
ಬೆಳ್ತಂಗಡಿ: ಗುರಿಯ ಹಿಂದೆ ಹೋದವರು ಯಶಸ್ವಿಯಾಗುತ್ತಾರೆ. ಹಣ, ಪ್ರತಿಷ್ಠೆಯ ಹಿಂದೆ ಬಿದ್ದವರು ಬದುಕಿನಲ್ಲಿ ಗೆಲ್ಲುವುದಿಲ್ಲ ಎಂದು ಖ್ಯಾತ ಮನೋವಿಶ್ಲೇಷಕ ಮತ್ತು ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಬಾರ್ಯ ಅವರು ಹೇಳಿದರು. ಗುರುವಾಯನಕೆರೆಯ ವಿದ್ಯಾ ಸಾಗರ ಕ್ಯಾಂಪಸ್ ನ ಸಭಾಂಗಣದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಹಣ ಬಲವೆ ಶ್ರೇಷ್ಠ ಎಂದು ಕಂಡರೂ, ನೈತಿಕತೆಯಿಲ್ಲದ ಹಣ ಗಳಿಕೆಗೆ ಮಾನ್ಯತೆಯಿಲ್ಲ ಎಂದರು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ, ಮನುಷ್ಯ ಬುದ್ಧಿವಂತ ಜೀವಿ, ಪರಿಶ್ರಮ ಪಟ್ಟರೆ ಮನುಷ್ಯ ಎಷ್ಟು ಉನ್ನತ ಸ್ಥಾನಕ್ಕೂ ಏರಬಹುದು. ಮನುಷ್ಯನಿಗೆ ಮಾತ್ರ ದೇವರು ಅನುಗ್ರಹಿಸಿದ ವರ ಇದೆಂದು ಹೇಳಿದರು. ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೀವ ವಿಜ್ಞಾನ ವಿಭಾಗದ ಉಪನ್ಯಾಸಕ ಪ್ರಜ್ವಿತ್ ರೈ ಸ್ವಾಗತಿಸಿದರು.
ನೀಟ್ ಬಗ್ಗೆ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಭಟ್, ಜೆಇಇ ಬಗ್ಗೆ ಭೌತ ವಿಜ್ಞಾನ ವಿಭಾಗದ ಶ್ರೀನಿಧಿ ರಾಜ್ ಶೆಟ್ಟಿ, ಸಿಇಟಿ ಬಗ್ಗೆ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಈಶ್ವರ್ ಶರ್ಮ ಮಾಹಿತಿ ನೀಡಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸುನಿಧಿ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕನ್ನಡ ವಿಭಾಗದ ಮಹಮ್ಮದ್ ಮುನೀರ್ ನಿರೂಪಿಸಿ, ವಂದಿಸಿದರು.