ನಡ: ನಡ ಸರಕಾರಿ ಪದವಿ ಪೂರ್ವ ಕಾಲೇಜಿನ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಜು. 9ರಂದು ಕಾಲೇಜು ಸಭಾಂಗಣದಲ್ಲಿ ನಡೆಸಲಾಯಿತು. ಉಜಿರೆಯ ದಂತ ವೈದ್ಯ ಡಾ. ಎಂ.ಎಂ. ದಯಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಜಗತ್ತಿನಲ್ಲಿ ಅತಿ ದೊಡ್ಡ ಶಕ್ತಿ ಎಂದರೆ ಯುವಶಕ್ತಿ. ಈ ಯುವಶಕ್ತಿಯನ್ನು ನಾವು ಸರಿಯಾಗಿ ಬಳಸಿಕೊಂಡರೆ ನಮಗೆ ಗೆಲುವು ಸಾಧ್ಯ. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಕ್ಕಳಿಗೆ ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಜಿತ್ ಆರಿಗ, ಪ್ರಭಾಕರ ಮಯ್ಯ, ಕೊಯ್ಯೂರು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೋಹನ ಗೌಡ ಉಪಸ್ಥಿತರಿದ್ದು, ಮಕ್ಕಳಿಗೆ ಹಿತನುಡಿ ಗಳನ್ನಾಡಿದರು. ಪ್ರಾಂಶುಪಾಲ ಚಂದ್ರಶೇಖರ್ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಹೂ ಕೊಟ್ಟು ಗೌರವಿಸಿದರು. ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ವಸಂತಿ ಪಿ. ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಶಿಲ್ಪಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಉಪನ್ಯಾಸಕಿ ಲಿಲ್ಲಿ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು. ಸವಿತಾ ಧನ್ಯವಾದಗೈದರು.