ಭಾರತೀಯ ಮಜ್ದೂರು ಸಂಘದ ರಾಜ್ಯಘಟಕದ ತೀರ್ಮಾನಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಸಮನ್ವಯ ಸಭೆ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಮಜ್ದೂರು ಸಂಘವು ಸದಾ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಬೃಹತ್ ರಾಷ್ಟ್ರೀಯ ಸಂಘಟನೆ. ಇತ್ತೀಚೆಗೆ ನಡೆದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳನ್ನು, ಜಿಲ್ಲಾ ಘಟಕವು ತಕ್ಷಣ ಅನುಷ್ಠಾನಗೊಳಿಸಿ ಜಿಲ್ಲೆಯ ಎಲ್ಲಾ ಯೂನಿಯನ್ ಮತ್ತು ತಾಲೂಕು ಮಟ್ಟದ ಪ್ರಮುಖರಿಗೆ ತಲುಪಿಸುವ ಮಹತ್ತರ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿದೆ.

ಆ.14ರಿಂದ ಸೆ. 6ರವರೆಗೆ – ಸುಳ್ಯ, ಪುತ್ತೂರು, ಬಂಟ್ವಾಳ, ಕಡಬ, ಬೆಳ್ತಂಗಡಿ, ಮೂಡಬಿದ್ರೆ ಮತ್ತು ಮಂಗಳೂರು ತಾಲೂಕುಗಳಲ್ಲಿ ಸಮನ್ವಯ ಸಭೆಗಳು ಯಶಸ್ವಿಯಾಗಿ ನಡೆದವು. ಈ ಸಭೆಗಳಲ್ಲಿ ನೂರಾರು ಕಾರ್ಮಿಕ ಪ್ರತಿನಿಧಿಗಳು ಭಾಗವಹಿಸಿ ರಾಜ್ಯ ಮಟ್ಟದ ನಿರ್ಧಾರಗಳನ್ನು ಚರ್ಚಿಸಿ, ತಮ್ಮ ಸ್ಥಳೀಯ ಸಮಸ್ಯೆಗಳನ್ನೂ ಹಂಚಿಕೊಂಡರು.

ಪ್ರಮುಖ ತೀರ್ಮಾನಗಳು: ಯುವ ಹಾಗೂ ಮಹಿಳಾ ಕಾರ್ಯಕರ್ತರ ಸಮಾವೇಶ – ಶಿವಮೊಗ್ಗ, ಡಿ.13,14ರಂದು ಭಾಗವಹಿಸುವುದು, 70ನೇ ವರ್ಷದ ರಾಜ್ಯಮಟ್ಟದ ಕುಟುಂಬ ಸಂಗಮ – ಶಿವಮೊಗ್ಗ, ಸೆ.14ರಂದು ಭಾಗವಹಿಸುವುದು, ಕಾರ್ಮಿಕ ದಿನಾಚರಣೆ (ವಿಶ್ವಕರ್ಮ ಜಯಂತಿ ದಿನ) – ಸೆ. 17ರಂದು ತಾಲೂಕು ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಮಾಡುವುದು, ರಾಜ್ಯಮಟ್ಟದ ಹೋರಾಟ – ಬೆಂಗಳೂರು, ನವೆಂಬರ್ 12ರಂದು ಭಾಗವಹಿಸುವುದು, ವರಿಷ್ಠ ನಾಗರಿಕರ ಪರಿ ಸಂಘಟನೆ – 60 ವರ್ಷ ಮೇಲ್ಪಟ್ಟ ಕಾರ್ಯಕರ್ತರನ್ನು ಸಂಘಟಿಸುವುದು, ಗಿಗ್ಗ್ ಕಾರ್ಮಿಕರು ಹಾಗೂ ಮೊಬೈಲ್ ನೆಟ್ವರ್ಕ್ ಕಾರ್ಮಿಕರ ಸಂಘಟನೆಯನ್ನು ಮಾಡುವುದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಹೋರಾಟ ಕೈಗೊಳ್ಳುವುದು, ಪ್ರತಿ ಸಭೆಯಲ್ಲಿ ಕಾರ್ಯಕರ್ತರಿಗೆ ಸಂಘಟನೆಯ ಸಿದ್ಧಾಂತ, ಹೋರಾಟದ ಇತಿಹಾಸ ಹಾಗೂ ಮುಂದಿನ ಹಾದಿಯ ಬಗ್ಗೆ ಪ್ರೇರಣಾದಾಯಕ ಚರ್ಚೆಗಳು ನಡೆಯಿತು. ಕಾರ್ಮಿಕರ ಏಕತೆ, ಶಕ್ತಿ, ಸ್ವಾಭಿಮಾನ ಇವುಗಳೇ ಸಮಾಜ ಪರಿವರ್ತನೆಗೆ ದಾರಿ ಎಂದು ಒತ್ತಿಹೇಳಲಾಯಿತು.

ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಸಂಘಟನಾ ಕಾರ್ಯದರ್ಶಿಗಳಾದ ವಸಂತ್ ಕುಮಾರ್ ಮನಿಹಳ್ಳ ಮತ್ತು ಕುಮಾರ್ ನಾಥ್ ಉಜಿರೆ ಅವರ ನೇತೃತ್ವದಲ್ಲಿ ಹಾಗೂ ರಾಜ್ಯ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ ಮತ್ತು ಜಯರಾಜ್ ಸಾಲ್ಯಾನ್ ಇವರ ಮಾರ್ಗದರ್ಶನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಶಿಸ್ತಿನಿಂದ ಮತ್ತು ಶ್ರದ್ಧೆಯಿಂದ ನೆರವೇರಿಸಲ್ಪಟ್ಟವು.

ಇಂತಹ ಸಮನ್ವಯ ಸಭೆಗಳ ಮೂಲಕ ರಾಜ್ಯ ಮಟ್ಟದಲ್ಲಿ ಕೈಗೊಂಡ ತೀರ್ಮಾನಗಳನ್ನು ಜಿಲ್ಲೆಯ ಪ್ರತಿ ಯೂನಿಯನ್ ಮತ್ತು ತಾಲೂಕು ಮಟ್ಟದ ಪ್ರಮುಖರಿಗೆ ತಲುಪಿಸುವುದರೊಂದಿಗೆ, ಕಾರ್ಮಿಕರ ಏಕತೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯವನ್ನು ಸಂಘಟನೆಯು ಕೈಗೊಂಡಿದೆ.

LEAVE A REPLY

Please enter your comment!
Please enter your name here