
ಪಟ್ರಮೆ: ಗ್ರಾಮದ ಕೂಟೇಲು – ಸಂಕೇಶ – ಮಣಿಯೇರು ಪರಿಶಿಷ್ಟ ಜಾತಿ ಕಾಲೊನಿ ಪಂಚಾಯತ್ ರಸ್ತೆಯ ಅವ್ಯವಸ್ಥೆಗೆ ಪರಿಹಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿಯೂ ಸ್ಪಂದನೆ ಸಿಗದ ಕಾರಣ ಈ ಬಗ್ಗೆ ರಸ್ತೆ ಅಭಿವೃದ್ದಿಗಾಗಿ ಹೊರಾಟದ ಹಾದಿ ಹಿಡಿಯಲು ತೀರ್ಮಾನಿಸಿದ್ದಾರೆ.
ಈ ಸಂಬಂಧ 10-08-25 ರಂದು ಸಂಜೆ ಬದಿಪಲ್ಕೆ ಶಾಲಾ ಬಳಿ ಗ್ರಾಮಸ್ಥರು ಸಭೆ ಸೇರಿ ರಸ್ತೆ ಹೋರಾಟ ಸಮಿತಿಯೊಂದನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪುಟ್ಟಣ್ಣ ಮಣಿಯೇರು, ಉಪಾಧ್ಯಕ್ಷರಾಗಿ ಗಿರೀಶ್ ಮಣಿಯೇರು, ಕಾರ್ಯದರ್ಶಿಯಾಗಿ ಮನೀಷ್ ಬರ್ಕಳ, ಜೊತೆ ಕಾರ್ಯದರ್ಶಿಯಾಗಿ ಶಿವಪ್ಪ ಕಲ್ಲಡೇಲು ಆಯ್ಕೆಯಾಗಿ ಒಟ್ಟು 13 ಜನರ ಸಮಿತಿ ರಚಿಸಲಾಯಿತು.
ಸಲಹೆಗಾರರಾಗಿ ಶ್ಯಾಮರಾಜ್ ಪಟ್ರಮೆ ಮತ್ತು ಧನಂಜಯ ಪಟ್ರಮೆ ಆಯ್ಕೆ ಆದರು. ಸಮಿತಿಯಲ್ಲಿ ಸದಸ್ಯರಾಗಿ ಗಣೇಶ್ ಶೀಮುಳ್ಳು, ಕೋಟ್ಯಪ್ಪ ಸಂಕೇಶ, ಚಿನ್ನಯ ಹೆಂಗಾಜೆ, ಶಿರೀಷ್ ರಾಜ್, ಆನಂದ ಮಣಿಯೇರು, ಸತೀಶ್, ಕಿಟ್ಟು , ಪುನೀತ್ ಮತ್ತು ಶಶಿಧರ ಆಯ್ಕೆ ಆಗಿರುತ್ತಾರೆ.
ಪಂಚಾಯತ್, ಗ್ರಾಮಸಭೆಗಳು, ತಾ.ಪಂ, ಜಿ.ಪಂ, ಶಾಸಕರು, ಸಂಸದರು, ಗ್ರಾಮೀಣಾಭಿವೃದ್ದಿ ಸಚಿವರು ಎಲ್ಲಾ ಕಡೆ ಹಲವು ಬಾರಿ ಹಲವು ಜನ ಮನವಿ ಕೊಡುತ್ತಲೇ ಬಂದರೂ ಕೊನೆಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ಪತ್ರ ಬರೆದಿದ್ದರು. ರಸ್ತೆ ಅಭಿವೃದ್ದಿಗೆ ಅನುದಾನ ಒದಗಿಲ್ಲ. ಪ್ರತೀ ಚುನಾವಣೆ ಸಂದರ್ಭದಲ್ಲಿ ಭರವಸೆ ಕೊಟ್ಟು ನಂತರ ಮರೆಯುತ್ತಾರೆ. ಆದ್ದರಿಂದ ಇನ್ನು ಮನವಿ ಸಲ್ಲಿಸುವ ಬದಲು ಹೋರಾಟದ ಹಾದಿ ಹಿಡಿಯುವುದಾಗಿ ಸೇರಿದ್ದ ಗ್ರಾಮಸ್ಥರ ಒಕ್ಜೊರಲ ಅಭಿಪ್ರಾಯ ಕೇಳಿಬಂತು. ಮತದಾನ ಬಹಿಷ್ಕಾರದ ಅಭಿಪ್ರಾಯವೂ ಕೇಳಿಬಂತು.
ಹೋರಾಟ ಸಮಿತಿಯು ನಾಳೆಯಿಂದಲೇ ಕಾರ್ಯಾರಂಭ ಮಾಡಲಿದ್ದು, ಪ್ರಥಮವಾಗಿ ಸದ್ರಿ ರಸ್ತೆಯನ್ನು ಸಂಚರಿಸಲು ಸಾಧ್ಯವಾಗುವ ರೀತಿಯಲ್ಲಿ ಪಂಚಾಯತ್ ತುರ್ತಾಗಿ ಜಲ್ಲಿ ಕಲ್ಲು ಮತ್ತು ಕಲ್ಲಿನ ಪುಡಿ ಮಿಶ್ರಣ ಹಾಕಿಸಿಕೊಡಬೇಕೆಂದು ಒತ್ತಾಯಿಸಿ ಮತ್ತು ಸಂಪೂರ್ಣ ರಸ್ತೆಯನ್ನು12 ಅಡಿ ಅಗಲದಲ್ಲಿ ಕಾಂಕ್ರಿಟೀಕರಣ ಮಾಡಿ ಅಭಿವೃದ್ದಿ ಮಾಡಲು ಅಗತ್ಯ ಇರುವ ಕನಿಷ್ಟ ಮೂರು ಕೋಟಿ ರೂ ಅನುದಾನ ಸರಕಾರದಿಂದ ಒದಗುವಂತೆ ಮಾಡಲು ಒತ್ತಾಯಿಸಿ ನೋಟೀಸ್ ನೀಡಲಿದೆ. ಈ ಬಗ್ಗೆ ಪಂಚಾಯತ್ ನಲ್ಲಿ ಸ್ಪಂದನೆ ಸಿಗದೇ ಹೋದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಲು ಸಮಿತಿ ನಿರ್ಣಯಿಸಿದೆ.
ಕೂಟೇಲು, ಬದಿಪಲ್ಕೆ, ಸಂಕೇಶ, ಶೀಮುಳ್ಳು, ಮಣಿಯೇರು ಮೊದಲಾದ ಪ್ರದೇಶಗಳಿಂದ ಸುಮಾರು 50ಕ್ಕೂ ಹೆಚ್ಚು ಜನ ಸೇರಿದ್ದ ಈ ಸಭೆಯಲ್ಲಿ ಜಾರಪ್ಪ ಗೌಡರು ಅಧ್ಯಕ್ಷತೆ ವಹಿಸಿದ್ದರು, ಪ್ರಾರಂಭದಲ್ಲಿ ಗಿರೀಶ್ ಸ್ವಾಗತಿಸಿ, ಕೊನೆಯಲ್ಲಿ ಮನೀಶ್ ಧನ್ಯವಾದವಿತ್ತರು.