ಬೆಳ್ತಂಗಡಿ: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ದೂರುದಾರ ಇಬ್ರಾಹಿಂ ತೆಕ್ಕಾರು ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಕಂತ್ರಿ ಎಂಬ ಶಬ್ದವನ್ನು ಮುಸ್ಲಿಂ ಸಮುದಾಯದ ಕೆಲವರಿಗೆ ಟೀಕಿಸಿ ಬಳಸಿದ್ದಾರೆ ಎಂದು ತೆಕ್ಕಾರು ನಿವಾಸಿ ಇಬ್ರಾಹಿಂ ನೀಡಿದ್ದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿ ೨೦೨೫ ಮೇ ೪ರಂದು ಹೈಕೋರ್ಟ್‌ಗೆ ಶಾಸಕ ಹರೀಶ್ ಪೂಂಜ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠ ೨೦೨೫ ಮೇ ೨೨ರಂದು ಪ್ರಕರಣಕ್ಕೆ ತಡೆಯಾಜ್ಞೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿರುವ ದೂರುದಾರ ಇಬ್ರಾಹಿಂ ತೆಕ್ಕಾರು ಪರ ವಕೀಲ ಎಸ್. ಬಾಲನ್ ಅವರು ಎಫ್‌ಐಆರ್‌ಗೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ವೆಕೇಟಿಂಗ್ ಸ್ಟೇ ಅರ್ಜಿ ಸಲ್ಲಿಸಿದ್ದಾರೆ. ಹರೀಶ್ ಪೂಂಜ ಸಲ್ಲಿಸಿರುವ ಅರ್ಜಿ ಮೇ ೨೨ರಂದು ವಿಚಾರಣೆ ಬಂದಾಗ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಸರ್ಕಾರದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರವರು ಉಪ್ಪಿನಂಗಡಿ ಠಾಣಾ ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಿದ್ಧಗೊಳಿಸಿದ್ದಾರೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು. ಚಾರ್ಜ್‌ಶೀಟ್ ಸಿದ್ಧಗೊಂಡಿದ್ದು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಅಡ್ಡಿಯಾಗಿದೆ. ಹಾಗಾಗಿ ಚಾರ್ಜ್‌ಶೀಟ್ ಸಲ್ಲಿಸಲು ಪೂರಕವಾಗುವಂತೆ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಲಾಗಿದೆ. ಅಲ್ಲದೆ ಪೊಲೀಸರು ಹರೀಶ್ ಪೂಂಜ ವಿರುದ್ಧ ಚಾರ್ಜ್‌ಶೀಟ್ ಪೂರ್ಣಗೊಳಿಸಿರುವುದರಿಂದ ಹರೀಶ್ ಪೂಂಜ ಹಾಕಿರುವ ಎಫ್‌ಐಆರ್ ರದ್ದು ಅರ್ಜಿಯನ್ನು ಅನೂರ್ಜಿತಗೊಳಿಸಬೇಕು ಅಥವಾ ತಿದ್ದುಪಡಿ ಮಾಡಿ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಬೇಕು. ಹಾಗಾಗಿಯೂ ಕೂಡಾ ಎಫ್‌ಐಆರ್ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸುವುದು ಸರಿಯಾದ ಕ್ರಮ ಎಂದು ಕೂಡಾ ಎಸ್. ಬಾಲನ್ ಅರ್ಜಿಯಲ್ಲಿ ವಾದಿಸಿದ್ದಾರೆ.
ಹರೀಶ್ ಪೂಂಜ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ ೩೯/೨೦೨೩(ಐPಇ೧೫೩, ೧೫೩-ಅ, ೫೦೫(೧)(೩)(), ೫೦೫(೨), ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ ೫೭/೨೦೨೪ (ಐPಇ ೫೦೪, ೩೫೩), ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ ೫೮/೨೦೨೪(ಐPಇ೧೪೩, ೧೪೭, ೩೪೧, ೫೦೪, ೫೦೬ /ಡಿ ೧೪೯), ಬಜ್ಪೆ ಠಾಣೆಯಲ್ಲಿ ಕ್ರೈಂ ನಂ ೨೩೯/೨೦೧೬ (ಐPಇ ೧೪೩, ೧೪೭, ೨೯೦, ೧೬೦, ೫೦೪ /ಡಿ ೧೪೯), ಬಂಟ್ವಾಳ ಠಾಣೆಯಲ್ಲಿ ಕ್ರೈಂ ನಂ ೧೧೭/೨೦೧೭(ಐPಇ೧೪೨, ೧೪೩, ೧೮೮ /ಡಿ ೧೪೯), ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ ೭೭/೨೦೨೩(ಐPಇ ೧೪೩, ೩೫೩, ೫೦೪ /ಡಿ ೧೪೯), ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ ೧೦೫/೨೦೨೩ (ಐPಇ ೫೦೪, ೫೦೫(೨) ಎಫ್‌ಐಆರ್ ಗಳು ದಾಖಲಾಗಿದೆ. ಪುನರಾವರ್ತಿತ ಅಪರಾಧ ಮಾಡುವ ಹರೀಶ್ ಪೂಂಜ ತಡೆಯಾಜ್ಞೆಯ ಅವಕಾಶಕ್ಕೆ ಅನರ್ಹರಾಗಿದ್ದಾರೆ ಎಂದು ಬಾಲನ್ ನ್ಯಾಯಪೀಠದ ಗಮನ ಸೆಳೆದಿದ್ದಾರೆ ಎಂದು ತಿಳಿದು ಬಂದಿದೆ.