


ಚಾರ್ಮಾಡಿ: ಘಾಟಿ ರಸ್ತೆಯಲ್ಲಿ ಟ್ಯಾಂಕರ್ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಉಂಟಾದ ಘಟನೆ ಅ.26ರಂದು ಬೆಳಿಗ್ಗೆ ನಡೆದಿದೆ.
ಚಾರ್ಮಾಡಿ ಘಾಟಿ ಹತ್ತನೇ ತಿರುವಿನಲ್ಲಿ ಚಾರ್ಮಾಡಿ ಕಡೆ ಸಂಚರಿಸುತ್ತಿದ್ದ ಬೃಹತ್ ಗಾತ್ರದ 14 ಚಕ್ರಗಳ ಟ್ಯಾಂಕರ್ ಚಲಿಸಲಾಗದೆ ಸಿಲುಕಿಕೊಂಡಿತ್ತು. ಇದರಿಂದ ಇತರ ವಾಹನಗಳು ಚಲಿಸಲು ಜಾಗವಿಲ್ಲದೆ ಸುಮಾರು ಎರಡು ತಾಸು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಇತರ ವಾಹನಗಳ ಚಾಲಕರ ಸಹಕಾರದಲ್ಲಿ ಟ್ರಕ್ ನ್ನು ಮುಂದೆ ಚಲಿಸಲು ಅವಕಾಶ ಮಾಡಿಕೊಟ್ಟ ಬಳಿಕ ಘಾಟಿಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು ಸಂಚಾರ ನಡೆಸಿದವು.ಆದರೂ ಟ್ರಕ್ ಘಾಟಿ ಇಳಿಯುವ ತನಕ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಬೇಕಾಯಿತು.


ಚಾರ್ಮಾಡಿ ಘಾಟಿ ರಸ್ತೆಯಲ್ಲಿ ರಾಜಹಂಸ, ಐರಾವತ ಬಸ್ ಗಳನ್ನು ಹೊರತುಪಡಿಸಿ ಕೇವಲ ಆರು ಚಕ್ರದವರೆಗಿನ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ. ಆದರೆ ಎಂಟು ಚಕ್ರಗಳ ಈ ವಾಹನ ಕೊಟ್ಟಿಗೆಹಾರ ಕಡೆಯಿಂದ ಚೆಕ್ ಪೋಸ್ಟ್ ತಪ್ಪಿಸಿ ಹೇಗೆ ಸಂಚಾರ ನಡೆಸಿತು ಎಂಬ ಶಂಕೆ ವ್ಯಕ್ತವಾಗಿದೆ.
ಇದಲ್ಲದೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ ರಾತ್ರಿ 10 ಗಂಟೆ ಬಳಿಕ ಬೆಳಗ್ಗಿನ 6 ಗಂಟೆವರೆಗೆ ಐದು ವಾಹನಗಳನ್ನು ಏಕಕಾಲದಲ್ಲಿ ಬಿಡುವ ನಿಯಮವನ್ನು ಇತ್ತೀಚೆಗೆ ರೂಪಿಸಲಾಗಿದೆ. ಬೃಹತ್ ಗಾತ್ರದ ವಾಹನಗಳಿಗೆ ಇಲ್ಲಿ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ ಈ ವಾಹನ ಚೆಕ್ ಪೋಸ್ಟ್ ಗಳ ಸಿಬ್ಬಂದಿಗಳಿಗೆ ಕಣ್ಣಿಗೆ ಬೀಳದಿರುವುದು ವಿಪರ್ಯಾಸವಾಗಿದೆ.










