ಉಜಿರೆ: ಶ್ರೀ ಧಮರ್ಸ್ಥಳ ಮಂಜುನಾಥೇಶ್ವರ ಬಿ.ಎಡ್. ಹಾಗೂ ಡಿ.ಇಡ್. ಕಾಲೇಜು ಜಂಟಿಯಾಗಿ ಆಯೋಜಿಸಿದ 2025 ಶೈಕ್ಷಣಿಕ ವರ್ಷದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭ ರತ್ನಮಾನಸ ವಿದ್ಯಾರ್ಥಿನಿಲಯ ಉಜಿರೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ. ಧ. ಮಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಇವರು ಪೌರತ್ವ ತರಬೇತಿ ಶಿಬಿರವು ಸೇವಾ ಮನೋಭಾವ ಬೆಳೆಸುವ ಜೊತೆಗೆ ನಮ್ಮನ್ನು ಬೆಳೆಸುತ್ತದೆ. ಬದುಕು ರೂಪಿಸುವ ಜೊತೆಗೆ ಪ್ರೀತಿ ಮತ್ತು ಸಂಬಂಧವನ್ನು ಬೆಸೆಯುತ್ತದೆ. ಶಿಕ್ಷಕನಾದವನು ಸದಾ ಕ್ರಿಯಾಶೀಲತೆಯೊಂದಿಗೆ ತನ್ನನ್ನು ತೊಡಗಿಸಿಕೊಂಡಿರಬೇಕು. ಪ್ರಾಮಾಣಿಕತೆ, ಆತ್ಮವಿಶ್ವಾಸ, ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡು ಸಮಾಜ ಮತ್ತು ರಾಷ್ಟ್ರದ ಒಳಿತಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ ಮಾತನಾಡುತ್ತಾ ಈ ಶಿಬಿರವು ನಿಮಗೆ ಜೀವನದಲ್ಲಿ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಬದುಕಬೇಕು ಎಂಬುದನ್ನು ತಿಳಿಸಿಕೊಡುವುದರೊಂದಿಗೆ, ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು, ನಿರೂಪಣೆ ಮಾಡುವುದು ಮತ್ತು ಸಹಕಾರ, ಪ್ರೀತಿ, ಮೌಲ್ಯಗಳನ್ನು ಕಲಿಸುತ್ತದೆ ಎಂದು ಹೇಳಿದರು.
ರತ್ನಮಾನಸದ ನಿಲಯಪಾಲಕ ಯತೀಶ್ ಕೆ. ಬಳಂಜ ಶಿಬಿರವನ್ನು ಉದ್ದೇಶಿಸಿ ಪ್ರತಿಯೊಬ್ಬ ನಾಗರಿಕನ ಬುದ್ಧಿಮತ್ತೆ ಮತ್ತು ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸುವುದು ಈ ತರಬೇತಿಯ ಉದ್ದೇಶವಾಗಿದೆ. ಶಿಬಿರದಲ್ಲಿ ಪಡೆದ ಅನುಭವದೊಂದಿಗೆ ಸಮುದಾಯ ಜೀವನದ ಬಗ್ಗೆ ಜಾಗೃತಿ ಮೂಡಿಸಿ ಸಂಘಟನೆ, ಭಾಗವಹಿಸುವಿಕೆ ಮತ್ತು ಸಮಾನತೆಯ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಶಿಬಿರಾಧಿಕಾರಿ ಮಂಜು ಆರ್. ಮಾತನಾಡುತ್ತಾ ಈ ಶಿಬಿರವು ಮರೆಯಲಾಗದ ಅನುಭವವನ್ನು ಕಟ್ಟಿಕೊಡುತ್ತದೆ. ಜೀವನದಲ್ಲಿ ಸಮಸ್ಯೆಗಳು ಬಂದೇ ಬರುತ್ತದೆ. ಅವುಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಈ ಶಿಬಿರವು ಕಲಿಸಿದೆ. ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದೀರಿ. ಭಾವೀ ಶಿಕ್ಷಕರಾದ ನೀವು ನಾಗರಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಶ್ರೀ ಧ. ಮಂ. ಕಾಲೇಜಿನ ಡಿ.ಎಡ್. ಮತ್ತು ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿಯರಾದ ರಂಝೀನಾ ಮತ್ತು ಸಾಯಿಧೃತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ರತ್ನಮಾನಸ ವಿದ್ಯಾರ್ಥಿನಿಯಲಯದ ಸಿಬ್ಬಂದಿ ವರ್ಗ, ಡಿ.ಎಡ್. ಮತ್ತು ಬಿ.ಎಡ್. ಪ್ರಶಿಕ್ಷಣಾರ್ಥಿಗಳು, ರತ್ನಮಾನಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶರಾವತಿ ಮತ್ತು ಬಳಗ ಪ್ರಾರ್ಥಿಸಿದರು. ಡಿ.ಎಡ್. ಪ್ರಶಿಕ್ಷಣಾರ್ಥಿ ಪ್ರಭಾವತಿ ಸ್ವಾಗತಿಸಿ, ರಂಜಿನಿ ಮತ್ತು ಜಯಶ್ರೀ ಕಾರ್ಯುಕ್ರಮ ನಿರೂಪಿಸಿದರು. ರಂಝಿಯಾ ಭಾನು ವಂದಿಸಿದರು.