ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರವು ಆಯೋಜಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025, ಇದೇ ತಿಂಗಳು ಸೆ.22ರಿಂದ ರಾಜ್ಯಾದ್ಯಂತ ಆರಂಭಗೊಳ್ಳಲಿರುವುದು. ಈ ಸಮೀಕ್ಷೆಗೆ ನಿಯೋಜಿತ ಅಧಿಕಾರಿಗಳಿಂದ ಪ್ರತಿ ಮನೆಗೆ ಯು.ಹೆಚ್.ಐ.ಡಿ ಸಂಖ್ಯೆ ಅಂಟಿಸಲಾಗಿದ್ದು ದಾಖಲಾತಿ ಕೆಲಸ ಪ್ರಾರಂಭಗೊಂಡಿರುತ್ತದೆ. ಸಮೀಕ್ಷೆದಾರರು ಮನೆಗೆ ಬಂದಾಗ ಸಮಸ್ತ ಒಕ್ಕಲಿಗ ಸಮಾಜದವರು ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಡಾ.ನಿರ್ಮಾಲಾನಂದನಾಥ ಮಹಾಸ್ವಾಮೀಜಿ ಅವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಸೂಚನೆಯಂತೆ ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಆಶಯದಂತೆ ಸಮೀಕ್ಷೆಯ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು, ಉಪಜಾತಿ ಕಾಲಂನಲ್ಲಿ “ಗೌಡ” ಎಂದೂ, ಮಾತೃಭಾಷೆ ಕಾಲಂನಲ್ಲಿ ಪ್ರಾದೇಶಿಕ ಭಾಷೆಗಳಾದ ಕನ್ನಡ, ತುಳು ಇವುಗಳಲ್ಲಿ ನಮ್ಮ ಮಾತೃಭಾಷೆಯನ್ನು ನಮೂದಿಸಬೇಕೆಂದು ಮನವಿ ಮಾಡುತ್ತಿದ್ದೇವೆ.
ಇದಲ್ಲದೆ ನಮ್ಮ ಒಕ್ಕಲಿಗ ಗೌಡ ಸಮಾಜದ ಕೋಡ್ ಸಂಖ್ಯೆ ಎ-1541 ಆಗಿದ್ದು, ಇದನ್ನು ಸಹ ಗಮನಿಸಿಕೊಂಡು ನಾವು ಕೊಡುವ ಮಾಹಿತಿ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಏಕೆಂದರೆ ಒಕ್ಕಲಿಗ ಎಂಬ ಇನ್ನೊಂದು ಸಮುದಾಯವಿದ್ದು, ಅದರ ಕೋಡ್ ಸಂಖ್ಯೆ ಬೇರೆಯೇ ಆಗಿರುತ್ತದೆ. ಪ್ರತಿಯೊಬ್ಬರು ಒಬ್ಬರಿಗೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡು ನಮ್ಮ ಸಮಾಜದ ಪ್ರತಿಯೊಬ್ಬರು ಒಂದೇ ರೀತಿಯ ಮಾಹಿತಿಯನ್ನು ಕೊಡುವಲ್ಲಿ ಪರಸ್ಪರ ಸಹಕಾರವನ್ನು ಕೊಡುವುದು ನಮ್ಮ ಕರ್ತವ್ಯವಾಗಿದೆ. ಇದರ ಪೂರ್ವಭಾವಿಯಾಗಿ ಸಮೀಕ್ಷೆಯ ಅರ್ಜಿಫಾರಂನ್ನು ಮೊದಲೇ ಪ್ರಿಂಟ್ ತೆಗೆದು ಓದಿ ಎಲ್ಲಾ ವಿಷಯಗಳಿಗೆ ಸರಿಯಾದ ಮಾಹಿತಿಯನ್ನು ನಿರ್ಧರಿಸಿ ಕೊಡಬೇಕೆಂದು ಎಂದು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ತಿಳಿಸಿದ್ದಾರೆ.