ಕೊಕ್ಕಡ: ಅರಣ್ಯ ಇಲಾಖೆ ಮಂಗಳೂರು ವಿಭಾಗ ಪುತ್ತೂರು ಉಪವಿಭಾಗ ಉಪ್ಪಿನಂಗಡಿ ವಲಯದಿಂದ ಸೆ.11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಸ್ಮರಣಾರ್ಥವಾಗಿ ಆಚರಿಸಲಾಯಿತು.
ಜೀವದ ಹಂಗು ತೊರೆದು ದಟ್ಟ ಅಡವಿಗಳಲ್ಲಿ ಕಾರ್ಯನಿರ್ವಹಿಸಿ, ಹುತಾತ್ಮರಾದವರ ಸ್ಮರಣಾರ್ಥವಾಗಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಅರಣ್ಯರಕ್ಷಣೆಯಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದವರ ತ್ಯಾಗವನ್ನು ಸ್ಮರಿಸಿ, ಹಾಜರಿದ್ದ ಎಲ್ಲರೂ ಎರಡು ನಿಮಿಷ ಮೌನಾಚರಣೆ ನಡೆಸಿದರು.
ಕಾರ್ಯಕ್ರಮದ ಅಂಗವಾಗಿ ಕೊಕ್ಕಡ ಎಂಡೋಸಂತ್ರಸ್ತರ ಪಾಲನಾ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ವಿಶೇಷಚೇತನ ಮಕ್ಕಳಿಗೆ ಸಿಹಿತಿಂಡಿ ಹಾಗೂ ಹಣ್ಣು ಹಂಪಲು ವಿತರಣೆಯನ್ನು ಮಾಡಲಾಯಿತು.
ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ರಾಘವೇಂದ್ರ ಮಾತನಾಡಿ, “ಅರಣ್ಯ ಸಂಪತ್ತನ್ನು ರಕ್ಷಿಸುವ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಹುತಾತ್ಮರ ತ್ಯಾಗವನ್ನು ನಾವು ನೆನೆಸಿಕೊಳ್ಳಬೇಕು. ಅರಣ್ಯರಕ್ಷಕರ ಸೇವೆ ಸಮಾಜಕ್ಕೆ ಅಮೂಲ್ಯವಾದದ್ದು,” ಎಂದು ತಿಳಿಸಿದರು.
ಪುತ್ತೂರು ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ, ಉಪವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ ಮಾತನಾಡಿ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರಿದ್ದಾರೆ. 1966ರಿಂದ ಇಲ್ಲಿಯರೆಗಿನ ಒಟ್ಟು 62 ಮಂದಿ ಹುತಾತ್ಮರಾಗಿದ್ದಾರೆ ಅಂತಹ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸೆ.11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ಅವರ ನಿಸ್ವಾರ್ಥ ಕೊಡುಗೆಗಳನ್ನು ನೆನಪಿಸುವ ಮತ್ತು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನೆರವಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ
ಕಾರ್ಯಕ್ರಮದಲ್ಲಿ ಕೊಕ್ಕಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಎಂಡೋಸಂತ್ರಸ್ತರ ಪಾಲನಾ ಕೇಂದ್ರದ ಮ್ಯಾನೇಜರ್ ಚಂದ್ರಿಕಾ, ಉಪವಲಯಾರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.