ಬೆಳ್ತಂಗಡಿ: ಸುರತ್ಕಲ್ ‘ಅನುಪಲ್ಲವಿ’ಯಲ್ಲಿರುವ ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣಾ ಸಮಾರಂಭದಲ್ಲಿ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನ ಭಾಷಣ ಸಂದರ್ಭ ಪ್ರತಿಮನೆಗಳೂ ನಮ್ಮ ಕಲೆ, ಸಂಸ್ಕೃತಿಗಳನ್ನು ಬೆಳೆಸುವ ಪುಟ್ಟ ಕೇಂದ್ರಗಳಾಗಬೇಕೆಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನವೀಕರಣ ಕಾರ್ಯಕ್ಕೆ ವಿಶೇಷ ನೆರವು ನೀಡಿದ ಡಿ. ಅಣ್ಣು ದೇವಾಡಿಗ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ ರೆಮೋನಾ ಅವರನ್ನು ಸನ್ಮಾನಿಸಲಾಯಿತು.
ಪ್ರದೀಪ ಕುಮಾರ ಕಲ್ಕೂರ, ಎ. ಕೃಷ್ಣಮೂರ್ತಿ ರಾವ್, ಡಾ. ಕೆ. ರಾಜ್ ಮೋಹನ್ ರಾವ್, ಉಮಾ ಉದಯಶಂಕರ್ ಹಾಗೂ ಶ್ರೀಶಕುಮಾರ್ ಎಂ. ಕೆ. ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ದಿವ್ಯಶ್ರೀ ಅವರಿಂದ ಸಂಗೀತ ಕಛೇರಿ ನಡೆಯಿತು. ಇವರಿಗೆ ವಯಲಿನ್ ನಲ್ಲಿ ತನ್ಮಯೀ ಉಪ್ಪಂಗಳ, ಮೃದಂಗದಲ್ಲಿ ಪನ್ನಗ ಶರ್ಮನ್ ಹಾಗೂ ತಂಬೂರದಲ್ಲಿ ಸುಜಾತ ಎಸ್. ಭಟ್ ಸಹಕರಿಸಿದರು.
ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೇಯ ಕೊಳತ್ತಾಯ ಕಾರ್ಯಕ್ರಮ ನಿರ್ವಹಿಸಿದರು.