ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮರಳು ಮತ್ತು ಕೆಂಪು ಕಲ್ಲಿನ ಗಣಿಗಾರಿಕೆಯಲ್ಲಿ ಸರ್ಕಾರದಿಂದ ಜಾರಿಗೊಳಿಸಲಾದ ನಿಯಂತ್ರಣ ಕ್ರಮಗಳ ಪರಿಣಾಮವಾಗಿ ಈ ಉತ್ಪನ್ನಗಳ ಲಭ್ಯತೆ ತೀವ್ರವಾಗಿ ಕುಗ್ಗಿದಿದೆ. ಈ ಕಾರಣದಿಂದ ಅನೇಕ ಕಟ್ಟಡ ಕಾಮಗಾರಿಗಳು ನಿಲ್ಲಿಸಲ್ಪಟ್ಟಿದ್ದು, ಸಾವಿರಾರು ಸ್ಥಳೀಯ ಕಾರ್ಮಿಕರು ತಾವು ನಂಬಿದ್ದ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿರುವ ಭಾರತೀಯ ಮಜ್ದೂರು ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ, ಜಿಲ್ಲಾಧಿಕಾರಿಯವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರವರನ್ನು ಜಿಲ್ಲಾಧ್ಯಕ್ಷ, ವಕೀಲ ಅನಿಲ್ ಕುಮಾರ್ ಬೆಳ್ತಂಗಡಿ ಅವರು ನೇತೃತ್ವವಹಿಸಿದ ನಿಯೋಗದ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮುಖ್ಯ ಬೇಡಿಕೆಗಳು: ಕಾರ್ಮಿಕರಿಗೆ ತಾತ್ಕಾಲಿಕ ಆರ್ಥಿಕ ಪರಿಹಾರ ಘೋಷಿಸಬೇಕು.
ಗಣಿಗಾರಿಕೆ ಸಂಬಂಧಿತ ನಿರ್ಬಂಧಗಳನ್ನು ಪುನರ್ವಿಮರ್ಶೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಸರ್ಕಾರಿ ಯೋಜನೆಗಳಡಿಯಲ್ಲಿ ಉದ್ಯೋಗ ನೀಡಬೇಕು.
ಕಾರ್ಮಿಕ ಸಂಘಗಳೊಂದಿಗೆ ಸಮಾಲೋಚನೆ ಸಭೆ ಕರೆದ ನಂತರ ಮಾತ್ರ ಮುಂದಿನ ನಿರ್ಧಾರ ಕೈಗೊಳ್ಳಬೇಕು.
ಈ ಮನವಿಯ ಮೂಲಕ ಜಿಲ್ಲಾಡಳಿತದ ಗಮನವನ್ನು ಈ ಗಂಭೀರ ವಿಷಯಕ್ಕೆ ಸೆಳೆಯಲಾಗಿದೆ. ಅಧಿಕಾರಿಗಳಿಂದ ತಕ್ಷಣದ ಕ್ರಮದ ನಿರೀಕ್ಷೆಯಿದೆ.
ಬಿ.ಎಮ್.ಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಜಿಲ್ಲಾ ಕೋಶಾಧಿಕಾರಿ ಉದಯ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್, ತಾಲೂಕು ಅಧ್ಯಕ್ಷ ಉದಯ್ ಬಿ.ಕೆ., ಸುಳ್ಯ ತಾಲೂಕು ಅಧ್ಯಕ್ಷ ಮಧುಸೂದನ್, ಕಡಬ ತಾಲೂಕಿನ ಅಧ್ಯಕ್ಷ ಚಂದ್ರಶೇಖರ್, ಪುತ್ತೂರು ತಾಲೂಕು ಅಧ್ಯಕ್ಷ ಪುರಂದರ ರೈ, ಮೂಡಬಿದ್ರೆ ತಾಲೂಕು ಅಧ್ಯಕ್ಷ ರಾಜೇಶ್ ಸುವರ್ಣ ಮತ್ತು ಇತರ ಪ್ರಮುಖರು ಭಾಗವಹಿಸಿದ್ದರು.