ದಯಾ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

0

ಬೆಳ್ತಂಗಡಿ:ಆ. 15ರಂದು ದಯಾ ವಿಶೇಷ ಶಾಲೆಯಲ್ಲಿ ಭಾರತದ 79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸ್ವಾತಂತ್ರೋತ್ಸವದ ದ್ವಜಾರೋಹಣ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಫಾ.ವಿನೋದ್ ಮಸ್ಕರೇನಸ್ ಅವರು ನೆರವೇರಿಸಿದರು. ಲಯನ್ ವಸಂತ ಶೆಟ್ಟಿ ಶ್ರದ್ಧ ಪಾಸ್ಟ್ ರೀಜ್ಯನ್ ಚೇರಮಾನ್ ಬೆಳ್ತಂಗಡಿ ಅವರು ಉಪಸ್ಥಿತರಿದ್ದರು. ನಂತರ ಆಯೋಜಿಸಿದ ಸಭಾ ಕಾರ್ಯಾಕ್ರಮವು, ನಿರ್ದೇಶಕ ಫಾ.ವಿನೋದ್ ಮಸ್ಕರೇನಸ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ದಯಾ ವಿಶೇಷ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡು, ಸಂವಿಧಾನ ಪುಸ್ತಕಕ್ಕೆ ಹೂವಿನ ಮಾಲಾರ್ಪಣೆಯನ್ನು ಮಾಡಿ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚ್ ನ ಧರ್ಮಗುರು ಫಾ.ಜೋಸ್ ಆಯಾಂಕುಡಿ ಅವರು ಉದ್ಘಾಟಿಸಿದರು.

ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ ನೆರೆದಂತಹ ಸರ್ವರಿಗೂ ೭೯ ನೇ ವರ್ಷದ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುತ್ತಾ, ನಮ್ಮ ದೇಶ ಪ್ರಪಂಚದಲ್ಲಿ ಇದೀಗ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಪ್ರಸ್ತುತ ನಮ್ಮ ದೇಶದ ಏಳಿಗೆಗಾಗಿ ಶ್ರಮಿಸುತ್ತಿರುವ ಎಲ್ಲಾ ವ್ಯಕ್ತಿಗಳು, ಸಂಘ, ಸಂಸ್ಥೆಗಳನ್ನೂ ಸ್ಮರಿಸುವುದರೊಂದಿಗೆ ದಯಾ ವಿಶೇಷ ಶಾಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ನಿರ್ದೇಶಕರಿಗೆ, ವಿವಿಧ ದಾನಿಗಳಿಗೆ, ಇದರ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.

ನಂತರ ಬೆಳ್ತಂಗಡಿ ಸೈಂಟ್ ಮಿಲಾಗ್ರಿಸ್ ಕೋಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕ ಸುಮಂತ್ ಎಮ್. ಅವರು ಹಾಗೂ ಅಲ್ಲಿನ ಸಿಬ್ಬಂದಿ ವೃಂದದವರು ಆಗಮಿಸಿ ಮಕ್ಕಳಿಗೆ ಸ್ವಾತಂತ್ರೋತ್ಸವದ ಅಂಗವಾಗಿ ತಮ್ಮ ಸೊಸೈಟಿಯಿಂದ ಶಾಲೆಯ ಎಲ್ಲಾ 150 ಮಕ್ಕಳಿಗೆ ಉಡುಗೊರೆಯನ್ನು ಹಾಗೂ ಸಿಹಿತಿಂಡಿಗಳನ್ನು ನೀಡಿದರು. ನಂತರ ಮಾತನಾಡಿದ ಅವರು ಸಂಸ್ಥೆಗೆ ಶುಭಹಾರೈಸಿ, ಸೈಂಟ್ ಮಿಲಾಗ್ರಿಸ್ ಕೋಪರೇಟಿವ್ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಬೆಳ್ತಂಗಡಿ ಖ್ಯಾತ ನ್ಯಾಯವಾದಿ ಮುರಳಿ ಬಲಿಪ ಅವರು ಮಾತನಾಡಿ ನಾವು ಇಂದು ಇಂತಹ ಸಮಾರಂಭಗಳನ್ನು ಮಾಡಬೇಕಾದರೆ ಅದಕ್ಕೆ ಮುಖ್ಯ ಕಾರಣಕರ್ತರು ನಮ್ಮ ದೇಶದ ಸೈನಿಕರು ಹಾಗೂ ಅವರು ನಮಗಾಗಿ ಮಾಡಿದ ತ್ಯಾಗ. ಸೈನಿಕರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಮಾಡಿದ ಸೇವೆಯನ್ನು ಸ್ಮರಿಸಿ, ದಯಾ ಶಾಲೆಯು ಜಾತಿ, ಮತ ಭೇದವೆನ್ನದೆ ನಮ್ಮ ತಾಲೂಕಿನ ವಿಶೇಷ ಚೇತನ ಮಕ್ಕಳಿಗೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.

ನಂತರ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಫಾ.ವಿನೋದ್ ಮಸ್ಕರೇನಸ್ ಅವರು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ ಎಲ್ಲಾ ದಾನಿಗಳನ್ನು, ಸಂಘ ಸಂಸ್ಥೆಗಳನ್ನು ಸ್ಮರಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಯನ್ನು ಹಾಗೂ ಮಕ್ಕಳನ್ನು ಪ್ರೋತ್ಸಾಹಿಸಿದ ಎಲ್ಲಾ ಅತಿಥಿಗಣ್ಯರನ್ನು ಅಭಿವಂದಿಸಿದರು.

ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆಯ ಮಕ್ಕಳು ದೇಶ ಪ್ರೇಮವನ್ನು ಪ್ರತಿಬಿಂಬಿಸುವ ವಿವಿಧ ಹಾಡು, ಅಭಿನಯ, ನೃತ್ಯ, ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು. ಇಂದಿನ ಮಧ್ಯಾಹ್ನದ ವಿಶೇಷ ಭೋಜನವನ್ನು ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚ್ ನ ಸೈಂಟ್ ವಿನ್ಸೆಂಟ್ ಡಿ. ಪೌಲ್ ಸೊಸೈಟಿಯಿಂದ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಲಯನ್ ವಸಂತ ಶೆಟ್ಟಿ ಶ್ರದ್ಧ ಪಾಸ್ಟ್ ರೀಜ್ಯನ್ ಚೇರಮಾನ್ ಬೆಳ್ತಂಗಡಿ, ಶಾಲಾ ಮಕ್ಕಳ ಪೋಷಕರ ಪ್ರತಿನಿಧಿಯಾಗಿ ತೋಮಸ್ ಮೇನಾಚೇರಿ, ಮಕ್ಕಳ ಪ್ರತಿನಿಧಿಯಾಗಿ ಮೇಘಾ ಡಿ. ಹಾಗೂ ಶಾಲಾ ಮುಖ್ಯ ಶಿಕ್ಷಕ ಮೆರಿನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚ್ ನ ಸಹ ಗುರು ಫಾ. ವಿಲಿಯಂ, ಸೈಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಸದಸ್ಯರು, ಸೈಂಟ್ ಮಿಲಾಗ್ರಿಸ್ ಕೋಪರೇಟಿವ್ ಸೊಸೈಟಿಯ ಸಿಬ್ಬಂದಿಗಳು, ಶಾಲಾ ಮಕ್ಕಳ ಪೋಷಕರು, ಸಿ.ಕೆ.ಎಸ್.ಕೆ ಸಿಬ್ಬಂದಿಗಳು, ದಯಾ ಶಾಲೆಯ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕಿ ಧನ್ಯಾ ಕೆ.ವಿ. ಅವರು ಸರ್ವರನ್ನು ಸ್ವಾಗತಿಸಿ, ಶಿಕ್ಷಕಿಯರಾದ ಐಶ್ವರ್ಯ ಹಾಗೂ ಜಯಮಣಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಚಿರಂಜೀವಿ ಅವರು ವಂದಿಸಿದರು.

LEAVE A REPLY

Please enter your comment!
Please enter your name here