
ಬೆಳ್ತಂಗಡಿ: ಪ್ರಕೃತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡು ಅದಕ್ಕೆ ಹಾನಿಯಾಗದಂತೆ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಚಿತ್ರದುರ್ಗ ಸರಕಾರಿ ಪದವಿ ಕಾಲೇಜಿನ ಜೀವಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಸುನಿಲ್ ಪಿ.ಜೆ. ಹೇಳಿದರು. ಅವರು ವಾಣಿ ಪದವಿ ಪೂರ್ವ ಕಾಲೇಜಿನ ಪರಿಸರ ಸಂಘದ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮಲ್ಲಿ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ಮಾತನಾಡುತ್ತಾ, ಸಾವಿರಾರು ವರ್ಷಗಳ ಇತಿಹಾಸವುಳ್ಳ ಪ್ರಕೃತಿಯಲ್ಲಿ ಮಾನವರೂ ಒಂದು ಭಾಗವಾಗಿದ್ದು ಅದನ್ನು ಪರಿಶುದ್ಧವಾಗಿ ಉಳಿಸುವ ಅನಿವಾರ್ಯತೆ ನಮ್ಮ ಮೇಲಿದೆ. ಮಾನವನು ಪ್ರಕೃತಿಯಿಂದ ಆಹಾರ, ನೀರು, ವಸತಿ ಮತ್ತು ಇತರ ಅಗತ್ಯ ವಸ್ತುಗಳನ್ನು ನಿರಂತರವಾಗಿ ಪಡೆಯುತ್ತಾನೆ. ಆದರೆ ಮಾನವನ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳು ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿರುವುದು ದುರಂತವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಪರಿಸರ ಸಂಘದ ಸಂಯೋಜಕಿ ದೀಕ್ಷಾ ಸ್ವಾಗತಿಸಿದರು. ವಿದ್ಯಾರ್ಥಿನಿ ಮನ್ವಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಧನ್ಯವಾದವಿತ್ತರು.