೆಂಡರ್ ಆಗಿದ್ದು, ಇಲ್ಲಿಯವರೆಗೆ ನೀರು ತುಂಬಿಸದೆ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡಿದ್ದಾರೆ. ಸೀಡ್ ಫಾರ್ಮು ರಸ್ತೆ, ಬಜಕ್ರೆ ಸಾಲಿನ ಗದ್ದೆ ಬದಿಯಿಂದ ಸಾರ್ವಜನಿಕರಿಗಾಗಿ ರಸ್ತೆ ನಿರ್ಮಾಣ ಮಾಡಿದ್ದು, ಸದ್ರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಚಿಕ್ಕದಾದ 2 ತೋಡು ಗಳಿದ್ದು, ಅವೈಜ್ಞಾನಿಕವಾಗಿ 2 ಸಣ್ಣ ಹ್ಯೂಮ್ ಪೈಪ್ ಹಾಕಿದ್ದಾರೆ. 2 ಲಕ್ಷದ 60 ಸಾವಿರ ಖರ್ಚು ಮಾಡಿ ವ್ಯರ್ಥವಾಗಿದೆ. ಈ ಬಾರಿ 25-26ನೇ ಸಾಲಿಗೆ ಮತ್ತು 3 ಲಕ್ಷದ ಟೆಂಡರ್ ಅದೇ ಸ್ಥಳಕ್ಕೆ ನಮ್ಮ ಮುಖ್ಯಾಧಿಕಾರಿಯವರು ಮತ್ತು ಇಂಜಿನಿಯರ್ ಮಹಾವೀರ ಆರಿಗ ಮಾಡಿದ್ದಾರೆ. ಒಟ್ಟಿನಲ್ಲಿ ದುಂದು ವೆಚ್ಚ ಮಾಡುತ್ತಿದ್ದಾರೆ.
ಕೊನೆಯದಾಗಿ ಒಂದೇ ಒಂದು ಸರಕಾರದ ಹಳೆ ಬಸ್ ನಿಲ್ದಾಣದ ಕಟ್ಟಡದ ಹಳೆ ಸೊತ್ತುಗಳ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ಇಷ್ಟೊಂದು ಆರೋಪ ಮಾಡಿದ್ರೆ ಎಲ್ಲವನ್ನು ಕೇಳಿದ್ರೆ ಮುಖ್ಯಾಧಿಕಾರಿ ಮಾಹಿತಿ ಕೊಡಬಹುದಿತ್ತು. ಆದರೆ ನನ್ನ 10.10.2025 ರ ಪತ್ರಕ್ಕೆ ಉತ್ತರ ನೀಡಿರುವುದಿಲ್ಲ. ಒಟ್ಟಿನಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಸಾರ್ವಜನಿಕರ ಬದುಕಿನಲ್ಲಿ ಜನತೆಯ ಸೇವೆ ಮಾಡಿದ್ದರೂ ಈ ರೀತಿ ಭ್ರಷ್ಠಾಚಾರದ ಆರೋಪ ಹೊರಿಸಿದ್ದು, ಮುಂದೆ ಯಾರು ಯಾರಿಗೂ ಸೇವಾ ಮನೋಭಾವನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಸರಕಾರದ ನಿಯಮವನ್ನು ಪಾಲಿಸಲು ಬಾರದೇ ನಾನೇ ಅಧ್ಯಕ್ಷ ಎಂಬ ನೆಲೆಯಲ್ಲಿ ನಾನು ಹೇಳಿದ್ದೇ ಆಗಬೇಕು ಎಂದಾದಲ್ಲಿ ನಮ್ಮ ಮುಖ್ಯಾಧಿಕಾರಿಯ ಪಾತ್ರ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮುಖ್ಯಾಧಿಕಾರಿಯವರು ಸಮಯಕ್ಕೆ ಸರಿಯಾಗಿ ಕಛೇರಿಗೆ ಬಾರದೆ ಇರುವಂತದ್ದು. ಇವರ ಅವಧಿಯಲ್ಲೇ ಹೊಳೆ ಬದಿಯಿಂದ ಹೊಯ್ಗೆ ಮಾಫಿಯಾ ಆಗಿದ್ದು ಆ ಪರಿಸರದಲ್ಲಿ ಗೇಟಿಗೆ ಬೀಗ ಹಾಕಿದ ನಂತರ ಹೊಯಿಗೆ ಮಾಫಿಯ ನಿಂತು ಹೋಗಿರುತ್ತದೆ. ಈಗ ನಿಯಮ ಮೀರಿ ಈ ರೀತಿಯ ವರ್ತನೆಯಿಂದ ಸತ್ಯ ಹೊರಗೆ ಬಂದೇ ಬರುತ್ತದೆ. ನಾನು ಯಾರಿಗೂ ಶಾಪ ಹಾಕುವವನಲ್ಲ. ಈ ನಗರದ ಪ್ರಜ್ಞಾವಂತ ನಾಗರಿಕರಿಗೆ ನನ್ನ ಜೀವನದ ತೆರೆದಿಟ್ಟ ಪುಸ್ತಕದ ಬಗ್ಗೆ ಅರಿವಿದೆ. ಅವರೆಲ್ಲರ ಆಶೀರ್ವಾದದಿಂದ ಇದುವರೆಗೆ ಕಳಂಕ ರಹಿತ 24 ವರ್ಷ ಸದಸ್ಯನಾಗಿ ಜನಸೇವೆ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಪತ್ರಿಕಾ ಗೋಷ್ಠಿ, ಯಾವುದೇ ಜಾಹೀರಾತು ಯಾವುದೇ ವಾಟ್ಸಪ್ ಮೆಸೇಜ್ ಹಾಕದೇ ಯಾವ ಪಕ್ಷಕ್ಕೂ ಯಾವುದೇ ಹಾನಿಕಾರಕ ವರದಿ ನೀಡದೆ ಬಂದಿದ್ದೇನೆ.
ನನ್ನ ವ್ಯವಹಾರಗಳನ್ನು ನೋಡಿ ಸಹಿಸಿಕೊಳ್ಳಲು ಅಸಾಧ್ಯವಾದ ಈಗಿನ ಅಧ್ಯಕ್ಷ ಜಯಾನಂದ ಕುಣಿಯಲಿಕ್ಕೆ ಆಗದವರು ನೆಲ ಡೊಂಕು ಎಂಬAತೆ ವರ್ತಿಸುತ್ತಿರುವುದನ್ನು ಜನತೆ ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ. ಯಾರು ಏನು ಮಾಡಿದ್ದಾರೆ ಎಂಬುದಕ್ಕೆ ನಗರದ ಜನತೆ ಅವಧಿ ಮುಗಿಯುವುದಕ್ಕೆ ಕಾಯುತ್ತಿದ್ದು ಮುಂದಿನ ಪಂಚಾಯತ್ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಪಟ್ಟಣ ಪಂಚಾಯತ್ ಸದಸ್ಯ ಡಿ. ಜಗದೀಶ್ ಅವರು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.









