ಉಜಿರೆ: ಇತಿಹಾಸದಲ್ಲಿ ನಡೆದುಹೋದ ತಪ್ಪುಗಳ ಬಗ್ಗೆ ಅರಿತುಕೊಂಡಾಗ ಅವುಗಳು ಪುನರಾವರ್ತನೆಯಾಗುವುದಿಲ್ಲ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಎಂ.ಜಿ. ಅಭಿಪ್ರಾಯಪಟ್ಟರು.
ಅವರು ಜು. 18ರಂದು ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮತ್ತು ಇತಿಹಾಸ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಉಳಿದುಹೋದ ಪುರಾವೆಗಳಿಂದ ಇತಿಹಾಸವು ಇಂದಿಗೂ ಜಾಗೃತವಾಗಿದೆಯೇ ಹೊರತು ಅದನ್ನು ಯಾರಿಂದಲೂ ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಹಿಂದಿನ ತಪ್ಪುಗಳಿಂದ ಕಲಿತುಕೊಂಡು ಅಭಿವೃದ್ಧಿ ಹೊಂದುತ್ತ ಸಾಗಬೇಕು ಎಂದು ತಿಳಿಸಿದರು. “ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಿಚಾರದ ಹಿಂದೆಯೂ ಒಂದು ಇತಿಹಾಸವಿರುತ್ತದೆ ಅದನ್ನು ಹುಡುಕಿ ಹೊರಡುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬರಬೇಕು. ಇತಿಹಾಸವನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸಬೇಕಾದ ಜವಾಬ್ದಾರಿ ಇತಿಹಾಸ ಅಭ್ಯಸಿಸುವ ವಿದ್ಯಾರ್ಥಿಗಳ ಮೇಲಿದೆ” ಎಂದರು.
ವಿದ್ಯಾರ್ಥಿಗಳಲ್ಲಿ ಸಂಶಯಗಳು ಹೆಚ್ಚಾದಷ್ಟು ಕಲಿಕೆಯೂ ವೃದ್ಧಿಸುತ್ತದೆ. ನನಗೆ ಎಲ್ಲವೂ ಗೊತ್ತಿದೆ ಎಂಬ ಅಹಂಕಾರವನ್ನು ಬದಿಗೊತ್ತಿ ನನಗೇನೂ ತಿಳಿದಿಲ್ಲ ಎಂದು ಭಾವಿಸಿ ಹೆಚ್ಚಿನ ಕಲಿಕೆಗೆ ಸದಾ ಹಾತೊರೆದರೆ ಮಾತ್ರ ಅಭಿವೃದ್ಧಿ ಸಾಧ್ಯ. ಒಳ್ಳೆಯ ವಿಚಾರಗಳನ್ನು ಗಮನಿಸಿ, ಅರಿತುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇನ್ನೊಬ್ಬರು ನಾವು ಮಾಡಿದ ಕೆಲಸದ ಫಲಶ್ರುತಿಯನ್ನು ಕಸಿದುಕೊಳ್ಳಬಹುದೇ ಹೊರತು ನಾವು ಬೆಳೆಸಿಕೊಂಡಿರುವ ಕೌಶಲ್ಯಗಳನ್ನಲ್ಲ. ಹಾಗಾಗಿ ಒಳ್ಳೆಯ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಸಲಹೆ ನೀಡಿದರು.
ಜಗತ್ತು ಆಧುನಿಕಗೊಂಡಂತೆ ವಿದ್ಯಾರ್ಥಿಗಳಲ್ಲಿ ನಿರಂತರ ಓದು ಎಂಬುದು ಮರೆಯಾಗಿದೆ. ಪರೀಕ್ಷೆಯ ದೃಷ್ಟಿಯಿಂದ ಮಾತ್ರ ವಿಷಯವನ್ನು ಅಭ್ಯಸಿಸುವ ಮನೋಭಾವವನ್ನು ತೊರೆದಾಗ ಮಾತ್ರ ಬದಲಾವಣೆ ಸಾಧ್ಯ. ಇತಿಹಾಸದಲ್ಲಿ ಬರವಣಿಗೆಗೆ ಬೇಕಾದ ಹಲವಾರು ವಿಚಾರಗಳು ದೊರೆಯುತ್ತವೆ. ನಿರಂತರ ಓದಿನಿಂದ ಸತ್ವಯುತ ಬರವಣಿಗೆ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಸನ್ಮತಿ ಕುಮಾರ್, ವಿದ್ಯಾರ್ಥಿಗಳು ತಮ್ಮ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರತಿಫಲದ ಅಪೇಕ್ಷೆ ತೊರೆದಾಗ ಯಶಸ್ಸು ಸ್ವತಃ ಹುಡುಕಿ ಬರುತ್ತದೆ ಎಂದರು.
ವಿಭಾಗ ಬೆಳೆದು ಬಂದ ಹಾದಿಯನ್ನು ಸ್ಮರಿಸಿದ ಅವರು, “ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವಿಭಾಗವು ವೇದಿಕೆ ಕಲ್ಪಿಸುತ್ತದೆ ಮತ್ತು ಸಾಧನೆಗೆ ಸದಾ ಪ್ರೋತ್ಸಾಹ ನೀಡುತ್ತದೆ. ವಿಭಾಗದ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ” ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಶುಭಾ ಮತ್ತು ಭವ್ಯ ಅವರನ್ನು ಗೌರವಿಸಲಾಯಿತು. ವಿಭಾಗದ ಭಿತ್ತಿಪತ್ರಿಕೆ ‘ಅನ್ವೇಷಣೆ’ಯ ನೂತನ ಸಂಚಿಕೆ ಅನಾವರಣಗೊಳಿಸಲಾಯಿತು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ, ವಿದ್ಯಾರ್ಥಿ ಪ್ರತಿನಿಧಿಗಳಾದ ಗೌರವಿ ಮತ್ತು ಮನ್ವಿತ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಶ್ಮಿತಾ ಮತ್ತು ಸೃಷ್ಟಿ ಪ್ರಾರ್ಥಿಸಿದರು. ಗೌರವಿ ಸ್ವಾಗತಿಸಿ, ಪದ್ಮಶ್ರೀ ವಂದಿಸಿದರು. ಸೃಷ್ಟಿ ಮತ್ತು ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.