ಕಕ್ಯಪದವು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಹಾಗೂ ಎಲ್. ಸಿ. ಆರ್. ಇಂಡಿಯನ್ ವಿದ್ಯಾಸಂಸ್ಥೆ ಸಹಯೋಗದೊಂದಿಗೆ 17 ರ ವಯೋಮಾನ ವಿಭಾಗದ ಬಾಲಕ ಬಾಲಕಿಯರ ಬಂಟ್ವಾಳ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಕೂಟವು ಸೆ. 20ರಂದು ಎಲ್. ಸಿ. ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಸಂಸ್ಥೆಯ ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿಯರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ ಸಂಸ್ಥೆಯ ಮುಖ್ಯ ಶಿಕ್ಷಕಿ ವಿಜಯ ಕೆ. ಅವರು ಆಗಮಿಸಿದ ಎಲ್ಲಾ ಗಣ್ಯರಿಗೂ ಹಾಗೂ ಕ್ರೀಡಾಪಟುಗಳಿಗೂ ಸ್ವಾಗತವನ್ನು ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಶಿವಾನಿ ಆರ್. ನಾಥ್ ಅವರು ಬಂದಂತಹ ಎಲ್ಲಾ ಗಣ್ಯರಿಗೂ ಪ್ರೀತಿಯ ದ್ಯೋತಕವಾಗಿ ಹೂಗುಚ್ಚ ನೀಡಿ ಗೌರವಿಸಿದರು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಸಂಸ್ಥೆಯ ಸಂಚಾಲಕಿ ಬಬಿತಾ ಆರ್. ನಾಥ್ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಆಶಾ ನಾಯಕ್ ಅವರು ನೆರವೇರಿಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಸಂಯೋಜಕ ಯಶವಂತ್ ಜಿ .ನಾಯಕ್, ಉಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಮುದಲಾಡಿ, ರಾಜ್ಯ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರಾದ ಅಖಿಲ್ ಶೆಟ್ಟಿ, ನವೀನ್ ಪಿ.ಎಸ್., ಚಿನ್ನಪ್ಪ, ಶಿವಪ್ರಸಾದ್ ರೈ ಮುಂತಾದವರು ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸಂಸ್ಥೆಯ ಶ್ರೇಯೋಭಿವೃದ್ಧಿಯನ್ನು ಶ್ಲಾಘಿಸಿ ಕ್ರೀಡಾಪಟುಗಳಿಗೆ ಶಿಸ್ತು, ಸಂಯಮದ ಬಗ್ಗೆ ತಿಳಿ ಹೇಳಿ ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೊ ನೆರೆದಿದ್ದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಸಂಸ್ಥೆಯ ಆಗುಹೋಗುಗಳ ಬಗ್ಗೆ ಹಾಗೂ ಸಂಘಟನಾ ಶಕ್ತಿಯ ಬಗ್ಗೆ ಮಾತನಾಡಿ ಸಂಸ್ಥೆಯ ಸಾಧನೆಗಳನ್ನು ತಿಳಿಸಿದರು. ಕ್ರೀಡಾ ಸ್ಪೂರ್ತಿಯ ಚಿಲುಮೆಯಾದ ಕ್ರೀಡಾ ಪ್ರಶಸ್ತಿಗಳ ಅನಾವರಣವನ್ನು ಮಾಡಿದ ಸಂಸ್ಥೆಯ ಟ್ರಸ್ಟಿ ಯಜ್ಞೇಶ್ ರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಶುಭ ಹಾರೈಸಿದರು.
ಈ ಪಂದ್ಯಾಕೂಟದ ಪ್ರಥಮ ಹಾಗೂ ದ್ವಿತೀಯ ಸ್ಥಾನದ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದ ಸಂಸ್ಥೆಯ ಕರಾಟೆ ತರಬೇತುದಾರರಾದ ಅಶೋಕ ಆಚಾರ್ಯ ಅವರನ್ನು ಸಂಸ್ಥೆಯ ಸಂಚಾಲಕರು ಸ್ಮರಣಿಕೆ ನೀಡಿ ಗೌರವಿಸಿದರು.
ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಜಿ.ಕೆ. ಹಾಗೂ ಶ್ರದ್ಧಾ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಎಲ್ಲ ಗಣ್ಯರಿಗೂ ಸಂಚಾಲಕರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ತಾಲೂಕಿನ ಒಟ್ಟು ಒಂಬತ್ತು ಶಾಲೆಗಳು ಭಾಗವಹಿಸಿದ್ದು, ಭಾಗವಹಿಸಿದ ಎಲ್ಲಾ ತಂಡಗಳು ಅತ್ಯಂತ ರೋಚಕ ಪ್ರದರ್ಶನವನ್ನು ನೀಡಿದವು. ಸಮಾರೋಪ ಸಮಾರಂಭದ ಮೂಲಕ ಪ್ರಶಸ್ತಿ ವಿತರಣೆಯನ್ನು ಮಾಡಲಾಯಿತು. ಬಾಲಕಿಯರ ವಿಭಾಗದಲ್ಲಿ ಮಂಚಿ ವಲಯವನ್ನು ಪ್ರತಿನಿಧಿಸಿದ ಸರಕಾರಿ ಪ್ರೌಢಶಾಲೆ ಸಜೀಪಮೂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಬಾಲಕರ ವಿಭಾಗದಲ್ಲಿ ಕಲ್ಲಡ್ಕ ವಲಯವನ್ನು ಪ್ರತಿನಿಧಿಸಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ದ್ವಿತೀಯ ಸ್ಥಾನವನ್ನು ಪಡೆಯಿತು.
ವಾಮದಪದವು ವಲಯವನ್ನು ಪ್ರತಿನಿಧಿಸಿದ ಅತಿಥೇಯ ಎಲ್. ಸಿ. ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಬಾಲಕ ಹಾಗೂ ಬಾಲಕಿಯರ ಇತ್ತಂಡಗಳು ಪ್ರಥಮ ಸ್ಥಾನ ಚಾಂಪಿಯನ್ ಟ್ರೋಫಿಯನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವು.
ಬೆಸ್ಟ್ ಸರ್ವರ್ ಮನಸ್ವಿನಿ ಎಲ್. ಸಿ. ಆರ್ ಹಾಗೂ ಶೋಧನ್ ಎಲ್. ಸಿ. ಆರ್., ಬೆಸ್ಟ್ ಡಿಫೆಂಡರ್ ಪೂಜಾ ಸಜೀಪ ಹಾಗೂ ಮಹಮ್ಮದ್ ಸಾಹಲ್ ಮಾಣಿ, ಬೆಸ್ಟ್ ಆಲ್ ರೌಂಡರ್ ಸಾನ್ವಿತ್ ಹಾಗೂ ಜೇಶ್ಮ್ಮಾ ಎಲ್.ಸಿ.ಆರ್ ಆಯ್ಕೆಯಾದರು.
ಎಲ್ ಸಿ ಆರ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಗೆಲುವಿನ ರೂವಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ವಿದ್ಯಾ ಸಂಸ್ಥೆಯ ಸಹಶಿಕ್ಷಕಿಯರಾದ ಸೌಮ್ಯ ಬಿ.ಆರ್., ಕುಶಲ ಹಾಗೂ ದಿವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಹರಿಣಾಕ್ಷಿ ಜಿ.ಕೆ ವಂದಿಸಿದರು.