ಬೆಳ್ತಂಗಡಿ: ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 211ರ ಅಡಿಯಲ್ಲಿ ದಾಖಲಾಗಿರುವ ಧರ್ಮಸ್ಥಳ ಪ್ರಕರಣದ ತನಿಖೆಯ ಸುತ್ತ ವ್ಯಾಪಕ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಚರ್ಚೆಗಳ ಮಧ್ಯೆ, ಸಂಯಮ ಮತ್ತು ಜವಾಬ್ದಾರಿಯುತ ವರದಿ ಮಾಡುವಂತೆ ಪೊಲೀಸರು ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ಅಗತ್ಯವೆಂದು ಪರಿಗಣಿಸಲಾದ ಯಾವುದೇ ನಿರ್ದಿಷ್ಟ ಬೆಳವಣಿಗೆಗಳು ಅಥವಾ ಮಾಹಿತಿಯನ್ನು ಅಧಿಕೃತ ಮಾರ್ಗಸೂಚಿಗಳ ಮೂಲಕ ತಿಳಿಸಲಾಗುವುದು ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ನಡೆಯುತ್ತಿರುವ ತನಿಖೆಗಳ ಸಮಯದಲ್ಲಿ ಮಾಧ್ಯಮ ವಿಚಾರಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸೂಚಿಸಲಾಗಿದೆ.
ತನಿಖೆಯ ವಿಧಾನ ಅಥವಾ ನಿರ್ದೇಶನದ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಅಥವಾ ಊಹೆಗಳು, ಹಲವಾರು ಊಹಾತ್ಮಕ ಕೋನಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿಕೆಯು ಒತ್ತಿ ಹೇಳಿದೆ. ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಹಾಗೂ ಪ್ರಕರಣದ ಬಗ್ಗೆ ಹರಿದಾಡುವ ಊಹಾಪೋಹಗಳಿಗೆ ಪೊಲೀಸರು ಸ್ಪಷ್ಟನೆ ನೀಡಬೇಕೆಂದು ನಿರೀಕ್ಷಿಸಬಾರದಾಗಿ ವಿನಂತಿ. ಹಾಗೆಯೇ ದೂರುದಾರರು ಅಥವಾ ಅವರ ಪರವಾಗಿ ಯಾರಾದರೂ ಪೊಲೀಸರ ಬಳಿ ಲಭ್ಯವಿರದ ಮಾಹಿತಿಗಳನ್ನು ನೇರವಾಗಿ ಮಾಧ್ಯಮಕ್ಕೆ ಹಂಚಿಕೊಂಡಿದ್ದಲ್ಲಿ, ಈ ಬಗ್ಗೆಯೂ ಪೊಲೀಸ್ ಇಲಾಖೆಯಿಂದ ಪ್ರತಿಕ್ರಿಯೆ ನಿರೀಕ್ಷಿಸತಕ್ಕದಲ್ಲ ಎಂಬುದಾಗಿ ಸ್ಪಷ್ಟನೆ ನೀಡಲಾಗಿದೆ.