
ಕಣಿಯೂರು: ಒಂದಕ್ಕಿಂತ ಹೆಚ್ಚು ಬಿ.ಪಿ.ಎಲ್. ಕಾರ್ಡ್ ಪಡೆದು ಸರಕಾರಕ್ಕೆ ವಂಚನೆ ನಡೆಸಿದ್ದಾರೆಂಬ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಎದುರಿಸುತ್ತಿದ್ದ ಕಾಸಿಂ ಪದ್ಮುಂಜರನ್ನು ದೋಷಮುಕ್ತಗೊಳಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಮಾಡಿದೆ.
ಕಣಿಯೂರು ಗ್ರಾ.ಪಂ. ನಲ್ಲಿ ಪಂಪು ಚಾಲಕರಾಗಿರುವ ಕಾಸಿಂ ಪದ್ಮುಂಜ ಎಂಬವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ನಾಲ್ಕು ಪಡಿತರ ಚೀಟಿಗಳನ್ನು ಪಡೆದಿದ್ದಾರೆ ಎಂದು ಅ. 2019ರಲ್ಲಿ ಪಂಚಾಯತ್ ಅಧ್ಯಕ್ಷರಾಗಿದ್ದ ಸುನಿಲ್ ಸಾಲಿಯಾನ್ ಎಂಬವರು ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರಿಗೆ ದೂರು ನೀಡಿದ್ದರು.
ಈ ದೂರಿನ ಹಿನ್ನಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರರು ಕಾಸಿಂ ಪದ್ಮುಂಜ ರವರಿಗೆ ನೋಟೀಸ್ ಜಾರಿ ಮಾಡಿ ನೀವು ಪಂಚಾಯತಿ ಉದ್ಯೋಗಿಯಾಗಿದ್ದು ಒಂದಕ್ಕಿಂತ ಹೆಚ್ಚು ಬಿಪಿಎಲ್ ಪಡಿತರ ಚೀಟಿ ಪಡೆದು ಸರಕಾರಕ್ಕೆ 80 ಸಾವಿರ ರೂಪಾಯಿ ನಷ್ಟ ಉಂಟುಮಾಡಿದ್ದೀರಿ ಕೂಡಲೇ 80 ಸಾವಿರ ರೂಪಾಯಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಇಲ್ಲವಾದರೆ ಕಲಂ 417 ಮತ್ತು 420ರಂತೆ ನಿಮ್ಮ ಮೇಲೆ ಕಾನೋನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಇದಕ್ಕುತ್ತರಿಸಿದ ಕಾಸಿಂ ಪದ್ಮುಂಜ ಅವರು ನಾನು ತಪ್ಪು ಮಾಡಿಲ್ಲ ನನ್ನ ಹೆಸರಿನಲ್ಲಿ ಬಿಪಿಎಲ್ ಪಡಿತರ ಚಿಟಿಯೇ ಇಲ್ಲ. ಪತ್ನಿ ಮಕ್ಕಳು ಪಡೆದ ಪಡಿತರ ಚೀಟಿಗೆ ನಾನು ದಂಡನೆ ಕಟ್ಟುವುದಿಲ್ಲ ಎಂದು ಉತ್ತರ ನೀಡಿದ್ದರು. ಉತ್ತರವನ್ನು ಆಲಿಸಿದ ತಹಶೀಲ್ದಾರರು ಕಾಸಿಂ ಪದ್ಮುಂಜ ಅವರು ನೀಡಿದ ಉತ್ತರ ಸಮಂಜಸವಾಗಿಲ್ಲ ಎಂದು ಹೇಳಿ ಕಾಸಿಂ ಪದ್ಮುಂಜ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸರಿಗೆ 2019ರಲ್ಲಿ ದೂರು ನೀಡಿದ್ದರು.
ತಹಶೀಲ್ದಾರರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಭಾರತೀಯ ದಂಡ ಸಂಹಿತೆ ಕಲಂ 420/417 ರಂತೆ ದೂರು ದಾಖಲಿಸಿಕೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು 9 ಸಾಕ್ಷಿದಾರರನ್ನು ವಿಚಾರಣೆ ನಡಿಸಿ ಆರೋಪಿಯ ವಿರುದ್ಧ ಸಾಕ್ಷಿ ಸಾಬೀತು ದೂರುದಾರರು ವಿಫಲವಾಗಿದ್ದಾರೆಂದು ಪರಿಗಣಿಸಿ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರಾದ ಸಂದೇಶ ಕೆ ಯವರು ಕಾಸಿಂ ಪದ್ಮುಂಜ ಅವರನ್ನು ಆಗಸ್ಟ್.13ರಂದು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಕಾಸಿಂ ಪದ್ಮುಂಜ ಅವರ ಪರವಾಗಿ ವಕೀಲ ಕೇಶವ ಗೌಡ ಬೆಳಾಲು ಅವರು ವಾದ ಮಂಡಿಸಿದ್ದರು.