ಬೆಳಾಲು: ನಾಗಾಂಬಿಕ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

0

ಬೆಳಾಲು: ಗ್ರಾಮ ಪಂಚಾಯತ್ ಮಟ್ಟದ ನಾಗಾಂಬಿಕ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ ಸೆ.29ರಂದು ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಂಜೀವಿನಿ ಪ್ರೇರಣಾ ಗೀತೆಯೊಂದಿಗೆ ಸಭೆ ಪ್ರಾರಂಭಿಸಲಾಯಿತು. ಕೃಷಿ ಸಖಿ ಸ್ವಾತಿ ಸ್ವಾಗತಿಸಿದರು. ಸಭಾಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶಾರದಾ ಅವರು ವಹಿಸಿಕೊಂಡಿದ್ದರು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ಪಂಚಾಯತ್ ತೆರಿಗೆ ಪಾವತಿ, ಹಾಗೂ ಎಸ್. ಡಬ್ಲ್ಯೂ.ಎಂ. ಬಗ್ಗೆ ಮಾತನಾಡಿದರು. ಎಂ.ಸಿ.ಎಲ್.ಎಫ್. ಒಕ್ಕೂಟದ ದೂರದೃಷ್ಟಿ ಯೋಜನೆ, ವಾರ್ಷಿಕ ಕ್ರಿಯಾ ಯೋಜನೆ, ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆಯ ವರದಿಯನ್ನು ಕೃಷಿ ಸಖಿ ಸ್ವಾತಿ ಮಂಡಿಸಿದರು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಸಂಜೀವಿನಿ ಯೋಜನೆಯಲ್ಲಿ ಸಿಗುವ ಹಲವಾರು ರೀತಿಯ ಸೌಲಭ್ಯಗಳ ಬಗ್ಗೆ, ವಿವಿಧ ರೀತಿಯ ಸಾಲಗಳ ಬಗ್ಗೆ, ಬ್ಯಾಂಕ ಲಿಂಕೇಜ್ ಬಗ್ಗೆ, ಸ್ವಚ್ಛ ಭಾರತ ಅಭಿಯಾನ ಹಾಗೂ ಲಿಂಗತ್ವ ವೇದಿಕೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ವಾರ್ಡ್ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಲಿಂಗತ್ವ ವೇದಿಕೆ ರಚನೆಯಾಗಿದ್ದು ಸದಸ್ಯರಿಗೆ ಯಾವುದೇ ಲಿಂಗತ್ವಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾಗಿದ್ದಲ್ಲಿ ಅದನ್ನು ಗೌಪ್ಯತೆಯಲ್ಲಿ ಇಟ್ಟುಕೊಂಡು ವೇದಿಕೆಗೆ ತಂದು ಬಗೆಹರಿಸಲು ಅವಕಾಶವಿದೆ ಎಂದು ತಿಳಿಸಿದರು. ವಲಯ ಮೇಲ್ವಿಚಾರಕ ಜಯಾನಂದ ಸಂಘ ನೆಡೆಸುತ್ತಿರುವ ಬಗ್ಗೆ , ಒಕ್ಕೂಟದ ಕಾರ್ಯವೈಖರಿ, ಎಂಸಿಎಲ್ಎಫ್ ತರಬೇತಿಯ ಉದ್ದೇಶದ ಬಗ್ಗೆ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಿ ಅದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಸಂಜೀವಿನಿ ಸದಸ್ಯರು ತಯಾರಿಸಿದ ಜೇನುತುಪ್ಪ, ಪಿನಾಯಿಲ್, ದೀಪದ ಬತ್ತಿಯನ್ನು ಸಂಜೀವಿನಿ ಬ್ರಾಂಡ್ ಅಸ್ಮಿತೆ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. ತಾಲೂಕು ಒಕ್ಕೂಟದ ಅಧ್ಯಕ್ಷೆ ಮಧುರ ಒಕ್ಕೂಟದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. 2024 – 25 ನೇ ಸಾಲಿನಲ್ಲಿ ರಕ್ಷಾ ಸಂಜೀವಿನಿ ಸಂಘವನ್ನು ಉತ್ತಮ ಸಂಘ ಎಂದು ಆಯ್ಕೆ ಮಾಡಿ ಎಲ್ಲಾ ಸದಸ್ಯರಿಗೆ ಬಹುಮಾನವನ್ನು ನೀಡಲಾಯಿತು. ಇದರ ವರದಿಯನ್ನು ಎಲ್. ಸಿ. ಆರ್. ಪಿ ಸರಸ್ವತಿ ಅವರು ಮಂಡಿಸಿದರು. ಎಲ್.ಸಿ.ಆರ್.ಪಿ. ಯಾಗಿ ಕರ್ತವ್ಯ ನಿರ್ವಹಿಸಿ, ನಿರ್ಗಮಿಸಿರುವ ಗೀತಾ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅದೃಷ್ಟ ಮಹಿಳೆ ಗೇಮ್ ಆಯೋಜಿಸಿ ಅದೃಷ್ಟ ಮಹಿಳೆ ಜಯಶ್ರೀ ಇವರಿಗೆ ಬಹುಮಾನವನ್ನು ನೀಡಲಾಯಿತು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಭೆಯಲ್ಲಿ ಪ್ರತಿಜ್ಞೆ ಮಾಡಲಾಯಿತು. ನಿರ್ಗಮಿತ ಪದಾಧಿಕಾರಿಗಳಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಇವರ ಕಿರು ಪರಿಚಯ ವನ್ನು ಪಶು ಸಖಿ ಯಶೋದ ಮಾಡಿದರು. ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಒಕ್ಕೂಟದ ಅಧ್ಯಕ್ಷರು ಮಾತನಾಡಿ ಒಕ್ಕೂಟದ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು. ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರದಲ್ಲಿ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಎಲ್.ಸಿ.ಆರ್.ಪಿ ಗೀತಾ ವಂದಿಸಿದರು.

LEAVE A REPLY

Please enter your comment!
Please enter your name here