
ತೇಜಸ್ವಿನಿ ಶೆಟ್ಟಿ ಗರ್ಡಾಡಿ
ತುಳುನಾಡಿನಲ್ಲಿ ದೇವರಿಗಿಂತ ಹೆಚ್ಚಾಗಿ ದೈವವನ್ನು ನಂಬುವವರೇ ಜಾಸ್ತಿ. ತುಳುನಾಡಿನ ಪ್ರತಿ ಮನೆಯಲ್ಲಿ ಬೇರೆ ಬೇರೆ ದೈವಗಳನ್ನು ಆರಾಧಿಸುತ್ತಾರೆ. ಹಾಗೆಯೇ ಬೆಳ್ತಂಗಡಿ ತಾಲೂಕಿನ ಕೆಲವು ಭಾಗಗಳಲ್ಲಿ ಅಜ್ಜನನ್ನು ಬಹಳ ನಂಬುತ್ತಾರೆ, ಆರಾಧಿಸುತ್ತಾರೆ.
ಮನೆಯ ದನ ಬಂದಿಲ್ಲ ಅಂದ್ರೆ ಬೊಳ್ಳಜ್ಜನಿದ್ದಾನೆ.. ನಮ್ಮ ಮನೆಯ ಮಕ್ಕಳಿಗೆ ಹುಷಾರಿಲ್ಲ ಅಂದಾಗಲೂ ಆತನೇ ಕಾಯುತ್ತಾನೆ. ಮನೆಯಲ್ಲೊಂದು ಬೆಲೆ ಬಾಳುವ ವಸ್ತು ಕಾಣಿಸುತ್ತಿಲ್ಲ, ಮನೆಯಲ್ಲಿನ ಆರೋಗ್ಯಸಮಸ್ಯೆ, ಆರ್ಥಿಕ ಸಮಸ್ಯೆ ಎಲ್ಲದಕ್ಕೂ ಕೂಡ ಪರಿಹಾರ ಬೊಳ್ಳಜ್ಜ.. ಯಾರಿವರು ಎಲ್ಲ ಸಮಸ್ಯೆಗಳಿಗೂ, ಎಲ್ಲರಿಗೂ ಕೂಡ ಪರಿಹಾರ ಒದಗಿಸುವ ಬೊಳ್ಳಜ್ಜ?
ಅವರು ಬೆಳ್ತಂಗಡಿ ತಾಲೂಕಿನ ಬಳಂಜ ಸುತ್ತಮುತ್ತ ಆರಾಧಿಸುವ ಆರಾಧ್ಯ ದೈವ, ಪ್ರೀತಿಯ ಅಜ್ಜನೆಂದೇ ಕರೆಯಲ್ಪಡುವ ಬೊಳ್ಳಜ್ಜ ದೈವ.
ದೈವದ ಇತಿಹಾಸ: ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬೊಳ್ಳಾಜೆ ಎಂಬ ಊರಿನಲ್ಲಿ ಬೊಳ್ಳಜ್ಜನ ಮೂಲ ಸ್ಥಾನವಿದೆ. ಮೂಲತಃ ಮಲೆನಾಡಿನವರಾದ ಇವರ ನಿಜವಾದ ಹೆಸರು ಮಣ್ಣೊಡ್ಡಜ್ಜ.
ಕೆಲಸದ ನಿಮಿತ್ತ ತುಳುನಾಡಿಗೆ ಬಂದ ಬೊಳ್ಳಜ್ಜೆ ಬಳಂಜ ದೇವಸ್ಥಾನದಲ್ಲಿದ್ದ ಕೆರೆಯನ್ನು ಒಂದು ರಾತ್ರಿಯಲ್ಲಿ ಒಬ್ಬರೇ ಕೆರೆ ನಿರ್ಮಿಸಿದರು. ಇದರಿಂದ ಆಶ್ಚರ್ಯಗೊಂಡ ಅವರ ಜತೆಗಾರರು ಅವರನ್ನು ೨ ತುಂಡು ಮಾಡಿ ಎರಡು ಕಡೆ ಹೂಳಿದರು. ಅಚ್ಚರಿ ಎಂದರೆ ಮರುದಿನ ಅವರು ಜೀವಂತವಾಗಿ ಬಂದರು! ಪುನಃ ೩ ತುಂಡು ಮಾಡಿ ಬೊಳ್ಳಾಜೆಯ ೩ ಕಡೆಯಲ್ಲಿ ಹೂಳಿದರು.
ಈ ಘಟನೆ ಬಳಿಕ ಊರಿನವರಿಗೆ ಕೆಲವು ತೊಂದರೆಗಳು ಕಾಣಿಸಿಕೊಳ್ಳಲು ಶುರುವಾದವು. ಜನರು ಮನೆಗೆ ಮದ್ಯಪಾನವನ್ನು ತೆಗೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಮನೆ ತಲುಪುವ ವೇಳೆ ಆ ಮದ್ಯಪಾನದ ಪ್ಯಾಕೆಟ್ ಮಾತ್ರ ಉಳಿಯುತ್ತಿತ್ತು. ಮದ್ಯ ಇರುತ್ತಿರಲಿಲ್ಲ!
ನಂತರ ಪ್ರಶ್ನೆ ಹಾಕಿ ನೋಡಿದಾಗ ವಿಷಯ ತಿಳಿದು, ಬೊಳ್ಳಾಜೆ ಎಂಬಲ್ಲಿ ಅಜ್ಜನಿಗೆ ದೈವಸ್ಥಾನವನ್ನು ನಿರ್ಮಿಸಿ ಜನರು ತಮ್ಮ ತಮ್ಮ ಮನೆಯಲ್ಲಿ ನಿರಂತರವಾಗಿ ಅಜ್ಜನನ್ನು ನಂಬಿ, ಅಗೆಲು ಸೇವೆಯನ್ನು ನೀಡುವುದು ರೂಢಿಯಾಗುತ್ತಾ ಬಂತು. ಮೂಲಸ್ಥಾನ ಬೊಳ್ಳಾಜೆಯಲ್ಲಾದ್ದರಿಂದ ಅವರ ಹೆಸರು ಬೊಳ್ಳಜ್ಜೆ ಎಂದು ಪ್ರಚಾರಗೊಂಡಿತು.
ನಂತರ ಅಜ್ಜನಿಗೆ ಮೊದಲ ಬಾರಿಗೆ ಕಾರ್ಯಾಣ ಎಂಬ ಶೆಟ್ರ ಮನೆಯಲ್ಲಿ ದೈವಕ್ಕೆ ಕೋಲ ಸೇವೆ ನೀಡಲಾಯಿತು. ಆ ಸಮಯದಲ್ಲಿ ನೋಣಯ್ಯ ಪರವ ಎಂಬವರು ದೈವ ನರ್ತಕನಾಗಿ ಸೇವೆ ಸಲ್ಲಿಸಿದರು. ನಂತರದ ದಿನಗಳಿಂದ ಬೇಬಿ ಪರವ ಎಂಬವರು ೮ ವಷದಿಂದ ದೈವ ನರ್ತಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಜ್ಜನಿಗೆ ಕೋಲ ಸೇವೆ ನೀಡಲು ಶುರು ಮಾಡಿದ ನಂತರ ಕಲೆ ಕಾರ್ಣಿಕ ಹೆಚ್ಚಾಗಿದೆ ಎಂಬುದು ಜನರ ನಂಬಿಕೆ.
೧.೫ ವಷದೊಳಗೆ ಮಗು: “ನಾನು ಅಜ್ಜನ ಹೆಸರಿನಲ್ಲಿ ಪ್ರಶ್ನೆ ಹಾಕಿ ಪ್ರಸಾದ ನೀಡುತ್ತೇನೆ. ಬೆಳಾಲಿನ ಒಂದು ಕುಟುಂಬದವರಿಗೆ ಮಗು ಆಗದೇ ಇರುವುದರಿಂದ ನನ್ನ ಬಳಿ ಬಂದು ಅವರ ಸಮಸ್ಯೆ ಹೇಳಿಕೊಂಡರು. ನಾನು ಅಜ್ಜನ ಹೆಸರಿನಲ್ಲಿ ಪ್ರಸಾದವನ್ನು ಕೊಟ್ಟೆ. ಇಲ್ಲಿ ಪ್ರಾರ್ಥಿಸಿಕೊಂಡು ಹೋಗಿ. ೧.೫ ವರ್ಷದೊಳಗೆ ಮಗು ಆಗುತ್ತದೆ ಎಂದು ಹೇಳಿದೆ. ನಂತರ ಅವರು, ಮಗುವಾದರೆ ಇಲ್ಲಿಗೆ ಬಂದು ಅಗೆಲು ಸೇವೆ ನೀಡುವುದಾಗಿ ಪ್ರಾರ್ಥಿಸಿದರು. ಹಾಗೆಯೇ ೧.೫ ವರ್ಷದೊಳಗೆ ಮಗುವಿಗೆ ಜನ್ಮ ನೀಡಿದರು. ಆದರೆ ಕೊಟ್ಟ ಮಾತು ಮರೆತುಬಿಟ್ಟರು. ನಂತರ ಅವರಿಗೆ ಏನೋ ತೊಂದರೆ ಉಂಟಾಗಿ ಬೇರೆ ಸ್ಥಳದಲ್ಲಿ ಪ್ರಶ್ನೆ ಕೇಳಲು ಹೋದಾಗ ಅಲ್ಲಿ ನೀವು ಅಗೆಲು ಸೇವೆ ಕೊಡಲು ಮರೆತಿದ್ದೀರಿ ಎಂಬುದಾಗಿ ತಿಳಿದುಬಂತು. ನಂತರ ಅವರು ಇಲ್ಲಿಗೆ ಬಂದು ಅಜ್ಜನಿಗೆ ಅಗೆಲು ಸೇವೆ ನೀಡಿದರು.”
– ಬೇಬಿ ಪರವ, ಬೊಳ್ಳಾಜೆ, ದೈವ ನರ್ತಕ
ನಾನು ೧೦ನೇ ತರಗತಿಯ ನಂತರ, ೫ ವರ್ಷದಿಂದ ದೈವ ನರ್ತಕನಾಗಿ ಸೇವೆ ಸಲ್ಲಿಸುತ್ತಿzನೆ. ಅಜ್ಜನ ಸೇವೆ ಪ್ರಾರಂಭಿಸಿದ ನಂತರ ಓಳ್ಳೆಯ ಅನುಭವವಾಗಿದೆ. ಕೋಲ ಸೇವೆ ಕೊಟ್ಟ ಮನೆಯೂ ಸಹ ಅಭಿವೃದ್ಧಿಯಾಗಿದೆ.”
– ರಾಕೇಶ್, ದೈವ ನರ್ತಕ
(ಬೇಬಿ ಪರವ ಅವರ ಮಗ)
ಒಮ್ಮೆ ದೈವ ನರ್ತಕನಾದ ಬೇಬಿ ಪರವ ಬಳಂಜ ದೇವಸ್ಥಾನದ ಆಚಾರ್ಯರಾದ ಅಪ್ಪು ಭಟ್ರ ಬಳಿ ಅಜ್ಜನ ಕೋಲದ ಕುರಿತಾಗಿ ಕೇಳಲು ಹೋದರು. ಆಗ ಭಟ್ಟರು, ಅಜ್ಜನಿಗೆ ರುಂಡವಿಲ್ಲ, ಅವರು ಸನ್ಯಾಸಿಯ ರೂಪ ಉಳ್ಳವರು. ಹೀಗಾಗಿ ನೀವು ದೈವದ ನರ್ತನೆಗೆ ಕಚ್ಚೆ ಕಟ್ಟಿ, ಉದ್ದನೆಯ ಬಿಳಿ ಕೂದಲನ್ನು ಧರಿಸಿ ಎಂದು ಹೇಳಿದರು. ಅವರು ಹೇಳಿದಂತೆಯೇ ನಂತರದ ದಿನಗಳಲ್ಲಿ ಬೇಬಿ ಪರವ ಅವರು ದೈವದ ನರ್ತನೆಯನ್ನು ಮುಂದುವರಿಸಿದರು.
ಬೊಳ್ಳಜ್ಜ ದೈವ ಎಲ್ಲೆಲ್ಲಿ ಆರಾಧಿಸುತ್ತಾರೆ?
ಬಳಂಜ, ಪಡಂಗಡಿ, ಗರ್ಡಾಡಿ, ಬದ್ಯಾರ್ ಇತ್ಯಾದಿ.
ಅಜ್ಜನಿಗೆ ಅರ್ಪಿಸುವ ಹರಕೆಗಳೇನು?:
ಅಗೆಲು ಸೇವೆಯಲ್ಲಿ ಅಜ್ಜನಿಗೆ ಕೋಳಿ, ರೊಟ್ಟಿ, ಬೀಡ, ಬೀಡಿ, ಶೇಂದಿ, ಮದ್ಯಪಾನ ಎಂದರೆ ಇಷ. ಮೀನು ಸಾರಿನಿಂದಲೂ ಕೆಲವರು ಅಜ್ಜನಿಗೆ ಅಗೆಲು ನೀಡುತ್ತಿದ್ದರು.