ಬೆಳ್ತಂಗಡಿ: ಜನಸ್ನೇಹಿ ಪೊಲೀಸ್ ಅಧಿಕಾರಿ ಬೆಳ್ತಂಗಡಿ ಗ್ರಾಮಾಂತರ ವೃತ್ತ ಕಚೇರಿಯ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರು 33 ವರ್ಷ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಸೆ.30ರಂದು ಸೇವಾ ನಿವೃತ್ತಿಗೊಳ್ಳುತ್ತಿದ್ದಾರೆ.
ಇವರು 1992ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಚೆನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಮೂಲ ತರಬೇತಿ ಪಡೆದು, ಸಿಬ್ಬಂದಿಯಾಗಿ ಮಂಗಳೂರು ಸಂಚಾರ ಪಶ್ಚಿಮ, ಬಜ್ಜೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ 2003ರಲ್ಲಿ ಪಿಎಸ್‌ಐ ಆಗಿ ನೇರ ನೇಮಕಾತಿಗೊಂಡು ಯಲಹಂಕ ಪೋಲಿಸ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದರು. ಎಸ್‌ಐ ಆಗಿ ಬೆಂಗಳೂರಿನ ವೈಯ್ಯಲಿಕಾವಲ್, ಉಪ್ಪಿನಂಗಡಿ, ದಕ್ಷಿಣ ಕನ್ನಡ ಅಬಕಾರಿ ಸ್ಟಾಡ್, ವೇಣೂರು, ಯಗಟಿ, ಪುತ್ತೂರು ಸಂಚಾರ, ಬಂಟ್ವಾ, ನಗರ, ಸುಬ್ರಹ್ಮಣ್ಯ, ಕಾರವಾರ ಸಂಚಾರ ಹಾಗೂ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಸಲ್ಲಿಸಿದರು. 2015 ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ಇವರು ದ.ಕ. ಜಿಲ್ಲಾ ವಿಶೇಷ ಘಟಕ, ಬೆಳ್ತಂಗಡಿ ವೃತ್ತ, ಮೈಸೂರು ಸಂಚಾರ, ಉಪ್ಪಿನಂಗಡಿ, ಡಿಸಿಐಬಿ ಮಡಿಕೇರಿ, ಐಜಿಪಿ ಕಚೇರಿ ಮಂಗಳೂರು, ಡಿಸಿಆರ್‌ಬಿ ಕೊಡಗು, ಕಾರ್ಕಳ ನಗರ ಬೆಳ್ತಂಗಡಿ ಗ್ರಾಮಾಂತರ ವೃತ್ತದಲ್ಲಿ ಕರ್ತವ್ಯ ಸಲ್ಲಿಸಿ ಸೇವಾ ನಿವೃತ್ತಿ ಹೊಂದಲಿದ್ದಾರೆ.
1965ರ ಸೆಪ್ಟೆಂಬರ್ 15ರಂದು ತುಕ್ರ ಮಡಿವಾಳ ಹಾಗೂ ಜಾನಕಿ ದಂಪತಿ ಪುತ್ರನಾಗಿ ಜನಿಸಿದರು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಪತ್ನಿ ಕಲ್ಪನಾ ಹಾಗೂ ಉಪನ್ಯಾಸಕಿಯಾಗಿರುವ ಪುತ್ರಿ ಮೈತ್ರಿ ಮತ್ತು ವೈದ್ಯ ವೃತ್ತಿ ನಡೆಸುತ್ತಿರುವ ಪುತ್ರ ಮಿತ್ರನ್‌ರವರೊಂದಿಗೆ ಮೂಡುಬಿದಿರೆಯ ರತ್ನಾಕರ ವರ್ಣಿ ನಗರದಲ್ಲಿ ನೆಲೆಸಿದ್ದಾರೆ.
ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕದ್ರಿಯಲ್ಲಿ ಹಾಗೂ ಪ್ರೌಢ ಶಿಕ್ಷಣ ಗಣಪತಿ ಹೈಸ್ಕೂಲ್ ಹಂಪನಕಟ್ಟೆ, ಪಿಯುಸಿ ಸರ್ಕಾರಿ ಕಾಲೇಜು ಮಂಗಳೂರು ಹಾಗೂ ಪದವಿ ವಿದ್ಯಾಭ್ಯಾಸವನ್ನು ಮಂಗಳೂರು ಸೈಂಟ್ ಅಲೋಶಿಯಸ್ ಇವಿನಿಂಗ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ದಕ್ಷ, ಪ್ರಾಮಾಣಿಕ, ಜನಸ್ನೇಹಿ ಅಧಿಕಾರಿಯಾಗಿ, ಸಿಬ್ಬಂದಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಕಳ್ಳತನ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದರು.