ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ಅಧಿಕಾರಿಗಳು ಮತ್ತೆ ಆರೋಪಿ ಚಿನ್ನಯ್ಯನ ವಿಚಾರಣೆ ಅಥವಾ ಹೇಳಿಕೆ ಪಡೆಯಲಿದ್ದಾರೆ.
ಈಗಾಗಲೇ 15ದಿನ ಎಸ್.ಐ.ಟಿ ಕಸ್ಟಡಿ ಮುಗಿದು ಜೈಲಿನಲ್ಲಿರುವ ಆರೋಪಿಯನ್ನು ಮತ್ತಷ್ಟು ವಿಚಾರಣೆ ಮತ್ತು ಹೇಳಿಕೆ ಪಡೆಯಲು ಅನುಮತಿ ನೀಡಬೇಕೆಂದು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ತನಿಖಾಧಿಕಾರಿ ಜಿತೇಂದ್ರ ದಯಾಮ ಅರ್ಜಿ ಸಲ್ಲಿಸಿದ್ದರು.
ಆರೋಪಿ ಚಿನ್ನಯ್ಯನನ್ನು ಯಾವ ಕಾರಣಕ್ಕೆ ವಿಚಾರಣೆ ನಡೆಸಬೇಕು, ಹೇಳಿಕೆ ಪಡೆಯಬೇಕು ಎಂಬುದನ್ನು ಎಸ್.ಐ.ಟಿ ಪರ ಸರ್ಕಾರಿ ವಕೀಲ ದಿವ್ಯರಾಜ್ ಹೆಗ್ಡೆ ನ್ಯಾಯಾಧೀಶ ಟಿ.ಹೆಚ್. ವಿಜಯೇಂದ್ರರ ಮುಂದೆ ವಾದ ಮಂಡಿಸಿದರು. ಈ ಹಿನ್ನಲೆಯಲ್ಲಿ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರು ಎರಡು ದಿನಗಳ ಕಾಲ ವಿಚಾರಣೆ ನಡೆಸಲು ಅನುಮತಿ ನೀಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲೇ ಆರೋಪಿ ಚಿನ್ನಯ್ಯನನ್ನು ಎಸ್.ಐ.ಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.