
ಮಡಂತ್ಯಾರು: ಕುಕ್ಕಳಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವವನ್ನು ಭಾವಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಅಂಗನವಾಡಿ ಶಿಕ್ಷಕಿ ಪುಷ್ಪವತಿ ಸ್ವಾಗತಿಸಿದರು.
ಧ್ವಜಾರೋಹಣದ ಗೌರವವನ್ನು ಜೆಸಿಐ ಮಡಂತ್ಯಾರಿನ ಪೂರ್ವ ಅಧ್ಯಕ್ಷ ಜೆಸಿ ಪ್ರಸನ್ನ ಶೆಟ್ಟಿ ನಿರ್ವಹಿಸಿದರು. ನಂತರ ಎಲ್ಲರೂ ಒಟ್ಟಾಗಿ ರಾಷ್ಟ್ರಗೀತೆ ಹಾಡಿ ಧ್ವಜಕ್ಕೆ ಗೌರವ ಸಲ್ಲಿಸಿದರು.
ಜೇಸಿಐ ಪ್ರಸನ್ನ ಶೆಟ್ಟಿ ಅವರು ಭಾರತದ ಪ್ರಗತಿ, ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದಲ್ಲಿ ದೇಶವು ವಿಶ್ವದಲ್ಲಿ ಎತ್ತದ ಸ್ಥಾನವನ್ನು ಗಳಿಸುತ್ತಿರುವ ಕುರಿತು ಮಾತನಾಡಿದರು. ಇತಿಹಾಸದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಈ ದಿವಸದಿಂದ ಎಲ್ಲರಿಗೂ ಸ್ವಚ್ಛತೆ ಮತ್ತು ಭ್ರಷ್ಟಾಚಾರದ ವಿರುದ್ಧ ಸಂಕಲ್ಪಗೊಳ್ಳುವ ದಿನವಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಶಾ ಕಾರ್ಯಕರ್ತೆ ಉಷಾ ಪಾಟೀಲ್ ಅವರು ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ಅತಿಥಿಯಾದ ಕೋಟ್ಯಾಪ್ಪ ಪೂಜಾರಿ ಕುಕ್ಕಳ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಂಗನವಾಡಿ ಪುಟಾಣಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅವರು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದವು.
ಮಡಂತ್ಯಾರು ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕಿ ಸೌಮ್ಯಾ ಸೇಸಪ್ಪ ಹಲೆಕ್ಕಿ, ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿಕಿತಾ ಶೆಟ್ಟಿ, ಸ್ಥಳೀಯ ಮುಖಂಡರಾದ ರಾಮಣ್ಣ ಮೂಲ್ಯ ಹಲೆಕ್ಕಿ, ಶಿವಾನಂದ ಕುಕ್ಕಳ, ಸಂದೇಶ್ ಕುಕ್ಕಳ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಅಂಗನವಾಡಿ ಸಹಾಯಕಿ ದೀಕ್ಷಿತಾ ಸಹಕಾರ ನೀಡಿದರು. ಕಾರ್ಯಕ್ರಮದ ಕೊನೆಯದಾಗಿ ಎಲ್ಲರಿಗೂ ಸಿಹಿತಿಂಡಿಗಳನ್ನು ಹಂಚಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಪುಷ್ಪವತಿ ವಂದನಾರ್ಪಣೆಯನ್ನು ಮಾಡಿದರು.