ಬೆಳ್ತಂಗಡಿ: ಹೊಸ ಸಮಿತಿಗೆ ಅರ್ಚಕರ ನೇಮಕ, ಅವರ ಸ್ನಾನದ ವಿಚಾರ, ಹಿಂದಿನ-ಈಗಿನ ಸಮಿತಿಗಳ ನಡುವಿನ ಸಂಘರ್ಷ, ನಂದಿ ಹಣ ಕಳವು ಪ್ರಕರಣ ಹೀಗೆ ಹತ್ತು ಹಲವು ವಿವಾದಗಳಿಂದಲೇ ಸುದ್ದಿಯಾಗಿರುವ ತಾಲೂಕಿನ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದೆರಡು (ಜು.೧೫-೧೬) ದಿನಗಳಿಂದ ಪ್ರಶ್ನಾಚಿಂತನೆ ನಡೆದಿದ್ದು, ಹಲವು ಧಾರ್ಮಿಕ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚೆಗಳಾಗಿವೆ.
ತಾಲೂಕಿನ ಸೋಣಂದೂರು, ಓಡಿಲ್ನಾಳ, ಕುವೆಟ್ಟು, ಪಡಂಗಡಿ ಗ್ರಾಮಗಳಿಗೆ ಒಳಪಡುವ ದೇವಸ್ಥಾನದಲ್ಲಿ ಆಡಳಿತ ಸಮಿತಿ ಮೂಲಕ, ಪೊಳಲಿಯ ಅನಂತ ಪದ್ಮನಾಭ ಉಪಾಧ್ಯಾಯರ ಮುಂದಾಳತ್ವದಲ್ಲಿ ಪ್ರಶ್ನಾ ಚಿಂತನೆ ನಡೆದಿದೆ. ದೇವಸ್ಥಾನದ ಹೊರಭಾಗದಲ್ಲಿದ್ದ ನಂದಿಗೆ ಪೂಜಾ ಕಾರ್ಯ ಮುಂದುವರಿಸುವ ಬಗ್ಗೆ ಹಾಲಿ ಆಡಳಿತ ಸಮಿತಿಯಲ್ಲಿ ಸಾಕಷ್ಟು ಗೊಂದಲಗಳಿದ್ದವು. ಇದಕ್ಕೆ ಪ್ರಶ್ನಾಚಿಂತನೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದ್ದು, ನಂದಿ ಪೂಜೆ ಯಥಾಸ್ಥಿತಿಯಂತೆ ಮುಂದುವರಿಯಬೇಕು ಎಂದು ಪ್ರಶ್ನಾಚಿಂತನೆ ನಡೆಸಿದ ಅನಂತ ಪದ್ಮನಾಭ ಉಪಾಧ್ಯಾಯ ತಿಳಿಸಿದ್ದಾರೆ. ತಂತ್ರಿಗಳಾದ ಉದಯ ಪಾಂಗಣ್ಣಾಯ ಅವರೊಂದಿಗೆ ಚರ್ಚಿಸಿ ಪೂಜಾ ವಿಧಿ-ವಿಧಾನದ ಬಗ್ಗೆ ನಿರ್ಧಾರ ಮಾಡಿ ಆಡಳಿತ ಸಮಿತಿಗೆ ತಿಳಿಸಲಾಗಿದೆ.
ಲೋಪಗಳ ಬಗ್ಗೆ ಚರ್ಚೆ: ಮಂಗಳವಾರದಂದು ಪ್ರಶ್ನಾ ಚಿಂತನೆ ಆರಂಭಿಸುತ್ತಲೇ ಅನಂತ ಪದ್ಮನಾಭ ಉಪಾಧ್ಯಾಯ ಅವರು, “ಓಡೀಲು ದೇವಸ್ಥಾನದ ಕಿರಿಯ ತಂತ್ರಿಗಾಳದ ಶ್ರೀಪಾದ ಪಂಗಣ್ಣಾಯ ತಂತ್ರಿಗಳು ಕಳೆದ ವರ್ಷ ಇಲ್ಲಿ ಬ್ರಹ್ಮ ಕಲಶ ಆಗಿತ್ತು. ದೊಡ್ಡ ಮಟ್ಟಿನ ಗೊಂದಲವೇನೂ ಇಲ್ಲಿಲ್ಲ ಎಂಬ ಅಭಿಪ್ರಾಯ ನೀಡಿದ್ದರು. ಆದರೆ ಇಲ್ಲಿ ಎಲ್ಲವೂ ಸರಿ ಇದೆ ಎನ್ನುವುದು ಹಸಿ ಸುಳ್ಳು ಎನ್ನುವುದು ನಮ್ಮ ಪ್ರಶ್ನಾ ಚಿಂತನೆಯಲ್ಲಿ ಕಾಣುತ್ತಿದೆ. ಗ್ರಾಮಸ್ಥರಿಗೂ ದೇವಸ್ಥಾನಕ್ಕೂ ಉತ್ತಮ ಒಡನಾಟವಿದೆ ಎಂದು ನೀವು ಹೇಳಿದರೂ, ಅದು ಇಲ್ಲ ಎನ್ನುವುದು ಪ್ರಶ್ನೆಯಲ್ಲಿ ಗೊತ್ತಾಗುತ್ತಿದೆ. ಇದೊಂದು ರೀತಿಯ ಧಾರ್ಮಿಕ ಶೀತಲ ಸಮರವೂ ಆಗಿರಬಹುದು. ಇಲ್ಲಿ ಕೆಲ ವಿಷಯದಲ್ಲಿ ಸಹಕಾರ ಇಲ್ಲ, ಉಳಿದಂತೆ ಸರಿ ಉಂಟು ಎಂದು ಭಕ್ತಾದಿಗಳು ಹೇಳಿದ ಮಾತ್ರಕ್ಕೆ ಯಾವ ಕ್ಷೇತ್ರಗಳೂ ಸರಿಯಾಗುವುದಿಲ್ಲ. ಮನೆಯಲ್ಲಿ ಆಡಳಿತ ನಡೆಸಿದಂತೆ ದೇವಸ್ಥಾನದಲ್ಲಿ ಆಗುವುದಿಲ್ಲ. ಇಲ್ಲಿನ ಕೆಲ ಸಮಸ್ಯೆಗಳನ್ನು ಸರಿಪಡಿಸಬೇಕಿದೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಇಲ್ಲಿನ ತಾಂಬೂಲ ರಾಶಿಯಲ್ಲಿ ದ್ವಂದ್ವ ರಾಶಿ ಎಂದು ಕಂಡು ಬಂದಿದೆ. ರಾಜರ ಕಾಲದಿಂದ ಇಲ್ಲಿ ವ್ಯವಸ್ಥಿತವಾಗಿ ಪೂಜೆಗಳು ನಡೆಯುತ್ತಿದ್ದವು. ಪ್ರತಿಷ್ಠಾ ವರ್ಧತಿ ಸಮಯದಲ್ಲು ಊರ ಗ್ರಾಮಸ್ಥರು ತಾವು ಬೆಳೆದ ಫಲವಸ್ತುಗಳನ್ನು ಕೊಡುವ ಪದ್ಧತಿ ಇತ್ತು. ಈಗ ಅದು ನಡೆಯುತ್ತಿಲ್ಲವೇ ಎಂದು ಅನಂತ ಪದ್ಮನಾಭರು ಕೇಳಿದಾಗ, ಈ ಹಿಂದೆ ಬಲಿವಾಡು ಸೇವೆ ಇತ್ತು. ಈಗ ಅದನ್ನು ಅನುಸರಿಸಿಕೊಂಡು ಹೋಗುವ ವ್ಯವಸ್ಥೆ ಇಲ್ಲವೆಂದು ಉದಯ ಪಾಂಗಣ್ಣಾಯ ತಂತ್ರಿಗಳು ತಿಳಿಸಿದರು. ಈ ಕುರಿತಾಗಿ ವಿಚಾರಿಸಿದ ಜೋಯಿಷರು, ಗ್ರಾಮಸ್ಥರು ಬೆಳೆದ ಅಕ್ಕಿ, ತರಕಾರಿಗಳನ್ನು ದೇವರಿಗೆ ಅರ್ಪಿಸಿ ಗ್ರಾಮದ ಸುಭೀಕ್ಷೆಗಾಗಿ ಪ್ರಾರ್ಥಿಸುತ್ತಿದ್ದರು. ಅದೀಗ ಗೌಣವಾಗಿದೆ. ಈ ಹಿಂದೆ ಪ್ರಶ್ನಾ ಚಿಂತನೆ ಇಡಲಾಗಿತ್ತು ಎಂದು ಹೇಳಿದ್ದೀರಿ, ಆಗ ಈ ವಿಷಯ ಪ್ರಸ್ತಾಪ ಆಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
“ನಾನು ಇಲ್ಲಿ ಒಳ್ಳೆಯದನ್ನು ಹೇಳಲು ಬಂದಿಲ್ಲ. ಇರುವ ಸಮಸ್ಯೆಯನ್ನು ನಿಮ್ಮ ಮುಂದಿಡಲು ಬಂದಿದ್ಗದೇನೆ. ಇಲ್ಲಿ ಕಾಣಿಕೆ ಡಬ್ಬಿ ಅಥವಾ ನಿಧಿಯ ಸಮಸ್ಯೆ ಇದೆ. ಹಿಂದೆ ಇಲ್ಲಿ ಹಿಡಿಯಕ್ಕಿ, ಕಾಣಿಕೆ ಹುಂಡಿಯನ್ನು ನೀಡುತ್ತಿದ್ದರು ಎಂದು ನೀವು ಹೇಳಿದ್ದೀರಿ. ಈಗ ಪ್ರಶ್ನೆ ಇರುವುದು ಮನೆ ಮನೆಗೆ ಹೋದ ಕಾಣಿಕೆ ಡಬ್ಬಿ ದೇವಸ್ಥಾನಕ್ಕೆ ಬಂದಿದೆಯಾ ಎನ್ನುವುದು” ಎಂದು ಅನಂತ ಪದ್ಮನಾಭರು ಹೇಳಿದ್ದಕ್ಕೆ ಉತ್ತರಿಸಿದ ಗ್ರಾಮಸ್ಥರು, “ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಅದರಲ್ಲಿ ತಪ್ಪಾಗಿಯೂ ಇರಬಹುದು. ಇದಕ್ಕೆ ಪ್ರಾಯಶ್ಚಿತ್ತ ನಾವು ಮಾಡಲು ಸಿದ್ಧ” ಎಂದು ಉತ್ತರಿಸಿದರು. “ಇದು ಪ್ರಾಯಶ್ಚಿತ್ತದ ವಿಚಾರವಲ್ಲ, ಜನಪದ (ಗ್ರಾಮಸ್ಥರ) ರಾಶಿಯಿಂದ ತೊಂದರೆಯಾಗಿದೆ ಎಂದು ತಿಳಿದುಬರುತ್ತಿದೆ” ಎಂದು ಉಪಾಧ್ಯಾಯರು ತಿಳಿಸಿದರು. ಇದು ಪ್ರಾಚೀನ ಕಾಲದಲ್ಲಿ ಸೀಮೆಗೆ ಸಂಬಂಧಪಟ್ಟಂತೆ ನಷ್ಟವಾದ ವಸ್ತುವನ್ನು ಅನುಗ್ರಹ ಮಾಡಿದ ದೇವರನ್ನು ಆರಾಧಿಸಿದ ದಿವ್ಯ ಸನ್ನಿಧಿ. ಇತಿಹಾಸದ ಪ್ರಕಾರದ ೭೦೦-೮೦೦ ವರ್ಷ ಹಳೆಯ ದೇವಸ್ಥಾನ ಇರಬಹುದು. ಈ ಕಾಲದಲ್ಲಿ ಬ್ರಹ್ಮಕಲಶ ಬಹಳ ಅದ್ದೂರಿಯಾಗಿ ಮಾಡುತ್ತಾರೆ. ಆದರೆ ಅದರ ಇತಿಹಾಸ ತಿಳಿಯುವ ಪ್ರಯತ್ನ ಆಗುವುದಿಲ್ಲ. ನೀವೆಲ್ಲ್ಲಾ ಈ ದೇವಸ್ಥಾನಕ್ಕೆ ೪ ಗ್ರಾಮ ಬರುತ್ತದೆಯೆಂದು ಹೇಳುತ್ತೀರಿ. ಆದರೆ ಇಲ್ಲಿ ನಾಲ್ಕೂವರೆ ಗ್ರಾಮ ತೋರಿಸುತ್ತಾ ಇದೆ ಎಂದು ಅನಂತ ಪದ್ಮನಾಭ ಉಪಾಧ್ಯಾಯರು ಮಾಹಿತಿ ನೀಡಿದರು.
ದೈವಾರಾಧನೆ ಬಗ್ಗೆ ಗೊಂದಲ: ದೇವಸ್ಥಾನಕ್ಕೆ ಸಂಬಂಧವಿಲ್ಲದ ದೈವಗಳಾರಾಧನೆ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಚರ್ಚೆಯಾಯ್ತು. ದೈವಗಳು ಎಲ್ಲಿಂದ ಬಂದವು, ಇತಿಹಾಸ ಏನು? ಎಲ್ಲವನ್ನೂ ತಿಳಿದುಕೊಳ್ಳಬೇಕು. ಇದರ ಬಗ್ಗೆ ಗ್ರಾಮಸ್ಥರಿಗೆ ಗೊತ್ತಿಲ್ಲದಿದ್ದರೆ, ತಂತ್ರಿಗಳು ಹೇಳಬೇಕು. ಆದರೆ ಇನ್ನು ಮುಂದೆ ಆ ದೈವಸ್ಥಾನವನ್ನು ತೆಗೆಯಬಾರದು ಎಂಬುದಾಗಿ ಜೋಯಿಷರು ಹೇಳಿದರು. ದೇವರ ಗರ್ಭಗುಡಿಯಲ್ಲಿ ನೀರು ಸೋರುತ್ತಿರುವುದು, ಹೊರಗಿನ ವಸ್ತು ಗರ್ಭಗುಡಿಗೆ ಸ್ಪರ್ಶ ಆಗುತ್ತಿರುವುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು. ಈ ಬಗ್ಗೆ ವಿಮರ್ಶೆ ಮಾಡಿ ಎಂದು ಸಲಹೆ ನೀಡಿದರು.
ಅರ್ಚಕರು ಸ್ನಾನ ಮಾಡಲ್ವೇ?: ದೇವರ ಗರ್ಭಗುಡಿ ಅಶುದ್ಧವಾಗಿದೆ. ಗಾಯಗೊಂಡವರು, ಅಮೆ-ಸೂತಕವಿದ್ದವರು, ಶುದ್ಧಾಚಾರವಿಲ್ಲದವರಿಂದ.. ಹೀಗೆ ಯಾವುದೋ ಕಾರಣಕ್ಕೆ ಇಲ್ಲಿ ಅಶುದ್ಧ ಆಗಿದೆ ಎಂದು ಉಪಾಧ್ಯಾಯರು ಹೇಳಿದ್ದಕ್ಕೆ, ಕೂರುವ ಕುರ್ಚಿ, ಪ್ರಸಾದ ಕೊಡುವಾಗ ಶುದ್ಧಾಚಾರ ನೋಡುವ ಪ್ರಧಾನ ಅರ್ಚಕರು ಪೂಜೆ ಮಾಡಲು ಸ್ನಾನ ಮಾಡದೆ ಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ವಿಚಾರವಾಗಿ ಅರ್ಧಗಂಟೆಗೂ ಹೆಚ್ಚು ಸಮಯ ಚರ್ಚೆಗಳು ನಡೆದವು.
ಉತ್ಸವದಲ್ಲಿ ಅಪಚಾರ: ದೇವಸ್ಥಾನದಲ್ಲಿ ನಡೆಯುವ ಉತ್ಸವದಲ್ಲಿ ಅಪಚಾರ ಆಗಿದೆ ಎಂಬ ವಿಚಾರವನ್ನು ಜೋಯಿಸರು ಪ್ರಶ್ನಾ ಚಿಂತನೆಯಲ್ಲಿ ಕೇಳಿದಾಗ, ಪ್ರತಿ ಸೋಮವಾರ ರಂಗಪೂಜೆಯ ದಿನ ನೀಡುವ ಅನ್ನಪ್ರಸಾದವನ್ನು ಹೊಸ ಸಮಿತಿ ನಿಲ್ಲಿಸಿರುವ ವಿಚಾರ ಬಂತು. ಅನ್ನದಾನ ನಿಲ್ಲಿಸಿರುವುದು ತಪ್ಪಾಗಿದೆ ಎನ್ನುವುದು ಶಾಸ್ತ್ರದಲ್ಲಿ ಕಾಣುತ್ತದೆ. ರಂಗ ಪೂಜೆ ದಿನ ಬೆಂದ ನೈವೇದ್ಯ ಸಲ್ಲಿಸಬೇಕು ಎಂಬುದಾಗಿ ಪ್ರಶ್ನೆಯಲ್ಲಿ ಹೇಳಲಾಗಿದೆ ಎಂದು ಜೋಯಿಷರು ಹೇಳಿ, ಸೋಮವಾರ ಮಾತ್ರ ರಂಗಪೂಜೆ ಇದ್ದರೂ ಇಲ್ಲದಿದ್ದರೂ, ನೈವೇದ್ಯ ಮಾಡಲೇಬೇಕು. ಒಂದು ವೇಳೆ ಉಳಿದ ದಿನಗಳಲ್ಲಿ ರಂಗ ಪೂಜೆ ಇದ್ದರೆ, ಆಗ ಸೋಮವಾರ ನೈವೇದ್ಯ ಇಲ್ಲದಿದ್ದರೂ ಶಾಸ್ತ್ರದಲ್ಲಿ ತಪ್ಪು ಕಂಡು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎರಡನೇ ದಿನವೂ ನಂದಿಯ ಪ್ರಶ್ನೆ: ಜುಲೈ ೧೬ರಂದು ನಂದಿ ಪ್ರತಿಷ್ಠಾಪನೆಯ ವಿಚಾರ ಪ್ರಸ್ತಾಪವಾಗಿ, ಈ ವೇಳೆ, ಹಿರಿಯ ತಂತ್ರಿಗಳಾದ ಉದಯ ಪಾಂಗಣ್ಣಾಯ ಗೈರನ್ನು ಗ್ರಾಮಸ್ಥರು ಪ್ರಶ್ನಿಸಿದರು. ದೇವಲಿಂಗದಿಂದ ಹಿಡಿದು ಕ್ಷೇತ್ರಪಾಲನವರೆಗೆ ಪ್ರತಿಷ್ಠಾವಿಧಿ ಪರಿಪೂರ್ಣವಾಗಿ ಆಗಿದೆ. ನಂದಿಗೆ ಸಾಂಕೇತಿಕವಾಗಿ ಪ್ರತಿಷ್ಠೆ ಮಾಡಿದ್ದಾರೆ ಎಂದು ನಾನು ಭಾವಿಸಿದ್ದೇನೆ. ತಂತ್ರದಲ್ಲಿ ಹೇಳಿದಂತೆ ಮಾಡಿದ ಪ್ರತಿಷೆ ಅಲ್ಲ. ನಂದಿ ಪೂರ್ವದಲ್ಲಿ ಇದ್ದಿದ್ದಲ್ಲ ಎಂದು ಎರಡನೇ ದಿನದ ಪ್ರಶ್ನೆಯ ವೇಳೆ ಕಿರಿಯ ತಂತ್ರಿ ಶ್ರೀಪಾದ ಪಾಂಗಣ್ಣಾಯ ಸಮರ್ಥನೆ ನೀಡಿದರು.
ಇದು ಅವಮಾನ : ಪ್ರಭಾಕರ ಉಪ್ಪಡ್ಕ: ನಾವು ದೇವರ ಆರಾಧನೆ ಮಾಡುತ್ತೇವೆ. ನಂದಿಯ ಪ್ರತಿಷ್ಠೆಯ ಕ್ರಮಗಳು ನಮಗೆ ತಿಳಿಯದು. ಹೀಗಿರುವಾಗ ಕಳೆದ ಬಾರಿ ಪ್ರತಿಷೆಯಾದ ನಂದಿಗೆ ಪ್ರತಿಷ್ಠೆಯಾಗಿಲ್ಲ ಎಂದರೆ ನಾವೇನು ಮಾಡಬೇಕು? ಜನರಿಗೆ ಮೋಸ ಮಾಡುವುದೇಕೆ? ಇದು ಹಿಂದೂ ಸಮಾಜಕ್ಕೆ ಮಾಡಿದ ಅವಮಾನ ಹಿಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಉಪ್ಪಡ್ಕ ಅಸಮಾಧಾನ ಹೊರಹಾಕಿದರು.
ಬೇಸರವಾಗಿದೆ, ಬರುವುದಿಲ್ಲ: ತಂತ್ರಿಗಳು ನಮ್ಮ ಪ್ರಶ್ನೆಗಳಿಗೆ ತಂತ್ರಿಗಳಾದ ಉದಯಪಾಂಗಣ್ಣಾಯರು ಬರಬೇಕು. ಅವರೇ ಉತ್ತರ ನೀಡಬೇಕೆಂದು ಭಕ್ತರು ಒತ್ತಾಯಿಸಿದರು. ಈ ವೇಳೆ ಅವರಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೊಂಡೆಮಾರು, ಕರೆ ಮಾಡಿದಾಗ ಜುಲೈ ೧೫ರ ಘಟನೆಯಿಂದ ಬೇಸರವಾಗಿದೆ. ನಾನು ಬರುವುದಿಲ್ಲ ಎಂದು ತಿಳಿಸಿದರು.
ಪ್ರಶ್ನಾ ಚಿಂತನೆ ವೇಳೆ ಪ್ರಧಾನ ಅರ್ಚಕ ರಘುರಾಮ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಕೊಂಡೆಮಾರು, ಗೋಪಿನಾಥ್ ನಾಯಕ್, ಸತೀಶ್ ಪೂಜಾರಿ ಕುವೆಟ್ಟು, ಧನಂಜಯರಾವ್, ರಾಜು ಪಡಂಗಡಿ, ಹರಿಪ್ರಸಾದ್ ಇರ್ವತ್ರಾಯ, ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ರಾಜ್ ಪ್ರಕಾಶ್ ಶೆಟ್ಟಿ ಪಡೈಲು, ಸಂತೋಷ್ ಕುಮಾರ್ ಜೈನ್ ಪಡಂಗಡಿ, ಸಂತೋಷ್ ಶೆಟ್ಟಿ ಹಲ್ಲಂದೋಡಿ, ಚಿದಾನಂದ ಇಡ್ಯಾ, ರಂಜಿತ್ ಮದ್ದಡ್ಕ, ಅಶ್ವಿತ್ ಓಡೀಲು, ಉಮೇಶ್ ಕುಮಾರ್, ಸುದೀಪ್ ಶೆಟ್ಟಿ ಮೂಡೈಲು, ಯೋಗೀಶ್ ಶೆಟ್ಟಿ ಅಣಿಲ, ದೀಕ್ಷಿತ್ ಬಳ್ಕುಂಜ, ಲಕ್ಷ್ಮೀಕಾಂತ, ಕೆ. ವಿಜಯ ಸಾಲಿಯಾನ್ ಮದ್ದಡ್ಕ, ಚಿದಾನಂದ ಕಾಯರಡ್ಕ, ಸೋಮಶೇಖರ್ ದೇವಸ್ಯ, ಹೇಮಂತ್ ಶೆಟ್ಟಿ ದೇವಸ್ಯ, ಬಾಬು ಶೆಟ್ಟಿ ದೇರೆಮಾರು, ಪದ್ಮನಾಭ ಹಲ್ಲಂದೋಡಿ, ಜಯರಾಮ ಶೆಟ್ಟಿ ಕಿನ್ನಿಗೋಳಿ, ಶಿವರಾಮ ಶೆಟ್ಟಿ ಉಪ್ಪಡ್ಕ, ಪ್ರಜ್ವಲ್, ನಿಖಿಲ್, ನವೀನ್, ಅಂಕಿತ್, ತೇಜಸ್, ಮನು ಮದ್ದಡ್ಕ, ಸುಕೇಶ್ ಓಡೀಲು, ಲಿಕಿತ್ ಬಂಗೇರ, ಅಶ್ವಿತ್, ನವೀನ್ ಕುಲಾಲ್, ಪ್ರಶಾಂತ್ ಮಂಜಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು. ಪ್ರಶ್ನಾಚಿಂತನೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಸುದ್ದಿ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಬ್ರಹ್ಮರಾಕ್ಷಸನ ಬಗ್ಗೆ ಮುಕ್ಕಾಲು ಗಂಟೆ ಚರ್ಚೆ!
ನಿಮ್ಮೆಲ್ಲರ ತಲೆ ಹಾಳುಮಾಡುವ ಬ್ರಹ್ಮರಾಕ್ಷಸನೊಬ್ಬ ಇಲ್ಲಿದ್ದಾನೆ. ಬ್ರಹ್ಮರಾಕ್ಷಸ ದೋಷ ಬಲಿಷ್ಠವಾಗಿದೆ. ನೀವು ಪೈನ್ ಕಿಲ್ಲರ್ ಮಾತ್ರೆಯ ರೀತಿ ತಾತ್ಕಾಲಿಕ ಪರಿಹಾರ ಕಂಡುಕೊಂಡರೆ ಪ್ರಯೋಜನವಿಲ್ಲ. ಇದಕ್ಕೆ ಸೂಕ್ತವಾದ ಮೋಕ್ಷ ಮಾಡಬೇಕು. ಇಲ್ಲದೇ ಹೋದಲ್ಲಿ ದೇವಸ್ಥಾನದೊಳಗೆ ಬ್ರಾಹ್ಮಣ ಮನಃಸ್ತಾಪ ಬರುತ್ತದೆ ಎಂದು ಉಪಾಧ್ಯಾಯರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ಬ್ರಹ್ಮಕಲಶ ಸಂದರ್ಭದಲ್ಲಿ ಬ್ರಹ್ಮರಾಕ್ಷಸನ ವಿಚಾರವಾಗಿ ಪ್ರಶ್ನಾ ಚಿಂತನೆಗಳು ನಡೆದಿವೆ. ಆದರೆ ಈವರೆಗೂ ಶಾಶ್ವತ ಪರಿಹಾರ ಯಾಕೆ ಆಗಿಲ್ಲ ಎಂದರು. ಇದಕ್ಕೆ ಆಡಳಿತ ಸಮಿತಿಯವರೇ ಸ್ಪಷ್ಟೀಕರಣ ನೀಡಬೇಕು ಎಂದು ಉಪಾಧ್ಯಾಯರು ಹೇಳಿದರು. ಬ್ರಹ್ಮ ರಾಕ್ಷಸನಿಗೆ ನೂರಾರು ವಷಗಳ ಇತಿಹಾಸವಿದೆ. ಇದಕ್ಕೆ ಪರಿಹಾರ ಕಾರ್ಯ ಆಗಿಲ್ಲ. ನಿಮಗೆ ಅಶ್ವತ್ಥ ಕಟ್ಟೆ ಮಾಡಬೇಕೆನ್ನುವ ಪರಿಹಾರ ಕೊಟ್ಟರೂ ಮಾಡಿಲ್ಲ ಎಂದು ಉಪಾಧ್ಯಾಯರು ವಿವರಿಸಿದರು. ರಾಕ್ಷಸನ ವಿಚಾರದಲ್ಲಿ ಹತ್ತು ಹಲವು ಗೊಂದಲವಿದ್ದು, ಇದಕ್ಕೆ ಪರಿಹಾರ ಯಾರು ನೀಡಬೇಕು ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಗ್ರಾಮಸ್ಥರು ಹಾಕಿದರು. ಇದಕ್ಕೆ ಅಷ್ಟಮಂಗಲವಿಡಿ ಎಂಬುದಾಗಿ ಜೋಯಿಸರು ಹೇಳಿದರು.
ಕಳೆದ ಬ್ರಹ್ಮಕಲಶ ಸಮಯದಲ್ಲಿ ಅಶ್ವತ್ಥ ಕಟ್ಟೆ ಮಾಡಲಾಗಿದೆ. ಅದರಲ್ಲಿ ಏನಾದರೂ ತಪ್ಪಾಗಿದೆಯಾ? ಏಕೆ ಇದಕ್ಕೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ವಿಚಾರವೂ ಗ್ರಾಮಸ್ಥರೊಂದಿಗೆ ಚರ್ಚೆಯಾಯಿತು. ಅದಕ್ಕೆ ಉತ್ತರಿಸಿದ ಜೋಯಿಸರು, “ಇಲ್ಲಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ಅದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮೂರು ಮೂರು ಬಾರಿ ಪ್ರಶ್ನೆಯಲ್ಲಿ ಈ ಬಗ್ಗೆ ಬಂತು. ಕೋಟಿ ಹಣ ಖರ್ಚು ಮಾಡಿದರೂ ಪರಿಹಾರ ಕಂಡುಕೊಳ್ಳಲು ಏಕೆ ಆಗಲಿಲ್ಲ ಎಂದು ಗ್ರಾಮಸ್ಥರಿಗೆ ಮರು ಪ್ರಶ್ನೆ ಹಾಕಿದರು. ಅದಕ್ಕೆ ಉತ್ತರಿಸಿದ ಗ್ರಾಮಸ್ಥರು, ಪುಸ್ತಕದಲ್ಲಿ ಪರಿಹಾರಕ್ಕಾಗಿ ಏನೆಲ್ಲಾ ಮಾಡಬೇಕು ಎಂದು ಬರೆದುಕೊಟ್ಟ ನಂತರ, ತಂತ್ರಿಗಳು ಮುಂದೆ ನಿಂತು ನಮ್ಮಲ್ಲಿ ಪರಿಹಾರ ಮಾಡಿಸಬೇಕಿತ್ತು. ನಾವು ಆಗುವುದಿಲ್ಲ ಎನ್ನುತ್ತೇವಾ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಇದಕ್ಕೆ ಸಮಧಾನಪಡಿಸಿದ ಜೋಯಿಸರು, ಜಗಳ ಬೇಡ. ತಂತ್ರಿಗಳ ಜೊತೆ ಕೂತು ಸಮಸ್ಯೆಗೆ ಪರಿಹಾರ ಏನು ಎಂಬುದನ್ನು ಕಂಡುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಬ್ರಹ್ಮ ರಾಕ್ಷಸನ ಬಾಧೆಯಿಂದ ಗೊಂದಲಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಸಿದರು.