ಬೆಳ್ತಂಗಡಿ: ಮೂಡುಬಿದಿರೆ ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಹೂವಿನ ಪೂಜೆ ಎಡಪದವು ವೇದಮೂರ್ತಿ ವೆಂಕಟೇಶ ತಂತ್ರಿಗಳ ನೇತ್ರತ್ವದಲ್ಲಿ ಶನಿವಾರ ನಡೆಯಿತು.
ಬೆಳಿಗ್ಗೆ 8 ಗಂಟೆಗೆ ಪುಣ್ಯಾಹ ವಾಚನ, ಗಣಹೋಮ, ಪವಮಮಾನ ಹೋಮ ನಡೆಯಿತು. ಬಳಿಕ ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ನೇತ್ರತ್ವದಲ್ಲಿ ಮಧ್ಯಾಹ್ನ ವೀರಮಾರುತಿ ದೇವರಿಗೆ ವಿಶೇಷ ಹೂವಿನ ಪೂಜೆ, ಮಹಾಪೂಜೆ ನಡೆಯಿತು.
ಸಂಜೆ ಮಹಾರಂಗಪೂಜೆ ಬಳಿಕ ದೀಪಾರಾಧನೆ ಜರಗಿತು. ಕಾರ್ಕಳ ಹಾಗೂ ಮೂಡುಬಿದಿರೆ ವಲಯ ಮಹಿಳಾ ಸಂಘದ ಸದಸ್ಯೆಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
1000ಕ್ಕೂ ಮಿಕ್ಕಿ ಭಕ್ತರು ಭಾಗಿ: ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ದೇವಸ್ಥಾನದ ಆಡಳಿತ ಮೊಕೇಸರ ಶ್ಯಾಮ ಹೆಗ್ಡೆ ಕಾರ್ಯದರ್ಶಿ ಅನಿಲ್ ಹೆಗ್ಡೆ ಹಾಗೂ ಮೊಕ್ತೇಸರರು, ಜಿಲ್ಲಾ ಹೆಗ್ಗಡೆ ಸಂಘದ ಅಧ್ಯಕ್ಷ ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ ಕಾರ್ಯದರ್ಶಿ ಶುಭರಾಜ್ ಹೆಗ್ಡೆ ಹಾಗೂ ಸದಸ್ಯರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಕಾರ್ಯದರ್ಶಿ ಲತಾ ಯು. ಹೆಗ್ಡೆ, ಮೂಡುಬಿದಿರೆ ವಲಯ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಕೆ. ಹೆಗ್ಡೆ, ಕಾರ್ಯದರ್ಶಿ ಮಮತ ಆರ್. ಹೆಗ್ಡೆ, ಹೆಗ್ಗಡೆ ಸಂಘ ಮೂಡುಬಿದಿರೆ ವಲಯದ ಅಧ್ಯಕ್ಷ ಸದಾಶಿವ ಹೆಗ್ಡೆ, ಕಾರ್ಯದರ್ಶಿ ಜಯರಾಮ ಹೆಗ್ಡೆ ಹಾಗೂ ವಿವಿಧ ವಲಯಗಳ ಅಧ್ಯಕ್ಷರು, ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಉದಯ ಕುಮಾರ್ ಹೆಗ್ಡೆ, ಸಂಘದ ಮಾಜಿ ಅಧ್ಯಕ್ಷ ನವೀನ್ ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು.