ಬುರುಡೆ ರಹಸ್ಯ: ಉತ್ಖನನದಲ್ಲೂ ಸಿಗದ ಉತ್ತರ!- ಎಸ್‌ಐಟಿ ಅಧಿಕಾರಿಗಳಿಂದ ಮುಂದುವರಿದ ಕಾರ್ಯಾಚರಣೆ

0

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಘಟನೆಗಳ ಸಮಗ್ರ ತನಿಖೆಗೆ ರಾಜ್ಯ ಸರಕಾರದಿಂದ ರಚಿಸಲ್ಪಟ್ಟಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಅಪರಾಧ ಕೃತ್ಯಗಳನ್ನು ಭೇದಿಸಲು ಹರಸಾಹಸ ಪಡುತ್ತಿದ್ದಾರೆ.
ದೇಶ ವಿದೇಶದಲ್ಲಿ ಸುದ್ದಿ ಯಾಗುತ್ತಿರುವ ಮತ್ತು ಕ್ಷಣ ಕ್ಷಣಕ್ಕೂ ತೀವ್ರ ಕುತೂಹಲ ಸೃಷ್ಟಿಸುತ್ತಿರುವ ತಲೆ ಬುರುಡೆ ರಹಸ್ಯವನ್ನು ಬಯಲು ಮಾಡಲು ಎಸ್‌ಐಟಿ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎಂ.ಎನ್, ಅನುಚೇತ್ ಮತ್ತು ಜಿತೇಂದ್ರ ದಯಾಮ ಸಾರಥ್ಯದಲ್ಲಿ ತನಿಖೆ ನಡೆಸಲಾಗುತ್ತಿದೆ. ಅನಾಮಿಕ ವ್ಯಕ್ತಿ ತೋರಿಸಿರುವ ಜಾಗಗಳಲ್ಲಿ ಉತ್ಖನನ ಕಾರ್ಯ ನಡೆಸುತ್ತಿರುವ ಅಧಿಕಾರಿಗಳಿಗೆ ಜು.೨೯ ಮತ್ತು ೩೦ರಂದು ನಡೆದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹು ದೊರೆತಿಲ್ಲ. ಕಳೆಬರ ಸಿಗುವ ನಿರೀಕ್ಷೆಯಲ್ಲಿ ಶೋಧ ಕಾರ್ಯ ಮುಂದುವರಿಯಲಿದೆ.
ವಿವಿಧ ಕೋನಗಳಲ್ಲಿ ಮಾಹಿತಿ ಸಂಗ್ರಹ: ಧರ್ಮಸ್ಥಳ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಹಲವಾರು ಮೃತದೇಹಗಳನ್ನು ನನಗೆ ನಿರಂತರವಾಗಿ ಬೆದರಿಸಿ ಹೂತು ಹಾಕಲಾಗಿದೆ ಹಾಗೂ ಬೆದರಿಸಿ ಸಾಕ್ಷ್ಯಗಳನ್ನು ನಾಶ ಪಡಿಸಲಾಗಿದೆ. ಇದೀಗ ಪಾಪಪ್ರಜ್ಞೆಯಿಂದ ತಾನು ದೂರು ನೀಡುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅನಾಮಧೇಯ ವ್ಯಕ್ತಿ ಪೊಲೀಸ್ ಇಲಾಖೆಗೆ ದೂರು ನೀಡಿದ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ ನಂತರ ಈ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾಡಿದ್ದ ಮನವಿ ಪುರಸ್ಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ತನಿಖೆಗೆ ಆದೇಶಿಸಿದ ಬೆನ್ನಲ್ಲಿಯೇ ಚುರುಕಾಗಿರುವ ಎಸ್‌ಐಟಿ ಅಧಿಕಾರಿಗಳು ವಿವಿಧ ಕೋನಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ನಿರಂತರ ಶೋಧ ಕಾರ್ಯಾಚರಣೆ: ಸಾಕ್ಷಿ ದೂರುದಾರನನ್ನು ಮಂಗಳೂರಿನ ಕದ್ರಿ ಸಮೀಪದ ಮಲ್ಲಿಕಟ್ಟೆಯಲ್ಲಿರುವ ಎಸ್‌ಐಟಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು ಮರು ದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪ ತೆರೆಯಲಾಗಿರುವ ಎಸ್‌ಐಟಿ ಕೇಂದ್ರದಲ್ಲಿಯೂ ವಿಚಾರಣೆಗೊಳಪಡಿಸಿದ್ದಾರೆ. ನಂತರ ಧರ್ಮಸ್ಥಳ ಗ್ರಾಮಕ್ಕೆ ಅನಾಮಿಕನನ್ನು ಕರೆದುಕೊಂಡು ಹೋಗಿದ್ದ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರು. ನಂತರ ಆತ ತಾನು ಹೂತು ಹಾಕಿzನೆ ಎಂದು ಹೇಳುತ್ತಿರುವ ನೂರಾರು ಮೃತದೇಹಗಳು ಇರುವ ಸ್ಥಳಗಳ ಪೈಕಿ ೧೩ ಜಾಗವನ್ನು ತೋರಿಸಿದ್ದರು. ಇದನ್ನು ಸಮಾಧಿ ಸ್ಥಳಗಳು ಎಂದು ಗುರುತಿಸಿ ಗುರುತು ಹಾಕಿ ನಕ್ಸಲ್ ನಿಗ್ರಹ ಪಡೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ೧೩ ಸ್ಥಾನಗಳ ಪೈಕಿ ಮೊದಲು ಮಾರ್ಕ್ ಮಾಡಲಾಗಿದ್ದ ಜಾಗದಲ್ಲಿ ಜು.೨೯ರಂದು ೧೫ ಅಡಿ ಅಗಲ ಮತ್ತು ೮ ಅಡಿ ಆಳ ಅಗೆದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಉತ್ಖನನ ಕಾರ್ಯದ ಎರಡನೇ ದಿನವಾದ ಜು.೩೦ರಂದೂ ಸಾಕ್ಷಿ ದೂರುದಾರನೊಂದಿಗೆ ಅಧಿಕಾರಿಗಳು ಗುಂಡಿ ಅಗೆಯುವ ಕೆಲಸ ಮಾಡಿದ್ದರೂ ಯಾವುದೇ ಕುರುಹು ದೊರೆತಿಲ್ಲ. ಎರಡು, ಮೂರು, ನಾಲ್ಕು ಮತ್ತು ಐದನೇ ಗುರುತು ಜಾಗದಲ್ಲಿಯೂ ಯಾವುದೇ ತಲೆ ಬುರುಡೆಯಾಗಲೀ ಮೃತದೇಹದ ಇತರ ಭಾಗಗಳಾಗಲೀ ಪತ್ತೆಯಾಗಿಲ್ಲ. ಎಸ್‌ಐಟಿ ತಂಡದಲ್ಲಿರುವ ಜಿತೇಂದ್ರ ಕುಮಾರ್ ದಯಾಮ ಮತ್ತು ಸಿ.ಎ.ಸೈಮನ್ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಕು.ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ತಜ್ಞ ವೈದ್ಯರು, ವಿಧಿವಿಜ್ಞಾನ ಪ್ರಯೋಗಾಲಯದವರು, ಪೊಲೀಸರು, ನಕ್ಸಲ್ ನಿಗ್ರಹ ಪಡೆ, ಮೀಸಲು ಪಡೆ ಮತ್ತು ಗರುಡ ಪಡೆಯವರು ಸಾಥ್ ನೀಡಿದ್ದಾರೆ. ಜು.೩೧ರಂದು ಶೋಧ ಕಾರ್ಯ ಮುಂದುವರಿಯಲಿದೆ.

ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದವರ ಡಿಟೇಲ್ಸ್ ಕೇಳಿದ ಎಸ್‌ಐಟಿ: ೧೯೯೫ರಿಂದ ಧರ್ಮಸ್ಥಳ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಂಪೂರ್ಣ ವಿವರ ನೀಡುವಂತೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪೊಲೀಸ್ ಇಲಾಖೆಯ ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರಿಗೆ ತಿಳಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ತಾನು ಈ ಹಿಂದೆ ಹೆಣ ಹೂತಿರುವ ವೇಳೆ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಅನಾಮಿಕ ದೂರುದಾರ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಹರಿದ ಕೆಂಪು ಬಣ್ಣದ ಬ್ಲೌಸ್, ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್ ಪತ್ತೆ?: ವಕೀಲ ಮಂಜುನಾಥ್ ಹೇಳಿಕೆ: ಮೊದಲ ದಿನದ ಶೋಧದ ವೇಳೆ ಎಸ್‌ಐಟಿ ಅಧಿಕಾರಿಗಳಿಗೆ ಮಹತ್ವದ ವಸ್ತುಗಳು ದೊರೆತಿದೆ, ಮಹಿಳೆ ಮತ್ತು ಪುರುಷನಿಗೆ ಸೇರಿದ ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್, ಕೆಂಪು ಬಣ್ಣದ ಬ್ಲೌಸ್ ಪತ್ತೆಯಾಗಿದೆ. ಈ ವಸ್ತುಗಳು ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳನ್ನು ನೀಡುವ ಸಾಧ್ಯತೆ ಇದೆ. ಅತ್ಯಂತ ಗೌಪ್ಯವಾಗಿ ಮತ್ತು ವಿಜ್ಞಾನ ಆಧಾರಿತವಾಗಿ ತನಿಖೆ ನಡೆಸಲಾಗುತ್ತಿದ್ದು ಪತ್ತೆಯಾದ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ವಸ್ತುಗಳು ಈ ಪ್ರಕರಣದೊಂದಿಗೆ ಹೇಗೆ ಸಂಬಂಧ ಹೊಂದಿದೆ ಮತ್ತು ಅವು ಯಾರಿಗೆ ಸೇರಿವೆ ಎಂಬುದರ ಬಗ್ಗೆಯೂ ತನಿಖೆ ಮುಂದುವರಿದಿದೆ. ಎಸ್‌ಐಟಿ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳವಾದ ತನಿಖೆ ನಡೆಸುತ್ತಿದೆ. ತನಿಖೆಯ ದೃಷ್ಠಿಯಿಂದ ಎಲ್ಲಾ ಮಾಹಿತಿಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೇಲಿನ ವಿಷಯಗಳಿಗೆ ಸಂಬಂಧಿಸಿ ಸುಜಾತ ಭಟ್‌ರ ವಕೀಲ ಮಂಜುನಾಥ್ ಪತ್ರಿಕಾ ಹೇಳಿಕೆ ನೀಡಿರುವುದು ವ್ಯಾಪಕ ವೈರಲ್ ಆಗುತ್ತಿದ್ದು ಈ ಮೇಲಿನ ಎಲ್ಲಾ ಚರ್ಚೆಗೆ ಮೂಲ ಕಾರಣವಾಗಿದೆ. ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಎಸ್.ಐ.ಟಿ.ಯಿಂದ ದೊರಕಿಲ್ಲವಾದ್ದರಿಂದ ಅದರ ಸತ್ಯಾಸತ್ಯತೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಸುದ್ದಿ ನ್ಯೂಸ್‌ನಲ್ಲಿ ನಿರಂತರ ನೇರಪ್ರಸಾರ: ಅನಾಮಿಕ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದಲ್ಲಿ ನಡೆಸಿರುವ ಸ್ಥಳ ಮಹಜರು ಮತ್ತು ಎರಡು ದಿನ ಉತ್ಖನನ ಕಾರ್ಯದ ಕ್ಷಣ ಕ್ಷಣದ ಮಾಹಿತಿಯನ್ನು ಸುದ್ದಿ ಬೆಳ್ತಂಗಡಿ ಯೂ ಟ್ಯೂಬ್ ಚಾನೆಲ್‌ನಲ್ಲಿ ನಿರಂತರವಾಗಿ ನೇರಪ್ರಸಾರ ಮಾಡಲಾಗಿದೆ. ಲಕ್ಷಾಂತರ ಮಂದಿ ಈ ನೇರಪ್ರಸಾರವನ್ನು ವೀಕ್ಷಿಸಿದ್ದಾರೆ. ರಾಜ್ಯವಲ್ಲದೆ ರಾಷ್ಟ್ರಮಟ್ಟದ ವಾಹಿನಿಗಳೂ ಬೆಳ್ತಂಗಡಿ ಪೊಲೀಸ್ ಠಾಣೆ ಆವರಣ ಮತ್ತು ಧರ್ಮಸ್ಥಳ ಪರಿಸರದಲ್ಲಿ ಬೀಡು ಬಿಟ್ಟಿದೆ.

ಮೊಹಾಂತಿ ಕೇಂದ್ರ ಸೇವೆಗೆ-ದಿಢೀರ್ ಆಗಮನ! ಎಸ್‌ಐಟಿ ತಂಡದ ಮುಖ್ಯಸ್ಥರಾಗಿರುವ ಪ್ರಣವ್ ಮೊಹಾಂತಿ ಅವರನ್ನು ಕೇಂದ್ರ ಸೇವೆಗೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸರಕಾರದ ನೇಮಕಾತಿ ಕುರಿತ ಸಂಪುಟ ಸಮಿತಿಯಲ್ಲಿ ವಿವಿಧ ರಾಜ್ಯಗಳ ಒಟ್ಟು ೩೫ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಮೊಹಾಂತಿ ಅವರೂ ಒಳಗೊಂಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೇಂದ್ರದ ಸೇವೆಗೆ ಆಯ್ಕೆಯಾದರೂ ಎಸ್‌ಐಟಿಯಲ್ಲಿ ಪ್ರಣವ್ ಮೊಹಾಂತಿ ಅವರನ್ನು ಮುಂದುವರಿಸಲು ಸಾಧ್ಯವಿದೆಯೇ ಎಂದು ಪರಿಶೀಲಿಸುತ್ತೇವೆ. ಸಾಧ್ಯವಾಗದೇ ಇದ್ದರೆ ಎಸ್‌ಐಟಿಗೆ ಬೇರೊಬ್ಬರನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಕೇಂದ್ರ ಸೇವೆಗೆ ಮೊಹಾಂತಿ ಅವರನ್ನು ಆಯ್ಕೆ ಮಾಡಿದ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ಜು.೩೦ರಂದು ಸಂಜೆ ಅವರು ದಿಢೀರ್ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಬಳಿ ನಡೆಯುತ್ತಿರುವ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರು ಈ ವೇಳೆ ಮೊಹಾಂತಿ ಅವರೊಂದಿಗೆ ಉಪಸ್ಥಿತರಿದ್ದರು.

ಜಿತೇಂದ್ರ ದಯಾಮ ಧರ್ಮಸ್ಥಳ ಠಾಣೆಗೆ ಭೇಟಿ-ಕೇಸ್ ಫೈಲ್ ಹಸ್ತಾಂತರ: ಎಸ್.ಐ.ಟಿ. ತಂಡದಲ್ಲಿರುವ ಅಧಿಕಾರಿ ಜಿತೇಂದ್ರ ದಯಾಮ ಅವರು ಜು.೨೫ರಂದು ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ್ದರು. ಎಸ್‌ಐಟಿಗೆ ತನಿಖೆ ಹಸ್ತಾಂತರ ಆಗುವ ಮೊದಲು ಪ್ರಕರಣದ ತನಿಖಾಧಿಕಾರಿಯಾಗಿದ್ದ ಧರ್ಮಸ್ಥಳ ಠಾಣಾ ಎಸ್‌ಐ ಸಮರ್ಥ ಆರ್. ಗಾಣಿಗೇರ್ ಅವರೊಂದಿಗೆ ಮಾತುಕತೆ ನಡೆಸಿದ್ದ ದಯಾಮ ಅವರು ಕೇಸ್ ಫೈಲ್‌ಗಳನ್ನು ಎಸ್.ಐ.ಯವರ ಕೈಯಿಂದ ತನ್ನ ಸುಪರ್ದಿಗೆ ಪಡೆದುಕೊಂಡಿದ್ದರು. ಮಂಗಳೂರಿನಲ್ಲಿ ಎಸ್.ಐ.ಟಿ.ತಂಡದಲ್ಲಿರುವ ಡಿಐಜಿ ಎಂ.ಎನ್. ಅನುಚೇತ್‌ರವರು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಜಿತೇಂದ್ರ ದಯಾಮರವರು ಧರ್ಮಸ್ಥಳ ಠಾಣೆಗೆ ಆಗಮಿಸಿದ್ದರು. ಕೇಸ್ ಫೈಲ್ ಪಡೆದುಕೊಂಡ ನಂತರ ಅವರು ಮಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು.

ಪ್ರಣವ್ ಮೊಹಾಂತಿ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ: ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಎದುರು ಜು.೨೭ರಂದು ಹಾಜರಾಗಿದ್ದ ಸಾಕ್ಷಿ ದೂರುದಾರ ತನ್ನ ಹೇಳಿಕೆ ದಾಖಲಿಸಿದ್ದರು. ಓರ್ವ ಮಹಿಳಾ ನ್ಯಾಯವಾದಿ ಸಹಿತ ಮೂವರು ವಕೀಲರೊಂದಿಗೆ ಮಂಗಳೂರು ಕದ್ರಿ ಸಮೀಪದ ಮಲ್ಲಿಕಟ್ಟೆಯಲ್ಲಿರುವ ಪ್ರವಾಸಿ ಬಂಗಲೆಗೆ ಬೆಳಿಗ್ಗೆ ೧೦.೧೫ಕ್ಕೆ ಮುಖಗವಸು ಧರಿಸಿಕೊಂಡು ಬಂದಿದ್ದ ಸಾಕ್ಷಿ ದೂರುದಾರ ಸಂಜೆ ೬.೨೨ರವರೆಗೂ ಅಲ್ಲೇ ಇದ್ದು ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಎಸ್‌ಐಟಿಯಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಅಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಪೊಲೀಸ್ ವರಿಷ್ಠಾಧಿಕಾರಿ ಸಿ.ಎ. ಸೈಮನ್ ಅವರು ಸಾಕ್ಷಿ ದೂರುದಾರನಿಂದ ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ಕಚೇರಿಯಲ್ಲಿ ಹಾಜರಿದ್ದರು. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಅವರು ಪ್ರಣವ್ ಮೊಹಾಂತಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಸಾಕ್ಷಿ ದೂರುದಾರ ಹಾಗೂ ಆತನ ಜೊತೆಗೆ ಬಂದಿದ್ದ ವಕೀಲರು ಬಂದ ಕಾರಿನಲ್ಲಿಯೇ ಅಜ್ಞಾತ ಸ್ಥಳಕ್ಕೆ ಸಂಜೆ ನಿರ್ಗಮಿಸಿದ್ದರು. ರವಿವಾರ ಸಂಜೆ ಸುಮಾರು ೬ ಗಂಟೆಯ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು ಒಟ್ಟು ೭.೩೦ ಗಂಟೆಗಳ ವಿಚಾರಣೆ ನಡೆದಿದೆ. ಇದಕ್ಕೂ ಮೊದಲು ಶನಿವಾರ ಬೆಳಗ್ಗೆ ೧೧ರಿಂದ ರಾತ್ರಿ ಸುಮಾರು ೭.೧೫ರವರೆಗೆ ಸುಮಾರು ೮ ಗಂಟೆ ಆತನನ್ನು ಐಪಿಎಸ್ ಅಧಿಕಾರಿಗಳಾದ ಎಂ.ಎನ್. ಅನುಚೇತ್ ಮತ್ತು ಜಿತೇಂದ್ರ ಕುಮಾರ್ ದಯಾಮ ಅವರ ಸಮ್ಮುಖದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಮೂಲಕ ಸಾಕ್ಷಿ ದೂರುದಾರನನ್ನು ಒಟ್ಟು ೧೫.೩೦ ಗಂಟೆಗಳ ಕಾಲ ಮಂಗಳೂರು ಕಚೇರಿಯಲ್ಲಿ ವಿಚಾರಣೆ ನಡೆಸಿದಂತಾಗಿದೆ. ಶನಿವಾರ ತನ್ನ ವಕೀಲರೊಂದಿಗೆ ಬಾಡಿಗೆ ಕಾರಿನಲ್ಲಿ ಬಂದಿದ್ದ ಸಾಕ್ಷಿ ದೂರುದಾರ ರವಿವಾರ ಖಾಸಗಿ ಕಾರಿನಲ್ಲಿ ಬಂದಿದ್ದರು. ಗೌಪ್ಯವಾಗಿ ವಿಚಾರಣೆ ನಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಇರುವ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಮತ್ತು ಸಾಕ್ಷಿ ದೂರುದಾರನ ಪರ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಬೆಳ್ತಂಗಡಿಗೆ ಭೇಟಿ ನೀಡಿದ್ದ ಪ್ರಣವ್ ಮೊಹಾಂತಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹೊಸ ಕಟ್ಟಡದಲ್ಲಿ ಸಜ್ಜುಗೊಳಿಸಿರುವ ಎಸ್‌ಐಟಿ ಕಚೇರಿಗೆ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರು ಜು.೨೭ರಂದು ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಚೇರಿಯ ಕಾರ್ಯನಿರ್ವಹಣೆ ಸಲುವಾಗಿ ಕಲ್ಪಿಸಬೇಕಾದ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಎಸ್‌ಐಟಿಯ ಅಧಿಕಾರಿಗಳಾದ ಎಂ.ಎನ್. ಅನುಚೇತ್ ಹಾಗೂ ಸಿ.ಎ. ಸೈಮನ್ ಅವರಿಂದ ಮಾಹಿತಿ ಪಡೆದಿದ್ದ ಅವರು ಸಾಕ್ಷಿ ದೂರುದಾರ ಮಾಹಿತಿ ನೀಡಿದ ಪ್ರಕಾರ ಆತ ಹೂತು ಹಾಕಿದ್ದಾನೆ ಎನ್ನಲಾದ ಮೃತದೇಹಗಳನ್ನು ಮತ್ತೆ ವಶಕ್ಕೆ ಪಡೆಯುವ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಬಂದೋಬಸ್ತ್ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು.

ಘಟನೆಯ ಹಿನ್ನೆಲೆ: ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವಬೆದರಿಕೆ ಒಡ್ಡಿ, ಈ ಅಪರಾಧ ಕೃತ್ಯಗಳ ಪೈಕಿ ಹಲವು ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಈ ಬಗ್ಗೆ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಮೃತದೇಹಗಳನ್ನು ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ಧನಿzನೆ ಎಂದು ಸಾಕ್ಷಿ ದೂರುದಾರ ವ್ಯಕ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಜುಲೈ ೩ರಂದು ದೂರು ನೀಡಿದ್ದರು. ಜು.೪ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ರಾಜ್ಯ ಮಹಿಳಾ ಆಯೋಗದ ಆಗ್ರಹದಂತೆ ಸರ್ಕಾರ ಈ ಪ್ರಕರಣದ ತನಿಖೆಗಾಗಿ ಜು.೨೦ರಂದು ಎಸ್‌ಐಟಿ ರಚಿಸಿತ್ತು. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ತಂಡ ರಚಿಸಲಾಗಿತ್ತು.

ಮಾಧ್ಯಮಗಳಿಗೆ ನಿರ್ಬಂಧ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆನ್ನುವ ಆರೋಪ ಸಂಬಂಧ ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಡಿಜಿಟಲ್ ಮಾಧ್ಯಮ ಸಂಸ್ಥೆ ಕುಡ್ಲ ರಾಂಪೇಜ್ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ಪೂರ್ಣಗೊಳಿಸಿದ್ದು ಆ.೧ರಂದು ತೀರ್ಪು ಪ್ರಕಟವಾಗಲಿದೆ. ಕುಡ್ಲ ರಾಂಪೇಜ್ ಪರ ವಕೀಲ ಎ. ವೇಲನ್ ಮತ್ತು ಧರ್ಮಸ್ಥಳದ ಹಷೇಂದ್ರ ಕುಮಾರ್ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರ ವಾದ ಆಲಿಸಿದ ನ್ಯಾಯಾಲಯ ಶುಕ್ರವಾರ ಆದೇಶ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದೆ. ವಕೀಲ ಉದಯ್ ಹೊಳ್ಳ ಅವರು ಸಂವಿಧಾನದ ೨೧ನೇ ವಿಧಿಯ ಇನ್ನೊಂದು ಮುಖ ಘನತೆಯ ಹಕ್ಕಾಗಿದೆ. ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿಯೇ ವಿಚಾರಣಾ ನ್ಯಾಯಾಲಯ ಮಾಧ್ಯಮಗಳನ್ನು ನಿಬಂಧಿಸಿ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ ಎಂದು ಹೇಳಿದರು. ವಕೀಲ ಎ. ವೇಲನ್ ಅವರು ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾದೇಶವು ವ್ಯಾಪ್ತಿ ಮೀರಿದೆ. ನಿರಂತರವಾಗಿ ಹಷೇಂದ್ರ ಕುಮಾರ್ ಎಷ್ಟು ಪ್ರತಿಬಂಧಕ ಆದೇಶ ಪಡೆದುಕೊಂಡಿದ್ದಾರೆಂಬುದನ್ನು ಹೇಳಬೇಕು. ಮಾನಹಾನಿಯ ಅಂಶಗಳನ್ನು ಪರಿಶೀಲಿಸದೆ ವಿಚಾರಣಾ ನ್ಯಾಯಾಲಯವು ಮಾಧ್ಯಮಗಳನ್ನು ನಿಬಂಧಿಸಿದೆ. ೯ ಸಾವಿರ ಲಿಂಕ್‌ಗಳನ್ನು ಮೂರು ತಾಸಿನಲ್ಲಿ ಪರಿಶೀಲಿಸಿ ಪ್ರತಿಬಂಧಕ ಆದೇಶ ಮಾಡಲಾಗುತ್ತದೆಯೇ?. ಆ ವಿಡಿಯೊಗಳಲ್ಲಿ ಮಾನಹಾನಿಯಾಗುವಂಥ ಯಾವುದೇ ಅಂಶಗಳಿಲ್ಲ. ಇಂತಹ ನಿಬಂಧ ಆದೇಶಗಳನ್ನು ಮಾಡಿದರೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪುಗಳಲ್ಲಿ ಹೇಳಿರುವಂತೆ ತನಿಖಾ ಪತ್ರಿಕೋದ್ಯಮದ ಕತೆ ಏನಾಗಬೇಕು ಎಂದು ಪ್ರಶ್ನಿಸಿದರು. ಇಬ್ಬರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.

೧೩ ಸಮಾಧಿ ಸ್ಥಳ ಗುರುತಿಸಿದ ದೂರುದಾರ-ಜಿಪಿಎಸ್ ದಾಖಲಿಸಿಕೊಂಡ ಅಧಿಕಾರಿಗಳು-ಡ್ರೋನ್ ಚಿತ್ರೀಕರಣ
ಗರುಡಪಡೆ, ವಿಶೇಷ ಕಾರ್ಯಪಡೆ ಅಧಿಕಾರಿಗಳಿಂದ ಭದ್ರತೆ: ಕೆಎಸ್‌ಆರ್‌ಪಿ ನಿಯೋಜನೆ-ಎಎನ್‌ಎಫ್ ಪಹರೆ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಿದ್ದ ಪ್ರಕರಣದ ಸಾಕ್ಷಿ ದೂರುದಾರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ ೧೩ ಜಾಗಗಳನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳಿಗೆ ಜು.೨೮ರಂದು ತೋರಿಸಿದ್ದಾರೆ. ಜಾಗದ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್ ಕಟ್ಟಿದ್ದಾರೆ. ಆತ ತೋರಿಸುತ್ತಾ ಹೋದ ಪ್ರತೀ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಅಧಿಕಾರಿಗಳು ಗುರುತು ಮಾಡಿದ್ದಾರೆ. ಎಸ್‌ಐಟಿ ಅಧಿಕಾರಿಗಳೊಂದಿಗೆ ಸೀನ್ ಆಫ್ ಕ್ರೈಂ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಸಾಕ್ಷಿ ದೂರುದಾರನ ಜೊತೆ ಸುಮಾರು ಎರಡು ಕಿ.ಮೀ. ದೂರದ ಮುಂಡಾಜೆ ಮೀಸಲು ಅರಣ್ಯಕ್ಕೆ ಸೇರಿದ ಕಾಡಿನಲ್ಲಿ ಅಲೆದು ಸಮಾಧಿ ಸ್ಥಳವನ್ನು ಗುರುತು ಮಾಡಿದ್ದು ಎಸ್‌ಐಟಿಯ ಸಿಬ್ಬಂದಿಗಳು ಆತ ತೋರಿಸಿದ ಜಾಗಗಳ ವಿಡಿಯೊ ಚಿತ್ರೀಕರಣ ದಾಖಲಿಸಿಕೊಂಡರು. ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಜಾಗವನ್ನು ತೋರಿಸಲು ಸಾಕ್ಷಿ ದೂರುದಾರರನ್ನು ಕರೆದೊಯ್ಯುವಾಗ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗರುಡ ಪಡೆ ಹಾಗೂ ವಿಶೇಷ ಕಾರ್ಯಪಡೆಯ ತರಬೇತಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗಾಗಿ ಬಳಸಲಾಗಿತ್ತು. ಸಾಕ್ಷಿ ದೂರುದಾರನನ್ನು ಕಾಡಿನ ಒಳಗೆ ಕರೆದೊಯ್ಯುವಾಗ ಮಾಧ್ಯಮದವರಿಗೆ ಪ್ರವೇಶ ನಿಬಂಧಿಸಲಾಗಿತ್ತು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಒಂದು ತುಕಡಿಯನ್ನು ಭದ್ರತೆಗಾಗಿ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ನಾನಘಟ್ಟದ ಬಳಿ ಇದ್ದ ಸಾರ್ವಜನಿಕರನ್ನು ಪೊಲೀಸರು ಆಚೆಗೆ ಕಳುಹಿಸಿದ್ದರು. ಶವಗಳನ್ನು ಹೂಳಲಾಗಿದೆ ಎನ್ನಲಾದ ಜಾಗದತ್ತ ಸಾರ್ವಜನಿಕರು ಹೋಗುವುದನ್ನು ತಡೆಯಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಭೂ ದಾಖಲೆ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಗೆ ಸಾಥ್ ನೀಡಿದ್ದರು.
೧೩ ಜಾಗ ತೋರಿಸಿದ ದೂರುದಾರ: ಸಾಕ್ಷಿ ದೂರುದಾರ ಸೋಮವಾರ ತೋರಿಸಿರುವ ೧೩ ಜಾಗಗಳೂ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ೧ ಕಿ.ಮೀ ವ್ಯಾಪ್ತಿಯ ಕಾಡಿನಲ್ಲಿವೆ. ಮೊದಲು ತೋರಿಸಿದ ಎಂಟು ಜಾಗಗಳು ನೇತ್ರಾವತಿ ನದಿ ದಂಡೆಯಲ್ಲಿದ್ದರೆ ಉಳಿದ ನಾಲ್ಕು ಜಾಗಗಳು ನೇತ್ರಾವತಿ ಸೇತುವೆಯಿಂದ ಸ್ನಾನಘಟ್ಟದ ಕಡೆಗೆ ರಾಜ್ಯ ಹೆದ್ದಾರಿ ೩೭ರ ಪಕ್ಕದಲ್ಲಿವೆ. ಒಂದು ಜಾಗ ಮಾತ್ರ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಬಯಲು ಜಾಗದಲ್ಲಿದೆ. ಸಾಕ್ಷಿ ದೂರುದಾರ ವಕೀಲರ ತಂಡದ ಜೊತೆಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಹಾಜರಾಗಿದ್ದರು. ಅಲ್ಲಿಂದ ಬೆಳಿಗ್ಗೆ ೧೧.೫೦ರ ಸುಮಾರಿಗೆ ಎಸ್‌ಐಟಿ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಅತನನ್ನು ಧರ್ಮಸ್ಥಳ ಸ್ನಾನಘಟ್ಟದ ಬಳಿಗೆ ಕರೆದೊಯ್ದರು.
ಡ್ರೋನ್ ಚಿತ್ರೀಕರಣ: ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಬಯಲು ಪ್ರದೇಶದ ಜಾಗ ಗುರುತಿಸುವ ಪ್ರಕ್ರಿಯೆಯನ್ನು ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಯಿತು. ಆದರೆ ಕಾಡಿನ ಒಳಗೆ ಬಾನೆತ್ತರ ಬೆಳೆದ ಮರಗಳ ನಡುವಿನ ಜಾಗಗಳನ್ನು ಗುರುತಿಸುವಾಗ ಡೋನ್ ಚಿತ್ರೀಕರಣ ಸಾಧ್ಯವಾಗಲಿಲ್ಲ. ನದಿ ಪಕ್ಕದ ಎಂಟು ಜಾಗಗಳನ್ನು ತೋರಿಸಿದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಆತನನ್ನು ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಆತನಿಗೆ ಊಟದ ವ್ಯವಸ್ಥೆ ಮಾಡಿದ್ದರು. ಊಟ ಮುಗಿಸಿದ ಬಳಿಕ ಎಸ್‌ಐಟಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು ಮತ್ತೆ ಆತನನ್ನು ಕಾಡಿನೊಳಕ್ಕೆ ಕರೆದೊಯ್ದು ಜಾಗದ ಹುಡುಕಾಟ ಮುಂದುವರಿಸಿದರು. ಮಧ್ಯಾಹ್ನ ಊಟದ ಬಳಿಕ ರಾಜ್ಯ ಹೆದ್ದಾರಿ ಪಕ್ಕದ ಕಾಡಿನಲ್ಲಿ ನಾಲ್ಕು ಜಾಗಗಳನ್ನು ತೋರಿಸಿದ ಬಳಿಕ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಜಾಗ ಆತ ತೋರಿಸಿದರು. ಒಟ್ಟು ೧೩ ಜಾಗಗಳನ್ನು ಗುರುತಿಸುವ ಪ್ರಕ್ರಿಯೆ ಮುಗಿಸುವಷ್ಟರಲ್ಲಿ ಸಂಜೆಯಾಗಿತ್ತು. ಸ್ನಾನಘಟ್ಟದ ಬಳಿ ನೇತ್ರಾವತಿ ನದಿಯ ಆಚೆ ಬದಿಯಲ್ಲೂ ಜಾಗವನ್ನು ಗುರುತಿಸಬೇಕಿತ್ತು. ಸೇತುವೆ ಮೂಲಕ ಸಾಗಿ ಕನ್ಯಾಡಿ ಬಳಿಯ ರಸ್ತೆ ಮೂಲಕ ನದಿಯ ಇನ್ನೊಂದು ಬದಿಗೆ ಸಾಕ್ಷಿ ದೂರುದಾರರನ್ನು ಕರೆದೊಯ್ಯುವಷ್ಟರಲ್ಲಿ ಸಂಜೆ ೬ ಗಂಟೆ ದಾಟಿತ್ತು. ಈ ವೇಳೆ ಜೋರಾಗಿ ಮಳೆ ಸುರಿಯಿತಲ್ಲದೆ ಕತ್ತಲು ಆವರಿಸಿತ್ತು. ಸಮಾಧಿ ಜಾಗಗಳ ಹುಡುಕಾಟ ಪ್ರಕ್ರಿಯೆಯನ್ನು ಈ ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು. ಎಸ್‌ಐಟಿ ತಂಡದ ಅಧಿಕಾರಿ ಎಂ.ಎನ್. ಅನುಚೇತ್ ಅವರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ತನಿಖೆಯ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಅಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್.ಪಿ. ಆಗಿರುವ ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಶಸ್ತ್ರಸಜ್ಜಿತ ಎ.ಎನ್.ಎಫ್. ಪಹರೆ: ದೂರುದಾರ ಗುರುತಿಸಿರುವ ಹೆಣ ಹೂತಿರುವ ಸ್ಥಳಗಳಲ್ಲಿ ತಲಾ ಇಬ್ಬರು ಶಸ್ತ್ರಸಜ್ಜಿತ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ರಾತ್ರಿಯಿಡೀ ಪಹರೆ ಏರ್ಪಡಿಸಿದ್ದರು.

‘ಭೀಮ’ನಾದ ಅನಾಮಿಕ
ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಮಾಹಿತಿ ನೀಡುವುದಾಗಿ ತಿಳಿಸಿದ ಬಳಿಕ ಇದುವರೆಗೂ ಅನಾಮಿಕನಾಗಿಯೇ ಇರುವ ಅನಾಮಧೇಯ ವ್ಯಕ್ತಿಯನ್ನು ‘ಭೀಮ’ ಎಂದು ಕರೆಯಲಾಗುತ್ತಿದೆ. ಗಟ್ಟಿಮುಟ್ಟಿನ ಶರೀರದವರಾಗಿರುವ ಅನಾಮಿಕ ಸಾಕ್ಷಿ ದೂರುದಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದ ವೇಳೆ ನಿರ್ಭೀತಿಯಿಂದ ಮಾಹಿತಿ ನೀಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಎರಡು ದಿನ ಮಂಗಳೂರಿನಲ್ಲಿ ವಿಚಾರಣೆ ನಡೆಸುವ ವೇಳೆ ಕೇಳಿದ ಖಡಕ್ ಪ್ರಶ್ನೆಗಳಿಗೂ ಸಾಕ್ಷಿದಾರ ಆತ್ಮವಿಶ್ವಾಸದಿಂದಲೇ ಉತ್ತರ ನೀಡಿದ್ದಾರೆ. ಅಲ್ಲದೆ ಬೆಳ್ತಂಗಡಿ ಠಾಣೆಯಿಂದ ಕರೆದುಕೊಂಡು ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಹಜರು ನಡೆಸುವಾಗಲೂ ಅನಾಮಿಕನಲ್ಲಿ ಅಳುಕು ಕಂಡು ಬಂದಿಲ್ಲ. ಹೀಗಾಗಿ ಆತನನ್ನು ‘ಭೀಮ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆಯಲಾಗುತ್ತಿದೆ.

ಎಸ್‌ಐಟಿ ಅಧಿಕಾರಿ ಅನುಚೇತ್ ದಿಢೀರ್ ಭೇಟಿ-ಶ್ವಾನದಳ ಆಗಮನ
ಕ್ಷಣ ಕ್ಷಣದ ಕುತೂಹಲ-ತುದಿಗಾಲಲ್ಲಿ ನಿಲ್ಲಿಸಿದ ಶೋಧ ಕಾರ್ಯಾಚರಣೆ

ಬುರುಡೆ ಏನಾದರೂ ಸಿಕ್ಕಿತಾ… ಎಷ್ಟು ಆಳಕ್ಕೆ ಆಗೆದರಂತೆ….ಇದು ಎಷ್ಟು ದಿನ ಮುಂದುವರಿಯಬಹುದು…..ಜೆಸಿಬಿ ತರಿಸಿದ್ದು ಏಕಿರಬಹುದು…ಶ್ವಾನವನ್ನು ತರಿಸಿದ್ದು ನೋಡಿದರೆ ಏನೋ ಸಿಕ್ಕಿರಬಹುದೋ ಏನೋ….ಎಂದು ಶೋಧ ಕಾರ್ಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಕುರುಹು ಪತ್ತೆಗೆ ಅತ್ತ ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ನೆಲ ಅಗೆಯುವ ಕಾರ್ಯ ನಡೆಯುತ್ತಿದ್ದರೆ ಇತ್ತ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರಿಗೆ ಈ ಬಗ್ಗೆ ತಿಳಿದುಕೊಳ್ಳುವ ಕೌತುಕ ಉಂಟಾಗಿತ್ತು. ಅಧಿಕಾರಿಗಳ ಒಂದೊಂದು ಚಲವಲನವೂ ಈ ಶೋಧ ಕಾರ್ಯವನ್ನು ನೋಡುತ್ತಿದ್ದ ಸಾರ್ವಜನಿಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಸ್ನಾನ ಘಟ್ಟದ ಬಳಿಯ ದಂಡೆ ಮೇಲೆ ನಿಂತುಕೊಂಡಿದ್ದ ಸಾರ್ವಜನಿಕರು ಸಾಕ್ಷಿದಾರ ಮೃತದೇಹ ತೋರಿಸಿದ ಸ್ಥಳದಲ್ಲಿ ಹೂತಿದ್ದ ಕುರುಹುಗಳು ಏನಾದರೂ ಸಿಗಬಹುದೇ ಎಂದು ದಿನವಿಡೀ ಕಾತರದಿಂದ ಕಾದರು. ಶೋಧ ಕಾರ್ಯ ಮುಂದುವರಿದಾಗ ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್.ಅನುಚೇತ್ ದಿಢೀರ್ ಸ್ಥಳಕ್ಕಾಗಮಿಸಿದ್ದು ಪೊಲೀಸ್ ಶ್ವಾನವನ್ನು ಕರೆತಂದಿದ್ದು… ಸಾರ್ವಜನಿಕರ ಕೌತುಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲೇ ಶೋಧ ಕಾರ್ಯದ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ಇನ್ನು ಕೆಲವರು ತಮ್ಮ ಆಪ್ತರಿಗೆ ಶೋಧ ಕಾರ್ಯದ ಬೆಳವಣಿಗೆಗಳ ಮಾಹಿತಿ ಹಂಚಿಕೊಂಡರು. ಮೊದಲ ದಿನ ಅಗೆದ ಜಾಗದಲ್ಲಿ ಯಾವ ಕುರುಹು ಸಿಗದೆ ಸುದ್ದಿ ಕೇಳಿ ಸಂಜೆವರೆಗೂ ಕಾದ ಕೆಲವರು ೨೦೧೯ರಲ್ಲಿ ಬಂದಿದ್ದ ಪ್ರವಾಹದಲ್ಲಿ ಇಲ್ಲಿನ ಮೃತದೇಹಗಳು ಕೊಚಚ್ಚಿ ಹೋಗಿರಬಹುದು ಎಂದು ಅನುಮಾನಿಸಿದರೆ ಇನ್ನು ಕೆಲವರು ಅಲ್ಲಿ ಮೃತದೇಹವನ್ನು ನಿಜಕ್ಕೂ ಹೂತಿರುವುದು ಹೌದೇ ಎಂದು ಸಂದೇಹ ವ್ಯಕ್ತಪಡಿಸುತ್ತಿದ್ದರು. ಶೋಧ ಕಾರ್ಯ ವೀಕ್ಷಿಸಲು ಆಸುಪಾಸಿನ ಊರುಗಳ ಜನರೂ ತಮ್ಮ ವಾಹನಗಳಲ್ಲಿ ಬಂದಿದ್ದರು. ಸ್ನಾನ ಘಟ್ಟದ ಪಕ್ಕದ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ದ್ವಿ-ಚಕ್ರವಾಹನ ಹಾಗೂ ಕಾರುಗಳನ್ನು ನಿಲ್ಲಿಸಲಾಗಿತ್ತು. ಶವಗಳನ್ನು ಹೂತಿರುವುದಾಗಿ ಸಾಕ್ಷಿ ದೂರುದಾರ ತೋರಿಸಿದ ಜಾಗದಲ್ಲಿ ಭದ್ರತಾ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಹರಸಾಹಸಪಡುತ್ತಿದ್ದರು.

ದಟ್ಟ ಕಾನನದಲ್ಲಿ ಬಾನೆತ್ತರಕ್ಕೆ ಬೆಳೆದ ಮರಗಳ ನಡುವೆ ಹುಡುಕಾಟ
ನೇತ್ರಾವತಿ ಸ್ನಾನಘಟ್ಟದ ಬಳಿ ನೂರಾರು ಕುತೂಹಲಿಗರು-ಭಾರೀ ಚರ್ಚೆ

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪ್ರದೇಶಕ್ಕೆ ಪೊಲೀಸರು ಸಾಕ್ಷಿ ದೂರುದಾರನನ್ನು ಸೋಮವಾರ ಕರೆತರುವಾಗ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಲ್ಲಿ ಕುತೂಹಲದಿಂದ ಸೇರಿದ್ದರು. ಮುಸುಕು ಹಾಕಿದ್ದ ಸಾಕ್ಷಿ ದೂರುದಾರನ್ನು ಪೊಲೀಸರು ಸ್ನಾನಘಟ್ಟದ ಬಳಿಯಿಂದ ಕಾಡಿನೊಳಗೆ ಕರೆದೊಯ್ದ ದೃಶ್ಯವನ್ನು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದರು. ದಟ್ಟ ಕಾನನದಲ್ಲಿ ಬಾನೆತ್ತರಕ್ಕೆ ಬೆಳೆದ ಮರಗಳ ನಡುವೆ ಮೃತದೇಹಗಳನ್ನು ಹೂತು ಹಾಕಲಾದ ಜಾಗಗಳಿಗಾಗಿ ಹುಡುಕಾಟ ಒಂದೆಡೆ ನಡೆಯುತ್ತಿದ್ದರೆ ಸ್ನಾನ ಘಟ್ಟದ ಬಳಿ ಸೇರಿದ ಸಾರ್ವಜನಿಕರು ಈ ಪ್ರಕರಣದ ಕುರಿತು ಗಹನ ಚರ್ಚೆಯಲ್ಲಿ ಮಗ್ನರಾಗಿದ್ದರು. ಒಬ್ಬೊಬ್ಬರದೂ ಒಂದೊಂದು ವಿಶ್ಲೇಷಣೆಯಾಗಿತ್ತು. ಈ ಸಾಕ್ಷಿ ದೂರುದಾರ ವ್ಯಕ್ತಿ ಯಾರಾಗಿರಬಹುದು ಎಂಬ ಚರ್ಚೆಯಲ್ಲಿ ಕೆಲವರು ತೊಡಗಿದ್ದರು. ಒಬ್ಬನೇ ಇಷ್ಟೊಂದು ಮೃತದೇಹ ಹೂತು ಹಾಕಲು ಸಾಧ್ಯವೇ, ಇಷ್ಟು ದಟ್ಟವಾದ ಕಾಡಿನ ಒಳಗೆ ಮೃತದೇಹಗಳನ್ನು ಒಯ್ದಿದ್ದಾದರೂ ಹೇಗೆ. ನಿಜಕ್ಕೂ ಅಲ್ಲಿ ಮೃತದೇಹಗಳ ಅವಶೇಷಗಳನ್ನು ಹೊರ ತೆಗೆಯಲು ಸಾಧ್ಯವೇ ಎಂದು ಕೆಲವರು ಚರ್ಚಿಸುತ್ತಿದ್ದರು. ಹೆದ್ದಾರಿ ಪಕ್ಕದ ಕಾಡಿನಲ್ಲಿ ಒಂದೊಂದೇ ಜಾಗವನ್ನು ತೋರಿಸುತ್ತಿದ್ದಾಗ ಆ ಹೆದ್ದಾರಿ ಮೂಲಕ ಹಾದು ಬಂದವರೂ ಕುತೂಹಲದಿಂದ ಮಾಹಿತಿ ಪಡೆಯಲು ಯತ್ನಿಸುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವರಂತೂ ಬೆಳಿಗ್ಗೆಯಿಂದ ಸಂಜೆವರೆಗೂ ಜಾಗದಲ್ಲೇ ಉಳಿದುಕೊಂಡು ಎಸ್‌ಐಟಿ ಶೋಧಾ ಕಾರ್ಯಾಚರಣೆಯನ್ನು ವೀಕ್ಷಿಸಿದರು. ನೇತ್ರಾವತಿ ತೀರ್ಥಸ್ನಾನಕ್ಕಾಗಿ ಸ್ನಾನ ಘಟ್ಟದಲ್ಲಿ ಬಂದಿದ್ದವರನ್ನು ಪೊಲೀಸರ ಹೊರಗೆ ಕಳುಹಿಸಿದರು. ಹಾಗಾಗಿ ಕೆಲವು ಭಕ್ತರು ನಿರಾಸೆಯಿಂದ ಮರಳಿದ್ದರು.

೧೫ ಅಡಿ ಸುತ್ತಳತೆಯ ಜಾಗದಲ್ಲಿ ೮ ಅಡಿ ಆಳ ಅಗೆದರೂ ಸಿಗದ ಕುರುಹು
೧೦ ಕಾರ್ಮಿಕರನ್ನು ಒಳಗೊಂಡ ತಂಡದಿಂದ ಹಾರೆ, ಪಿಕ್ಕಾಸು ಬಳಸಿ ಕಾರ್ಯಾಚರಣೆ
ಎಸ್‌ಐಟಿಗೆ ಎ.ಸಿ. ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಪೃಥ್ವಿ ಸಾನಿಕಂ, ಕೆಎಂಸಿಯ ವೈದ್ಯರು ಸಾಥ್

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎಂದು ಆರೋಪಿಸಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಕುರುಹು ಪತ್ತೆಗೆ ನೆಲ ಅಗೆಯುವ ಕಾರ್ಯ ಮಂಗಳವಾರ ಆರಂಭಗೊಂಡಿದೆ. ಈ ಪ್ರಕರಣದ ಶವಗಳನ್ನು ಸಾಕ್ಷಿ ದೂರುದಾರ ಹೂಳಲಾಗಿದೆ ಎಂದು ೧೩ ಜಾಗಗಳನ್ನು ತೋರಿಸಿದ್ದರು. ಧರ್ಮಸ್ಥಳ ಸ್ನಾನಘಟ್ಟ ಬಳಿಯ ಕಾಡಿನ ಪಕ್ಕದಲ್ಲಿ ಆತ ತೋರಿಸಿದ್ದ ಮೊದಲ ಜಾಗದಲ್ಲಿ ಸುಮಾರು ೧೫ ಅಡಿ ಸುತ್ತಳತೆಯ ಜಾಗದಲ್ಲಿ ಸುಮಾರು ೮ ಅಡಿ ಅಳಕ್ಕೆ ಅಗೆಯಲಾಯಿತು. ಮಧ್ಯಾಹ್ನ ೧೨ರಿಂದ ಸಂಜೆ ೬ ಗಂಟೆವರೆಗೆ ಆಗೆದರೂ ಮೃತದೇಹದ ಯಾವುದೇ ಕುರುಹು ಪತ್ತೆಯಾಗಲಿಲ್ಲ ಎಂದು ವಿಶೇಷ ತನಿಖಾ ತಂಡದ ಮೂಲಗಳು ತಿಳಿಸಿವೆ.
ಸುಮಾರು ೧೦ ಕಾರ್ಮಿಕರನ್ನು ಒಳಗೊಂಡ ತಂಡ ಹಾರೆ, ಪಿಕ್ಕಾಸು ಬಳಸಿ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಅಗೆಯುವ ಕಾರ್ಯ ಆರಂಭಿಸಿತು. ನೇತ್ರಾವತಿ ನದಿಯಿಂದ ೧೦ ಮೀಟರ್ ದೂರದಲ್ಲಿರುವ ಜಾಗವನ್ನು ಅಗೆದಂತೆ ನೀರು ಜಿನುಗಲಾರಂಭಿಸಿತು. ಜೊತೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯೂ ಸುರಿಯುತ್ತಿತ್ತು. ಇದರಿಂದ ಅಗೆಯುವಿಕೆಗೆ ಅಡಚಣೆಯುಂಟಾಯಿತು. ಎಸ್‌ಐಟಿ ಅಧಿಕಾರಿಗಳು ಸಣ್ಣ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಂಡು ಅಗೆಯಿಸಿದರು. ಕೊನೆಗೆ ಶ್ವಾನದಳ ಕರೆತಂದು ಪರಿಶೀಲನೆ ನಡೆಸಿದರು. ಆದರೂ ಯಾವುದೇ ಪತ್ತೆಯಾಗದ ಕಾರಣ ಮೊದಲ ದಿನದ ಅಗೆಯುವ ಕಾರ್ಯವನ್ನು ಸಂಜೆ ೬ರ ವೇಳೆಗೆ ಸ್ಥಗಿತಗೊಳಿಸಲಾಯಿತು. ಗುಂಡಿ ಅಗೆದ ಬಳಿಕ ಮುಚ್ಚಲಾಯಿತು. ಇದಕ್ಕೂ ಮುನ್ನ ಸಾಕ್ಷಿ ದೂರುದಾರನ ಜೊತೆಗೆ ಸ್ಥಳಕ್ಕೆ ಬಂದಿದ್ದ ವಕೀಲರ ತಂಡವನ್ನೂ ಸ್ಥಳಕ್ಕೆ ಕರೆಸಿಕೊಂಡು ಅಗೆಯುವ ಕಾರ್ಯ ಸ್ಥಗಿತಗೊಳಿಸುವುದಕ್ಕೆ ಅವರ ಸಮ್ಮತಿಯನ್ನು ಪಡೆದುಕೊಳ್ಳಲಾಯಿತು ಎಂದು ತಿಳಿದು ಬಂದಿದೆ. ಅಗೆಯುವ ಕಾರ್ಯವನ್ನು ಅಧಿಕಾರಿಗಳು ಸಂಪೂರ್ಣ ಚಿತ್ರೀಕರಿಸಿಕೊಂಡಿದ್ದಾರೆ. ನೆಲ ಅಗೆಯುವ ಕಾರ್ಯ ನಡೆಯುವಾಗ ಸಾಕ್ಷಿ ದೂರುದಾರ ಮುಸುಕು ಧರಿಸಿ ಸ್ಥಳದಲ್ಲಿ ಹಾಜರಿದ್ದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಸ್‌ಐಟಿಯ ಡಿಐಜಿ ಎಂ.ಎನ್.ಅನುಚೇತ್, ಎಸ್.ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು. ವಿಧಿವಿಜ್ಞಾನ ತಂಡದ ಅಧಿಕಾರಿಗಳು, ಕೆಎಂಸಿಯ ತಜ್ಞ ವೈದ್ಯರು ಸ್ಥಳದಲ್ಲಿದ್ದರು. ಅಗೆಯುವ ಕಾರ್ಯ ಆರಂಭಿಸುವ ಮುನ್ನ ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಎಂ.ಎನ್. ಅನುಚೇತ್ ನೇತೃತ್ವದಲ್ಲಿ ಸಭೆ ನಡೆಸಿದ ಅಧಿಕಾರಿಗಳು ಮುಂದಿನ ತನಿಖೆ ಬಗ್ಗೆ ಚರ್ಚಿಸಿದ್ದರು. ಮೃತದೇಹ ಹೂಳಲಾಗಿದೆ ಎನ್ನಲಾದ ಜಾಗಗಳ ಪತ್ತೆಗೆ ಸೋಮವಾರ ಕಾಡಿನಲ್ಲಿ ಅಲೆದಾಡಿದ್ದ ಸಿಬ್ಬಂದಿಗಳು ಮಂಗಳವಾರ ಅಗೆಯುವ ಕಾರ್ಯದ ಬಳಿಕ ಸುಸ್ತಾದಂತೆ ಕಂಡು ಬಂದರು. ಮಧ್ಯಾಹ್ನದ ಊಟಕ್ಕೆ ಸ್ನಾನಘಟ್ಟದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ನಡುವೆ ಊಟಕ್ಕಾಗಿ ಒಂದು ಗಂಟೆ ವಿಶ್ರಾಂತಿ ಪಡೆದರು. ಮಳೆಯಲ್ಲೇ ನಿಂತುಕೊಂಡೇ ಇದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈರಾಣಾಗಿ ಹೋದಂತೆ ಕಂಡು ಬಂದಿದ್ದರು.

LEAVE A REPLY

Please enter your comment!
Please enter your name here