ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಮಜ್ದೂರು ಸಂಘ (ಬಿ.ಎಂ.ಎಸ್) ವತಿಯಿಂದ ವಿಶ್ವಕರ್ಮ ಜಯಂತಿ ಅಂಗವಾಗಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಭಾವಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಜಿಲ್ಲಾ ಕಾರ್ಯಾಲಯ, ತಾಲೂಕು ಶಾಖೆಗಳು, ಯೂನಿಯನ್ ಶಾಖೆ ಕೇಂದ್ರಗಳು ಮತ್ತು ಕಾರ್ಯಕರ್ತರು–ಕಾರ್ಮಿಕರು–ಹಿತೈಷಿಗಳ ಮನೆಗಳಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಿಂದ ದಿನಾಚರಣೆ ವಿಶೇಷ ಕಳೆಗಟ್ಟಿತು.
ದತ್ತೋಪಂತ್ ಥೆಂಗಡಿ ಜೀ ಸ್ಮರಣೆ: ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಉಪನ್ಯಾಸಕರಾದ ಡಾ. ಮಾಧವ್ ಎಂ.ಕೆ. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು, ಬಿ.ಎಂ.ಎಸ್ ಸಂಸ್ಥಾಪಕ ದತ್ತೋಪಂತ್ ಥೆಂಗಡಿ ಜೀ ಅವರ ಸಂಘಟನಾ ದೃಷ್ಟಿಕೋನ ಹಾಗೂ ದಾರ್ಶನಿಕತೆಯನ್ನು ಸ್ಮರಿಸಿದರು. ಅವರು ಮಾತನಾಡಿ, “ದಕ್ಷಿಣ ಭಾರತದಲ್ಲಿ ಮತಾಂತರದ ಹಾವಳಿ ಹೆಚ್ಚಾಗಿದ್ದಾಗ ಜನತೆಗೆ ಆತ್ಮವಿಶ್ವಾಸ ತುಂಬಿದವರು ದತ್ತೋಪಂತ್ ಥೆಂಗಡಿ ಜೀ.ಯವರ ದೂರದೃಷ್ಟಿಯಿಂದಲೇ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಸ್ಥಾಪನೆ ಸಾಧ್ಯವಾಯಿತು. ದೇಶದ ಶ್ರಮಜೀವಿಗಳ ಕನಸುಗಳನ್ನು ಸಾಕಾರಗೊಳಿಸುವ ಶಕ್ತಿಯೇ ಬಿ.ಎಂ.ಎಸ್. ಇಲ್ಲಿ ಬದ್ದತೆ ಮತ್ತು ನಿಷ್ಠೆಗೂ ಮೊದಲ ಆದ್ಯತೆ ಇದೆ,” ಎಂದು ಹೇಳಿದರು.
ಮುಂದುವರೆದು, “ಮೇ 1 ಪಾಶ್ಚಾತ್ಯ ಪ್ರಭಾವದ ದಿನ, ಆದರೆ ವಿಶ್ವಕರ್ಮ ಜಯಂತಿಯಂದೇ ಕಾರ್ಮಿಕ ದಿನಾಚರಣೆ ಆಚರಿಸುವುದು ನಮ್ಮ ರಾಷ್ಟ್ರೀಯ ಅಸ್ಮಿತೆಯ ಸಂಕೇತ. ಈ ಬಾರಿ ಇದೇ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನವೂ ಸಂಭ್ರಮದಿಂದ ಆಚರಿಸಲ್ಪಟ್ಟಿದೆ. ‘ರಾಷ್ಟ್ರ ಮೊದಲು’ ಎನ್ನುವುದೇ ನಮ್ಮ ಸಂಘಟನೆಯ ಧ್ಯೇಯ. ಭಾರತೀಯ ಸಂಸ್ಕೃತಿ ಎಲ್ಲರನ್ನು ಸಮಾನರೆಂದು ಕಾಣುತ್ತದೆ. ‘ಸರ್ವೇ ಜನಾ ಸುಖಿನೋ ಭವಂತು’ ಎಂಬುದು ನಮ್ಮ ತತ್ವ. ಸಮಾಜದಲ್ಲಿ ಸಂಪಾದನೆ ಇದ್ದರೂ ನೆಮ್ಮದಿ ಇಲ್ಲದ ಸ್ಥಿತಿ ಹೆಚ್ಚಾಗಿದೆ. ಆದರೆ ದೇಶಕಾರ್ಯಕ್ಕೆ ಸಮಯ ಮೀಸಲಿಡುವ ಮನೋಭಾವ ಬೆಳೆಸಬೇಕು,” ಎಂದು ಮನದಟ್ಟು ಮಾಡಿದರು.
ಅವರು ಒತ್ತಿ ಹೇಳಿದರು: “ಆರೋಗ್ಯ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಭಾರತ, ಸಾಮರಸ್ಯ ಹಾಗೂ ನಾಗರಿಕ ಶಿಷ್ಟಾಚಾರ – ಇವು ಸಮಾಜದ ಪರಿವರ್ತನೆಯ ಮುಖ್ಯ ಹಾದಿಗಳು. ನಮ್ಮಲ್ಲಿ ನಾವು ಬದಲಾದರೆ ಸಮಾಜ ಬದಲಾಗುವುದು ಖಚಿತ.”
ಸಂಘಟನೆಯ ಬೆಳವಣಿಗೆ – ಸಾಮೂಹಿಕ ಶ್ರಮದ ಫಲ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಮಾತನಾಡಿ, “ಜಿಲ್ಲೆಯಲ್ಲಿ ಸಂಘಟನೆಯ ಬೆಳವಣಿಗೆಗೆ ಹಿರಿಯರ ಮಾರ್ಗದರ್ಶನ, ಸಂಘಪರಿವಾರದ ಸಲಹೆ, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಸಹಕಾರ ಹಾಗೂ ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ, ಅಧಿಕಾರಿಗಳು, ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಮನವಿ, ಮಾತುಕತೆ, ಹೋರಾಟ ಮತ್ತು ಸಂವಾದಗಳನ್ನು ನಿರಂತರವಾಗಿ ನಡೆಸುತ್ತಿದ್ದೇವೆ. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು, ತೊಂದರೆಗೊಳಗಾದ ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸುವುದು ಹಾಗೂ ಆತ್ಮವಿಶ್ವಾಸ ತುಂಬುವ ಕೆಲಸಗಳನ್ನು ಮಾಡಲಾಗಿದೆ. ಮುಂದೆಯೂ ಇದೇ ರೀತಿಯಾಗಿ ‘ಕಾರ್ಮಿಕರ ಸೇವೆಯೇ ರಾಷ್ಟ್ರಸೇವೆ’ ಎಂಬ ಭಾವನೆಯೊಂದಿಗೆ ಸಂಘಟನೆ ಕಾರ್ಯ ನಿರ್ವಹಿಸಲಿದೆ” ಎಂದರು.
ಅವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿ, “ವಿಶ್ವಕರ್ಮ ದೇವರ ಅನುಗ್ರಹದಿಂದ ಸಂಘಟನೆಯ ದ್ವಜ ಜಿಲ್ಲೆಯಲ್ಲಿ ಬಾನೆತ್ತರಕ್ಕೆ ಏರಲಿ” ಎಂದು ಆಶಿಸಿದರು.“ನಮ್ಮ ಮನೆ – ಬಿ.ಎಂ.ಎಸ್ ಮನೆ” ವಿಶೇಷ ಧ್ಯೇಯ
ಈ ಬಾರಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು “ನಮ್ಮ ಮನೆ – ಬಿ.ಎಂ.ಎಸ್ ಮನೆ” ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಜಿಲ್ಲೆಯ ಪ್ರತಿಯೊಂದು ತಾಲೂಕು, ಯೂನಿಯನ್ ಶಾಖೆ ಕಾರ್ಯಾಲಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಸೇರಿದಂತೆ ಅನೇಕ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟನೆಯ ಹಿರಿಯರಾದ ವಿಶ್ವನಾಥ್ ಶೆಟ್ಟಿ ಹಾಗೂ ರಾಜ್ಯ ಪದಾಧಿಕಾರಿಗಳಾದ ಜಯರಾಜ್ ಸಾಲ್ಯಾನ್, ರೇವತಿ ರತ್ನಾಕರ, ಪ್ರಜಿತ್ ಕಾಸರಗೋಡು, ಭಗವಾನ್ ದಾಸ್ ಉಳ್ಳಾಲ, ಜೊತೆಗೆ ಜಿಲ್ಲಾ ಪದಾಧಿಕಾರಿಗಳಾದ ಉದಯ ಕುಮಾರ್, ವಿಘ್ನೇಶ್, ವಸಂತ ಕುಮಾರ್ ಬಂಟ್ವಾಳ, ಕುಮಾರ್ ನಾಥ್ ಉಜಿರೆ, ನಾರಾಯಣ ಪೂಜಾರಿ, ಪ್ರಕಾಶ್ ಸುಳ್ಯ, ಮಧುಸೂಧನ್ ಸುಳ್ಯ, ಪುರಂದರ ರೈ ಕುಂಬ್ರ, ರಾಜೇಶ್ ಮರೀಲ್, ಗಿರೀಶ್ ಮಲ್ಲಿ, ನಾಗರಾಜ್ ಬೆಳ್ತಂಗಡಿ, ಶ್ರೀಕಾಂತ್ ಬಂಟ್ವಾಳ, ಉದಯ ಬಂದಾರು, ರಾಜೇಶ್ ಸುವರ್ಣ, ನಾಗೇಶ್ ವಿಟ್ಲ, ಪ್ರಶಾಂತ್, ಕಿರಣ್ ಕುಮಾರ್, ಕೃಷ್ಣ ಬೆಳಾಲು, ಶಶಿಧರ್, ಶಶಿಕಲಾ, ನಳಿನಿ, ಸಾಮೂವೆಲ್ ಮೊದಲಾದವರು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಮಿಕ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.
ಸತೀಶ್ ಶೆಟ್ಟಿ ಸ್ವಾಗತಿಸಿದರು. ಗೋಪಾಲ ಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ರೋಹಿತಾಶ್ವ ವಂದನೆ ಸಲ್ಲಿಸಿದರು.