ಬೆಳ್ತಂಗಡಿ: ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೋ ಅವರ ಮನೆಯ ಶೆಡ್ ನಲ್ಲಿ ಅಕ್ರಮವಾಗಿ ಕಾಡು ಪ್ರಾಣಿ ಬೇಟೆಯಾಡಿ ತಂದು ಮಾಂಸ ಮಾಡಿ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಜು. 12ರಂದು ರಾತ್ರಿ ದಾಳಿ ಮಾಡಿ ಜು. 13ರಂದು ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ದಾಳಿ ವೇಳೆ ಬೇಟೆಯಾಡಿ ಕಾಡು ಪ್ರಾಣಿ ಸಾಗಾಟಕ್ಕೆ ಬಳಸಿದ ತಾಲೂಕಿನ ಕಳಿಯ ಗ್ರಾಮದ ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿ ಎಂಬಾತನಿಗೆ ಸೇರಿದ ರಕ್ತದ ಕಲೆಗಳಿದ್ದ KA-21-P-0345 ನಂಬರಿನ ಬಿಳಿ ಬಣ್ಣದ ಈಯೊನ್ ಕಾರು, ಒಂದು ಸಿಂಗಲ್ ಬ್ಯಾರಲ್ ಕೋವಿ, ಮೂರು ಕಾಟ್ರೇಜ್, ಒಂದು ಕತ್ತಿ, 17 ಕೆ.ಜಿ ಕಾಡು ಪ್ರಾಣಿ ಮಾಂಸ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಕಾಡುಪ್ರಾಣಿ ಮಾಂಸವನ್ನು ಖಚಿತ ಪಡಿಸಿ ವರದಿಗಾಗಿ ಪ್ರಯೋಗಾಲಯಕ್ಕೆ ಅರಣ್ಯಾಧಿಕಾರಿಗಳು ಕಳುಹಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್ ಲೋಬೋ ಮತ್ತು ಶರತ್ ಶೆಟ್ಟಿ ವಿರುದ್ಧ ಜು.13ರಂದು ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್.ಟಿ.ಎನ್., ಡಿ.ಆರ್.ಎಫ್.ಒ ಸಂದೀಪ್, ರಾಘವೇಂದ್ರ ಕಿರಣ್ ಪಾಟೀಲ್, ಕಮಲ, ಬೀಟ್ ಫಾರೆಸ್ಟರ್ ಪಾರಶುರಾಮ್, ಚಾಲಕ ದಿವಕರ್ ಭಾಗವಹಿಸಿದರು.