ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಮೇರಿ ಮಾತೆಯ ಜನ್ಮ ದಿನವನ್ನು ಸೆ. 8ರಂದು ಮೊಂತಿ(ತೆನೆ ಹಬ್ಬ) ಹಬ್ಬವಾಗಿ ಆಚರಿಸಿದರು. ಅದಕ್ಕೆ ಪೂರ್ವವಾಗಿ 9 ದಿನಗಳ ಕಾಲ ನಡೆಯುವ ನೊವೆನಾ ಪ್ರಾರ್ಥನೆಯು ರವಿವಾರ ಕೊನೆಗೊಂಡಿತು.

ಮೊಂತಿ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ತಮ್ಮ ವ್ಯಾಪ್ತಿಯ ಚರ್ಚ್‌ಗಳಲ್ಲಿ ಬಲಿಪೂಜೆಯಲ್ಲಿ ಪಾಲ್ಗೊಂಡು ತಮ್ಮ ಮನೆಗಳಲ್ಲಿ ಹೊಸ ಅಕ್ಕಿ ಕುಟುಂಬ ಸಮೇತರಾಗಿ ಊಟವನ್ನು ಇಂದು ಸವಿಯಲಿದ್ದಾರೆ. ಎಂಟು ದಿನಗಳ ನೊವೆನಾ ಆಚರಣೆ ಯಲ್ಲಿ ಪ್ರಾರ್ಥನೆ, ಭಕ್ತಿ ಗೀತೆಗಳು, ಧ್ಯಾನ ಹಾಗೂ ವಿಶೇಷ ಉದ್ದೇಶಗಳಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮೊಂತಿ ಹಬ್ಬದಂದು ಕನ್ಯಾ ಮರಿಯಮ್ಮನಿಗೆ ಪ್ರಾರ್ಥನೆ, ಪ್ರಧಾನ ದಿವ್ಯ ಬಲಿಪೂಜೆಯನ್ನು ದಯಾಳ್ ಭಾಗ್ ಆಶ್ರಮದ ಧರ್ಮಗುರು ಫಾ. ಲ್ಯಾನ್ಸಿ ರೆಬೆಲ್ಲೊ ಅರ್ಪಿಸಿ ಸಂದೇಶ ನೀಡಿದರು.

ಅಹಮದಾಬಾದ್ ಧರ್ಮ ಪ್ರಾಂತ್ಯದದಲ್ಲಿ ಸೇವೆ ಸಲ್ಲಿಸುವ ಉಜಿರೆ ಸುರ್ಯ ಮನೆಯ ಫಾ. ರೋಕ್ಕಿ ಪಿಂಟೊ, ಕಾರವಾರ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸುವ ಉಜಿರೆ ಹಲಕ್ಕೆ ಮನೆಯ ಫಾ. ವಲೇರಿಯನ್ ಸಿಕ್ವೆರಾ, ಚರ್ಚ್ ಪ್ರಧಾನ ಧರ್ಮಗುರು ಫಾ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ ಸಹಕರಿಸಿದರು.

ಅನುಗ್ರಹ ಸಭಾಂಗಣಕ್ಕೆ ನೂತನವಾಗಿ ನಿರ್ಮಿಸಿದ ಅಡುಗೆ ಕೋಣೆಯ ವಿಸ್ತರಣೆಯ ಆಶೀರ್ವಾಚನ, ವಾಹನಗಳ ಆಶೀರ್ವಾಚನ, ಎಸ್.ಎಸ್.ಎಲ್.ಸಿಯಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟೀನಾ ಮೆಮೋರಿಯಲ್ ಪ್ರಶಸ್ತಿ ಪುರಸ್ಕಾರ ಪಡೆದ ರಾಜ್ಯಕ್ಕೆ ದ್ವಿತೀಯ ಸ್ಥಾನ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶಾರನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಬಳಿಕ ಹಬ್ಬದ ಪ್ರಯುಕ್ತ ಕುಟುಂಬಗಳಿಗೆ ತೆನೆ ವಿತರಣೆ, ಪುಷ್ಪಾರ್ಪಣೆ ಸಲ್ಲಿಸಿದ ಪುಟಾಣಿಗಳಿಗೆ ಕಬ್ಬು ವಿತರಿಸಲಾಯಿತು.
9ದಿನಗಳ ನೋವೇನಾದಲ್ಲಿ ಭಾಗವಹಿಸಿದವರಿಗೆ ಪ್ರತೀ ದಿನ ಫಲಹಾರದ ವ್ಯವಸ್ಥೆ ಹಾಗೂ ಹಬ್ಬದ ದಿನವೂ ಫಲಹಾರ ನೀಡಲಾಯಿತು. ಆರ್ಥಿಕ ಧನಸಹಾಯ ಮಾಡಿದ ದಾನಿಗಳಿಗೆ ಮೇಣದ ಬತ್ತಿ ವಿತರಿಸಿ ಗೌರವಿಸಲಾಯಿತು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ, ಆರ್ಥಿಕ ಸಮಿತಿ ಸದಸ್ಯರು, ಗುರಿಕಾರರು, ಚರ್ಚ್ ಪಾಲನ ಮಂಡಳಿ ಸದಸ್ಯರು, ಮುಖಂಡರು ಸಹಕರಿಸಿದರು.