ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದು, ತನಿಖೆ ಮೂಲಕ ಸತ್ಯಾಸತ್ಯತೆ ಬಯಲಾಗಲಿ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಜು.21ರಂದು ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಯೊಬ್ಬರ ಹೇಳಿಕೆಯಂತೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚನೆ ಮಾಡಿದೆ. ಸಮರ್ಪಕ ತನಿಖೆ ನಡೆದು ಸತ್ಯ ಸಂಗತಿ ಹೊರಬಂದು, ಕಾನೂನು ಕ್ರಮ ಕೈಗೊಳ್ಳಲಿ. ಆದರೆ, ತನಿಖೆ ಪೂರ್ವದಲ್ಲೇ ಪೂರ್ವಾಗ್ರಹದ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರುವ ಕೆಲಸ ಆಗಬಾರದು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು, ಒಂದು ಪವಿತ್ರ ಕ್ಷೇತ್ರ ಕಟ್ಟಲು ಬಹಳಷ್ಟು ಶ್ರಮವಿದೆ. ಆ ಸಂಸ್ಥೆಯಿಂದ ಹಲವರಿಗೆ ಪ್ರಯೋಜನವಾಗಿದೆ. ಇಲಾಖೆಯ ತನಿಖೆಗೆ ಎಲ್ಲರೂ ಸಹಕಾರ ಕೊಡಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅಷ್ಟರ ತನಕ ಸಮಾಧಾನದಿಂದ ಕಾಯೋಣ. ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದು. ಕಪ್ಪು ಚುಕ್ಕೆ ತರುವುದು ಸರಿಯಲ್ಲ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ ‘ಮಂಗಳೂರು’ ಎಂದು ಮರುನಾಮಕರಣ ಮಾಡಬೇಕೆಂಬ ವಿಚಾರ ಚರ್ಚೆಯಲ್ಲಿದೆ. ಹೆಸರಿನ ಹಿಂದೆ ಪರಂಪರೆ, ಇತಿಹಾಸ, ಸಂಸ್ಕೃತಿ ಎಲ್ಲವೂ ಅಡಕವಾಗಿರುತ್ತವೆ. ಹಿರಿಯರು, ಸಾಹಿತಿಗಳು, ಬರಹಗಾರರು, ತಜ್ಞರ ಜೊತೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ಮಂಗಳೂರು ಅಭಿವೃದ್ಧಿಯಾಗಲು ಹೆಸರಿಗಿಂತ ಈ ನೆಲದಲ್ಲಿ ಸೌಹಾರ್ದ ವಾತಾವರಣ ಬೇಕು. ಅದಕ್ಕೆ ನಾವೆಲ್ಲರೂ ಪ್ರಯತ್ನಿಸಬೇಕು. ಹೆಸರಿಗಿಂತ ಪ್ರೀತಿ, ವಿಶ್ವಾಸ, ಭಯರಹಿತ, ದ್ವೇಷರಹಿತ ಸಮಾಜ ಮಂಗಳೂರಿಗೆ ಅತಿ ಅಗತ್ಯವಾಗಿದೆ. ಇದರ ಬಗ್ಗೆ ಚರ್ಚೆಯಾಗಲಿ’ ಎಂದು ಖಾದರ್ ಹೇಳಿದರು.