ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಉಪನ್ಯಾಸ ಕಾರ್ಯಕ್ರಮ

0

ಬೆಳ್ತಂಗಡಿ: ‘ಅರಿವು ಮತ್ತು ಸುಖವನ್ನು ತರಬಲ್ಲ ದೊಡ್ಡ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವುದರಿಂದ ಸುಂದರ ಜೀವನಾನುಭವದ ವಿಚಾರಗಳನ್ನು ಪಡೆಯಬಹುದು’ ಎಂದು ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಯದುಪತಿ ಗೌಡ ಹೇಳಿದರು.

ಅವರು ಆ. 6ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲ್ಲೂಕು ಘಟಕ ಹಾಗೂ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಇದರ ನೇತೃತ್ವದಲ್ಲಿ ನಡೆದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಉಪನ್ಯಾಸ ಮಾಲೆ ಪ್ರಯುಕ್ತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಕುರಿತು ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ವಸಂತ ಬಿ. ಶೆಟ್ಟಿ ಮಾಸ್ತಿಯವರ ಬದುಕನ್ನು ಕುರಿತು ಉಪನ್ಯಾಸ ನೀಡಿ, ‘ಎಷ್ಟೇ ಅಧಿಕಾರವಿದ್ದರೂ ತಮ್ಮ ಬಾಲ್ಯದ ಬಡತನವನ್ನು ಮರೆಯದೆ ಅಧಿಕಾರದ ಮದವನ್ನು ತಲೆಗೆ ಏರಿಸಿಕೊಳ್ಳದೆ ಜನರಿಗಾಗಿ ಮತ್ತು ಕನ್ನಡ ಸಾಹಿತ್ಯಕ್ಕಾಗಿಯೇ ಜೀವನವನ್ನು ಮೀಸಲಿಟ್ಟ ಧೀಮಂತ ವ್ಯಕ್ತಿ ಮಾಸ್ತಿಯವರು. ಹಾಗಾಗಿಯೇ ಅವರು ಕನ್ನಡದ ಆಸ್ತಿ ಎಂದು ಕರೆಸಿಕೊಂಡಿದ್ದಾರೆ’ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ಉಪಸ್ಥಿತರಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕರಾದ ಗಣೇಶ್ ಬಿ ಶಿರ್ಲಾಲು ಸ್ವಾಗತಿಸಿ, ರಾಕೇಶ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here