ಬೆಳ್ತಂಗಡಿ: ‘ಬದುಕು ಭಾವನೆಗಳ ಅಭಿವ್ಯಕ್ತಿ. ಆ ಭಾವನೆಗಳಿಗೆ ಅಕ್ಷರ ರೂಪ ನೀಡಿದಾಗ ಶ್ರೇಷ್ಠ ಸಾಹಿತ್ಯವಾಗಿ ಮೂಡಿ ಬರಲು ಸಾಧ್ಯವಾಗುವುದು. ಹಾಗಾಗಿ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಯಲ್ಲಿಯೇ ಸಾಹಿತ್ಯ ಸಾಂಸ್ಕೃತಿಕ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷೆ ಪ್ರೀತಿತಾ ಧರ್ಮ ವಿಜೇತ್ ಹೇಳಿದರು.
ಅವರು ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಜ್ಞಾನ ಗಂಗಾ’ ಭಿತ್ತಿ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದರು.
‘ಸಾಹಿತ್ಯದ ಓದು ಮತ್ತು ಬರವಣಿಗೆ ಬದುಕಿಗೆ ಸುಂದರ ಸ್ವರೂಪವನ್ನು ನೀಡುವಂತಹುದು. ಕಾಲೇಜು ಜೀವನದಲ್ಲಿ ಭಿತ್ತಿ ಪತ್ರಿಕೆ ಮೂಲಕ ಸಿಗುವ ಬರವಣಿಗೆಯ ಅನೇಕ ಅವಕಾಶಗಳ ಸದ್ಭಳಕೆ ಮಾಡಿಕೊಳ್ಳಬೇಕು. ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡವರು ಜೀವನದ ಸುಖವನ್ನು ಅನುಭವಿಸಬಲ್ಲರು’ ಎಂದ ಅವರು ಅತ್ಯುತ್ತಮ ಭಿತ್ತಿ ಪತ್ರಿಕೆಗೆ ಉತ್ತಮ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಕಾಲೇಜಿನ ಸಾಹಿತ್ಯ ಸಂಘದ ಸಂಚಾಲಕಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಅಶ್ವಿನಿ, ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ.ಎ. ಶಮೀವುಲ್ಲಾ ಸ್ವಾಗತಿಸಿದರು. ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೃತಿ ಕಾರ್ಯಕ್ರಮ ನಿರೂಪಿಸಿ, ದಿಶಾ ವಂದಿಸಿದರು.