
ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸಾಧಕ ರೈತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಸ್ತಾಂತರ ಆ.2ರಂದು ಸಂಘದ ಸಾಧನಾ ಕಟ್ಟಡದ ಅಟಲ್ ಜೀ ಸಭಾಭವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ. ವಹಿಸಿ ಸ್ವಾಗತಿಸಿ, ಸಂಘದ ವತಿಯಿಂದ ನಡೆದಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸಂಘವು ಆರ್ಥಿಕ ವರ್ಷಾಂತ್ಯದಲ್ಲಿ ರೂ. 499 ಕೋಟಿ ಉತ್ತಮ ವ್ಯವಹಾರ ನಡೆಸಿ, ಶೇ. 95.85% ಸಾಲ ವಸೂಲಾತಿಯನ್ನು ಮಾಡಿ ರೂ. 2,72,37,991.16 ಲಾಭ ಗಳಿಸಿದೆ.

ಸದಸ್ಯರರಿಗೆ ಶೇ 23% ಡಿವಿಡೆಂಟ್ ಘೋಸಿಸಿ ಇದರಿಂದ 3% ರೈತರ ಆರೋಗ್ಯ ನಿಧಿ ಮತ್ತು ಬಡ ರೈತರಿಗೆ ಮನೆ ನಿರ್ಮಾಣಕ್ಕೆ ನೀಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಉಮಾನಾಥ, ಶೀನ, ಧನಲಕ್ಷ್ಮೀ ಜನಾರ್ಧನ್, ಪ್ರಭಾಕರ್ ಗೌಡ ಬೊಳ್ಮ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ, ವಿಕ್ರಂ ಗೌಡ, ತಂಗಚ್ಚನ್, ಸುದರ್ಶನ್ ಕೋಟ್ಯಾನ್, ಹಾಗೂ ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಯಶವಂತ್ ಪುದುವೆಟ್ಟು, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಹಾಗೂ ಸಿಬ್ಬಂದಿಗಳು, ಸದಸ್ಯರುಗಳು ಉಪಸ್ಥಿತರಿದ್ದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ ವರದಿ ಮಂಡಿಸಿದರು.
ಕೃಷಿಕರಿಗೆ ಸನ್ಮಾನ: ಧರ್ಮಸ್ಥಳ ಸಹಕಾರಿ ಸಂಘದ ಕಾರ್ಯ ವ್ಯಾಪ್ತಿಯ ಸಂಘದ 12 ಹಿರಿಯ ಸದಸ್ಯರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: 2024-25 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಎಸೆಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ನಡೆಸಿ ಅತ್ಯುತ್ತಮ ಲಾಭಗಳಿಸಿದೆ ಮತ್ತು ಲೆಕ್ಕಪರಿಶೋಧನೆಯಲ್ಲಿ ಸಂಘವನ್ನು ‘ಎ’ ವರ್ಗಕ್ಕೆ ವರ್ಗಿಕರಿಸಲಾಗಿದೆ.
ಡಯಾಲಿಸಿಸ್, ಕ್ಯಾನ್ಸರ್ ಪೀಡಿತ ಸದಸ್ಯರಿಗೆ 25,000 ಸಹಾಯಧನವನ್ನು ನೀಡಲು ನಿರ್ಧರಿಸಿದ್ದೇವೆ, ಸಹಕಾರಿ ಸಂಘದ ಎಲ್ಲಾ ಸದಸ್ಯರ ವ್ಯವಹಾರಗಳನ್ನು ಆಪ್ ಮೂಲಕ ನೋಡಲಾಗುತ್ತದೆ, ಮನೆ, ಆಭರಣ, ವಾಹನ, ಎಲ್ಲ ಸಾಲಗಳ ಬಡ್ಡಿಯನ್ನು ಕಡಿತಗೊಳಿಸಲಾಗುವುದು, ಈ ಸಾಧನೆಗೆ ಬೆನ್ನೆಲುಬಾಗಿರುವ ಸಂಘದ ಸದಸ್ಯರು, ಪ್ರಾಮಾಣಿಕ ಸಿಬ್ಬಂದಿಗಳು, ಅತ್ಯುತ್ತಮ ಆಡಳಿತ ಮಂಡಳಿ ಮತ್ತು ಹಿತೈಷಿಗಳ ಆಶೀರ್ವಾದಗಳಿಂದ ಈ ಯಶಸ್ಸನ್ನು ಗಳಿಸಲು ಸಾಧ್ಯವಾಯಿತು. ಈ ಸಾಧನೆಯಲ್ಲಿ ದೊರೆತ ಯಶಸ್ಸನ್ನು ಸಂಘದ ಎಲ್ಲಾ ಸದಸ್ಯರುಗಳಿಗೆ ಅರ್ಪಿಸುತ್ತೇನೆ ಎಂದು ಸಿಎ ಬ್ಯಾಂಕಿನ ಅಧ್ಯಕ್ಷ ಪ್ರೀತಮ್ ಡಿ. ತಿಳಿಸಿ ವಂದಿಸಿದರು.