


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ತೊಳಗಲಿ ಎನ್ನುವ ಸದುದ್ದೇಶದಿಂದ ರಾಮಚಂದ್ರಾಪುರ ಮಠ ಹೊಸನಗರದ ಶ್ರೀಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಂತೆ ದಕ್ಷಿಣ ಕನ್ನಡ,ಉಡುಪಿ, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳ ಹವ್ಯಕ ಬ್ರಾಹ್ಮಣ ಸಭಾ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 500 ಮಂದಿ ವೈದಿಕರಿಂದ ರುದ್ರಪಾರಾಯಣ ನಡೆಯಿತು.



ಶ್ರೀ ಮಠದ ವೈದಿಕ ವಿದ್ವಾಂಸರಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಪ್ರಾಶೀರ್ವಾದ ನೀಡಿದರು. ಈ ವೇಳೆ ಹೆಗ್ಗಡೆಯವರು ರುದ್ರಾದ್ಯಾಯಿಗಳಿಗೆ ಆಶೀರ್ವಚನ ನೀಡುತ್ತಾ “ಕಷ್ಟಕಾಲದಲ್ಲಿ ಶ್ರೀ ಕ್ಷೇತ್ರದ ಜೊತೆ ನಿಂತಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಬೆಟ್ಟದಿಂದ ನೀರು ಕೆಳಗೆ ಬರುವಂತೆ ಸತ್ಯವೂ ಒಂದೊಂದಾಗಿ ಹೊರಗೆ ಬರುತ್ತದೆ. ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿ ಸತ್ಯವನ್ನು ಹೊರಗೆ ತರುತ್ತಾರೆ” ಎಂದರು.


ಕಾರ್ಯಕ್ರಮದಲ್ಲಿ ಡಾ.ಹೇಮಾವತಿ ವಿ ಹೆಗ್ಗಡೆ, ಹರ್ಷೇಂದ್ರ ಕುಮಾರ್ ಭಾಗವಹಿಸಿದರು. ರುದ್ರಾನುಷ್ಠಾನ ಕಾರ್ಯಕ್ರಮದಲ್ಲಿ ಶ್ರೀ ಮಠದ ಪ್ರಧಾನ ಶಾಸ್ತ್ರಿಗಳಾದ ಘನಪಾಠಿ ಸುಚೇತನ ಶಾಸ್ತ್ರಿಗಳು, ವೇದಮೂರ್ತಿ ಘನಪಾಠಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್, ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಹಾಮಂಡಲದ ಮಾತೃವಿಭಾಗದ ಅಧ್ಯಕ್ಷೆ ದೇವಿಕಾ ಶಾಸ್ತ್ರಿ, ಹಿರಿಯರಾದ ಈಶ್ವರಿ ಬೇರ್ಕಡವು, ಅತ್ತಾಜೆ ಕೇಶವಭಟ್, ಅತ್ತಾಜೆ ಶ್ಯಾಮ್ ಭಟ್, ಮಹೇಶ್ ಕುದುಪುಲ, ಮಹಾಮಂಡಲ, ಮಂಡಲ, ವಲಯಗಳ ಪದಾಧಿಕಾರಿಗಳು, ವೈದಿಕ ವಿದ್ವಾಂಸರು, ಗುರಿಕಾರರು, ಶಿಷ್ಯ ಬಂಧುಗಳು ಭಾಗವಹಿಸಿದ್ದರು.


            






