ಬೆಳ್ತಂಗಡಿ: ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್ ಕಲೆ, ಪ್ರಚಾರ ಮತ್ತು ಉತ್ತೇಜನಕ್ಕಾಗಿ ಮಂಗಳೂರಿನ “ಆಮಿ ಆನಿ ಆಮ್ಮಿಂ” ಸಂಸ್ಥೆಯು, ಜಾಗತಿಕ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ “ಪೆಪೆರೆ ಪೆಪೆ ಡುಂ” ಅಂತರಾಷ್ಟ್ರೀಯ ಆವೃತ್ತಿ -2 ಶೀರ್ಷಿಕೆಯ ಅಡಿಯಲ್ಲಿ, ಗಲ್ಫ್ ನ ಓಮಾನ್ ದೇಶದ ರಾಜಧಾನಿ ಮಸ್ಕತ್ ನಲ್ಲಿಯ ಪ್ರಸಿದ್ಧ ಹೋಟೆಲ್ ಅಲ್ಪಾಲಾಜ್ ನ ಗ್ರಾಂಡ್ ಹಾಲ್ ಸಭಾಂಗಣದಲ್ಲಿ ಅ. 10 ರಂದು ಹಲವು ತಂಡಗಳನ್ನೊಳಗೊಂಡ ಸ್ಪರ್ಧೆಯ ಕಾರ್ಯಕ್ರಮವನ್ನು ಮಸ್ಕತ್ ನ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಮೂಲದ ಅನಿವಾಸಿ ಕ್ರಿಶ್ಚಿಯನ್ ಕೊಂಕಣಿ ಭಾಷಿಕರ ಸಂಗ “ಎಂ ಸಿ ಸಿ ಪಿ” ಯ ಸಮನ್ವಯದೊಂದಿಗೆ ಬಹಳ ವಿಜೃಂಭಣೆಯಿಂದ ತಂಡಗಳ ಪ್ರದರ್ಶನ ನಡೆಸಿದರು.
ಕರಾವಳಿ ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು – ವಿಶೇಷವಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಮೂಲವಾದ ವಿಶಿಷ್ಟ ಬ್ರಾಸ್ ಬ್ಯಾಂಡ್ ಸಂಸ್ಕೃತಿಯನ್ನು – ಪರಿಚಯಿಸುವುದು ಮತ್ತು ಸಂರಕ್ಷಿಸುವುದನ್ನು ಉದ್ದೇಶಿಸಿಕೊಂಡು, ಮಂಗಳೂರಿನ ಮೂಲದ “ಆಮಿ ಆನಿ ಆಮ್ಮಿ೦” ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಹಿಂದಿನ ವರ್ಷ ಮಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ಸಾಂಸ್ಕೃತಿಕ ಉತ್ಸವ ಮತ್ತು ಸ್ಪರ್ಧೆಯು ಭಾರೀ ಯಶಸ್ಸು ಕಂಡಿತ್ತು. ಕರ್ನಾಟಕದ ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರ ಮುಂದುವರಿಕೆಯಾಗಿ ಓಮಾನ್ ದೇಶದ ರಾಜಧಾನಿ ಮಸ್ಕತ್ ನಲ್ಲಿ ಆಯೋಜಿಸಲಾದ ಈ ಅಂತರಾಷ್ಟ್ರೀಯ ಆವೃತ್ತಿ, ಕರಾವಳಿ ಕರ್ನಾಟಕದ ಸಂಗೀತ ಮತ್ತು ನೃತ್ಯದ ಉಜ್ವಲತೆ ಹಾಗೂ ನೆನಪುಗಳನ್ನು ಗಲ್ಫ್ ಪ್ರೇಕ್ಷಕರ ಮುಂದಿಟ್ಟಿತು.

ಈ ಕಾರ್ಯಕ್ರಮದಲ್ಲಿ 40 ರಿಂದ45 ಸದಸ್ಯರ ತಂಡಗಳು ಭಾಗವಹಿಸಿ, ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದವು. ಕೊಂಕಣಿ ಹಾಡುಗಳು, ಬೈಲಾ ನೃತ್ಯ, ವಾಲ್ಟ್ ನೃತ್ಯ, ಜೈವ್ ನೃತ್ಯ, ಪ್ರಸಿದ್ದ ಮಂಗಳೂರು ಹುಲಿ ನೃತ್ಯ, ಗುಂಪು ಗಾಯನ ಹಾಗೂ ನೃತ್ಯಗಳು, ಹಾಗೂ ಪ್ರೇಕ್ಷಕರ ಮನರಂಜನೆ ನೆರೆದಿದ್ದ ಪ್ರೇಕ್ಷಕರ ಮಹಾ ಸಾಗರವನ್ನು ಮತ್ತು ಅತಿಥಿಗಳನ್ನು ಹರ್ಷಭರಿತಗೊಳಿಸಿದವು. ಪ್ರತಿ ತಂಡಗಳ ಪ್ರದರ್ಶನವನ್ನೂ ಭಾರತದಿಂದ ವಿಶೇಷವಾಗಿ ಆಗಮಿಸಿದ, ಕಲಾ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದ ಮೂರು ಗಣ್ಯ ನಿರ್ಣಾಯಕರು ತಂಡಗಳ ಪ್ರದರ್ಶನದ ಮೌಲ್ಯಮಾಪನ ಮಾಡಿದರು. ಕಾರ್ಯಕ್ರಮವನ್ನು ಡೆನಿಸ್ ಡಿ ಸಿಲ್ವಾ ಮತ್ತು ಸಂತೋಷ್ ಡಿ’ಕೋಸ್ಟಾ ಅವರ ನೇತೃತ್ವದಲ್ಲಿ, ರಾಜೇಶ್ ಡಿ’ಕೋಸ್ಟಾ, ಲಾಯ್ಡ್ ರೆಗೊ ಮತ್ತು ಮೆಲ್ವಿನ್ ಡಿ’ಸಾ (“ಆಮಿ ಆನಿ ಆಮ್ಮಿ೦”- ಮಂಗಳೂರು) ಅವರ ಸಹಕಾರದಲ್ಲಿ ಅತ್ಯಂತ ಸಂಯೋಜಿತವಾಗಿ ಆಯೋಜಿಸಲಾಯಿತು.
ಸಂಜೆಯ ಈ ಮಹಾ ಸಮಾರಂಭಕ್ಕೆ ಅನೇಕ ಗಣ್ಯರು ಹಾಜರಾಗಿದ್ದರು. ಮುಖ್ಯ ಅತಿಥಿಯಾಗಿ ಪ್ರಸಿದ್ಧ ಅನಿವಾಸಿ ಉದ್ಯಮಿ ಹಾಗೂ ಕೊಡುಗೈ ದಾನಿ ಡಾ. ರೋನಾಲ್ಡ್ ಕೊಲಾಸೊ ಭಾಗವಹಿಸಿದರು. ಇತರ ಗೌರವಾನ್ವಿತ ಅತಿಥಿಗಳಾಗಿ ಡಾ. ಯು.ಟಿ. ಇಫಿಖಾರ್ ಫರೀದ್, ಡೈಜಿವರ್ಲ್ಡ್ ಮೀಡಿಯಾ ನೆಟ್ವರ್ಕ್ನ ಸಂಸ್ಥಾಪಕರಾದ ವಾಲ್ಟರ್ ನಂದಲಿಕೆ, ಡೈಜಿವರ್ಲ್ಡ್ ಮೀಡಿಯಾ ಮತ್ತು ಟೆಲಿವಿಷನ್ ನಿರ್ದೇಶಕರಾದ ಅಲೆಕ್ಸಿಸ್ ಕಾಸ್ಟಿಲಿನೋ, ರೆವ. ಫಾ. ಸ್ಟೀಫನ್ ಲೂಯಿಸ್ ಹಾಗೂ ರೆವ. ಫಾ. ಸಿಲ್ವೆಸ್ಟರ್ ಡಿ’ಕೋಸ್ಟಾ ಉಪಸ್ಥಿತರಿದ್ದರು.
ಈ ಉತ್ಸವಕ್ಕೆ ಕೀರ್ತಿ ತಂದಿದ್ದು ಗುರುವಾಯನಕೆರೆ ಮೂಲದ ಹೋಟೆಲ್ ರೇಯ್ಸ್ ಇನ್ನ ಮಾಲೀಕರಾದ ವಿಜಯ್ ಮತ್ತು ಜೇನ್ ಡಿಕುನ್ಹಾ ದಂಪತಿ ಗಳ “ದಬಕ್ ದಬಾ” ಕಲಾವಿದರ ತಂಡವಾಗಿತ್ತು. ಇವರ ತಂಡವು ರೂ.2.3 ಲಕ್ಷ ನಗದು ಬಹುಮಾನ, ಗೌರವ ಫಲಕ, ಹಾಗೂ ಸನ್ಮಾನ ಗಳಿಸಿ, ಸ್ಪರ್ಧೆಯ ಚಾಂಪಿಯನ್ ಪಟ್ಟವನ್ನು ಪಡೆಯಿತು. ಇದು ಮಂಗಳೂರು ಸಮುದಾಯಕ್ಕೆ ಮಾತ್ರವಲ್ಲ, ಬೆಳ್ತಂಗಡಿಗೂ ಹೆಮ್ಮೆಯ ಕ್ಷಣವಾಗಿತ್ತು.

ಈ ಜಯ ಕೇವಲ ಸ್ಪರ್ಧೆಯ ಗೆಲುವಲ್ಲ ಪರಂಪರೆಯ ಬ್ರಾಸ್ ಬ್ಯಾಂಡ್ ಸಂಸ್ಕೃತಿಗೆ ಹೃದಯಸ್ಪರ್ಶಿ ನಮನ ಇದು ಇತ್ತೀಚಿನ ಡಿಜೆ ಮತ್ತು ಎಲೆಕ್ಟ್ರಾನಿಕ್ ಸಂಗೀತದಿಂದ ನಿಧಾನವಾಗಿ ಮರೆಯಾಗಿ ಹೋಗುತ್ತಿದೆ. ವಿಜಯ್ ಮತ್ತು ಜೇನ್ ಡಿಕುನ್ಹಾ ದಂಪತಿಗಳ “ದಬಕ್ ದಬಾ” ಕಲಾವಿದರ ತಂಡ ತಮ್ಮ ಜೀವಂತ ಪ್ರದರ್ಶನಗಳ ಮೂಲಕ ಆ ಹಳೆಯ ಕಾಲದ ಉತ್ಸಾಹ ಮತ್ತು ಉಲ್ಲಾಸವನ್ನು ಮತ್ತೆ ಜೀವಂತಗೊಳಿಸಿದರು.
ಸಂಜೆಯ ಪ್ರಮುಖ ಆಕರ್ಷಣೆ ಎಂದರೆ ಬೆಳ್ತಂಗಡಿ ತಾಲೂಕಿನ ಬದ್ಯಾರ್ ನ ಪ್ರಸಿದ್ಧ “ಬ್ಲೂ ಬ್ರಾಸ್ ಬ್ಯಾಂಡ್” ಮಾಲಕ ಅರುಣ್ ಸೆರಾವೊ ಮತ್ತು ಅವರ 10 ಸದಸ್ಯರ ಬ್ರಾಸ್ ಬ್ಯಾಂಡ್ ತಂಡ, ಇವರು ಭಾರತದಿಂದ ತಮ್ಮ ವಾದ್ಯಗಳೊಂದಿಗೆ ವಿಶೇಷವಾಗಿ ಪ್ರಯಾಣಿಸಿ, ಸಂಪೂರ್ಣ ಕಾರ್ಯಕ್ರಮಕ್ಕೆ ನೈಜ ಬ್ರಾಸ್ ಬ್ಯಾಂಡ್ ಸಂಗೀತವನ್ನು ಒದಗಿಸಿದರು. ಅವರ ಸಜೀವ ವಾದ್ಯ ಸಂಗೀತವು ಕರಾವಳಿ ಕರ್ನಾಟಕದ ಹಬ್ಬ-ಜಾತ್ರೆಗಳ ಮೂಲ ಸೊಬಗನ್ನು ಮತ್ತೆ ನೆನಪಿಗೆ ತಂದಿತು.
“ಪೆಪೆರೆ ಪೆಪೆ ಡುಂ – ಅಂತರಾಷ್ಟ್ರೀಯ ಸೀಸನ್ 2” ಕಾರ್ಯಕ್ರಮದ ಅದ್ಭುತ ಯಶಸ್ಸು ಕೇವಲ ಮನರಂಜನೆ ನೀಡಲಿಲ್ಲ, ಅದು ಒಂದು ಸಂಸ್ಕೃತಿಯ ಪುನರುಜ್ಜಿವನದ ಸಂಕೇತವಾಗಿಯೂ ಪರಿಣಮಿಸಿದೆ. ಮಂಗಳೂರಿನ ಬ್ರಾಸ್ ಬ್ಯಾಂಡ್ ಪರಂಪರೆಯು ಭವಿಷ್ಯದ ಪೀಳಿಗೆಯವರ ಹೃದಯಗಳಲ್ಲಿ ಸ್ಫೂರ್ತಿ ಮೂಡಿಸುವಂತಾಗಲಿ ಎಂಬ ಆಶಯವನ್ನು ಜೀವಂತಗೊಳಿಸಿದೆ.