ಕಕ್ಕಿಂಜೆ: ಬೆಳ್ತಂಗಡಿ ತಾಲೂಕು, ದ ಕ. ಬಿ.ವಿ.ಕೆ. ಇರ್ವತ್ರಾಯ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ ತುರ್ತು ಚಿಕಿತ್ಸಾ ವಿಭಾಗ – ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಅವರ ಸಹಕಾರದೊಂದಿಗೆ, “ಪ್ರಥಮ ಚಿಕಿತ್ಸೆ (First Aid,Basic Life Support) ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಯಲು ನೆರಿಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ವೈದ್ಯಕೀಯ ನಿರ್ದೇಶಕ ಡಾ.ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ತುರ್ತು ಸಂದರ್ಭಗಳಲ್ಲಿ ಹಾಗೂ ಇನ್ನಿತರ ಆನಾರೋಗ್ಯದ ಅಥವಾ ಅನಾಹುತಗಳು ಸಂಭವಿಸುವ ಸಮಯದಲ್ಲಿ ವಿದ್ಯಾರ್ಥಿಗಳು ಜೀವ ಉಳಿಸಲು ದೈರ್ಯ ಮಾಡಬೇಕು ಹಾಗೂ ಎದೆಗುಂದದೆ ಪ್ರಥಮ ಚಿಕಿತ್ಸೆ ನೀಡಬೇಕು. ಹೃದಯಾಘಾತ, ಪಾರ್ಶ್ವವಾಯು, ನೀರಿನಲ್ಲಿ ಮುಳುಗುವುದು, ಅಗ್ನಿ ಅವಘಡ ಹಾಗೂ ಅಪಘಾತಗಳು/ಆಘಾತ, ಹಾವು ಕಡಿತ, ನಾಯಿ ಕಡಿತ, ವಿದ್ಯುತ್ ಆಘಾತ ಮತ್ತು ಸುಟ್ಟಗಾಯಗಳು, ಸಿಡಿಲು/ಮಿಂಚು,ರಕ್ತಸ್ರಾವದ ಗಾಯಗಳು ಮುಂತಾದ ಸಂದರ್ಭಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಇನ್ನಿತರ ತುರ್ತು ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. ಹೃದಯ ಸ್ತಂಭನ ಸಂದರ್ಭದಲ್ಲಿ CPR ಕೊಡುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನಡೆಸಿಕೊಟ್ಟರು.
ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ರೋಗಿಗಳನ್ನು ಅಥವಾ ಸಂತ್ರಸ್ತರನ್ನು ನಿಭಾಯಿಸಲು ಕನಿಷ್ಠ ಮೂಲಭೂತ ಜ್ಞಾನ ಅತ್ಯಗತ್ಯ, ಜೀವ ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ ಸಾಮಾಜಿಕ ಕಳಕಳಿ ಇರುವವರು ಯಾರು ಬೇಕಾದರೂ ಈ ಕಾರ್ಯವನ್ನು ಮಾಡಬಹುದು ಎಂದರು. ಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅಲ್ಬಿನ್ ಜೋಸೆಫ್, ಸಿಬ್ಬಂದಿಗಳಾದ ಗಣೇಶ್, ಮ್ಯಾಥ್ಯೂ, ಆರೀಶ್, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.
ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಆರನೇ ತರಬೇತಿ ಶಿಬಿರವಾಗಿದ್ದು, ಇತರ ಶಾಲೆಗಳಾದ ಸೈಂಟ್ ಸಾವಿಯೊ ಶಾಲೆ ಬೆಂದ್ರಾಳ, ಸರ್ಕಾರಿ ಪ್ರೌಢಶಾಲೆ ಕಕ್ಕಿಂಜೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಟತ್ತಾಡಿ, ಸೈಂಟ್ ಥೋಮಸ್ ಪ್ರೌಢಶಾಲೆ ಗಂಡಿಬಾಗಿಲು, ಕಾರುಣ್ಯ ಆಂಗ್ಲ ಮಾಧ್ಯಮ ಶಾಲೆ ಕಕ್ಕಿಂಜೆ ಸೇರಿದಂತೆ ಇತರ ಶಾಲೆಗಳನ್ನು ಒಳಗೊಂಡಿದೆ.