ಬೆಳ್ತಂಗಡಿ: ಜನಸಂಖ್ಯೆಯಲ್ಲಿ ಭಾರತವು ಚೀನಾ ದೇಶವನ್ನು ಮೀರಿಸಿರುವುದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂದು ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಕಳವಳ ವ್ಯಕ್ತಪಡಿಸಿದರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಬೆಳ್ತಂಗಡಿ, ತಾ.ಪಂ. ಬೆಳ್ತಂಗಡಿ, ಗ್ರಾ.ಪಂ. ಉಜಿರೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ, ಎಸ್.ಡಿ.ಎಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಂದುವರಿದು ಮಾತನಾಡಿದ ಡಾ. ದೀಪಕ್ ರೈ ಅವರು, “ಚೀನಾ ನಮ್ಮ ದೇಶಕ್ಕಿಂತ ಎರಡೂವರೆ ಪಟ್ಟು ದೊಡ್ಡ ದೇಶ. ಆದರೆ ಅದನ್ನು ಹಿಂದೆ ಹಾಕಿ ನಾವು ಮುಂದೆ ಬಂದಿದ್ದೇವೆ. ವಿಶ್ವ ಜನಸಂಖ್ಯೆ 820 ಕೋಟಿಯಲ್ಲಿ ಭಾರತದ ಜನಸಂಖ್ಯೆ 146 ಕೋಟಿ ಆಗಿದೆ. ಇದು ಹೆಮ್ಮೆ ಪಡುವ, ಸಂಭ್ರಮಿಸುವ ಸಂಗತಿಯಲ್ಲ. ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವುದು ಅನಿವಾರ್ಯ” ಎಂದು ಅವರು ಹೇಳಿದರು.
ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಪನ್ಮೂಲ ಕೂಡ ಹೆಚ್ಚು ಬೇಕಾಗುತ್ತದೆ. ಭೂಮಿಯಿಂದ ಪರಿಸರದಿಂದ ಸಂಪನ್ಮೂಲಗಳನ್ನು ಪಡೆಯುವ ಮಾನವ ಅರಣ್ಯನಾಶ ಮತ್ತು ಗಣಿಗಾರಿಕೆಯಲ್ಲಿ ತೊಡಗಿದ್ದಾನೆ. ಗಣಿಗಾರಿಕೆ ಆದಂತಹ ಜಾಗದಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ. ಇದರಿಂದ ಆಹಾರ ಉತ್ಪತ್ತಿಯೂ ಕಡಿಮೆಯಾಗುತ್ತದೆ. ಪ್ರಾಣಿಗಳ ವಾಸಸ್ಥಳವನ್ನು ನಾವು ಅತಿಕ್ರಮಿಸಿರುವುದರಿಂದ ಅವುಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಹವಾಮಾನ ವೈಪರೀತ್ಯ ಹೆಚ್ಚುತ್ತಿದೆ. ಪ್ರವಾಹದಿಂದ ಸಂಪನ್ಮೂಲಗಳು ನಾಶವಾಗುತ್ತಿವೆ. ಮನುಷ್ಯನ ಆಸೆಗಳಿಗೆ ಕೊನೆಯಿಲ್ಲದಂತಾಗಿದೆ. ಯುದ್ಧಗಳಲ್ಲಿ ಬಾಂಬ್ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದವರು ವಿಶ್ಲೇಷಿಶಿದರು.
ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., “ಜನಸಂಖ್ಯೆ ಹೆಚ್ಚಳ ಸಮಸ್ಯೆಯೇ ಅಲ್ಲ ಆದರೆ, ಜನರಿಗೆ ಬೇಕಾದ ವ್ಯವಸ್ಥೆ ಆಗದೆ ಇರುವುದೇ ಸಮಸ್ಯೆ. ಹಾಗಾಗಿ ಈ ಕುರಿತು ಅರಿವು ಮೂಡಿಸುವುದು ಅಗತ್ಯ” ಎಂದು ಅಭಿಪ್ರಾಯಪಟ್ಟರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಜಾತ್ ಆರ್.ಬಿ., ಪ್ರಕೃತಿಗೆ ವಿರುದ್ಧವಾಗಿ ಮನುಷ್ಯನ ವಿವಿಧ ಚಟುವಟಿಕೆಗಳಿಗೆ ಪ್ರತಿಯಾಗಿ ಇಂದು ಪ್ರಕೃತಿಯು ಮನುಷ್ಯನ ವಿರುದ್ಧ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಿದರು. ತಾಯಿ-ಮಗುವಿನ ಆರೋಗ್ಯಕ್ಕೆ ಬಹುವಾಗಿ ಪ್ರಾಮುಖ್ಯ ನೀಡಬೇಕು. ಕುಟುಂಬ ಯೋಜನೆ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಆಶಾ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಪ್ರಹಸನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚು ಫಲಾನುಭವಿಗಳನ್ನು ಆರೋಗ್ಯ ಕೇಂದ್ರಗಳಿಗೆ ಕರೆತರುವಲ್ಲಿ ಯಶಸ್ವಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಕರ್ತರನ್ನು ಗೌರವಿಸಲಾಯಿತು.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬೆಳ್ತಂಗಡಿ ತಾ.ಸಾ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ್, ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮೇಲ್ವಿಚಾರಕಿ ಲೀಲಾವತಿ, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನಿತಾ, ತಾಲೂಕು ಆರೋಗ್ಯ ವಿಭಾಗದ ಸಿಬ್ಬಂದಿ ಅಮ್ಮಿ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಜೇಯ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ವಂದಿಸಿದರು.