ಭಾರತದ ಯುವಜನತೆ ವೈಜ್ಞಾನಿಕ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡುವ ಶಕ್ತಿಯಾಗಬೇಕು- ರಶ್ಮಿತಾ ಜೈನ್

0

ಬೆಳ್ತಂಗಡಿ: ಭಾರತ ದೇಶಕ್ಕೆ ಜನಸಂಖ್ಯೆ ಸಂಪನ್ಮೂಲವಾಗಬೇಕು. ವಿಜ್ಞಾನವೆಂಬ ವಿಶೇಷ ಜ್ಞಾನವನ್ನು ಗಳಿಸಿ. ಅನ್ವೇಷಣಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ವೈಜ್ಞಾನಿಕ ಕ್ಷೇತ್ರದಲ್ಲಿ ಬಲು ದೊಡ್ಡ ಸಾಧನೆ ಗೈಯಲು ದೇಶದ ಯುವಜನತೆ ಶಕ್ತಿಯಾಗಿ ರೂಪುಗೊಳ್ಳಬೇಕೆಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಕಲ್ಲಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಮೂಡುಬಿದಿರೆ ತಾಲೂಕು ಮಟ್ಟದ ವಿಜ್ಞಾನ ಸ್ಪರ್ಧೆಗಳು -2025 ಇದರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಆಟಲ್, ಇನ್‌ಸ್ಪಾಯರ್, ಯುವಿಕ ದಂತಹ ವಿಜ್ಞಾನ ಕಾರ್ಯಕ್ರಮಗಳು ದೇಶಕ್ಕೆ ಯುವ ವಿಜ್ಞಾನಿಗಳನ್ನು ನೀಡುವಲ್ಲಿ ಬಹುದೊಡ್ಡ ಪಾತ್ರ ವಹಿಸಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೂಡುಬಿದಿರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ವಿರೂಪಾಕ್ಷಪ್ಪ ಎಚ್ ಎಸ್ ಇವರು ಮಾತನಾಡಿ “ನಿತ್ಯ ಜೀವನದಲ್ಲಿ ವಿಜ್ಞಾನವು ಅವಿಭಾಜ್ಯ ಅಂಗವಾಗಿದೆ. ಬಾಲ್ಯದಿಂದಲೇ ಮಕ್ಕಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ವಹಿಸಿಕೊಂಡು ಸಮಾಜಕ್ಕೆ ವಿಶೇಷ ಕೊಡುಗೆಯನ್ನು ನೀಡುವಂತಾಗಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ಶ್ರೀನಿವಾಸ ಅಡಿಗ, ಮೂಡುಬಿದಿರೆ ತಾಲೂಕು ಶಿಕ್ಷಣ ಸಂಯೋಜಕಿ ಶ್ರೀಮತಿ ಸ್ಮಿತ ಮಿರಾಂಡ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ತೀರ್ಪುಗಾರರಾದ ಪಶುಪತಿ ಶಾಸ್ತ್ರಿ ಹಾಗೂ ದಿನೇಶ್ ಇವರು ಉಪಸ್ಥಿತರಿದ್ದರು. ಉದ್ಘಾಟನಾ ಅಂಗವಾಗಿ ಎಕ್ಸಲೆಂಟ್, ಅಟಲ್ ವಿಭಾಗದವರು ಸೆನ್ಸಾರ್ ತಂತ್ರಜ್ಞಾನವನ್ನು ಉಪಯೋಗಿಸಿ ಗೈದ ದೀಪ ಪ್ರಜ್ವಲನೆ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.

ಉಪಸ್ಥಿತರಿದ್ದ ಅತಿಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಸಸ್ಯ ಶ್ಯಾಮಲ ಯೋಜನೆಯ ಅಂಗವಾಗಿ ಸಸಿಗಳನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಜ್ಞಾನ ಶಿಕ್ಷಕ ಪ್ರಜ್ವಲ್ ಶೆಟ್ಟಿ ನಿರೂಪಿಸಿ, ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ಮಹೇಶ್ವರಿ ಅವರು ವಂದಿಸಿದರು.

LEAVE A REPLY

Please enter your comment!
Please enter your name here