ಕೊಕ್ಕಡ: ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಚಾರಿತ್ರ್ಯ ನಿರ್ಮಾಣದ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಜೊತೆಗೆ ಸಾಮಾಜಿಕ ಮತ್ತು ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ತಿಳಿಸುವ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರವನ್ನು ಅ. 11ರಂದು ಸೌತಡ್ಕ ಸೇವಾಧಾಮದ ಸಭಾಂಗಣದಲ್ಲಿ ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣ ಭಟ್ ಹಿತ್ತಿಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾಹಿತಿ ಕಾರ್ಯಾಗಾರವನ್ನು ಮಾರ್ಗದರ್ಶಕರಾಗಿ ಆಗಮಿಸಿದ ಡಾ. ಕೆ ಪ್ರಭಾಕರ ಭಟ್ ರವರು ಉದ್ದೇಶಿತ ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಾವ ರೀತಿ ಆರಂಭಗೊಳ್ಳಬೇಕು. ನಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಈಗಿನ ಕಾಲದಲ್ಲಿ ಯಾಕೆ ಅಗತ್ಯ ಎಂಬ ವಿಷಯವಾಗಿ ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ ಜನರಿಗೆ ಮಾಹಿತಿ ನೀಡಿದರು. ಸೌತಡ್ಕದಲ್ಲಿ 1.10ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಶಾಲೆ ಅ.24ರಂದು ತಿಂಗಳಿನಲ್ಲಿ ಶಿಲಾನ್ಯಾಸ ನಡೆಯಲಿದೆ.
ವಾಸ್ತು ತಜ್ಞರನ್ನು ಕರೆಸಿ ಸಮಾಲೋಚನೆ ನಡೆಸಲಾಗಿದೆ. ಅದಲ್ಲದೆ ಸಂಬಂಧಪಟ್ಟ ಇಂಜಿನಿಯರ್ ಗೆ ಕಾಮಗಾರಿಯು ಹಸ್ತಾಂತರ ನಡೆಯಲಿದೆ ಎಂದು ಪ್ರಭಾಕರ್ ಭಟ್ ತಿಳಿಸಿದರು. ಶಾಲೆಯ ಕೊಠಡಿ ನಿರ್ಮಾಣಕ್ಕೆ ಸಂಪನ್ಮೂಲ ಕ್ರೋಡಿಕರಣದ ಚರ್ಚೆಯನ್ನ ಸಭೆಯಲ್ಲಿ ನಡೆಸಲಾಯಿತು. ಎಲ್.ಕೆ.ಜಿ ಯಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸಿಗಲಿದೆ. ಎಲ್. ಕೆ. ಜಿ ಯಿಂದ 10ನೇ ತರಗತಿ ವರೆಗೆ ಅಡ್ಮಿಷನ್ ಕೂಡ ಪ್ರಾರಂಭಿಸುತ್ತೇವೆ ಎಂದು ಪ್ರಭಾಕರ್ ಭಟ್ ತಿಳಿಸಿದರು.
ವೇದಿಕೆಯಲ್ಲಿ ಉದ್ದೇಶಿತ ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಕಟ್ಟಡ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಪಟ್ಟೂರು ಶ್ರೀ ರಾಮ ಶಾಲೆಯ ಅಧ್ಯಕ್ಷ ಜನಾರ್ಧನ ಕಜೆ, ಶಾಲಾ ಕಟ್ಟಡ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿದರು. ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿ, ಬಾಲಕೃಷ್ಣ ನೈಮಿಷ ಧನ್ಯವಾದವಿತ್ತರು.