ಬೆಳ್ತಂಗಡಿ: ಪ್ರಬಲ ಸಂಕಲ್ಪ ಶಕ್ತಿ ಇದ್ದರೆ ಮಹಾನ್ ಕಾರ್ಯಗಳು ನಡೆಯುತ್ತವೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ನಿದರ್ಶನ ಎಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ ಹೇಳಿದರು. ಅವರು ಕರಂಬಾರು ಜ್ಞಾನೇಶ್ವರಿ ಭಜನಾಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾl ಹೆಡಗೇವಾರರ ಸಂಕಲ್ಪ ಶಕ್ತಿ ಅದ್ಭುತವಾದದ್ದು. ಸಂಘದ ಸ್ಥಾಪನೆಯಿಂದ ಹಿಂದುತ್ವಕ್ಕೆ ಬಲ ಬಂದಿದೆ. ವಿಶ್ವಗುರು ಆಗಲು ನಮ್ಮ ಸಮಾಜಕ್ಕೆ ಸಾಧ್ಯ. ದೇಶ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದರು. ಸಂಘದ ಜಿಲ್ಲಾ ಸಹಕಾರ್ಯವಾಹ ಸುಜಿತ್ ಕುಂಡಡ್ಕ ಬೌದ್ಧಿಕ್ ಮಾಡಿ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ಕುಟುಂಬ ನೀತಿಯ ಪಾಲನೆ, ನಾಗರಿಕ ಶಿಷ್ಟಾಚಾರ, ಸ್ವದೇಶಿ ವಸ್ತುಗಳ ಉಪಯೋಗದಂತಹ ಪಂಚಪರಿವರ್ತನೆಗೆ ನಾವೆಲ್ಲ ಮುಂದಡಿಯಿಡಬೇಕು ಎಂದರು.

ಸಂಘ ಶತಾಬ್ದಿಯ ಹಿನ್ನಲೆಯಲ್ಲಿ ಬಳಂಜ ಮಂಡಲದ ತೆಂಕಕಾರಂದೂರು, ಕರಂಬಾರು, ಶಿರ್ಲಾಲು, ನಾಲ್ಕೂರು, ಬಳಂಜ ಗ್ರಾಮದ ನೂರೈವತ್ತಕ್ಕೂ ಹೆಚ್ಚು ಸ್ವಯಂಸೇವಕರು ಗಣವೇಶಧಾರಿಗಳಾಗಿ ಭಾಗವಹಿಸಿದ್ದರು.