೨ ಕಡೆ ಕಳೇಬರ ಉಳಿದೆಡೆ ಹರೋಹರ! ಬುರುಡೆ ರಹಸ್ಯ ಬಯಲುಗೊಳಿಸಲು ಎಸ್‌ಐಟಿ ಹರಸಾಹಸ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಕೊಲೆಯಾದ ಹಾಗೂ ಅತ್ಯಾಚಾರಕ್ಕೀಡಾಗಿ ಕೊಲೆಯಾದವರ ಮೃತದೇಹಗಳನ್ನು ಬೆದರಿಸಿ ಕಾನೂನು ಬಾಹಿರವಾಗಿ ತನ್ನಿಂದ ಹೂತು ಹಾಕಿಸಲಾಗಿದೆ ಎಂದು ಅನಾಮಿಕ ವ್ಯಕ್ತಿ ನೀಡಿದ ದೂರಿನಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಮಧ್ಯೆ ೬ನೇ ಪಾಯಿಂಟ್‌ನಲ್ಲಿ ಮೃತದೇಹದ ಅವಶೇಷ ದೊರತಿರುವ ಕುರಿತು ಎಸ್‌ಐಟಿಯ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ೧೫ ವರ್ಷದ ಹಿಂದೆ ಅಪ್ರಾಪ್ತ ಬಾಲಕಿಯ ಮೃತದೇಹವನ್ನು ಕಾನೂನುಬಾಹಿರವಾಗಿ ಹೂತು ಹಾಕಲಾಗಿದೆ ಎಂದು ಕಡಬ ತಾಲೂಕಿನ ಇಚ್ಲಂಪಾಡಿಯ ಜಯಂತ್ ಟಿ. ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ್ದ ದೂರಿನ ವಿಚಾರಣೆಯನ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.

ನಿರಂತರ ತನಿಖಾ ಕಾರ್ಯ: ಅನಾಮಧೇಯ ವ್ಯಕ್ತಿ ಮಂಗಳೂರಿನಲ್ಲಿರುವ ಎಸ್.ಪಿ. ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ತನ್ನ ವಕೀಲರ ಮೂಲಕ ದೂರು ನೀಡಿದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ನೀಡಿರುವ ಹೇಳಿಕೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ತನಿಖಾಧಿಕಾರಿ ಮುಂದೆ ನೀಡಿದ್ದ ಮಾಹಿತಿಯ ದಾಖಲೆಗಳನ್ನು ಪಡೆದುಕೊಂಡಿರುವ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮಹಾಂತಿ, ಎಂ.ಎನ್. ಅನುಚೇತ್ ಮತ್ತು ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ವಿಶೇಷ ತನಿಖಾ ತಂಡದವರು ನಿರಂತರ ತನಿಖಾ ಕಾರ್ಯ ನಡೆಸುತ್ತಿದ್ದಾರೆ.

೧೩ ಪಾಯಿಂಟ್ ಪೈಕಿ ೧೨ರಲ್ಲಿ ಶೋಧ ಮುಕ್ತಾಯ: ನೂರಕ್ಕೂ ಅಧಿಕ ಮೃತದೇಹಗಳನ್ನು ನನಗೆ ನಿರಂತರವಾಗಿ ಬೆದರಿಕೆ ಒಡ್ಡಿ ಹೂತು ಹಾಕಿಸಲಾಗಿದೆ. ಅಪ್ರಾಪ್ತ ಹೆಣ್ಣು ಮಗುವನ್ನೂ ಅತ್ಯಾಚಾರ ನಡೆಸಿ ಕೊಲೆ ಮಾಡಿದವರು ನನ್ನಿಂದ ಹೆಣ ಹೂತು ಹಾಕಿಸಿದ್ದಾರೆ. ಈ ಘಟನೆಯಿಂದ ಪಶ್ತಾತ್ತಾಪ ಪಟ್ಟು ತಾನು ಇದೀಗ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದ ಸಾಕ್ಷಿ ದೂರುದಾರ ಗುರುತಿಸಿರುವ ೧೩ ಪಾಯಿಂಟ್‌ಗಳ ಪೈಕಿ ೧೨ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಈ ಪೈಕಿ ೬ನೇ ಜಾಗದಲ್ಲಿ ಮಾನವನ ಮೂಳೆಗಳು ದೊರೆತಿದ್ದು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಾಕ್ಷಿ ದೂರುದಾರ ಗುರುತಿಸದೇ ಇದ್ದ ಒಂದು ಸ್ಥಳದಲ್ಲಿಯೂ ಮಾನವನ ಮೃತದೇಹದ ಮೂಳೆಗಳು ಪತ್ತೆಯಾಗಿದ್ದು ಅದನ್ನು ೧೪ನೇ ಪಾಯಿಂಟ್ ಎಂದು ಹೆಸರಿಸಲಾಗಿದೆ.

೧೩ನೇ ಜಾಗದಲ್ಲಿ ಕುತೂಹಲ: ಭಾರೀ ಕುತೂಹಲ ಕೆರಳಿಸಿರುವ ೧೩ನೇ ಪಾಯಿಂಟ್‌ನಲ್ಲಿ ಆ.೭ರಂದು ಉತ್ಖನನ ನಡೆಯಲಿದೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿಗೆ ತೆರಳುವ ರಸ್ತೆಯಲ್ಲಿ ಗುರುತಿಸಲಾಗಿರುವ ಈ ಜಾಗಕ್ಕೆ ಈಗಾಗಲೇ ಎಸ್‌ಐಟಿ ತಂಡದಲ್ಲಿರುವ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಅಣೆಕಟ್ಟು ಮತ್ತು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇರುವುದರಿಂದ ಈ ಸ್ಥಳದಲ್ಲಿ ಉತ್ಖನನ ನಡೆಸುವ ವೇಳೆ ಕ್ರಮ ಕೈಗೊಳ್ಳಬೇಕಾದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಕಚೇರಿಯಲ್ಲಿ ಆ.೬ರಂದು ಸಂಜೆ ನೀರಾವರಿ ಇಲಾಖೆ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆ.೬ರಂದು ೧೩ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಸಬೇಕಾಗಿತ್ತಾದರೂ ಸಾಕ್ಷಿ ದೂರುದಾರ ಇದುವರೆಗೆ ಗುರುತಿಸದ ಇನ್ನೊಂದು ಸ್ಥಳದಲ್ಲಿ ಅಗೆಯಲು ಆಸಕ್ತಿ ತೋರಿಸಿದ್ದರಿಂದ ಹೊಸ ಜಾಗದಲ್ಲಿ ಶೋಧ ನಡೆಸಲಾಗಿದೆ. ಅಲ್ಲಿ ಯಾವುದೇ ಕುರುಹೂ ಪತ್ತೆಯಾಗಿಲ್ಲ.

ಯುನೈಟೆಡ್ ಮೀಡಿಯಾದ ಅಭಿಷೇಕ್, ಕುಡ್ಲ ರಾಂಪೇಜ್‌ನ ಅಜಯ್, ಸಹನ್, ಸಂಚಾರಿಯ ಸಂತೋಷ್, ಸುವರ್ಣ ವಾಹಿನಿಯ ಹರೀಶ್, ನವೀನ್‌ಗೆ ಹಲ್ಲೆ

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸಮೀಪದ ಪಾಂಗಾಳ ರಸ್ತೆಯ ಬಳಿ ಮೂವರು ಯೂಟ್ಯೂಬರ್ಸ್‌ಗಳಿಗೆ ಆ. ೬ರಂದು ಸಂಜೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಯುನೈಟೆಡ್ ಮೀಡಿಯಾದ ಅಭಿಷೇಕ್, ಕುಡ್ಲ ರಾಂಪೇಜ್‌ನ ಅಜೇಯ್ ಅಂಚನ್, ಸಹನ್ ಮತ್ತು ಸಂಚಾರಿ ಸ್ಟುಡಿಯೋದ ಸಂತೋಷ್‌ಗೆ ಹಲ್ಲೆ ನಡೆಸಲಾಗಿದೆ. ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಗಾಯಗೊಂಡವರನ್ನು ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ಧರ್ಮಸ್ಥಳ ಠಾಣಾ ಮುಂಭಾಗದಲ್ಲಿ ಜನರು ಜಮಾಯಿಸಿದ್ದು, ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹೆಚ್ಚುವರಿ ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದ್ದು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.

ಘಟನೆಯ ಬೆನ್ನಲ್ಲೆಯೇ ಈ ರೀತಿ ಹಲ್ಲೆ ನಡೆಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಪ್ರಜಾಪ್ರಭುತ್ವ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರು ಫೇಸ್ಬುಕ್ ಲೈವ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳ ಠಾಣಾ ಎದುರು ಜಮಾಯಿಸಿದ ಜನರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಎಸ್‌ಪಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ರಾತ್ರಿ ವೇಳೆ ಉಜಿರೆಯ ಬೆನಕ ಆಸ್ಪತ್ರೆಯ ಮುಂಭಾಗ ಸುವರ್ಣ ನ್ಯೂಸ್ ವರದಿಗಾರರಾದ ಹರೀಶ್ ಮತ್ತು ನವೀನ್ ಎಂಬವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ. ನಾಲ್ವರು ಯೂಟ್ಯೂಬರ್‍ಸ್‌ಗೆ ಧರ್ಮಸ್ಥಳದ ಭಕ್ತರು ಮತ್ತು ಸುವರ್ಣ ನ್ಯೂಸ್ ಚಾನೆಲ್ ವರದಿಗಾರರಿಗೆ ತಿಮರೋಡಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಉಜಿರೆಯ ಬೆನಕ ಆಸ್ಪತ್ರೆಯ ಮುಂಭಾಗ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಮಾಧ್ಯಮದವರಿಗೆ ಹಲ್ಲೆ-ಕೇಸು: ಗುಂಪು ಸೇರಿದವರ ವಿರುದ್ಧವೂ ಪ್ರಕರಣ ದಾಖಲು

ಧರ್ಮಸ್ಥಳದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಐಜಿ ಅಮಿತ್ ಸಿಂಗ್, ಎಸ್‌ಪಿ ಡಾ. ಅರುಣ್, ಅಡಿಷನಲ್ ಎಸ್‌ಪಿ ರಾಜೇಂದ್ರ, ಡಿವೈಎಸ್‌ಪಿ ವಿಜಯಪ್ರಸಾದ್ ರಾತ್ರಿ ಧರ್ಮಸ್ಥಳ ಠಾಣೆಗೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದೆ. ಸೇರಿದ್ದ ಜನರನ್ನು ಚದುರಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಮತ್ತು ಅವರ ಎರಡು ವಾಹನಗಳಿಗೆ ಹಾನಿ ನಡೆಸಿದ ಬಗ್ಗೆ ಹಾಗೂ ಖಾಸಗಿ ನ್ಯೂಸ್ ಚಾನೆಲ್ ನ ವರದಿಗಾರನ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಧರ್ಮಸ್ಥಳ ಪಾಂಗಾಳದಲ್ಲಿ ಲಾಠಿ ಚಾರ್ಜ್ ನಡೆದ ಸ್ಥಳದಲ್ಲಿ, ಧರ್ಮಸ್ಥಳ ಪೊಲೀಸ್ ಠಾಣಾ ಆವರಣದಲ್ಲಿ ಮತ್ತು ಆಸ್ಪತ್ರೆಯ ಮುಂದೆ ಕಾನೂನುಬಾಹಿರ ಗುಂಪು ಸೇರಿರುವ ಬಗ್ಗೆ ಪ್ರಕರಣ ದಾಖಲಿಸಲಾಗುತ್ತಿದೆ.

ಹಲ್ಲೆಗೊಳಗಾದವರು ಚಿಕಿತ್ಸೆಗಾಗಿ ದಾಖಲಾಗಿರುವ ಆಸ್ಪತ್ರೆಯ ವೈದ್ಯರೊಂದಿಗೆ ವಿಚಾರಿಸಲಾಗಿದ್ದು ಪ್ರಾಥಮಿಕ ಆರೋಗ್ಯ ತಪಾಸಣೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿರುವುದು ಕಂಡುಬಂದಿಲ್ಲ ಎಂದು ಮೌಖಿಕವಾಗಿ ತಿಳಿಸಿರುತ್ತಾರೆ. ಈ ದಿನ ನಡೆದ ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಪ್ರತಿಕ್ರಿಯೆಗೆ ಲಭ್ಯರಾಗದ ಎ.ಸಿ. ಸ್ಟೆಲ್ಲಾ ವರ್ಗೀಸ್: ಬೆಳ್ತಂಗಡಿ ಹಿತರಕ್ಷಣಾ ವೇದಿಕೆಯವರು ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ಕೇಳಲು ಸಹಾಯಕ ಆಯುಕ್ತೆ ಕು.ಸ್ಟೆಲ್ಲಾ ವರ್ಗೀಸ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಿಲ್ಲ.

ಧರ್ಮಸ್ಥಳ ಗ್ರಾ.ಪಂ. ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದವರ ವಿವರ ಕೇಳಿದ ಎಸ್‌ಐಟಿ: ಹಲವಾರು ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಲಾಗಿದೆ ಎಂಬ ದೂರಿನ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ೧೯೯೫ರಿಂದ ೨೦೧೪ರವರಗೆ ಧರ್ಮಸ್ಥಳ ಗ್ರಾ.ಪಂ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿವರಗಳನ್ನು ಗ್ರಾ.ಪಂ. ಕಚೇರಿಯಿಂದ ಕೇಳಿದ್ದಾರೆ. ಲಭ್ಯ ಮಾಹಿತಿಯನ್ನು ಆ. ೬ರಂದು ಗ್ರಾ.ಪಂ. ಕಚೇರಿಯಿಂದ ಎಸ್‌ಐಟಿಯಲ್ಲಿರುವ ಇನ್ಸ್‌ಪೆಕ್ಟರ್ ಸಂಪತ್ ಅವರಿಗೆ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾಗಿರುವವರ ಮೃತದೇಹಗಳನ್ನು ಕಾನೂನು ಮೀರಿ ಹೂತು ಹಾಕಿರುವ ಘಟನೆಯಲ್ಲಿ ಪೊಲೀಸ್ ಇಲಾಖೆಯವರೂ ಶಾಮೀಲಾಗಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಧರ್ಮಸ್ಥಳ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿವರ ಕಲೆ ಹಾಕಿದ್ದಾರೆ.

ಉಜಿರೆಯ ಖಾಸಗಿ ವ್ಯಕ್ತಿ ಮನೆಯಲ್ಲಿ ದೂರುದಾರ: ಎಸ್‌ಐಟಿಗೆ ಶ್ಯಾಮ ಸುಂದರ ಎಂಬವರಿಂದ ದೂರು ಸಲ್ಲಿಕೆ: ಧರ್ಮಸ್ಥಳ ವ್ಯಾಪ್ತಿಯಲ್ಲಿ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಿದ ಪ್ರಕರಣದಲ್ಲಿ ಅನಾಮಿಕ ದೂರುದಾರ ಪೊಲೀಸರ ವಶದಲ್ಲೇ ಇರಬೇಕು. ನೇತ್ರಾವತಿಯಲ್ಲಿ ತನಿಖಾ ಕಾರ್ಯಾಚರಣೆ ಬಳಿಕ ಆತ ವಕೀಲರೊಂದಿಗೆ ಹೋಗಿ ಬರುತ್ತಿರುವುದಕ್ಕೆ ನಡ ಗ್ರಾಮದ ಶ್ಯಾಮ ಸುಂದರ ಎಂಬವರು ಆಕ್ಷೇಪ ತೆಗೆದಿದ್ದು, ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದ್ದಾರೆ. ಕೆಲ ದಿನಗಳ ಹಿಂದೆ ಅನಾಮಿಕ ದೂರುದಾರ ವ್ಯಕ್ತಿ ಉಜಿರೆಯ ಖಾಸಗಿ ವ್ಯಕ್ತಿಯ ನಿವಾಸದಲ್ಲಿ ಉಳಿದುಕೊಂಡಿದ್ದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದರ ಬಗ್ಗೆ ಶ್ಯಾಮ ಸುಂದರ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದು, ತನಿಖೆಯ ಪಾರದರ್ಶಕತೆ ಉಳಿಸಿಕೊಳ್ಳುವ ಉದ್ದೇಶದಿಂದ ದೂರುದಾರ ತನಿಖಾತಂಡದ ಸುಪರ್ದಿಯಲ್ಲೇ ಇರಬೇಕು ಎಂದು ಒತ್ತಾಯಿಸಲಾಗಿದೆ.

ಅಪರಿಚಿತರ ಸೂಚನೆಯಂತೆ ಎ.ಸಿ. ಕಾರ್ಯ?: ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹತ್ಯೆಗಳು ನಡೆದಿವೆ ಎಂದು ಆರೋಪಿಸಿರುವುದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಪುತ್ತೂರಿನ ಸಹಾಯಕ ಆಯುಕ್ತರು ದೂರುದಾರ ಗುರುತಿಸಿದ ೧೩ ಪಾಯಿಂಟ್‌ಗಳ ಜತೆಗೆ ಬೇರೆ ಕಡೆಯೂ ಆತನನ್ನು ಅನುಸರಿಸಿದ ಹಿಂದಿನ ಉದ್ದೇಶ ಏನು? ಎಸ್‌ಐಟಿ ಮತ್ತು ಸಹಾಯಕ ಆಯುಕ್ತರ ಮಧ್ಯೆ ಭಿನ್ನಾಭಿಪ್ರಾಯವೇಕೆ ಎಂಬ ಸರಣಿ ಪ್ರಶ್ನೆಗಳನ್ನು ಬೆಳ್ತಂಗಡಿ ಹಿತರಕ್ಷಣಾ ಸಮಿತಿ ಮುಂದಿಟ್ಟಿದೆ. ಬೆಳ್ತಂಗಡಿ ಹಿತರಕ್ಷಣಾ ಸಮಿತಿ ಯಲ್ಲಿರುವ ವಕೀಲರಾದ ಕೇಶವ ಗೌಡ, ಚಿದಾನಂದ ಪಿ ಮತ್ತು ನವೀನ್ ಬಿ.ಕೆ. ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಸಹಾಯಕ ಆಯುಕ್ತರ ನಡೆಯನ್ನು ಪ್ರಶ್ನಿಸಲಾಗಿದ್ದು, ಅಪರಿಚಿತರ ಸೂಚನೆಗಳ ಪ್ರಕಾರ ಅವರು ಕೆಲಸ ಮಾಡುತ್ತಿದ್ದಾರಾ ಎಂದು ಕಟುವಾಗಿ ಪ್ರಶ್ನಿಸಲಾಗಿದೆ.

ಅನಾಮಿಕ ದೂರುದಾರ ವ್ಯಕ್ತಿಯೋ ಅಥವಾ ಆತನ ಹಿಂದೆ ತಂಡವೊಂದು ಕೆಲಸ ಮಾಡುತ್ತಿದೆಯೋ? ದೂರುದಾರ ಧರ್ಮಸ್ಥಳ ವ್ಯಾಪ್ತಿಯಲ್ಲಿ ೧೩ ಸ್ಥಳಗಳನ್ನು ಗುರುತಿಸಿದ್ದ. ಆದರೆ, ಪಾಯಿಂಟ್ ಸಂಖ್ಯೆ ೧೦ರ ನಂತರ ಪಾಯಿಂಟ್ ೧೧ರ ಬದಲಿಗೆ ತನಿಖಾ ತಂಡವನ್ನು ಏಕೆ ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು? ಇದನ್ನು ಪ್ರೇರೇಪಿಸಿದ್ದು ಯಾರು? ದೂರುದಾರ ಓರ್ವ ವ್ಯಕ್ತಿ ಮಾತ್ರ ಅಲ್ಲ. ಅವನದ್ದು ತಂಡವೇ ಇದೆ ಎಂದು ಹೇಳಲು ನಮ್ಮ ಬಳಿ ಪುರಾವೆಗಳಿವೆ. ಆತನೊಂದಿಗೆ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ತಂಗಪ್ಪನ್, ಸಮೀರ್ ಇದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾವು ನೆಲದ ಕಾನೂನನ್ನು ಸಾಕಷ್ಟು ಗೌರವಿಸುತ್ತೇವೆ. ಎಸ್‌ಐಟಿ ರಚನೆಯನ್ನು ಸ್ವಾಗತಿಸಿದ್ದೇವೆ. ಈಗ ಮತಾಂತರ ಮಾಫಿಯಾದ ಗುಪ್ತ ಕಾರ್ಯಸೂಚಿ ಮತ್ತು ನಿರ್ದೇಶನಗಳು ಸ್ವೀಕಾರಾರ್ಹವಲ್ಲ. ನಮ್ಮ ಸಂಸ್ಕೃತಿ ಮತ್ತು ನಮ್ಮ ದೇವಾಲಯಗಳ ರಕ್ಷಣೆಗೆ ಹೇಗೆ ಹೋರಾಡಬೇಕು ಎಂದು ಗೊತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಧರ್ಮಸ್ಥಳ ಕೇವಲ ಹೆಸರಲ್ಲ. ಅದು ನಮ್ಮ ಧರ್ಮದಷ್ಟೇ ಪವಿತ್ರ. ನಾವು ಯಾವುದೇ ಪಿತೂರಿಗೆ ಮಣಿಯುವುದಿಲ್ಲ. ಸತ್ಯವನ್ನು ಕಂಡುಹಿಡಿಯಲು ದೂರುದಾರ ಮತ್ತವರ ಸಹಚರರನ್ನು ತಕ್ಷಣವೇ ಬಂಧಿಸಬೇಕು. ನಮ್ಮ ನಂಬಿಕೆಗಳ ಮೇಲೆ ದಾಳಿ ಮಾಡಿದ ಯಾವುದೇ ವ್ಯಕ್ತಿಗಳನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ ಎಂದು ವಕೀಲರು ಅಸಮಾಧಾನ ಹೊರಹಾಕಿದ್ದಾರೆ.

ವೈಯಕ್ತಿಕ ಕಾರ್ಯಸೂಚಿ ಹೊಂದಿರುವ ವ್ಯಕ್ತಿಯಿಂದ ಪ್ರಭಾವಿತವಾಗದೆ ತಮ್ಮದೇ ನಿರ್ಧಾರವನ್ನು ಮುಂದುವರಿಸಲು ಎಸ್‌ಐಟಿಯನ್ನು ಒತ್ತಾಯಿಸುತ್ತೇವೆ. ಈ ಬಗ್ಗೆ ನಾವು ಎಸ್‌ಐಟಿಗೆ ಅಧಿಕೃತ ದೂರು ಸಲ್ಲಿಸುತ್ತೇವೆ. ಈ ಬಗ್ಗೆ ತನಿಖೆ ಮಾಡಲು ಎಸ್‌ಐಟಿ ರಚನೆ ಮಾಡಬೇಕು ಎಂದೂ ಮುಖ್ಯಮಂತ್ರಿಗಳ ಬಳಿ ಕೇಳಿಕೊಳ್ಳುತ್ತೇವೆ. ಧರ್ಮಸ್ಥಳವು ಶತಮಾನದಿಂದ ಗಳಿಸಿದ್ದ ಪವಿತ್ರತೆ, ಹಿಂದೂ ನಂಬಿಕೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಥಾಪಿತ ಹಿತಾಸಕ್ತಿಗಳು ಸುಳ್ಳು ಪ್ರಚಾರದ ಮೂಲಕ ಕಳಂಕಿತಗೊಳಿಸಿವೆ. ಇದನ್ನು ಯಾರು ಸರಿದೂಗಿಸುತ್ತಾರೆ ಎಂದು ವಕೀಲರು ಬೇಸರ ಹೊರಹಾಕಿದ್ದಾರೆ.

ಎಡಪಂಥೀಯ ಕಾರ್ಯಸೂಚಿಯ ಮಾಧ್ಯಮ ಸಂಸ್ಥೆಗಳು, ಕೆಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಟ್ರೋಲರ್‌ಗಳು ಸುಳ್ಳು ಆರೋಪಗಳನ್ನು ಮಾಡಲಷ್ಟೇ ಇದ್ದಾರೆ. ಬಹುಪಾಲು ಸಮಾಜ ಮೌನದಿಂದಿದೆ ಎಂದ ಮಾತ್ರಕ್ಕೆ ಸ್ಥಾಪಿತ ಹಿತಾಸಕ್ತಿಗಳಿಗೆ ಬೆಂಬಲ ಇದೆ ಎಂದಲ್ಲ. ಸತ್ಯ ಗೆಲ್ಲಲಿ. ಇದು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧದ ೧೦೦% ಪಿತೂರಿ ಎಂದು ಸಾಬೀತಾಗಲಿದೆ. ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುವಂತೆ ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇವೆ.

ಧರ್ಮಸ್ಥಳದ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾದ ಎ.ಸಿ.
ಸೊತ್ತು ಜಪ್ತಿ ಸಾಧ್ಯವಾಗದೆ ವಾಪಸಾದ ಕೋರ್ಟ್ ಸಿಬ್ಬಂದಿಗಳು ಬೆಳ್ತಂಗಡಿ: ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿಗೆ ಸಂಬಂಧಿಸಿದ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಭೂಸ್ವಾಧೀನ ಅಧಿಕಾರಿಯಾದ ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ಚರ ಸೊತ್ತುಗಳು ಹಾಗೂ ವಾಹನ ಜಪ್ತಿಗೆ ನ್ಯಾಯಾಲಯ ಆದೇಶ ಮಾಡಿರುವ ಪ್ರಕರಣದಲ್ಲಿ ನ್ಯಾಯಾಲಯದ ನಿಯೋಜಿತ ಅಧಿಕಾರಿಗಳು ಜು.೩೧ರಂದು ಪುತ್ತೂರಿನಲ್ಲಿರುವ ಎ.ಸಿ. ಕಚೇರಿಗೆ ಆಗಮಿಸಿದ್ದರಾದರೂ ಉಪವಿಭಾಗದ ದಂಡಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತರನ್ನು ಧರ್ಮಸ್ಥಳ ಪ್ರಕರಣದಲ್ಲಿ ತನಿಖಾ ಮಹಜರು ನಡೆಸಲು ಎಸ್.ಐ.ಟಿ ನೀಡಿರುವ ಕೋರಿಕೆ ಪತ್ರವನ್ನು ಕಚೇರಿ ಅಧಿಕಾರಿಗಳು ಕೋರ್ಟ್ ಸಿಬ್ಬಂದಿಗೆ ನೀಡಿ ಎ.ಸಿ. ಅವರು ಧರ್ಮಸ್ಥಳದಲ್ಲಿ ಕರ್ತವ್ಯ ನಿರತರಾಗಿರುವ ಮಾಹಿತಿ ನೀಡಿದ ಬಳಿಕ ಕೋರ್ಟ್ ಸಿಬ್ಬಂದಿಗಳು ಹಿಂದಿರುಗಿದ ಘಟನೆ ನಡೆದಿದೆ.
ಕೋರ್ಟ್ ಸಿಬ್ಬಂದಿ ವಾಪಸ್: ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿನ ಮೂರನೇ ಮಹಡಿಯಲ್ಲಿರುವ ಸಹಾಯಕ ಆಯುಕ್ತರ ಕಛೇರಿಗೆ ಬೆಳಿಗ್ಗೆ ೧೦.೩೦ರ ಸುಮಾರಿಗೆ ನ್ಯಾಯಾಲಯದಿಂದ ಸಂಜೀವ ಹಾಗೂ ಗಣೇಶ್‌ರವರು ಆಗಮಿಸಿದ್ದರು. ಈ ಸಂದರ್ಭ ಕಛೇರಿ ವ್ಯವಸ್ಥಾಪಕರಿಲ್ಲ ಎಂದು ಅವರಿಗೆ ತಿಳಿಸಲಾಯಿತು. ಇನ್ನೇನು ಅಧಿಕಾರಿಗಳು ಆಗಮಿಸಬಹುದು ಎಂದು ಕೋರ್ಟ್ ಸಿಬ್ಬಂದಿ ಕೆಲ ಹೊತ್ತು ಕಛೇರಿ ಹೊರಭಾಗದಲ್ಲಿ ಕುಳಿತರು. ಆದರೆ ಅರ್ಧ ತಾಸು ಕಳೆದರೂ ಸೊತ್ತು ಜಪ್ತಿಗಾಗಿ ೨ನೇ ದಿನವೂ ಎಸಿ ಕಚೇರಿಗೆ ಆಗಮಿಸಿದ ಕೋರ್ಟ್ ಸಿಬ್ಬಂದಿಗಳಿಗೆ ವ್ಯವಸ್ಥಾಪಕರು ಲಭ್ಯರಾಗಲಿಲ್ಲ. ವಿಚಾರಿಸಿದಾಗ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ತಿಳಿಸಲಾಯಿತು. ಯಾವ ನ್ಯಾಯಾಲಯ, ನಾವು ನ್ಯಾಯಾಲಯದಿಂದಲೇ ಬಂದಿರುವುದು ಎಂದು ಕೋರ್ಟ್ ಸಿಬ್ಬಂದಿ ತಿಳಿಸಿದ ಬಳಿಕ ತಾಲೂಕು ಆಡಳಿತ ಸೌಧದಲ್ಲಿರುವ ಸರ್ಕಾರಿ ವಕೀಲರ ಕಛೇರಿಗೆ ಎ.ಸಿ. ಕಚೇರಿ ವ್ಯವಸ್ಥಾಪಕ ನಾಗರಾಜ್ ಆಗಮಿಸಿದರು. ಬಳಿಕ ಉಪವಿಭಾಗೀಯ ದಂಡಾಧಿಕಾರಿಯೂ ಆಗಿರುವ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ಮಹಜರು ನಡೆಸಿಕೊಡಲು ಎಸ್‌ಐಟಿ ನೀಡಿದ್ದ ಕೋರಿಕೆ ಪತ್ರವನ್ನು ನೀಡಿ ಎಸಿಯವರು ಧರ್ಮಸ್ಥಳಕ್ಕೆ ತೆರಳಿರುವ ವಿಚಾರವನ್ನು ತಿಳಿಸಲಾಯಿತು. ಬಳಿಕ ಕೋರ್ಟ್ ಸಿಬ್ಬಂದಿ ಅಲ್ಲಿಂದ ತೆರಳಿದರು. ಭೂ ಮಾಲಕರ ಪರವಾಗಿ ಸಂತೋಷ್, ವಕೀಲರಾದ ಶಿವಪ್ರಸಾದ್ ಇ. ಮತ್ತು ಗೌರೀಶ್ ಕಂಪ ಈ ವೇಳೆ ಉಪಸ್ಥಿತರಿದ್ದರು.

ಘಟನೆಯ ಹಿನ್ನೆಲೆ: ೨೦೧೨ನೇ ಸಾಲಿನಲ್ಲಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ೮೮ರ ರಸ್ತೆ ಅಗಲೀಕರಣಕ್ಕಾಗಿ ಕಬಕ ಪೇಟೆಯಲ್ಲಿ ಕರ್ನಾಟಕ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಮಾಡಿದ್ದ ಆದೇಶವನ್ನು ಪಾಲಿಸದ ಕಾರಣಕ್ಕಾಗಿ ಭೂಸ್ವಾಧೀನ ಅಧಿಕಾರಿಯಾಗಿಡುವ ಸಹಾಯಕ ಕಮಿಷನರ್ ಕಚೇರಿಯ ಚರ ಸೊತ್ತುಗಳು ಮತ್ತು ವಾಹನ ಜಪ್ತಿಗೆ ಆದೇಶ ನೀಡಲಾಗಿದೆ. ರಸ್ತೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿ ಜಾಗದ ಮಾಲಕರಾದ ಪರ್ಲಡ್ಕ ನಿವಾಸಿ ಶಿವಶಂಕರ ಭಟ್‌ರವರಿಗೆ ಭೂಸ್ವಾಧೀನಾಧಿಕಾರಿಯವರು ನ್ಯಾಯಾಲಯದ ಆದೇಶದಂತೆ ರೂ.೧೪,೯೩,೪೩೮.೦೦ ಪಾವತಿಸಬೇಕಾಗಿತ್ತು. ಆದರೆ ಅದನ್ನು ಪಾವತಿಸದ ಕಾರಣ ಸದ್ರಿ ಭೂಮಾಲಕರು ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಅಮಲ್ದಾರಿ ಸಂಖ್ಯೆ ೬/೨೦೨೪ರಂತೆ ಅರ್ಜಿ ಸಲ್ಲಿಸಿದ್ದರು. ಭೂಸ್ವಾಧೀನ ಪ್ರಾಧಿಕಾರವಾದ ಸಹಾಯಕ ಆಯುಕ್ತರು ಪುತ್ತೂರುರವರಿಗೆ ಸಾಕಷ್ಟು ಸಮಯಾವಕಾಶ ನೀಡಿದರೂ ಪರಿಹಾರ ಮೊತ್ತ ಪಾವತಿಸದ ಕಾರಣ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯ ಸಹಾಯಕ ಆಯುಕ್ತರ ಕಚೇರಿಯ ಚರ ಸ್ವತ್ತುಗಳಾದ ಕಂಪ್ಯೂಟರ್‌ಗಳು, ಟೇಬಲ್, ಕುರ್ಚಿಗಳು ಹಾಗೂ ಸಹಾಯಕ ಆಯುಕ್ತರ ವಾಹನವನ್ನು ಜಪ್ತಿ ಮಾಡಲು ಆದೇಶ ಹೊರಡಿಸಲಾಗಿದೆ. ಅದರಂತೆ ನ್ಯಾಯಾಲಯದ ಅಮೀನರಾಗಿರುವ ಗಣೇಶ್ ಹಾಗೂ ಸಂಜೀವರವರು ನ್ಯಾಯಾಲಯದ ಆದೇಶದಂತೆ ಸದ್ರಿ ಸೊತ್ತುಗಳ ಜಪ್ತಿಗೆ ಕ್ರಮವಹಿಸಿ, ಜು.೩೦ರಂದು ಸಹಾಯಕ ಕಮಿಷನರ್ ಅವರ ಕಚೇರಿಗೆ ಬಂದಾಗ ಸಹಾಯಕ ಕಮಿಷನರ್ ಅವರು ಧರ್ಮಸ್ಥಳಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಜಪ್ತಿ ಆದೇಶ ಜಾರಿ ಮಾಡದೆ ಜು.೩೧ಕ್ಕೆ ಮುಂದೂಡಲಾಗಿತ್ತು.

ಅಪ್ರಾಪ್ತೆಯ ಮೃತದೇಹವನ್ನು ಕಾನೂನು ಬಾಹಿರವಾಗಿ ಹೂತು ಹಾಕಿದ್ದಾರೆ
ವಿಶೇಷ ತನಿಖಾ ತಂಡಕ್ಕೆ ಇಚಿಲಂಪಾಡಿಯ ಜಯಂತ್ ಟಿ. ದೂರು ಬೆಳ್ತಂಗಡಿ: ಅಪ್ರಾಪ್ತ ಹೆಣ್ಣು ಮಗಳ ಮೃತದೇಹವನ್ನು ಪೊಲೀಸ್ ಅಧಿಕಾರಿ ಕಾನೂನು ಬಾಹಿರವಾಗಿ ಹೂತು ಹಾಕಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಕಲಮೆತಡ್ಕ ನಿವಾಸಿ ಜಯಂತ್ ಟಿ. ಅವರು ಆ.೪ರಂದು ವಿಶೇಷ ತನಿಖಾ ತಂಡಕ್ಕೆ ದೂರು ಸಲ್ಲಿಸಿದ್ದಾರೆ.
`ನಾನು ಮೇಲಿನ ವಿಳಾಸದಲ್ಲಿ ವಾಸವಾಗಿದ್ದು ಸಾಮಾಜಿಕ ಹೋರಾಟಗಾರನಾಗಿರುತ್ತೇನೆ. ಈ ಮೂಲಕ ತಮ್ಮ ಗಮನಕ್ಕೆ ಒಂದು ಗಂಭೀರ ಮಾನವ ಹಕ್ಕು ಉಲ್ಲಂಘನೆಯ ವಿಷಯವನ್ನು ತರಲು ಇಚ್ಛಿಸುತ್ತೇನೆ. ೨೦೦೨ ಮತ್ತು ೨೦೦೩ರ ಅವಧಿಯಲ್ಲಿ ಸುಮಾರು ೧೩ರಿಂದ ೧೫ ವರ್ಷದಾಗಿದ್ದ ಹೆಣ್ಣು ಮಗುವಿನ ಮೃತದೇಹ ರಾಜ್ಯ ಹೆದ್ದಾರಿ ೩೭ರ ರಸ್ತೆ ಬದಿಯ ಅರಣ್ಯದಲ್ಲಿ ಎಸೆದು ಹೋಗಿರುವ ವಿಷಯವನ್ನು ಸ್ಥಳೀಯ ನಿವಾಸಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿರುವ ಪೊಲೀಸ್ ಅಧಿಕಾರಿಯವರಿಗೆ ಮಾಹಿತಿಯನ್ನು ನೀಡಿರುತ್ತಾರೆ.
ಈ ಮಾಹಿತಿ ಪಡೆದು ಒಂದು ವಾರದ ನಂತರ ಆಟೋದಲ್ಲಿ ಸುಮಾರು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿ ಫೋಟೋ ತೆಗೆದುಕೊಂಡಿದ್ದಾರೆ. ನಂತರ ಸ್ಥಳೀಯವರಿಗೆ ಇದು ಸುಮಾರು ೩೫ರಿಂದ ೪೦ ವರ್ಷದ ಹೆಂಗಸಾಗಿದ್ದು ಜೀವನದಲ್ಲಿ ಜಿಗುಪ್ಪೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧ರಿಂದ ೨ ಫೀಟ್ ಆಳದ ಹೊಂಡ ತೋಡಿ ಹೆಣ್ಣು ಮಗಳ ಶವವನ್ನು ಹೂತು ಹಾಕಿದ್ದಾರೆ.
ಮೃತಪಟ್ಟ ಹೆಣ್ಣು ಮಗಳ ಪ್ರಾಯ ಸುಮಾರು ೧೩ರಿಂದ ೧೫ ವರ್ಷ ಆಗಿರುತ್ತದೆ. ಮೃತಪಟ್ಟ ಹೆಣ್ಣು ಮಗಳ ಮೃತದೇಹ ಸಿಕ್ಕಿದ ತಕ್ಷಣ ಕಾನೂನು ಚೌಕಟ್ಟಿನ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಅರಣ್ಯ ಪ್ರದೇಶದಲ್ಲಿ ಇದ್ದ ಮೃತದೇಹದ ಮಾಹಿತಿಯನ್ನು ಸ್ಥಳೀಯರು ನೀಡಿದ ತಕ್ಷಣದಲ್ಲಿ ಸ್ಥಳಕ್ಕೆ ಭೇಟಿ ನೀಡದೆ ಒಂದು ವಾರದ ನಂತರ ಬಂದು ಮೃತದೇಹ ಸಿಕ್ಕಿದ ಸ್ಥಳದಲ್ಲಿ ಮಣ್ಣು ಮಾಡಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಿಲ್ಲ. ಮೃತದೇಹ ಸಿಕ್ಕಿದ ಸ್ಥಳದ ಸ್ಥಳ ಮಹಜರನ್ನು ಮಾಡಿರುವುದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿರುವುದಿಲ್ಲ. ಅರಣ್ಯದಲ್ಲಿ ದೊರೆತ ಮೃತ ದೇಹದ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರಿಗೆ ಮಾಹಿತಿಯನ್ನು ನೀಡಿರುವುದಿಲ್ಲ.
ಇವರು ಮಾಡಿರುವಂತಹ ಘೋರ ಕೃತ್ಯದ ಸಾಕ್ಷಿಯಾಗಿರುತ್ತೇನೆ. ಅಂದಿನ ಸಮಯದಲ್ಲಿ ನಾನು ಭಯ ಮತ್ತು ಆಘಾತದಿಂದಾಗಿ ಈ ವಿಷಯವನ್ನು ಯಾರಿಗೂ ತಿಳಿಸಲು ಧೈರ್ಯ ಮಾಡಿರುವುದಿಲ್ಲ. ಇಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ರಚಿಸಿರುವ ಎಸ್‌ಐಟಿ ತಂಡದ ಮೇಲೆ ನಂಬಿಕೆಯಿಂದ ದೂರನ್ನು ನೀಡುತ್ತಿzನೆ.
ಪ್ರಕರಣದ ತನಿಖಾ ಸಮಯದಲ್ಲಿ ಇದಕ್ಕೆ ಸಾಕ್ಷಿಯಾಗಿರುವ ಜೀವಂತ ವ್ಯಕ್ತಿಗಳನ್ನು ಅವಶ್ಯಕತೆ ಇದ್ದಲ್ಲಿ ಹಾಜರುಪಡಿಸುತ್ತೇವೆ.
ಆದ್ದರಿಂದ ತಾವುಗಳು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ’ ಎಂದು ದೂರಿನಲ್ಲಿ ಜಯಂತ್ ಟಿ. ತಿಳಿಸಿದ್ದಾರೆ.

ಎಸ್‌ಐಟಿಗೆ ಹಸ್ತಾಂತರ ಜಯಂತ್ ಟಿ. ಅವರು ನೀಡಿರುವ ದೂರು ಸ್ವೀಕರಿಸಿರುವ ಎಸ್‌ಐಟಿ(ಧರ್ಮಸ್ಥಳ ಪ್ರಕರಣ)ಯ ಪೊಲೀಸ್ ಅಧೀಕ್ಷಕರು `ತಾವು ನೀಡಿದ ದೂರನ್ನು ಪರಿಶೀಲಿಸಿದ್ದು ಈ ದೂರನ್ನು ನೀವು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕ್ರಮ ಜರುಗಿಸುವ ಕುರಿತು ಸಲ್ಲಿಸುವುದು. ಸದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ನಿರ್ದೇಶಕರು ಮತ್ತು ಪೊಲೀಸು ಮಹಾನಿರೀಕ್ಷಕರ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿಂಬರಹ ನೀಡಿದ್ದಾರೆ. ಬಳಿಕ ಜಯಂತ್ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ಪೊಲೀಸ್ ಮಹಾ ನಿರ್ದೇಶಕರು ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದಾರೆ.

ಶವ ಪತ್ತೆಗೆ ರಾಡಾರ್ ಬಳಸಿ: ಅನನ್ಯಾ ಭಟ್ ಪರ ವಕೀಲ ಮಂಜುನಾಥ್ ಮನವಿ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಅನುಮಾನಾಸ್ಪದವಾಗಿ ಹೂಳಲಾಗಿದೆ ಎಂದು ಅನಾಮಿಕ ವ್ಯಕ್ತಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದವರು ಶವಗಳ ಪತ್ತೆಗೆ ರಾಡಾರ್ ಬಳಸಬೇಕು ಎಂದು ವಕೀಲ ಮಂಜುನಾಥ್ ಮನವಿ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ೨೨ ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್ ಪರ ವಕೀಲರಾಗಿರುವ ಮಂಜುನಾಥ್‌ರವರು ಶವಗಳ ಪತ್ತೆ ಕಾರ್ಯಕ್ಕೆ ಅನುಕೂಲವಾಗಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ಸ್ಥಳ ತನಿಖೆ ನಡೆಸುವಂತೆ ಎಸ್‌ಐಟಿಯನ್ನು ಕೋರಿದ್ದಾರೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯ ಈ ಪ್ರಕರಣಗಳಲ್ಲಿ ಸಾಕ್ಷಿಯೇ ಹೇಳಿರುವಂತೆ ಧರ್ಮಸ್ಥಳವನ್ನು ಆತ ೨೦೧೪ರಲ್ಲೇ ತೊರೆದಿದ್ದಾನೆ. ಹೆಚ್ಚು ಮಳೆ ಬೀಳುವ ಇಲ್ಲಿ ಸುಮಾರು ೧೧ ವರ್ಷಗಳಲ್ಲಿ ಅರಣ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟುಕೊಂಡ ಗುರುತಿನಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈಗಾಗಲೇ ಜು.೨೯ರಂದು ಮನವಿ ಮಾಡಿಕೊಂಡಂತೆ ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ಈಗಾಗಲೇ ಅಗೆಯಲಾಗಿರುವ ಸ್ಥಳ, ಸುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸಲು ಕೇಳಿಕೊಳ್ಳುತ್ತಿzವೆ. ಹುಲ್ಲು ಕಡ್ಡಿ ತೆರವುಗೊಳಿಸಲು ಬಳಸುವ ಯಂತ್ರದಷ್ಟು ಗಾತ್ರವಿರುವ ಜಿಪಿಆರ್ ಅನ್ನು ಕೆಲವೇ ವ್ಯಕ್ತಿಗಳನ್ನು ನಿಯೋಜಿಸಿ ಈಗಾಗಲೇ ಅಗೆದಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸಲು ಸಾಧ್ಯವಿದೆ. ಪ್ರಣವ್ ಮೊಹಂತಿಯವರ ನೇತೃತ್ವದ ಎಸ್‌ಐಟಿ ತಂಡ ಜಿಪಿಆರ್ ಅಳವಡಿಸುವುದೆಂಬ ನಿರೀಕ್ಷೆಯನ್ನು ಅನೇಕ ತಜ್ಞರು ಹೊಂದಿರುತ್ತಾರೆ. ಜಿಪಿಆರ್ ನಿಯೋಜಿಸಲು ಎಸ್‌ಐಟಿಗೆ ಕರ್ನಾಟಕ ಸರ್ಕಾರ ನೆರವಾಗುವ ನಂಬಿಕೆ, ವಿಶ್ವಾಸ ಇದೆ ಎಂದು ವಕೀಲ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಐ. ಆತ್ಮಹತ್ಯೆಗೂ ಧರ್ಮಸ್ಥಳ ಪ್ರಕರಣಕ್ಕೂ ಸಂಬಂಧ ಕಲ್ಪಿಸಿ ಪೋಸ್ಟ್: ಪ್ರಕರಣ ದಾಖಲು

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ. ಖೀರಪ್ಪ ಕಾಂಬಳೆಯವರು ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಬಳಸಿ ಅವರ ಆತ್ಮಹತ್ಯೆ ಹಾಗೂ ಧರ್ಮಸ್ಥಳ ಪ್ರಕರಣಕ್ಕೂ ತಳುಕು ಹಾಕಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ವೈರಲ್ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಶಿರಸಿ ನಿವಾಸಿಯಾಗಿದ್ದ ಖೀರಪ್ಪ ಅವರ ಪುತ್ರಿ ಕ್ಷಮಾ ಅವರು ಶಿರಸಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ತನ್ನ ತಂದೆ ಇತ್ತೀಚೆಗೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಜು.೨೮ರಂದು ತಾನು ಮೊಬೈಲಿನಲ್ಲಿ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುತ್ತಿದ್ದಾಗ ನಾಲ್ಕು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ತಂದೆಯ ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಹಾಕಿ ಅವರ ಆತ್ಮಹತ್ಯೆಗೂ ಧರ್ಮಸ್ಥಳದಲ್ಲಿ ಎಸ್‌ಐಟಿ ನಡೆಸುತ್ತಿರುವ ಪ್ರಕರಣವೊಂದರ ತನಿಖೆಗೂ ಸಂಬಂಧ ಕಲ್ಪಿಸುವಂತಹ ಮಾನಹಾನಿಕರ ಪೋಸ್ಟ್ ಕಂಡು ಬಂದಿದೆ. ತಂದೆಯ ಬಗ್ಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಶಾಂತಿ ಭಂಗ ಉಂಟು ಮಾಡುತ್ತಿರುವ ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವಂತಹ ಪೋಸ್ಟ್ ವೈರಲ್ ಮಾಡಲಾಗಿದೆ ಎಂದು ಕ್ಷಮಾ ಅವರು ನೀಡಿದ ದೂರಿನಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಲಂ ೩೫೨, ೩೫೩(೧) (೨) ಬಿಎನ್‌ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.

ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ನಮಗೆ ಸೇರಿದ್ದು
ಮೃತ ಸುರೇಶ್ ತಾಯಿ ಸಿದ್ದಲಕ್ಷಮ್ಮರಿಂದ ಪೊಲೀಸರಿಗೆ ಹೇಳಿಕೆ : ಧರ್ಮಸ್ಥಳದಲ್ಲಿ ಸಿಕ್ಕಿರುವ ದಾಖಲೆಗಳು ನನ್ನದು ಹಾಗೂ ನನ್ನ ಮಗನದ್ದು ಎಂದು ಮೃತ ಸುರೇಶ್ ಅವರ ತಾಯಿ ಸಿದ್ದಲಕ್ಷಮ್ಮ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಎಸ್‌ಐಟಿ ತನಿಖೆ ನಡೆಸಿದ ವೇಳೆ ಪಾಯಿಂಟ್ ನಂ.೧ರ ಗುಂಡಿ ಅಗೆಯುವ ವೇಳೆ ಸಿಕ್ಕ ಡೆಬಿಟ್ ಕಾರ್ಡ್ ಮತ್ತು ಪಾನ್ ಕಾರ್ಡ್ ವಾರಸುದಾರರು ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ನಿವಾಸಿಗಳು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ಸೂಚನೆ ಪ್ರಕಾರ ಸ್ಥಳೀಯ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದ್ದರು. ಈ ವಿಚಾರಣೆ ವೇಳೆ ಸಿದ್ದಲಕ್ಷಮ್ಮ ಅವರು ಈ ಹಿಂದೆ ಧರ್ಮಸ್ಥಳಕ್ಕೆ ಹೋಗಿದ್ದಾಗ ಪಾನ್ ಕಾರ್ಡ್ ಕಳೆದುಹೋಗಿದೆ ಎಂದು ನನ್ನ ಮಗ ಸುರೇಶ್ ಹೇಳಿದ್ದ. ಸುರೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ನನ್ನ ಎಟಿಎಂ ಕಾರ್ಡ್ ಸುರೇಶ್ ಬಳಿ ಇತ್ತು. ಅಲ್ಲಿಗೆ ಹೋದಾಗ ಕಳೆದು ಹೋಗಿರುವುದಾಗಿ ತಿಳಿಸಿದ್ದ. ಈಗಿನ ಪ್ರಕರಣಕ್ಕೂ ಮಗನ ಸಾವಿಗೂ ಸಂಬಂಧವಿಲ್ಲ. ಧರ್ಮಸ್ಥಳಕ್ಕೆ ಸುರೇಶ್ ಆಗಾಗ ಹೋಗುತ್ತಿದ್ದ. ಆಗ ಧರ್ಮಸ್ಥಳದಲ್ಲಿ ಈ ಕಾರ್ಡ್‌ಗಳನ್ನು ಕಳೆದು ಕೊಂಡಿರಬೇಕು. ನನ್ನ ಎಟಿಎಂ ಕಾರ್ಡ್ ಕಳೆದು ಹೋಗಿದೆ ಎಂದು ಹೇಳಿದ್ದ. ಬಳಿಕ ನಾನು ಹೊಸ ಎಟಿಎಂ ಕಾರ್ಡ್ ಪಡೆದುಕೊಂಡಿದ್ದೆ. ಸುರೇಶ್ ಸುಮಾರು ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಐದು ತಿಂಗಳ ಹಿಂದೆ ದಾಬಸ್ ಪೇಟೆಯಲ್ಲೇ ಮೃತಪಟ್ಟಿದ್ದ. ಧರ್ಮಸ್ಥಳದ ವಿಚಾರಕ್ಕೂ ಸುರೇಶ್ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಿದ್ದಲಕ್ಷಮ್ಮ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

೬ನೇ ಪಾಯಿಂಟ್‌ನಲ್ಲಿ ಪತ್ತೆಯಾದ
ಮೂಳೆಗಳು ಎಫ್‌ಎಸ್‌ಎಲ್‌ಗೆ ರವಾನೆ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ಜು.೩೧ರ ಕಾರ್ಯಾಚರಣೆ ವೇಳೆ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮಾನವನ ಮೂಳೆಗಳು ದೊರೆತಿದೆ. ಸಾಕ್ಷಿ ದೂರುದಾರ ಕಾಡಿನಲ್ಲಿ ತೋರಿಸಿ ಗುರುತು ಮಾಡಲಾಗಿದ್ದ ೧೩ ಸ್ಥಳಗಳ ಪೈಕಿ ಆರನೇ ಪಾಯಿಂಟ್‌ನಲ್ಲಿ ಎಸ್‌ಐಟಿ ತಂಡದ ಜೊತೆ ಸುಮಾರು ೨೦ ಕಾರ್ಮಿಕರು ೨.೫ ಅಡಿಯಿಂದ ೩ ಅಡಿಗಳಷ್ಟು ಆಳಕ್ಕೆ ಅಗೆಯುವಾಗಲೇ ಮೃತದೇಹದ ಕುರುಹುಗಳು ಪತ್ತೆಯಾಗಿದೆ. ಪತ್ತೆಯಾದ ತಲೆಬುರುಡೆಯ ಚೂರುಗಳು ಮತ್ತು ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿದೆ. ಅದು ಗಂಡಸಿನ ಮೃತ ದೇಹದ ಅವಶೇಷದಂತಿದೆ ಮತ್ತು ಸುಮಾರು ೪೦ ವರ್ಷಗಳ ಹಿಂದೆ ಹೂಳಲ್ಪಟ್ಟಿರುವ ಮೃತದೇಹ ಇದಾಗಿರಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಮೃತದೇಹಗಳ ಶೋಧ ಕಾರ್ಯ ನಡೆಸಲಾಗಿದ್ದು ಕಾಡಿನೊಳಗೆ ಹೋದ ಅಧಿಕಾರಿಗಳು ಹಾಗೂ ಕಾರ್ಮಿಕರ ತಂಡಕ್ಕೆ ಮಧ್ಯಾಹ್ನದ ಊಟವನ್ನೂ ಕಾಡಿಗೆ ಒಳಗೆ ತಲುಪಿಸಲಾಗಿತ್ತು. ಅಗೆಯಲು ಯಂತ್ರವನ್ನು ಕಾಡಿನೊಳಗೆ ಒಯ್ಯಲಾಗಿತ್ತು. ಮೃತದೇಹ ಕುರುಹು ಸಿಕ್ಕಿದ ಜಾಗದ ಮಹಜರು ಮುಗಿಸಿ ಎಸ್‌ಐಟಿ ತಂಡ ಕಾಡಿನಿಂದ ಹೊರಗೆ ಬರುವಾಗ ಸಂಜೆ ೭.೩೦ ಆಗಿತ್ತು. ನಂತರ ಕಾಡಿನಲ್ಲಿ ಪತ್ತೆಯಾದ ಮೃತದೇಹ ಯಾರದ್ದು ಎಂಬ ಗುರುತು ಪತ್ತೆಗೆ ವಹಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಎಂ.ಎನ್. ಅನುಚೇತ್ ಅವರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಸಾಕ್ಷಿ ದೂರುದಾರನಿಗೆ ಅಧಿಕಾರಿ ಬೆದರಿಕೆ-ವಕೀಲರ ದೂರು
ಶೋಧ ಕಾರ್ಯದಿಂದ ಇನ್ಸ್‌ಪೆಕ್ಟರ್ ಮಂಜುನಾಥ್ ದೂರ: ದೂರನ್ನು ಹಿಂಪಡೆಯುವಂತೆ ಸಾಕ್ಷಿ ದೂರುದಾರನಿಗೆ ಎಸ್‌ಐಟಿ ತಂಡದಲ್ಲಿರುವ ಅಧಿಕಾರಿಯೊಬ್ಬರು ಬೆದರಿಕೆ ಒಡ್ಡಿದ್ದಾರೆ ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ. ಎಸ್‌ಐಟಿಗೆ ಕಳುಹಿಸಿದ ಇ-ಮೇಲ್ ದೂರಿನಲ್ಲಿ ವಕೀಲರಾದ ಅನನ್ಯಾ ಗೌಡ ಅವರು ನಮ್ಮ ಕಕ್ಷಿದಾರನಿಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಆ.೧ರಂದು ಬೆದರಿಕೆ ಒಡ್ಡಿದ್ದಾರೆ. ನೀನು ಇದರ ಭೀಕರ ಪರಿಣಾಮವನ್ನು ಎದುರಿಸುತ್ತೀಯ. ನಿನ್ನನ್ನೇ ವಶಕ್ಕೆ ಪಡೆಯುತ್ತೇವೆ. ದೀರ್ಘಕಾಲದವರೆಗೆ ನೀನು ಬಂಧನಕ್ಕೂ ಒಳಗಾಗಬಹುದು ಎಂದು ಬೆದರಿಸಿದ್ದಾರೆ ಎಂದು ಹೇಳಿದ್ದಾರೆ. ಆ ಅಧಿಕಾರಿಯನ್ನು ತಕ್ಷಣ ತನಿಖೆಯಿಂದ ಹೊರಗಿಡಬೇಕು. ನಮ್ಮ ಕಕ್ಷಿದಾರ ಮುಕ್ತವಾಗಿ ಹಾಗೂ ನಿರ್ಭಯವಾಗಿ ತನಿಖೆಗೆ ಸಹಕರಿಸಲು ಈ ಕ್ರಮದ ಅಗತ್ಯ ಇದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ವಕೀಲರು ದೂರಿನಲ್ಲಿ ತಿಳಿಸಿದ್ದ ಎಸ್‌ಐಟಿಯಲ್ಲಿರುವ ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನು ಶನಿವಾರದ ಕಾರ್ಯಾಚರಣೆಯ ವೇಳೆ ದೂರ ಇರಿಸಲಾಗಿತ್ತು. ತನಿಖಾ ತಂಡದೊಂದಿಗೆ ಶೋಧ ಕಾರ್ಯ ಸ್ಥಳಕ್ಕೆ ಮಂಜುನಾಥ್ ಅವರನ್ನು ಕರೆ ತರುವ ಬದಲು ಕಚೇರಿಯಲ್ಲಿಯೇ ಇರಲು ಸೂಚಿಸಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ಧರ್ಮಸ್ಥಳ ಗ್ರಾ.ಪಂ.ನಿಂದ ದಾಖಲೆ ಪಡೆದ ಎಸ್‌ಐಟಿ: ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್ ಕಚೇರಿಯಿಂದ ಹಲವು ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದುವರೆಗೆ ನಡೆದ ಅಸಹಜ ಸಾವಿನ ಸಂಖ್ಯೆಗಳು, ಅವುಗಳನ್ನು ಹೂತು ಹಾಕಲಾಗಿರುವ ಸ್ಥಳಗಳು ಇತ್ಯಾದಿಗಳ ಮಾಹಿತಿ ಕೊಡುವಂತೆ ಎಸ್‌ಐಟಿಯವರು ಜು.೩೦ರಂದು ಪಂಚಾಯತ್‌ನಿಂದ ಕೇಳಿದ್ದರು. ಆ.೧ರಂದು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿದ ಎಸ್‌ಐಟಿ ಅಧಿಕಾರಿಗಳು ೧೯೯೫ರಿಂದ ೨೦೧೪ರವರೆಗಿನ ಯುಡಿಆರ್ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಹಿತಾಸಕ್ತಿ ಆರೋಪ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು: ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಶವಗಳನ್ನು ಕಾನೂನು ಬಾಹಿರವಾಗಿ ದಫನ ಮಾಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಬಂಧಕ ಆದೇಶ ಕೋರಲಾದ ಅಸಲು ದಾವೆ ವಿಚಾರಣೆ ನಡೆಸುತ್ತಿರುವ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ಸೆಷನ್ಸ್ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಜತೆಗೆ ಈ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಅವರು ಮನವಿ ಮಾಡಿದ್ದಾರೆ. ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ನೀಡಿದ್ದ ಪ್ರತಿಬಂಧಕ ಆದೇಶವನ್ನು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು. ಡಿ. ಹಷೇಂದ್ರ ಕುಮಾರ್ ಅವರ ಕುಟುಂಬದಿಂದ ನಿರ್ವಹಣೆ ಮಾಡಲಾಗುತ್ತಿರುವ ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ ೨೫ ವರ್ಷಗಳ ಹಿಂದೆ ವಿಜಯ ಕುಮಾರ್ ರೈ ಅವರು ವಿದ್ಯಾರ್ಥಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಾಲಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ಮೆಮೊ ಸಲ್ಲಿಕೆಯಾಗಿತ್ತು. ಈ ನಿಟ್ಟಿನಲ್ಲಿ ನ್ಯಾಯಾಧೀಶ ರೈ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರಿಯಲು ನ್ಯಾಯ ಒದಗಿಸಿದರಷ್ಟೇ ಸಾಲದು. ಅದು ಕಾಣುವಂತಿರಬೇಕು. ಹೀಗಾಗಿ ಈ ಮೊಕದ್ದಮೆಯಲ್ಲಿ ನಾನು ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲ. ಆದರೂ ನಾನು ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಹಿನ್ನೆಲೆಯಲ್ಲಿ ಮೊಕದ್ದಮೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವುದು ಸೂಕ್ತ ಎಂದು ಪ್ರಧಾನ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ನ್ಯಾಯಾಧೀಶ ವಿಜಯಕುಮಾರ್ ರೈ ಅವರು ತಮ್ಮ ಮುಂದಿದ್ದ ಈ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಅವರ ಸಹೋದರ ಡಿ.ಹಷೇಂದ್ರ ಕುಮಾರ್ ಮತ್ತು ಅವರ ಕುಟುಂಬ ಹಾಗೂ ಅವರು ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಯಾವುದೇ ಮಾನಹಾನಿ ವರದಿ ಮಾಡದಂತೆ ಮಾಧ್ಯಮಗಳಿಗೆ ಪ್ರತಿಬಂಧಕ ಆದೇಶ ನೀಡಿದ್ದರು.

೭ನೇ ದಿನದ ಕಾರ್ಯಾಚರಣೆಯಲ್ಲಿ
ಮೃತದೇಹದ ಅವಶೇಷಗಳು ಮೇಲ್ಮೈಯಲ್ಲಿ ಪತ್ತೆ; ಆ.೦೪ರಂದು ೭ನೇ ದಿನದ ಕಾರ್ಯಾಚರಣೆ ಪ್ರಯುಕ್ತ ಎಸ್.ಐ.ಟಿ.ಯವರು ನೇತ್ರಾವತಿ ಸ್ನಾನಘಟ್ಟದ ಬಳಿಯ ೧೧ನೇ ಪಾಯಿಂಟ್‌ನಲ್ಲಿ ಬೆಳಿಗ್ಗೆ ೧೧.೩೦ರ ವೇಳೆಗೆ ಉತ್ಖನನ ಪ್ರಕ್ರಿಯೆ ಆರಂಭಿಸಬೇಕಿತ್ತು. ಸ್ನಾನಘಟ್ಟದ ಸನಿಹ ಹೆದ್ದಾರಿಯ ಬದಿಯಲ್ಲಿಯೇ ಇದ್ದ ಜಾಗಕ್ಕೆ ತೆರಳಲು ಹಿಟಾಚಿಯೂ ಸಿದ್ಧವಾಗಿತ್ತು.
ಆದರೆ ಸಾಕ್ಷಿ ದೂರದಾರ ೧೧ ಸಂಖ್ಯೆಯತ್ತ ಬಂದಾಗ ಆತ ತಂಡವನ್ನು ಆ ಸ್ಥಳದಿಂದ ೧೦೦ ಮೀಟರ್ ಎತ್ತರದಲ್ಲಿರುವ ಕಾಡಿನೊಳಗಿನ ಬಂಗ್ಲೆಗುಡ್ಡೆ ಭಾಗಕ್ಕೆ ಹೋಗುವಂತೆ ಸೂಚಿಸಿದ. ಅದನ್ನು ಪುರಸ್ಕರಿಸಿದ ಎಸ್.ಐ.ಟಿ. ತಂಡ ಕಾಡಿನೊಳಗೆ ತೆರಳಿತು. ಆ ಸಂದರ್ಭದಲ್ಲಿ ಅದನ್ನು ಗಮನಿಸಿದ ಅಲ್ಲಿ ಸೇರಿದ ಮಾಧ್ಯಮದವರು ಸಹಿತ ಎಲ್ಲರೂ ಗೊಂದಲಕ್ಕೊಳಗಾದರು. ಇಷ್ಟು ದಿನ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಊಟದ ವಿರಾಮ ನೀಡಲಾಗುತ್ತಿತ್ತು. ಊಟದ ವಿರಾಮವೂ ಇಲ್ಲದೆ ಶೋಧ ಮುಂದುವರಿಯಿತು. ಕೂಲಿಯಾಳುಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಮೇಲ್ಬಾಗಕ್ಕೆ ಹೋದ ತಂಡ ಗಂಟೆ ಕಳೆದರೂ ಕೆಳಗೆ ಬಾರದೇ ಇದ್ದಾಗ ಅಲ್ಲಿ ಅಸ್ಥಿಗಳು ಗೋಚರವಾಗಿರುವುದು ಖಾತ್ರಿಯಾಗತೊಡಗಿತು. ಇದೆಲ್ಲದರ ಮಧ್ಯೆ ಮೂರು ಉಪ್ಪಿನ ಮೂಟೆಗಳನ್ನು ಕಾಡಿನೊಳಗೆ ಕೊಂಡೊಯ್ದಾಗ ಊಹಾಪೋಹಗಳಿಗೆ ಬಲ ಬಂತು. ಬೆಳಿಗ್ಗೆ ೧೧.೩೦ಕೈ ಹೋದ ತಂಡ ಸಂಜೆ ೫ ಗಂಟೆಯಾದರೂ ಹೊರಗೆ ಬರಲಿಲ್ಲ. ಎಂದಿನಂತೆ ಮಧ್ಯಾಹ್ನ ಊಟವೂ ರವಾನೆಯಾಗಿರುವುದು ಕಂಡು ಬರಲಿಲ್ಲ. ವೈದ್ಯರ ತಂಡ ಮೂಳೆ, ಅಸ್ಥಿಪಂಜರಗಳನ್ನು ಸಂಗ್ರಹಿಸಿ ಸುಸಜ್ಜಿತವಾಗಿ ಸೇಫ್ ಎವಿಡೆನ್ಸ್ ಬಾಕ್ಸ್‌ನಲ್ಲಿ ಸಂಗ್ರಹಿಸಿ ಬಳಿಕ ಉಳಿದೆಲ್ಲಾ ಮಹಜರು ಪ್ರಕ್ರಿಯೆಗಳನ್ನು ಮುಗಿಸಿ ಮುಸ್ಸಂಜೆಯಾಗುತ್ತಿದ್ದಂತೆಯೇ ಕಾಡಿನಿಂದ ಹೆದ್ದಾರಿಗೆ ಬಂತು.

ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ ೧೧ನೇ ಜಾಗಕ್ಕಿಂತ ಸುಮಾರು ೧೦೦ ಮೀಟರ್ ದೂರದಲ್ಲಿ ನೆಲದ ಮೇಲೆ ಅವಶೇಷಗಳು ಸಿಕ್ಕಿವೆ. ಆ ಜಾಗವನ್ನೂ ಆತನೇ ತೋರಿಸಿದ್ದ. ಒಂದು ತಲೆ ಬುರುಡೆ, ಬೆನ್ನು ಮೂಳೆ ಸೇರಿ ಸುಮಾರು ೧೦೦ ಮೂಳೆಗಳು ಸಿಕ್ಕಿವೆ ಎಂದು ಮಾಹಿತಿ ದೊರೆತಿದೆ. ಇತ್ತ ಕಾಡಿನಲ್ಲಿ ನಾಲ್ಕೈದು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ದೇಹ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆಯಾ ಎಂಬ ಅನುಮಾನ ವ್ಯಕ್ತವಾಯಿತು. ಎಸ್‌ಐಟಿಯವರು ಕಾಡಿನಿಂದ ಹೊರಗೆ ಬರುವಾಗ ಸಂಜೆ ೬.೧೫ ದಾಟಿತ್ತು. ಮೂರು ಬಕೆಟ್‌ಗಳು ಹಾಗೂ ಎರಡು ಪಿವಿಸಿ ಪೈಪ್‌ಗಳಲ್ಲಿ ಮೃತದೇಹದ ಅವಶೇಷಗಳನ್ನು ಸೀಲ್ ಮಾಡಿ ಕಾಡಿನಿಂದ ಹೊರಗೆ ತರಲಾಯಿತು. ಸಾಕ್ಷಿ ದೂರುದಾರ ಧರ್ಮಸ್ಥಳದ ಸ್ನಾನಘಟ್ಟದ ಆಸುಪಾಸಿನಲ್ಲಿ ೧೩ ಜಾಗ ತೋರಿಸಿ ಅಲ್ಲಿ ಶವಗಳನ್ನು ಹೂತಿದ್ದಾಗಿ ತಿಳಿಸಿದ್ದ. ಆತ ತೋರಿಸಿದ್ದ ೧೦ ಜಾಗಗಳನ್ನು ಇಷ್ಟು ದಿನ ಸರದಿಯಂತೆ ಅಗೆಯಲಾಗಿತ್ತು. ಅದರ ಅನ್ವಯ ದೂರುದಾರ ತೋರಿಸಿರುವ ೧೧ನೇ ಜಾಗವನ್ನು ಸೋಮವಾರ ಅಗೆಯಬೇಕಿತ್ತು. ಕಮಾಂಡೊ ಪಡೆಯ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಎಸ್‌ಐಟಿ ಅಧಿಕಾರಿಗಳು ಮೃತದೇಹದ ಅವಶೇಷ ಪತ್ತೆಯಾದ ಸ್ಥಳಕ್ಕೆ ಕರೆಸಿಕೊಂಡರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿಯ ಎಸ್ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಸಿ.ಎ. ಸೈಮನ್ ಸ್ಥಳದಲ್ಲಿದ್ದರು. ಕಾರ್ಯಾಚರಣೆ ಮುಗಿಸಿ ಹೊರಟ ಎಸ್.ಐ.ಟಿ. ಟೀಂ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ತೆರಳಿ ಕಾರ್ಯಾಚರಣೆ ಅಂತ್ಯಗೊಳಿಸಿದೆ. ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆ ಅಗೆತ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಸೋಮವಾರ ಇಡೀ ದಿನ ಮಳೆ ವಿರಾಮ ನೀಡಿ ಪ್ರಖರ ಬಿಸಿಲು ಕಾಣಿಸಿಕೊಂಡ ಕಾರಣ ಎಸ್‌ಐಟಿ ಶೋಧ ಕಾರ್ಯ ನಿರಾತಂಕವಾಗಿ ನಡೆಯಿತು.

ಉಪ್ಪು ಗೋಣಿ ಸುಳಿವು! ಶವದ ಅಸ್ಥಿಪಂಜರ ಸಿಕ್ಕಿರುವ ಬಗ್ಗೆ ಅಥವಾ ಸಿಗದೇ ಇರುವ ಬಗ್ಗೆ ಎಸ್‌ಐಟಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ನೀಡಲಾಗುತ್ತಿಲ್ಲ. ಸೋಮವಾರ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಮುಂದುವರಿಯುತ್ತಿದ್ದಂತೆ ಹಠಾತ್ ಹೊರ ಬಂದ ಕೆಲವು ಕಾರ್ಮಿಕರು ೩ ಮೂಟೆ ಉಪ್ಪು ಹೊತ್ತುಕೊಂಡು ಕಾಡಿಗೆ ತೆರಳಿದರು. ವೈದ್ಯರ ತಂಡ ಮೂಳೆ ಮತ್ತು ಅಸ್ಥಿಪಂಜರಗಳನ್ನು ಸಂಗ್ರಹಿಸಿ ಸಂಜೆ ಕಾರ್ಯಾಚರಣೆ ಮುಗಿದ ಬಳಿಕ ಸೇಫ್ ಎವಿಡೆನ್ಸ್ ಬಾಕ್ಸ್‌ನಲ್ಲಿ ಸಂಗ್ರಹಿಸಿ ಪೊಲೀಸ್ ವಾಹನದಲ್ಲಿ ಸಾಗಿಸಿದ್ದಾರೆ. ಪ್ರತಿದಿನ ಇಬ್ಬರು ಗನ್ ಮ್ಯಾನ್‌ಗಳು ಅರಣ್ಯದೊಳಕ್ಕೆ ಹೋಗುತ್ತಿದ್ದರೆ ಸೋಮವಾರ ನಾಲ್ವರು ಗನ್‌ಮ್ಯಾನ್‌ಗಳು ತೆರಳಿದ್ದರು. ಮೂಳೆಗಳು ಸಿಕ್ಕಿದೆಯಂತೆ ಎಂಬ ವದಂತಿ ಹರಡಿತ್ತಾದರೂ ಕಾರ್ಮಿಕರು ಉಪ್ಪಿನ ಗೋಣಿ ಕೊಂಡು ಹೋದಾಗ ಅದು ದೃಢಪಟ್ಟಿತ್ತು. ೩೦ ಸ್ಪಾಟ್‌ಗಳನ್ನು ಗುರುತಿಸುವುದಾಗಿ ಅನಾಮಿಕ ಹೇಳುತ್ತಿದ್ದ. ಆದರೆ ಮೊದಲ ಹಂತದಲ್ಲಿ ೧೩ ಹಂತಗಳನ್ನು ತೋರಿಸಿದ್ದ. ಅದರಲ್ಲಿ ೧೦ ಹಂತಗಳನ್ನು ದಾಟಿ ಬಂದಾಗಿತ್ತು. ಅದುವರೆಗೆ ೬ನೇ ಗುರುತಿನಲ್ಲಿ ಮಾತ್ರ ಅಸ್ಥಿ ಸಿಕ್ಕಿದ್ದವು.

ಜು.೩೧ರಿಂದ ಆ.೬ರವರೆಗಿನ ಉತ್ಖನನದ ಕಾರ್ಯಾಚರಣೆ:
ಜುಲೈ ೩೧: ಆರನೇ ಗುರುತಿನಲ್ಲಿ ಶೋಧ ಕಾರ್ಯ- ಪತ್ತೆಯಾದ ಕಳೇಬರ-ಎಫ್ ಎಸ್ ಎಲ್ ನಿಂದ ಮೂಳೆಗಳ ಸಂಗ್ರಹ-ಆರನೇ ಗುರುತಿನ ಮಹಜರಿನೊಂದಿಗೆ ಕಾರ್ಯಾಚರಣೆ ಮುಕ್ತಾಯ. ಆಗಸ್ಟ್ ೦೧: ೦೭ನೇ ಮತ್ತು ೦೮ನೇ ಗುರುತಿನಲ್ಲಿ ಉತ್ಖನನ ಕಾರ್ಯ- ಎರಡೂ ಗುರುತುಗಳಲ್ಲಿ ಪತ್ತೆಯಾಗದ ಕಳೇಬರ-ನೇತ್ರಾವತಿ ಸೇತುವೆಯ ಮೇಲ್ಭಾಗದಲ್ಲಿ ಅಪಾರ ಸಂಖ್ಯೆಯ ಜನರು ಸೇರಿದ್ದರು. ಆಗಸ್ಟ್ ೦೨: ೦೯ನೇ ಮತ್ತು ೧೦ನೇ ಗುರುತಿನಲ್ಲಿ ಉತ್ಖನನ ಕಾರ್ಯ- ಎರಡೂ ಗುರುತುಗಳಲ್ಲಿ ಪತ್ತೆಯಾಗದ ಕಳೇಬರ. ಆಗಸ್ಟ್ ೦೪: ೧೧ನೇ ಗುರುತಿನ ಉತ್ಖನನ ಮಾಡದೇ ಬಂಗ್ಲ ಗುಡ್ಡದ ಮೇಲ್ಭಾಗಕ್ಕೆ ಎಸ್ ಐ ಟಿ ಅಧಿಕಾರಿಗಳು ಮತ್ತು ಮುಸುಕುಧಾರಿ ತೆರಳಿದ್ದರು. ಈ ವೇಳೆ, ಭೂಮಿಯ ಮೇಲ್ಮೈಯಲ್ಲಿ ಒಂದು ಶವದ ಮೃತದೇಹದ ಕಳೇಬರ ಪತ್ತೆಯಾಗಿದ್ದು, ಅದನ್ನು ಎಫ್ ಎಸ್ ಎಲ್ ನ ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಆಗಸ್ಟ್ ೦೫: ೧೧ನೇ ಮತ್ತು ೧೨ನೇ ಗುರುತಿನಲ್ಲಿ ಉತ್ಖನನ ಕಾರ್ಯ- ಎರಡೂ ಗುರುತುಗಳಲ್ಲಿ ಪತ್ತೆಯಾಗದ ಕಳೇಬರ. ಆಗಸ್ಟ್ ೦೬: ಎಸ್ ಐ ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಯವರ ನೇತೃತ್ವದಲ್ಲಿ ಬೆಳ್ತಂಗಡಿಯ ಎಸ್ ಐ ಟಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಎಸ್ ಐ ಟಿಯ ಅಧಿಕಾರಿ ಜಿತೇಂದ್ರ ದಯಾಮ ನೇತೃತ್ವದ ತಂಡ ಮುಸುಕುಧಾರಿಯ ಜೊತೆ ನೇತ್ರಾವತಿಯ ಬಂಗ್ಲಗುಡ್ಡದ ಮೇಲ್ಭಾಗದಲ್ಲಿ ಮೇಲ್ಮೈಯಲ್ಲಿ ದೇಹದ ಅವಶೇಷಗಳು ಸಿಕ್ಕ ಗುರುತು ಮಾಡದ ಸ್ಥಳದಲ್ಲಿ ಉತ್ಖನನ ನಡೆಸಲಾಯಿತು. ಈ ವೇಳೆ ಯಾವುದೇ ಕಳೇಬರ ಪತ್ತೆಯಾಗಿಲ್ಲ.

ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಗೆ ಜರ್ನಲಿಸ್ಟ್ ಯೂನಿಯನ್ ಖಂಡನೆ: ಆರೋಪಿಗಳ ಬಂಧನಕ್ಕೆ ಆಗ್ರಹ: ಮಂಗಳೂರು: ಧರ್ಮಸ್ಥಳ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ಎಸ್‌ಐಟಿ ನಡೆಸುತ್ತಿರುವ ತನಿಖೆ ಬಗ್ಗೆ ವರದಿ ಮಾಡಲು ತೆರಳಿದ್ದ ವಿವಿಧ ಯೂಟ್ಯೂಬ್ ಮಾಧ್ಯಮ ಹಾಗೂ ಟಿವಿ ವಾಹಿನಿ ವರದಿಗಾರರು ಹಾಗೂ ಕ್ಯಾಮರಾ ಮೆನ್ ಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಈ ಗುಂಪು ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿ ಆಗ್ರಹಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಆಕ್ಷೇಪ , ಅಭಿಪ್ರಾಯ ಸಲ್ಲಿಸಲು ಅಥವಾ ಪ್ರತಿಭಟನೆಗೆ ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ಅವಕಾಶಗಳು ಇರುವಾಗ, ಮಾಧ್ಯಮ ಪ್ರತಿನಿಧಿಗಳ ಮೇಲೆ ನೇರ ದೈಹಿಕ ಹಲ್ಲೆ ನಡೆಸುವುದು ಮಾಧ್ಯಮದ ಧ್ವನಿ ಹತ್ತಿಕ್ಕುವ ಪ್ರಜಾತಂತ್ರ ವಿರೋಧಿ ನಿಲುವು ಆಗಿರುತ್ತದೆ. ಈ ರೀತಿಯ ನಿಲುವನ್ನು ಪತ್ರಕರ್ತರ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಹಲ್ಲೆಗೊಳಗಾಗಿರುವ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಆಗ್ರಹಿಸಿದೆ.

ಎಸ್‌ಐಟಿ ತನಿಖೆಯು ಸರ್ಕಾರದ ಆದೇಶ ಹಾಗೂ ಕಾನೂನು ಪರಿವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಪಾರದರ್ಶಕವಾಗಿ ವರದಿಗಾರಿಕೆ ಮಾಡುವುದರ ವಿರುದ್ಧ ತಡೆವೊಡ್ಡುವುದು ಕಾನೂನು ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿರುತ್ತದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿ ಪ್ರತಿಕ್ರಿಯಿಸಿದೆ.

ಮಾಧ್ಯಮಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವು ಮಾಡಿದ ಹೈಕೋರ್ಟ್: ಕೊಲೆಯಾದ ನೂರಾರು ಶವಗಳನ್ನು ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾನಹಾನಿ ವಿಷಯ ಪ್ರಸಾರ ಮಾಡಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹಷೇಂದ್ರ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಹೊರಡಿಸಿದ್ದ ಅದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಆದೇಶದ ಹಿನ್ನೆಲೆ: ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಸಿಟಿ ಸಿವಿಲ್ ಕೋರ್ಟ್‌ನ ೧೦ ಹೆಚ್ಚುವರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಂಗಳೂರಿನ ಕೋಡಿಬೈಲ್ ವಿಳಾಸ ಹೊಂದಿರುವ ಯೂ ಟ್ಯೂಬ್ ಚಾನಲ್ ಕುಡ್ಲ ರಾಂಪೇಜ್‌ನ ಸಂಪಾದಕ ಅಜಯ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿದೆ.
ಈ ಪ್ರಕರಣದಲ್ಲಿನ ಸಿವಿಲ್ ದಾವೆ, ಕ್ರಿಮಿನಲ್ ಪ್ರಕ್ರಿಯೆ, ಆರೋಪ, ಪ್ರತ್ಯಾರೋಪದ ಅಂಶಗಳ ಮೇಲೆ ಈ ನ್ಯಾಯಪೀಠ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದೇಶದಲ್ಲಿ ಮಾನಹಾನಿಕರ ಹೇಳಿಕೆಗಳ ನಿಷೇಧದ ಬಗ್ಗೆ ಆದೇಶ ನೀಡಲಾಗಿದೆ ಎಂಬುದೇನೋ ಸರಿ. ಆದರೆ ಯಾವ ರೀತಿಯ ಹೇಳಿಕೆಗಳು ಮಾನಹಾನಿಕರವಾಗಿವೆ ಎಂಬುದರ ಕುರಿತಾದ ಒಂದೇ ಒಂದು ಪದವೂ ಆದೇಶದಲ್ಲಿ ಕಂಡು ಬರುವುದಿಲ್ಲ. ಪ್ರತಿಬಂಧಕ ಅಂಶವೊಂದನ್ನು ಪರಿಗಣಿಸಲಾದ ಮನವಿಯ ಹೊರತುಪಡಿಸಿ ಪಕ್ಷಗಾರರ ನಡುವಿನ ಎಲ್ಲಾ ವಾದಾಂಶಗಳನ್ನು ಮುಕ್ತವಾಗಿ ಇರಿಸಲಾಗಿದೆ. ಆದಾಗ್ಯೂ ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು ಎಂದು ನ್ಯಾಯಪೀಠ ವಿಚಾರಣಾ ನ್ಯಾಯಾಲಯಕ್ಕೆ ತಾಕೀತು ಮಾಡಿದೆ. ಹಕ್ಕುಸ್ವಾಮ್ಯ, ಟ್ರೇಡ್ ಮಾರ್ಕ್‌ಗಳು ಮಾಧ್ಯಮ ಸೋರಿಕೆಗಳು ಮತ್ತು ಪೈರಸಿಗೆ ಸಂಬಂಧಿಸಿದಂತೆ ಯಾರೊಬ್ಬರ ಹಕ್ಕುಗಳನ್ನು ಉಲ್ಲಂಸುವ ಸಾಧ್ಯತೆ ಇದೆ ಎಂಬ ಅರ್ಜಿದಾರರ ಆತಂಕದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ನ್ಯಾಯಾಲಯ ಈ ರೀತಿಯ ಪೂರ್ವಭಾವಿ ತಡೆ ಆದೇಶಗಳನ್ನು ನೀಡುತ್ತದೆ. ಈ ಪ್ರಕರಣದಲ್ಲಿ ವಿಚಾರಣೆಗೆ ಸೀಮಿತವಾಗಿ ನ್ಯಾಯಾಲಯ ಈ ಆದೇಶವನ್ನು ನೀಡಿರುವುದು ಸಮಂಜಸವಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಈ ಆದೇಶವು ಇತ್ತೀಚೆಗೆ ತನ್ನ ಬಲೆಯನ್ನು ಎಷ್ಟು ವ್ಯಾಪಕವಾಗಿ ಬೀಸಿದೆಯೆಂದರೆ ವಾದಿ, ವಾದಿಯ ಕುಟುಂಬ ಅಥವಾ ಸ್ಥಳದ ವಿರುದ್ಧ ಯಾವುದೇ ಧ್ವನಿ ಎತ್ತುವುದನ್ನು ನ್ಯಾಯಾಂಗದ ವಿಚಾರಣಾ ಪರಿಧಿಗೆ ಸಿಲುಕಿಸುವ ಬೆದರಿಕೆಯಂತಾಗಿದೆ ಎಂದೂ ನ್ಯಾಯಪೀಠ ಹೇಳಿದೆ. ವಿಚಾರಣಾ ನ್ಯಾಯಾಲಯ ಏಕಪಕ್ಷೀಯವಾಗಿ ನೀಡಿರುವ ಈ ಮಧ್ಯಂತರ ತಡೆ ಆದೇಶವು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಕಾನೂನು ವ್ಯವಸ್ಥೆಯಲ್ಲಿ ಅಪರಿಚಿತ ಪ್ರತಿವಾದಿಗಳಿಗೆ ಬಳಸಲಾಗುವ ಜನಪ್ರಿಯ ಜಾನ್ ಡೋ ಆದೇಶವಾಗಿದೆ. ಭಾರತೀಯ ವ್ಯವಸ್ಥೆಯಲ್ಲೂ ಇದು ಅಶೋಕ್ ಕುಮಾರ್ ಪ್ರಕರಣದಲ್ಲಿ ಸ್ಥಳೀಯ ಆದೇಶವಾಗಿ ರೂಪಾಂತರಗೊಂಡಿದೆ ಎಂಬ ಅಂಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಜಾನ್ ಡೋ ಆದೇಶದ ಪರಿಕಲ್ಪನೆ ಭಾರತೀಯ ನ್ಯಾಯಶಾಸ್ತ್ರದಲ್ಲಿ ಮನ್ನಣೆ ಪಡೆದುಕೊಂಡಿದೆಯಾದರೂ ಇದನ್ನು ಹೆಚ್ಚಿನ ಕಾಳಜಿ ಮತ್ತು ವಿವೇಚನಾಯುಕ್ತ ದೂರದೃಷ್ಟಿಯಿಂದ ಬಳಸಬೇಕು. ಇಂತಹ ಆದೇಶಗಳು, ಸ್ವಭಾವತಃ ಗುರುತಿಸಲಾಗದ ವ್ಯಕ್ತಿಗಳಿಗೆ ವಿಸ್ತರಿಸುತ್ತವೆ ಮತ್ತು ಅತಿಯಾದ ಅಪಾಯವನ್ನು ಹೊಂದಿರುತ್ತವೆ ಎಂಬುದನ್ನು ಸದಾ ನೆನಪಿಟ್ಟುಕೊಂಡಿರಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಎಸ್.ಐ.ಟಿ. ಕಚೇರಿಯಲ್ಲಿ ಸಹಾಯವಾಣಿ ಆರಂಭ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ ೩೯/೨೦೨೫ಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿಶೇಷ ತನಿಖಾ ತಂಡ ಮಂಗಳೂರು ನಗರದಲ್ಲಿ ಆರಂಭಿಸಿರುವ ಕಚೇರಿಯಲ್ಲಿ ಎಸ್‌ಐಟಿಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಎಸ್‌ಐಟಿ ಕಚೇರಿಯನ್ನು ಮಂಗಳೂರಿನ ಕದ್ರಿಯ ನಿರೀಕ್ಷಣಾ ಮಂದಿರದಲ್ಲಿ ತೆರೆಯಲಾಗಿದ್ದು ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಭೇಟಿ ನೀಡಬಹುದಾಗಿದೆ. ಸಹಾಯವಾಣಿಯ ದೂರವಾಣಿ ಸಂಖ್ಯೆ ೦೮೨೪-೨೦೦೫೨೦೧ ಅಥವಾ ಮೊಬೈಲ್ ಸಂಖ್ಯೆ ೮೨೭೭೯೮೬೩೬೯ಗೆ ಕರೆ ಮಾಡಬಹುದಾಗಿದೆ.

ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಆಗಮನ: ಆ.೬ರಂದು ಬೆಳಿಗ್ಗೆ ಎಸ್.ಐ.ಟಿ. ಮುಖ್ಯಸ್ಥ ಪ್ರಣವ್ ಮೊಹಾಂತಿ ಬೆಳ್ತಂಗಡಿ ಕಚೇರಿಗೆ ಭೇಟಿ ನೀಡಿದ್ದಾರೆ. ಡಿಐಜಿ ಎಂ.ಎನ್. ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸಿ ಸ್ಟೆಲ್ಲಾ ವರ್ಗೀಸ್ ಅವರೊಂದಿಗೆ ಮೊಹಾಂತಿ ಚರ್ಚೆ ನಡೆಸಿದ್ದಾರೆ. ನಂತರ ಅವರು ಅಧಿಕಾರಿಗಳಿಗೆ ಮುಂದಿನ ಕಾರ್ಯಾಚರಣೆ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಮೊಹಾಂತಿ ಅವರು ಬರುವ ಮುನ್ನವೇ ಸಾಕ್ಷಿ ದೂರುದಾರ ತನ್ನ ವಕೀಲರೊಂದಿಗೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು. ಅವರನ್ನು ಹೊರಗಿರಿಸಿ ಸಭೆ ನಡೆಸಿದ ಅಧಿಕಾರಿಗಳು ಬಳಿಕ ಧರ್ಮಸ್ಥಳ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಶೋಧ ನಡೆಸಿದ್ದಾರೆ.

ಅರಣ್ಯ ಇಲಾಖಾಧಿಕಾರಿಗಳಿಗೂ ಎಸ್‌ಐಟಿಗೂ ಚಕಮಕಿ: ಎ.ಸಿ. ಸ್ಟೆಲ್ಲಾ ವರ್ಗೀಸ್‌ಗೂ ಅಧಿಕಾರಿಗಳಿಗೂ ಗೊಂದಲ

ಶೋಧ ಕಾರ್ಯಾಚರಣೆ ನಡೆಯುತ್ತಿರುವ ವೇಳೆ ಎಸ್‌ಐಟಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾಡು ಪ್ರದೇಶದಲ್ಲಿ ಶೋಧ ನಡೆಸಿ ಉತ್ಖನನ ನಡೆಸುವಾಗ ಪದೇ ಪದೇ ಅರಣ್ಯ ಇಲಾಖೆಯವರು ಅಲ್ಲಿ ಹೋಗಬಾರದು, ಇಲ್ಲಿ ಹೋಗಬಾರದು ಅದು ನಮ್ಮ ಅರಣ್ಯ ಪ್ರದೇಶ ಎಂದು ಹೇಳುತ್ತಿದ್ದಾರೆ. ಈ ವೇಳೆ ನಾವೂ ಕಾನೂನು ಪ್ರಕಾರವೇ ಕಾರ್ಯಾಚರಣೆ ನಡೆಸುತ್ತಿzವೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅರಣ್ಯ ಪ್ರದೇಶ ನಮ್ಮ ವ್ಯಾಪ್ತಿ. ಹಾಗಾಗಿ ಎಲ್ಲಿ ಹೋಗುವುದಿದ್ದರೂ ನಮಗೆ ತಿಳಿಸಬೇಕು ಎಂದು ಅರಣ್ಯ ಇಲಾಖೆಯ ಓರ್ವ ಅಧಿಕಾರಿ ಹೇಳಿದಾಗ ಅಲ್ಲಿಯೇ ತಿರುಗೇಟು ನೀಡಿರುವ ಎಸ್‌ಐಟಿಯ ಅಧಿಕಾರಿಯೋರ್ವರು ನಿಮ್ಮ ಅರಣ್ಯ ಪ್ರದೇಶದಲ್ಲಿ ಹೆಣ ಹೂತು ಹಾಕಲು ಬಿಟ್ಟzಕೆ. ಆಗ ಎಲ್ಲಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ಉತ್ಖನನ ನಡೆಸುವ ವಿಚಾರಕ್ಕೆ ಸಂಬಂಧಿಸಿ ಎಸ್‌ಐಟಿ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತೆ ಕು. ಸ್ಟೆಲ್ಲಾ ವರ್ಗೀಸ್ ನಡುವೆ ಗೊಂದಲ ಉಂಟಾಗುತ್ತಿರುವುದಾಗಿ ತಿಳಿದು ಬಂದಿದೆ. ರಹಸ್ಯ ಮಾಹಿತಿಗಳು ಬಹಿರಂಗ ಆಗಬಾರದು ಎಂಬ ಕಾರಣಕ್ಕಾಗಿ ಶೋಧ ಕಾರ್ಯದ ಸ್ಥಳದಲ್ಲಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾರ್ಮಿಕರ ಮೊಬೈಲ್ ಫೋನ್ ಸ್ವಿಚ್ಛ್ ಆಫ್ ಮಾಡಲು ಸೂಚಿಸಲಾಗಿದೆ.

ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಕಿರಿಕ್ ಕೀರ್ತಿ ದೂರು; ಧರ್ಮಸ್ಥಳ ಕ್ಷೇತ್ರದ ಪರ ಇರುವವರನ್ನು ನಿಂದಿಸಲಾಗುತ್ತಿದೆ. ಎಸ್‌ಐಟಿ ನಿಯತ್ತಿನಿಂದ ತನಿಖೆ ಮಾಡುತ್ತಿದೆ. ಆದರೂ ಎಸ್‌ಐಟಿ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ತನಿಖೆ ಮುಗಿಯುವ ಮೊದಲು ಜನರ ಮೈಂಡ್ ಸೆಟ್ ಬದಲಿಸುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೂಲತಃ ಶಿವಮೊಗ್ಗದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಇರುವ ಯೂ ಟ್ಯೂಬರ್ ಕಿರಿಕ್ ಕೀರ್ತಿ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆ.೬ರಂದು ದೂರು ನೀಡಿದ್ದಾರೆ. ಗಿರೀಶ್ ಮಟ್ಟಣ್ಣನವರ್, ಲಾಯರ್ ಜಗದೀಶ್ ಮತ್ತು ಹಲವಾರು ಪೇಜ್‌ಗಳ ಹೆಸರು ಉಲ್ಲೇಖ ಮಾಡಿzವೆ ಎಂದು ಬಳಿಕ ಮಾಧ್ಯಮಗಳಿಗೆ ಕಿರಿಕ್ ಕೀರ್ತಿ ತಿಳಿಸಿದ್ದಾರೆ. ಜನರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಪ್ರಕರಣದ ತನಿಖೆ ಮುಗಿಯುವ ತನಕ ನಾವು ಮಾತನಾಡುವುದಿಲ್ಲ. ತನಿಖಾ ಅಧಿಕಾರಿಯಾಗಿರುವ ಮಂಜುನಾಥ ಗೌಡ ಅವರ ಮೇಲೆ ಆರೋಪ ಮಾಡಲಾಗಿದೆ. ದೂರುದಾರ ವ್ಯಕ್ತಿಯಿಂದ ಹೊರಗಿನ ವ್ಯಕ್ತಿಗಳಿಗೆ ಮಾಹಿತಿ ಸೋರಿಕೆ ಆಗುತ್ತಿದೆ. ಪ್ರತಿ ಬಾರಿ ಕೂಡ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಮಂಜುನಾಥ ಗೌಡ ಅವರನ್ನು ಟಾರ್ಗೆಟ್ ಮಾಡಿದ್ದಾಯ್ತು. ಎಸ್‌ಐಟಿಯಿಂದ ಅವರನ್ನು ಕಿತ್ತು ಹಾಕಿಲ್ಲ. ಎಸ್‌ಪಿ ಸೈಮನ್ ಮೇಲೆ ಈಗ ಮತ್ತೊಬ್ಬ ಆರೋಪ ಮಾಡುತ್ತಿದ್ದಾರೆ. ಎಸ್‌ಐಟಿ ಬೇರೆ ಬೇರೆ ರೀತಿಯಲ್ಲಿ ತನಿಖೆ ಮಾಡುತ್ತದೆ ಎಂದು ಕಿರಿಕ್ ಕೀರ್ತಿ ಹೇಳಿದ್ದಾರೆ.

ಸಂಖ್ಯೆ ೧೧ರಲ್ಲಿ ಮೂರು ವ್ಯಕ್ತಿಗಳ ಕಳೆಬರ ಪತ್ತೆ-ವಕೀಲ ಮಂಜುನಾಥ್: ಸಂಖ್ಯೆ ೧೧ರ ಪ್ರದೇಶದಿಂದ ಸುಮಾರು ೧೦೦ ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಸುಮಾರು ೧೦೦ ಅಡಿ ಎತ್ತರದ ಗುಡ್ಡದ ಮೇಲೆ ಕನಿಷ್ಟ ಮೂರು ವ್ಯಕ್ತಿಗಳ ಕಳೇಬರಗಳು ಪತ್ತೆಯಾಗಿದೆ. ಅದರಲ್ಲಿನ ಒಂದು ಕಳೇಬರ ಮಹಿಳೆಯದಾಗಿದೆಯೆಂದು ತಿಳಿದು ಬಂದಿದೆ. ಅಲ್ಲೇ ಹೆಂಗಸಿನ ಸೀರೆಯೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲಿಗೆ ತೆರಳಿದ್ದ ತಂಡದ ಕೆಲವರು ಗುಡ್ಡವನ್ನು ಏರುವಾಗ ಜಾರಿಬಿದ್ದು ಗಾಯಗೊಂಡರು ಎಂದು ತಿಳಿದು ಬಂದಿದೆ. ಭೀಮ ಮೊದಲು ಮಾಪನ ಮಾಡಿದ್ದ ಸಂಖ್ಯೆ ೧೧ರ ಬದಲು ಅದರ ಪಕ್ಕಕ್ಕೆ ಕೊಂಡೊಯ್ಯಲು ಆತನಿಗೆ ಅವಕಾಶವನ್ನು ಎಸ್‌ಐಟಿಯವರು ನೀಡಿದ್ದರಿಂದಲೇ ನಿನ್ನೆಯ ಹೊರ ತೆಗೆಯುವಿಕೆಯು ಯಶಸ್ವಿಯಾಯಿತೆಂದು ಹೇಳಲಾಗಿದೆ. ಮೊದಲ ದಿನದ ದೂರುದಾರನ ಮಾಪಕಕ್ಕೇ ಆತ ಕಟ್ಟುಬಿದ್ದು ಅಲ್ಲೇ ಕಳೇಬರಗಳನ್ನು ಹೊರತೆಗೆಯಬೇಕೆನ್ನುವುದು ಅವೈಜ್ಞಾನಿಕ ಮಾತ್ರವಲ್ಲ. ನಿರರ್ಥಕವೂ ಹೌದು. ಮೊದಲ ದಿನ ತೋರಿದ್ದ ಜಾಗಗಳನ್ನು ಗುರುತಿಸಲು ಸ್ವಾತಂತ್ರ್ಯವಿರುವ ವ್ಯಕ್ತಿಗೆ ತಾನು ಮೊದಲು ಗುರುತಿಸಿದ್ದು ತಪ್ಪಾಗಿರಬಹುದೆಂದು ತಿದ್ದಿಕೊಳ್ಳಲು ಸಹಜ ಸ್ವಾತಂತ್ರ್ಯವೂ ಇದೆ. ಈವರೆಗಿನ ಎಸ್‌ಐಟಿಯ ಮತ್ತು ಶೋಧ ಕಾರ್ಯವನ್ನು ಮುನ್ನಡೆಸುತ್ತಿರುವ ತಂಡದ ಕಾರ್ಯಕ್ಷಮತೆಯು ಶ್ಲಾಘನೀಯ ಎಂದು ಸುಜಾತ ಭಟ್ ಅವರ ವಕೀಲ ಮಂಜುನಾಥ್ ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದ್ಮಲತಾ ಕುಟುಂಬದ ಸದಸ್ಯರನ್ನು ಭೇಟಿಯಾದ ಸಿಪಿಐಎಂ ನಿಯೋಗ
ವೇದವಲ್ಲಿ, ಮಾವುತ ನಾರಾಯಣ, ಯಮುನಾ ಪ್ರಕರಣದ ತನಿಖೆಗೂ ಆಗ್ರ

೧೯೮೬ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಪದ್ಮಲತಾ ಕುಟುಂಬದ ಸದಸ್ಯರನ್ನು ಆ.೪ರಂದು ಸಿಪಿಐಎಂ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಪ್ರಕಾಶ್ ಕೆ., ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ, ಕೆ.ಎಸ್.ವಿಮಲ, ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮತ್ತು ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಅವರನ್ನು ಒಳಗೊಂಡ ಜಿಲ್ಲಾ ಹಾಗೂ ತಾಲೂಕು ಮುಖಂಡರ ನಿಯೋಗ ಪದ್ಮಲತಾ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆ.

ಉಜಿರೆ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಪದ್ಮಲತಾ ಸಿಪಿಐ(ಎಂ) ಪಕ್ಷದ ಧರ್ಮಸ್ಥಳ ಘಟಕದ ಕಾರ್ಯದರ್ಶಿ ಆಗಿದ್ದ ದೇವಾನಂದ ಅವರ ಮಗಳಾಗಿದ್ದರು. ಸ್ಥಳೀಯ ಚುನಾವಣೆಗಳಲ್ಲಿ ಸಿಪಿಐ(ಎಂ) ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಕ್ಕೆ ಪ್ರತೀಕಾರವಾಗಿ ಪದ್ಮಲತಾ ಅವರನ್ನು ಅಪಹರಿಸಿ ಕೊಲೆಗೈಯಲಾಯಿತು. ಇದರ ಕುರಿತು ನೀಡಲಾದ ದೂರನ್ನು ಸಮರ್ಪಕ ತನಿಖೆ ಮಾಡದೆ ಮುಚ್ಚಿ ಹಾಕಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಿಪಿಐಎಂ ಮುಖಂಡರು ಅನಾಮಿಕ ವ್ಯಕ್ತಿಯ ದೂರಿನ ಆಧಾರದಲ್ಲಿ ಈಗ ನಡೆಯುತ್ತಿರುವ ಎಸ್.ಐ.ಟಿ. ತನಿಖೆಯ ಕುರಿತು ಈ ಸಂದರ್ಭದಲ್ಲಿ ಗಮನ ಹರಿಸಿzವೆ. ಸಮರ್ಪಕ ತನಿಖೆ ಮಾಡದೆ ಮುಚ್ಚಿ ಹಾಕಲಾಗಿರುವ ಪದ್ಮಲತಾ ಕೊಲೆ ಸೇರಿದಂತೆ, ವೇದವಲ್ಲಿ ಕೊಲೆ, ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಕೊಲೆ ಪ್ರಕರಣಗಳನ್ನು ಎಸ್.ಐ.ಟಿ.ಯು ತನ್ನ ವ್ಯಾಪ್ತಿಗೆ ತಂದುಕೊಂಡು ತನಿಖೆ ನಡೆಸಬೇಕೆಂದು ಅಭಿಪ್ರಾಯ ಪಟ್ಟಿದ್ದೇವೆ.

ಸಿಬಿಐ ನೀಡಿರುವ ತೀರ್ಪಿನ ಆಧಾರದಲ್ಲಿ ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡಬೇಕಾಗಿದೆ. ಪ್ರಸ್ತುತ ಎಸ್.ಐ.ಟಿ. ಇವುಗಳ ತನಿಖೆಯನ್ನು ಮಾಡಲು ಸಾಧ್ಯವಿಲ್ಲ ಎನ್ನುವುದಾದರೆ ಪ್ರತ್ಯೇಕವಾದ ಎಸ್.ಐ.ಟಿ. ರಚನೆ ಮಾಡಿ ಹಿಂದೆ ನಡೆದಿರುವ ಎಲ್ಲಾ ಅತ್ಯಾಚಾರ ಮತ್ತು ಕೊಲೆಗಳ ಸಮಗ್ರ ತನಿಖೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಕೊಲೆಗಳು, ಅತ್ಯಾಚಾರಗಳು ಮತ್ತು ದೌರ್ಜನ್ಯಗಳ ವಿರುದ್ಧ ಸಿಪಿಐಎಂ ಹೋರಾಡುತ್ತಾ ಬಂದಿದೆ. ಹೀಗಿರುವಾಗ ವಿರೋಧ ಪಕ್ಷದ ನಾಯಕ ಬಿಜೆಪಿಯ ಆರ್.ಅಶೋಕ್ ಕಮ್ಯುನಿಸ್ಟರನ್ನು ಟೀಕಿಸಿ ಮಾತನಾಡಿರುವುದು ಮತ್ತು ಕೇರಳದ ಎಡರಂಗದ ಸರ್ಕಾರವನ್ನು ಎಳೆದು ತಂದಿರುವುದು ರಾಜಕೀಯ ಹತಾಶೆಯನ್ನು ತೋರಿಸುತ್ತದೆ.

ಜನರ ಪರವಾಗಿ ಪ್ರತಿಪಕ್ಷವಾಗಿ ಧ್ವನಿ ಎತ್ತಬೇಕಿದ್ದ ವಿಪಕ್ಷ ನಾಯಕರು ಜನಧ್ವನಿಯನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ. ಇದುವರೆಗೂ ನಡೆದಿರುವ ಅಮಾಯಕ ಜನಸಾಮಾನ್ಯರ ಕೊಲೆಗಳು ಮತ್ತು ಅಸಹಜ ಸಾವುಗಳ ಕುರಿತು ಬಿಜೆಪಿಯವರ ಬಾಯಿ ಬಂದ್ ಆಗಿದೆ. ಹಿಂದೂ ನಾವೆಲ್ಲ ಒಂದು ಎಂಬ ಗೋಸುಂಬೆ ಘೋಷಣೆ ಬಯಲಾಗಿದೆ ಎಂದು ಸಿಪಿಐಎಂ ತಿಳಿಸಿದೆ.

ರೀಲ್ಸ್ ಮಾಡಿದವರಿಗೆ ತರಾಟೆ: ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಬೆಟ್ಟದ ಎದುರು ಪದ್ಯ ಹಾಕಿ ರೀಲ್ಸ್ ಮಾಡುತ್ತಿದ್ದ ಬೆಂಗಳೂರು ಮೂಲದ ಯುವಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಆ.೪ ರಂದು ನಡೆದಿದೆ. ಯುವಕರು ದೇವಸ್ಥಾನದ ಮುಂದೆ ಮೊಬೈಲ್ ಫೋನ್ ಹಿಡಿದು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರು ಯುವಕರನ್ನು ತರಾಟೆಗೆತ್ತಿಕೊಂಡು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಯುವಕರಿಗೆ ಎಚ್ಚರಿಕೆ ನೀಡಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

೧೧-೧೨ನೇ ಪಾಯಿಂಟ್‌ನಲ್ಲಿ ಸಿಗದ ಅವಶೇಷ: ದೂರುದಾರ ಗುರುತಿಸಿದ ೧೧ ಮತ್ತು ೧೨ನೇ ಸ್ಥಳದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳಿಗೆ ಯಾವುದೇ ಕುರುಹು ದೊರಕಿಲ್ಲ. ಬೆಳಗ್ಗೆ ೧೧.೩೦ರಿಂದ ೧.೫೫ರವರೆಗೆ ತನಿಖಾ ತಂಡ ಕಾರ್ಯಾಚರಣೆ ನಡೆಸಿತು. ಮಧ್ಯಾಹ್ನದ ಬಳಿಕ ೧೨ನೇ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆಯಿತು. ಸುಮಾರು ೧೦ ಅಡಿ ಆಳದವರೆಗೆ ಶೋಧಿಸಿದರೂ ಯಾವುದೇ ಕುರುಹು ಸಿಕ್ಕಿಲ್ಲ. ಮಂಗಳವಾರ ಕಾರ್ಯಾಚರಣೆ ವೇಳೆ ತೀವ್ರ ಮಳೆಯಿಂದಾಗಿ ೧೩ನೇ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಗುರುತು ಸಂಖ್ಯೆ ೧೧ರ ಪ್ರದೇಶದಿಂದ ಸುಮಾರು ೧೦೦ ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಸುಮಾರು ೧೦೦ ಅಡಿ ಎತ್ತರದ ಗುಡ್ಡದ ಮೇಲೆ ಕನಿಷ್ಠ ಮೂರು ವ್ಯಕ್ತಿಗಳ ಕಳೇಬರಗಳು ಪತ್ತೆಯಾಗಿದ್ದು ಅದರಲ್ಲಿನ ಒಂದು ಕಳೇಬರ ಮಹಿಳೆಯದಾಗಿದೆ. ಅಲ್ಲಿಯೇ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದು ಸುದ್ದಿ ಹರಡಿದೆಯಾದರೂ ಖಚಿತವಾಗಿಲ್ಲ. ಕಾರ್ಯಾಚರಣೆಗೆ ತೆರಳಿದ್ದ ತಂಡದ ಕೆಲವರು ಗುಡ್ಡವನ್ನು ಏರುವಾಗ ಜಾರಿಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ ಎಂದು ತಿಳಿದು ಬಂದಿದೆ.

೬ ಸಾಕ್ಷಿದಾರರು ಆಗಮನ?: `ಭೀಮ’ ಎಂದು ಕರೆಯಲ್ಪಡುವ ಅನಾಮಧೇಯ ವ್ಯಕ್ತಿ ನೀಡಿರುವ ದೂರಿಗೆ ಸಂಬಂಧಿಸಿ ಸಾಕ್ಷಿ ಹೇಳಲು ಆರು ಮಂದಿ ಮುಂದಾಗಿದ್ದಾರೆ. ಧರ್ಮಸ್ಥಳ ಗ್ರಾಮ ಆಸುಪಾಸಿನಲ್ಲಿ ನಡೆದ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮಾಹಿತಿ ಇರುವುದಾಗಿ ತಿಳಿಸಿ ಆರು ಜನ ಈಗಾಗಲೇ ಎಸ್‌ಐಟಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರಿಗೆ ಕಚೇರಿಗೆ ಬರಲು ದಿನಾಂಕ ಮತ್ತು ಸಮಯ ತಿಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ. ಈ ಮಧ್ಯೆ ಜಯಂತ್ ಟಿ. ಅವರ ದೂರು ನೀಡಿದ ನಂತರ ಇನ್ನೂ ಕೆಲವರು ದೂರು ನೀಡಲು ಮುಂದಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಹೆಣ ಹೂತ ಪ್ರಕರಣಗಳ ದಾಖಲೆ ಇಲ್ಲ! ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂತ ಪ್ರಕರಣದ ದಾಖಲೆಗಳು ನಮ್ಮಲ್ಲಿ ಇಲ್ಲ ಎಂದು ಪೊಲೀಸರು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ೨೦೦೦ನೇ ಇಸವಿಯಿಂದ ೨೦೧೫ರವರೆಗಿನ ಅಸಹಜ ಸಾವಿನ ಪ್ರಕರಣಗಳ ದಾಖಲೆಗಳನ್ನು ಬೆಳ್ತಂಗಡಿ ಪೊಲೀಸರಿಂದ ಆರ್‌ಟಿಐ ಮೂಲಕ ಕೇಳಲಾಗಿತ್ತು. ಆದರೆ ಹಳೆಯ ದಾಖಲೆಗಳು ತಮ್ಮ ಬಳಿ ಇಲ್ಲ ಎಂದು ಪೊಲೀಸರು ಉತ್ತರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್‌ಗಳು ಮತ್ತು ಮೃತರ ಗುರುತಿನ ಫೋಟೋಗಳನ್ನು ಹಾಗೂ ಪತ್ರಿಕಾ ಹೇಳಿಕೆಗಳನ್ನು ಆಡಳಿತಾತ್ಮಕ ಆದೇಶಗಳಿಗೆ ಅನುಸಾರವಾಗಿ ನಾಶಪಡಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ ೧೭೪(ಎ) ಅಡಿಯಲ್ಲಿ ೧೫ ವರ್ಷಗಳ ಯುಡಿಆರ್ ವಿವರಗಳನ್ನು ಕೇಳಲಾಗಿತ್ತು. ಆದರೆ ಈ ದಾಖಲೆಗಳು ಲಭ್ಯವಿಲ್ಲ. ವಿವಿಧ ಸುತ್ತೋಲೆಗಳು ಮತ್ತು ಕಾರ್ಯ ವಿಧಾನಗಳ ಅಡಿಯಲ್ಲಿ ವಿಲೇವಾರಿ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಜೂನ್ ೨೬, ೨೦೧೩ರ ಅಧಿಸೂಚನೆ ಮತ್ತು ನವೆಂಬರ್ ೨೩, ೨೦೨೩ರ ಪೊಲೀಸ್ ಅಧೀಕ್ಷಕರ ಆದೇಶವನ್ನು ಉಲ್ಲೇಖಿಸಿ ಉಳಿದ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಆರ್‌ಟಿಐಯಲ್ಲಿ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here