ಬೆಳ್ತಂಗಡಿ: ಮುಜರಾಯಿ ಇಲಾಖೆ ಅಧೀನದ ಎ ಗ್ರೇಡ್ ದೇವಸ್ಥಾನವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಪಕ್ಕದಲ್ಲೇ ಕಾರ್ಯಾಚರಿಸುತ್ತಿರುವ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅನ್ನು ರದ್ದುಗೊಳಿಸಿ ಅದರ ಆಸ್ತಿಗಳನ್ನು ದೇವಾಲಯಕ್ಕೆ ವರ್ಗಾಯಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ಡಾ.ವೆಂಕಟೇಶ್ ಅವರಿಗೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ ರೈ ಗೋಳಿತ್ತೊಟ್ಟು ಅವರು ಮನವಿ ಸಲ್ಲಿಸಿದ್ದಾರೆ.
ಸೌತಡ್ಕ ದೇವಸ್ಥಾನದ ಜಮೀನು ಮತ್ತು ಅದರಲ್ಲಿ ಬರುವ ಆದಾಯಗಳನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಎಂಬ ಖಾಸಗಿ ಟ್ರಸ್ಟ್ ಕಬಳಿಸುತ್ತಿದೆ. ಇದರ ವಿರುದ್ಧ ಸಂರಕ್ಷಣಾ ವೇದಿಕೆ ವತಿಯಿಂದ 2024ರ ನ.11 ಮತ್ತು 12ರಂದು ಸೌತಡ್ಕದಲ್ಲಿ ಧರಣಿ ನಡೆಸಿ ತನಿಖೆಗೆ ಒತ್ತಾಯಿಸಿತ್ತು. ಇದಕ್ಕೆ ಸ್ಪಂದಿಸಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಬೆಳ್ತಂಗಡಿ ತಹಶೀಲ್ದಾರ್ ಮತ್ತು ದೇಗುಲದ ಇ.ಒ.ರವರಿಗೆ ವರದಿ ಸಲ್ಲಿಸಲು ಸೂಚಿಸಿದ್ದರು. ಇವರು ನೀಡಿದ್ದ ವಸ್ತು ಸ್ಥಿತಿಯ ವರದಿಯನುಸಾರ ಸೂಕ್ತ ಕ್ರಮಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಗೆ ಕೇಳಿಕೊಳ್ಳಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸಲು ನಿರ್ದೇಶನ ನೀಡಲಾಗಿತ್ತು. ಜಿಲ್ಲಾಧಿಕಾರಿಯವರು ದೇಗುಲದ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಕಾನೂನು ವ್ಯಾಪ್ತಿಯಲ್ಲಿ ತನಗೆ ಈ ಬಗ್ಗೆ ಕ್ರಮವಹಿಸಲು ಕೆಲವೊಂದು ಕಾನೂನು ತೊಡಕುಗಳಿವೆ ಎಂಬ ಬಗ್ಗೆ ದೇಗುಲದ ಕಾರ್ಯನಿರ್ವಹಣಾಧಿಕಾರಿಯವರು ಎಕಳೆದಎ. 15ರಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದರು. ಇದರನ್ವಯ ಜಿಲ್ಲಾಧಿಕಾರಿಯವರು ಕಳೆದ ಅಗತ್ಯ ಕ್ರಮಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮರು ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಈ ತನಕ ಯಾವುದೇ ಸೂಕ್ತ ಕಾನೂನು ಕ್ರಮ ಆಗಿಲ್ಲ.
ದೇಗುಲದ ಭಕ್ತರ ದೇಣಿಗೆಯಲ್ಲಿ ಖರೀದಿಸಲಾದ 3.46 ಎಕ್ರೆ ಜಮೀನನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದ್ದು, ಅದು ಮರಳಿ ಕ ಮರಳಿ ದೇಗುಲಕ್ಕೆ ಸಿಗಬೇಕು. ದೇಗುಲದ ಆದಾಯದಿಂದ ಹಣ ವ್ಯಯಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದ್ದರೂ ಅದನ್ನೂ ಸದ್ರಿ ಟ್ರಸ್ಟ್ ತನ್ನ ಕೈವಶ ಮಾಡಿಕೊಂಡು ಅಂಗಡಿಗಳ ಬಾಡಿಗೆ ಆದಾಯಗಳನ್ನೂ ಅಕ್ರಮವಾಗಿ ಕೈವಶಮಾಡಿಕೊಳ್ಳುತ್ತಿದ್ದು, ಈ ಆದಾಯವೂ ದೇಗುಲಕ್ಕೆ ಸಿಗುವಂತಾಗಬೇಕು. ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಾನೂನು ಬಾಹಿರವಾಗಿದ್ದು, ಅದರ ಆಸ್ತಿಗಳೆಲ್ಲವೂ ದೇಗುಲದ ಆದಾಯದಿಂದಲೇ ಮಾಡಿದ್ದಾಗಿದ್ದು, ಸದ್ದಿ ಟ್ರಸ್ಟನ್ನು ರದ್ದುಗೊಳಿಸಿ ಅದರ ಆಸ್ತಿಗಳನ್ನು ದೇಗುಲಕ್ಕೆ ವರ್ಗಾಯಿಸಲು ಸೂಕ್ತ ಕ್ರಮ ಕೈಗಳ್ಳುವಂತೆ ಪ್ರಶಾಂತ ರೈ ಅವರು ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.