ಧರ್ಮಸ್ಥಳ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆ ಹಾಗೂ ಅತ್ಯಾಚಾರಮೃತದೇಹಗಳನ್ನು ಬಲವಂತವಾಗಿ ಹೂತು ಹಾಕಿಸಿದ್ದಾರೆ: ಅನಾಮಿಕ ವ್ಯಕ್ತಿಯಿಂದ ದೂರುಬೆಳ್ತಂಗಡಿ ನ್ಯಾಯಾಲಯದ ಅನುಮತಿ ಪಡೆದು ಕೇಸು ದಾಖಲು: ಪೊಲೀಸ್ ಇಲಾಖೆ ಮಾಹಿತಿ

0

ಬೆಳ್ತಂಗಡಿ: ತನಗೆ ನಿರಂತರವಾಗಿ ಪ್ರಾಣ ಬೆದರಿಕೆಯೊಡ್ಡಿ ಧರ್ಮಸ್ಥಳ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಗೊಳಗಾದ ಹಾಗೂ ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಮೃತದೇಹಗಳು ಮತ್ತು ಸಾಕ್ಷ್ಯಗಳನ್ನು ನನ್ನಿಂದ ಬಲವಂತವಾಗಿ ಹೂತು ಹಾಕಿಸಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅನಾಮಿಕ ವ್ಯಕ್ತಿಯೋರ್ವರು ದೂರು ನೀಡಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣಾ ಪೊಲೀಸರು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಹೆಚ್. ಅವರಿಂದ ಅನುಮತಿ ಪಡೆದು ಕೇಸು ದಾಖಲಿಸಿದ ಘಟನೆ ವರದಿಯಾಗಿದೆ.

ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ನಡೆದ ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ನೀಡುವುದಾಗಿ ಅನಾಮಿಕ ವ್ಯಕ್ತಿಯೋರ್ವರು ಮಾಹಿತಿ ನೀಡಿರುವ ಬಗ್ಗೆ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಅವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಭಾರೀ ಸಂಚಲನ ಸೃಷ್ಠಿಸಿದ ಈ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಠಾಣಾ ಪೊಲೀಸರು ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್.ದೇಶಪಾಂಡೆ ಅವರನ್ನು ವ್ಯಕ್ತಿ ಎಸ್.ಪಿ. ಮತ್ತು ಧರ್ಮಸ್ಥಳ ಠಾಣೆಗೆ ದೂರು ನೀಡಿರುವುದು, ನ್ಯಾಯಾಲಯದ ಅನುಮತಿ ಪಡೆದು ಕೇಸು ದಾಖಲಿಸಿರುವುದು ಮುಂತಾದ ವಿಚಾರಗಳ ಕುರಿತು ಪೊಲೀಸ್ ಇಲಾಖೆ ಪತ್ರಕರ್ತರಿಗೆ ಮಾಹಿತಿ ಒದಗಿಸಿದೆ.

ಅನಾಮಿಕನ ಪತ್ರ ಬಹಿರಂಗ-ಬೆಂಗಳೂರಿನ ವಕೀಲರನ್ನು ಸಂಪರ್ಕಿಸಿದ ಪೊಲೀಸರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ವ್ಯಕ್ತಿಯೊಬ್ಬರು ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಉದ್ದೇಶಿಸಿದ್ದಾರೆ ಎಂದು ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರು ಬರೆದಿದ್ದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಪತ್ರದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಧರ್ಮಸ್ಥಳ ಠಾಣಾ ಪೊಲೀಸರು ಆ ಪತ್ರದಲ್ಲಿ ಉಲ್ಲೇಖಿಸಿರುವ ಬೆಂಗಳೂರು ಮೂಲದ ವಕೀಲರನ್ನು ಸಂಪರ್ಕಿಸಿದ್ದರು. ಸೂಕ್ತ ರಕ್ಷಣೆಗೆ ವ್ಯವಸ್ಥೆ ಮಾಡಿದರೆ ಮಾಹಿತಿ ನೀಡಿದ ವ್ಯಕ್ತಿ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಗೆ ಅಥವಾ ಧರ್ಮಸ್ಥಳ ಠಾಣೆಗೆ ಖುದ್ದಾಗಿ ಹಾಜರಾಗಲಿದ್ದಾರೆ ಎಂದು ವಕೀಲರು ಆ ವೇಳೆ ತಿಳಿಸಿದ್ದರು. ಆ ಬಳಿಕ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರನ್ನು ಒಳಗೊಂಡ ವಕೀಲರ ತಂಡ ದಕ್ಷಿಣ ಕನ್ನಡ ಎಸ್ಪಿ ಕಚೇರಿಗೆ ಭೇಟಿ ನೀಡಿತ್ತು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ್ ಅವರು ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ವಕೀಲರ ತಂಡ ಅವರನ್ನು ಭೇಟಿಯಾಗಲು ಸಾಧ್ಯವಾಗದೆ ಹಿಂತಿರುಗಿದ್ದರು. ಈ ವಿಚಾರ ಭಾರೀ ಸಂಚಲನ ಸೃಷ್ಠಿಸಿತ್ತು. ಬಳಿಕ ಕೆಲವು ದಿನದಲ್ಲಿ ಆ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದೆ ಎಂದು ಪತ್ರಕರ್ತರನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ವಾಟ್ಸಾಪ್ ಗ್ರೂಪ್‌ನಲ್ಲಿ ಪೊಲೀಸರು ಮಾಹಿತಿ ನೀಡಿದ್ದರು.

ವಕೀಲರಿಂದ ಮತ್ತೊಂದು ಪತ್ರ:ದಿನಾಂಕ ೨೨-ಜೂನ್‌ರ ನಮ್ಮ ಪತ್ರದಲ್ಲಿ ಹೇಳಿರುವಂತೆ ‘ಆ’ ವ್ಯಕ್ತಿಯ ಲಿಖಿತ ದೂರನ್ನು ಈ ದಿನ (೩-ಜುಲೈ) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್.ಪಿ., ಮಂಗಳೂರು) ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದೆ. ‘ಆ’ ವ್ಯಕ್ತಿಯ ಲಿಖಿತ ದೂರಿನ ಪ್ರತಿಯನ್ನು ಲಗತ್ತಿಸಲಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಂತಹ ಪ್ರಕರಣ ಮತ್ತೊಂದಿರಲಾರದು! ‘ಆ’ ವ್ಯಕ್ತಿಯು ತನ್ನ ದೂರಿನಲ್ಲಿ ಹೇಳಿರುವ ಅಪರಾಧದ ಪ್ರಕರಣಗಳಿಗೆ ಪೊಲೀಸ್ ಇಲಾಖೆಯ ಪ್ರತಿಕ್ರಿಯೆಯನ್ನು ಇಲಾಖೆಯಿಂದಲೇ ಪಡೆದುಕೊಳ್ಳುವಂತೆ ಮನವಿ ಎಂದು ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಅವರ ಹೆಸರಿನಲ್ಲಿ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿತ್ತು.

ಅನಾಮಿಕನಿಂದ ಪೊಲೀಸರಿಗೆ ದೂರು: ನನ್ನಿಂದ ಹೂತು ಹಾಕಿಸಿರುವ ಮೃತ ದೇಹಗಳ ಕಳೇಬರಗಳನ್ನು ಪೊಲೀಸರ ಸಮ್ಮುಖದಲ್ಲಿ ಹೊರ ತೆಗೆಸುವಂತೆ ಮನವಿ ಮತ್ತು ತಕ್ಷಣದ ಪ್ರಥಮ ವರ್ತಮಾನ ವರದಿ ಹಾಗೂ ಸಾಕ್ಷಿ ಸಂರಕ್ಷಣೆಯ ವಿನಂತಿ ಎಂಬ ತಲೆ ಬರಹದಡಿ ಅನಾಮಿಕ ವ್ಯಕ್ತಿ ಎಸ್‌ಪಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರು ಪೊಲೀಸ್ ಇಲಾಖೆಯಲ್ಲಿ ಸ್ವೀಕೃತವಾಗಿದೆ. ಬಳಿಕ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಹೆಚ್. ಅವರಿಂದ ಅನುಮತಿ ಪಡೆದು ಧರ್ಮಸ್ಥಳ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದೂರು ಸಲ್ಲಿಕೆಯಾಗಿದೆ-ಪೊಲೀಸರ ಪ್ರಕಟಣೆ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ವ್ಯಕ್ತಿಯೊಬ್ಬ ಮಾಹಿತಿ ನೀಡುವುದಾಗಿ ಬರವಣಿಗೆ ಇರುವ ಪತ್ರವು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು ಸದ್ರಿ ವಿಷಯಕ್ಕೆ ಸಂಬಂಧಿಸಿದಂತೆ ದಿ. ೦೩.೦೭.೨೦೨೫ರಂದು ಪೊಲೀಸ್ ಅಧೀಕ್ಷಕರ ಕಛೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿರುತ್ತದೆ. ದೂರನ್ನು ಸ್ವೀಕರಿಸಲಾಗಿದ್ದು ದೂರಿನ ಬಗ್ಗೆ ವಿಚಾರಣೆ ನಡೆಸಿ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.

ನ್ಯಾಯಾಲಯದ ಅನುಮತಿ ಪಡೆದು ಕೇಸು ದಾಖಲು: ಅನಾಮಿಕ ವ್ಯಕ್ತಿಯ ಪತ್ರ ವೈರಲ್ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ನೇತೃತ್ವದಲ್ಲಿ ಕ್ಷಣ ಕ್ಷಣದ ಮಾಹಿತಿ ನೀಡುವ ಕೆಲಸ ಆಗಿದೆ. ಅನಾಮಿಕ ವ್ಯಕ್ತಿ ದೂರು ನೀಡಿದ ಮರುದಿನವೂ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು ನ್ಯಾಯಾಲಯದ ಅನುಮತಿ ಪಡೆದು ಕೇಸು ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು ದೂರುದಾರರಿಗೆ ಜೀವ ಬೆದರಿಕೆ ಒಡ್ಡಿ ಸದ್ರಿ ಅಪರಾಧ ಕೃತ್ಯಗಳ ಮೃತದೇಹಗಳನ್ನು ದೂರುದಾರರ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿರುತ್ತಾರೆ.

ಈ ರೀತಿಯಲ್ಲಿ ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು ಪ್ರಸ್ತುತ ದೂರುದಾರರಿಗೆ ಪಾಪಪ್ರಜ್ಞೆ ಕಾಡುತ್ತಿರುವುದರಿಂದ ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ ಸದ್ರಿ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ತಾನು ಸಿದ್ಧವಿರುವುದಾಗಿ ದಿನಾಂಕ ೦೩.೦೭.೨೦೨೫ರಂದು ಪೊಲೀಸ್ ಅಧೀಕ್ಷಕರ ಕಛೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿರುತ್ತದೆ. ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು ದಿನಾಂಕ ೦೪.೦೭.೨೦೨೫ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: ೩೯/೨೦೨೫ ಕಲಂ: ೨೧೧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು.

ಸದ್ರಿ ದೂರುದಾರರು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ ದೂರುದಾರರ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ನೀಡಲಾಗುವುದಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಾಮಿಕ ವ್ಯಕ್ತಿ ನೀಡಿದ ದೂರಿನ ಬಗ್ಗೆ …
ದೂರದಾರರು ತಮ್ಮ ಪತ್ರದಲ್ಲಿ ಹಲವಾರು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದು, ಆದರೆ ಈ ದೂರಿನ ಸತ್ಯಾಸತ್ಯತೆಯ ಬಗ್ಗೆ ನಿಖರತೆ ಇಲ್ಲದೇ ಇರುವುದರಿಂದ ಮತ್ತು ಉಲ್ಲೇಖಿಸಲ್ಪಟ್ಟ ವಿಷಯಗಳು ಉzಶಪೂರ್ವಕವಾಗಿ ಮಾಡಿರಬಹುದಾದ ಸಾಧ್ಯತೆಗಳು ಇರುವುದರಿಂದ ದಾಖಲಾದ ದೂರಿನ ಕೊನೆಯ ಅಂಶಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿzವೆ..
ನನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ತಮ್ಮಲ್ಲಿ ನನ್ನ ಕಳಕಳಿಯ ಮನವಿ. ಈ ದೂರಿನ ಮುಂದುವರಿದ ಭಾಗವಾದ ಆರೋಪಿತರ ಹೆಸರುಗಳು ಮತ್ತು ಅಪರಾಧಗಳಲ್ಲಿ ಅವರ ನಿಖರ ಪಾತ್ರವನ್ನು ಪೊಲೀಸರಿಗೆ ತಿಳಿಸುವ ಮುನ್ನವೇ ನಾನು ಕೊಲೆಯಾದರೆ ಇಲ್ಲವೇ ಅಲಭ್ಯವಾಗಿ ಹೋದರೆ ನಡೆದಿರುವ ಸತ್ಯವು ನನ್ನೊಡನೆಯೇ ನಾಶವಾಗದಿರಲೆಂದು ಮುಂದುವರೆದ ದೂರನ್ನು ನನ್ನ ಸಹಿ ಹಾಕಿ, ಸುಪ್ರೀಂಕೋರ್ಟ್‌ನ ವಕೀಲರಾದ ಕೆ. ವಿ. ಧನಂಜಯ್‌ರವರಿಗೆ ನೀಡಿರುತ್ತೇನೆ.

ಧರ್ಮಸ್ಥಳ ಠಾಣೆಗೆ ಯಾವುದೇ ಕಳೆಬರವನ್ನು ವ್ಯಕ್ತಿ ನೀಡಿಲ್ಲ-ಕೇವಲ ತಲೆಬುರುಡೆ, ಕೆಲ ಭಾಗಗಳ ಎರಡು ಫೋಟೋಗಳ ಕಲರ್ ಜೆರಾಕ್ಸ್ ಸಲ್ಲಿಸಿದ್ದಾರೆ-ಪೊಲೀಸರಿಂದ ಪತ್ರಿಕಾ ಪ್ರಕಟಣೆ: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು ಅವುಗಳ ಮಾಹಿತಿ ನೀಡುತ್ತೇನೆಂದು ಪತ್ರ ಬರೆದು ವಕೀಲರ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿ ಇದೀಗ ಎಸ್‌ಪಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿರುವುದರ ಜೊತೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಎರಡು ಫೋಟೋದ ಕಲರ್ ಜೆರಾಕ್ಸ್ ನೀಡಿರುವುದಾಗಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: ೩೯/೨೦೨೫ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ರಿ ದೂರುದಾರರ ವಕೀಲರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯನ್ನು ನೋಡಿ ಹಲವರು ದೂರಿನಲ್ಲಿ ಉಲ್ಲೇಖಿಸಿರುವ ಕಲೆಬರಹದ ಕುರಿತು ವಿಚಾರಿಸಿರುತ್ತಾರೆ. ಈ ವಿಷಯದ ಬಗ್ಗೆ ಸ್ಪಷ್ಟನೆ ಏನೆಂದರೆ ಸದ್ರಿ ದೂರಿಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್ ಝೆರಾಕ್ಸ್ ಪ್ರತಿಯನ್ನು ಮಾತ್ರ ಸಲ್ಲಿಸಿರುತ್ತಾರೆ. ಇದನ್ನು ಹೊರತು ಪಡಿಸಿದಂತೆ ಯಾವುದೇ ಕಳೆಬರಹವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿರುವುದಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಲೆಬರಹವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಧರ್ಮಸ್ಥಳದಲ್ಲಿನ ಅಪರಾಧಗಳ ಕುರಿತ ದೂರು – ತನಿಖಾಧಿಕಾರಿ ಬದಲಿಸಲು ಪೊಲೀಸ್ ಮಹಾನಿರ್ದೇಶಕರಿಗೆ ವಕೀಲ ಮಂಜುನಾಥ್ ಪತ್ರ
ಬೆಳ್ತಂಗಡಿ: ಧರ್ಮಸ್ಥಳದ ಗ್ರಾಮದ ಆಸುಪಾಸಿನಲ್ಲಿ ನಡೆದಿದ್ದ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿ ಮಾಹಿತಿ ನೀಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸಿನ ತನಿಖೆ ಮಾಡಲು ಸ್ಥಳೀಯ ಠಾಣೆಯ ತನಿಖಾಧಿಕಾರಿ ಸಮರ್ಥ ಗಾಣಿಗೇರ್ ಇನ್ನೂ ಮುಂದಾಗಿಲ್ಲ. ತನಿಖೆಗೆ ವಿಳಂಬ ಮಾಡುತ್ತಿರುವುದರಿಂದ ಈ ಪ್ರಕರಣದಲ್ಲಿ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆಯಿದೆ. ವಿನಾಕಾರಣ ವಿಳಂಬ ಮಾಡುತ್ತಿರುವ ಸಮರ್ಥ ಗಾಣಿಗೇರ್ ಬದಲಿಗೆ ಬೇರೊಬ್ಬ ತನಿಖಾಧಿಕಾರಿಯನ್ನು ನೇಮಿಸಬೇಕು ಎಂದು ಹೈಕೋರ್ಟ್ ವಕೀಲ ಮಂಜುನಾಥ್ ಎನ್. ಎಂಬವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಒಂದು ಪ್ರತಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಾಯುಕ್ತ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕಳುಹಿಸಿಕೊಟ್ಟಿದ್ದಾರೆ.
ತನಿಖೆ ನ್ಯಾಯಯುತ, ಪಾರದರ್ಶಕವಾಗಿ ನಡೆಯಬೇಕು ಎಂಬ ಉzಶದಿಂದ ಸ್ವತಂತ್ರ ತನಿಖಾ ಮೇಲ್ವಿಚಾರಕರನ್ನು ನೇಮಿಸಬೇಕು. ಶವಗಳನ್ನು ಹೂಳಿದ ಸ್ಥಳಗಳಿಗೆ ದೂರುದಾರನ ಜತೆಗೆ ಭೇಟಿ ನೀಡಿ ಪರಿಶೀಲಿಸಬೇಕು. ದೂರುದಾರ ಮತ್ತು ಆತನ ಕುಟುಂಬಕ್ಕೆ ಪೂರ್ಣ ರಕ್ಷಣೆ ನೀಡಬೇಕು ಮತ್ತು ತನಿಖೆಯಲ್ಲಿ ಅನುಮಾನ ಮೂಡದಂತೆ ನೋಡಿಕೊಳ್ಳಲು ಸಮರ್ಥ ಗಾಣಿಗೇರ್ ಬದಲಿಗೆ ಬೇರೊಬ್ಬರನ್ನು ತನಿಖಾಧಿಕಾರಿಯಾಗಿ ನೇಮಿಸಬೇಕು ಎಂದು ವಕೀಲ ಮಂಜುನಾಥ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here