ತುಳುವ ಭಾಷೆ, ಸಂಸ್ಕೃತಿ ಮತ್ತು ಸೇವಾ ಕಾರ್ಯಗಳಿಗೆ ಸಮರ್ಪಿತ ವ್ಯಕ್ತಿತ್ವ – ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬೆಂಗಳೂರು ತುಳುವ ಮಹಾಸಭೆಯ ಸಂಚಾಲಕರಾಗಿ ನೇಮಕ

0

ಬೆಳ್ತಂಗಡಿ: ತುಳು ಭಾಷೆ, ಸಂಸ್ಕೃತಿ, ಮತ್ತು ಸಮುದಾಯ ಹಕ್ಕುಗಳ ರಕ್ಷಣೆಗೆ ಶತಮಾನಾಂತರದಿಂದ ಶ್ರಮಿಸುತ್ತಿರುವ ತುಳುವ ಮಹಾಸಭೆ, ಬೆಂಗಳೂರು ಮಹಾನಗರದ ಸಂಚಾಲಕರಾಗಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ನೂತನ ನೇಮಕದಿಂದ ಕರ್ನಾಟಕ ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಲಭಿಸಬೇಕಾದ ಹೋರಾಟಕ್ಕೆ ಹೊಸ ಶಕ್ತಿ ತುಂಬಲಿದೆ ಎಂದು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತುಳು ಸಂಘಟನೆಗಳು ಈ ನೇಮಕಾತಿಯನ್ನು ಸ್ವಾಗತಿಸಿದೆ.

ತುಳುವ ಮಹಾಸಭೆ, 1928ರಲ್ಲಿ ಹಿರಿಯ ತಿಲಕವಾದಿ ಎಸ್. ಯು. ಪಣಿಯಾಡಿ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಈ ಸಂಘಟನೆ, ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತುಳುವರ ಹಕ್ಕುಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಶ್ರಮಿಸುತ್ತಿದೆ. ಶತಮಾನೋತ್ಸವದ ಹೆಜ್ಜೆಯಲ್ಲಿ ಈ ಸಂಸ್ಥೆ ತುಳುನಾಡನ್ ಕಳರಿ ತರಬೇತಿ (ಸಮರಕಲೆ, ಮರ್ಮ ಚಿಕಿತ್ಸಾ ಪಾಠ), ನಶಿಸುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಾಲಯ ಪುನರ್ ಸ್ಥಾಪನೆ, ಭಾಷಾ–ಮತ–ಜಾತಿ ಸೌಹಾರ್ದತೆ, ಪರಿಸರ ಸಂರಕ್ಷಣೆ ಮುಂತಾದ ಹತ್ತು ಹಾದಿಗಳಲ್ಲಿ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿದೆ.

ತುಳುನಾಡದ ಹೆಮ್ಮೆಯ ಪುತ್ರರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು, ತಮ್ಮ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಗಳಿಗಾಗಿ 2024ನೇ ಸಾಲಿನ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಾಧನೆಯ ಜೊತೆಗೆ, ಅವರನ್ನು ಬೆಂಗಳೂರು ತುಳುವ ಮಹಾಸಭೆಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಈ ಮೂಲಕ ತುಳುನಾಡದ ಹೆಮ್ಮೆಯ ಭಾಷೆ ತುಳುಗೆ ರಾಜ್ಯದ ಅಧಿಕೃತ ಭಾಷಾ ಸ್ಥಾನಮಾನ ದೊರಕಿಸಲು ನಡೆಯುತ್ತಿರುವ ಚಟುವಟಿಕೆಗಳು ಹೊಸ ಚೈತನ್ಯ ಪಡೆದುಕೊಳ್ಳಲಿವೆ.

ದೇವೇಂದ್ರ ಹೆಗ್ಡೆ ಅವರು 1973ರ ಜೂನ್ 6ರಂದು ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಕೊಡಂಗೆಗುತ್ತು ಮನೆಯಲ್ಲಿ ಜನಿಸಿದರು. ಬಡತನದ ನಡುವೆಯೂ ಬಾಲ್ಯದಿಂದಲೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ಮುಂಬೈ ಯೂನಿವರ್ಸಿಟಿಯಿಂದ ಬಿ.ಕಾಂ. ಪದವಿ ಪಡೆದರು. ವಿಜಯವಾಡದಲ್ಲಿ ಡಿಪ್ಲೋಮಾ ಇನ್ ಫೋಟೋಶಾಪ್ ಪೂರೈಸಿದ ಅವರು, ವೃತ್ತಿಜೀವನವನ್ನು ಸೇಲ್ಸ್ ಅಸಿಸ್ಟೆಂಟ್ ಆಗಿ ಆರಂಭಿಸಿ, ಬ್ರಾಂಚ್ ಮ್ಯಾನೇಜರ್, ನಂತರ ಉದ್ಯಮಿಯಾಗುವವರೆಗೆ ಹಲವು ಹಂತಗಳಲ್ಲಿ ಸಾಧನೆ ಮಾಡಿದ್ದಾರೆ. ಪ್ರಸ್ತುತ ಅವರು ಸ್ಮಾರ್ಟ್ ಲೈನರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಉದ್ಯಮ ವಿಸ್ತರಿಸಿಕೊಂಡಿದ್ದಾರೆ. 2018 ರಿಂದ 2023ರವರೆಗೆ ಕರ್ನಾಟಕ ಘನ ಸರ್ಕಾರದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿರುತಾರೆ.

ದೇವೇಂದ್ರ ಹೆಗ್ಡೆ ಅವರು ಕಳೆದ 20 ವರ್ಷಗಳಿಂದ ಬೆಂಗಳೂರು, ದಕ್ಷಿಣ ಕನ್ನಡ, ಮುಂಬೈ ಮತ್ತು ನವದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಸಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹಲವಾರು ದೈವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳ ಸದಸ್ಯರಾಗಿದ್ದು, ಪ್ರಮುಖವಾಗಿ: ಶ್ರೀ ಉಮಾಮಹೇಶ್ವರ ದೇವಾಸ್ಥಾನ, ಮರೋಡಿ – ಅಧ್ಯಕ್ಷ ಮತ್ತು ಆಡಳಿತ ಮೊಕ್ತೇಸರ, ಕೋಕ್ರಾಡಿ ಹೈಸ್ಕೂಲ್ ಬೆಟರ್‌ಮೆಂಟ್ ಟ್ರಸ್ಟ್ ಅಧ್ಯಕ್ಷ, ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ದೈವಸ್ಥಾನ, ಬಾಕ್ಯಾರು ಉಪಾಧ್ಯಕ್ಷ, ಹೆಗ್ಗಡೆ ಸಮಾಜ ಸೇವಾ ಸಂಘ, ಮೂಡಬಿದ್ರೆ ಉಪಾಧ್ಯಕ್ಷ ಅಲ್ಲದೆ, ಅವರು ಕಂಬಳ ಕೂಟ, ಬ್ರಹ್ಮಕಲಶೋತ್ಸವ ಸಮಿತಿಗಳು, ಧಾರ್ಮಿಕ ಪರಿಷತ್, ಸಿವಿಲ್ ಡಿಫೆನ್ಸ್ ಸೇವೆ, ರೋಟರಿ ಕ್ಲಬ್ ಮುಂತಾದ ಸಂಘಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ , ಹೆಮ್ಮೆಯ ಪುತ್ರ” ಗೌರವ, “ಕಲಾ ಪೋಷಕ” ಪ್ರಶಸ್ತಿ , “ಭಾರತ ಬಂಧು” ಪುರಸ್ಕಾರ, “ಯಕ್ಷರಕ್ಷಾ” ಪ್ರಶಸ್ತಿ ಅಲ್ಲದೆ ಹಲವಾರು ದೈವಸ್ಥಾನ ಮತ್ತು ಸಂಘಗಳ ಗೌರವ ಸನ್ಮಾನಗಳನ್ನು ಪಡೆದಿದ್ದಾರೆ.

“ತುಳು ಭಾಷೆ ನಮ್ಮೆಲ್ಲರ ತಾಯಿನುಡಿ. ಈ ಭಾಷೆಗೆ ಸರಕಾರದ ಮಾನ್ಯತೆ ಸಿಗುವುದು ನಮ್ಮ ಶ್ರದ್ಧೆಗೂ, ಶಕ್ತಿಗೂ ಪರೀಕ್ಷೆಯಾಗಿದೆ. ಬೆಂಗಳೂರಿನಲ್ಲಿ ತುಳು ಭಾಷಾ ಹಕ್ಕು ಚಟುವಟಿಕೆಗೆ ದಿಕ್ಕು ನೀಡುವುದು ನನ್ನ ಆದ್ಯತೆ,” ಆದುದರಿಂದ ತುಳುವ ಮಹಾಸಭೆಯ ಮೂಲಕ ತುಳು ಚಟುವಟಿಕೆಗಳಿಗೆ ಶಕ್ತಿ ತುಂಬುತ್ತೇನೆ ಎಂದು ಬೆಂಗಳೂರು ನಗರ ತುಳುವ ಮಹಾಸಭೆ ಸಂಚಾಲಕರಾಗಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಆಶಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here